ಯಾದಗಿರಿ ಪಿಎಸ್ಐ ಪರಶುರಾಮ ಸಾವು ಪ್ರಕರಣ ಗಂಭೀರವಾಗಿದೆ - ಸಿಬಿಐಗೆ ನೀಡಿ : ಅಶೋಕ್‌

| Published : Aug 05 2024, 12:38 AM IST / Updated: Aug 05 2024, 12:14 PM IST

R Ashok
ಯಾದಗಿರಿ ಪಿಎಸ್ಐ ಪರಶುರಾಮ ಸಾವು ಪ್ರಕರಣ ಗಂಭೀರವಾಗಿದೆ - ಸಿಬಿಐಗೆ ನೀಡಿ : ಅಶೋಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಯಾದಗಿರಿ ಪಿಎಸ್ಐ ಪರಶುರಾಮ ಸಾವು ಪ್ರಕರಣ ಗಂಭೀರವಾಗಿದೆ. ಪಿಎಸ್‌ಐ ಕುಟುಂಬದವರು ₹30 ಲಕ್ಷ ಲಂಚದ ಆರೋಪ ಮಾಡಿರುವುದರಿಂದ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಿ ನಾಟಕ ಮಾಡುವುದನ್ನು ಬಿಟ್ಟು ಸಿಬಿಐಗೆ ವಹಿಸುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.‌ಅಶೋಕ್‌ ಆಗ್ರಹಿಸಿದ್ದಾರೆ.

 ಕೊಪ್ಪಳ : ಯಾದಗಿರಿ ಪಿಎಸ್ಐ ಪರಶುರಾಮ ಸಾವು ಪ್ರಕರಣ ಗಂಭೀರವಾಗಿದೆ. ಪಿಎಸ್‌ಐ ಕುಟುಂಬದವರು ₹30 ಲಕ್ಷ ಲಂಚದ ಆರೋಪ ಮಾಡಿರುವುದರಿಂದ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಿ ನಾಟಕ ಮಾಡುವುದನ್ನು ಬಿಟ್ಟು ಸಿಬಿಐಗೆ ವಹಿಸುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.‌ಅಶೋಕ್‌ ಆಗ್ರಹಿಸಿದ್ದಾರೆ.

ಇಲ್ಲಿನ ಸೋಮನಾಳ ಗ್ರಾಮದಲ್ಲಿರುವ ಮೃತ ಪರಶುರಾಮ ಅವರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್‌, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದಲಿತರ ಮೇಲೆ ನಿರಂತರವಾಗಿ ಅನ್ಯಾಯ ಆಗುತ್ತಿವೆ. ವಾಲ್ಮೀಕಿ ನಿಗಮದ ನಿಷ್ಠಾವಂತ ಆಧಿಕಾರಿ ಆತ್ಮಹತ್ಯೆ ಬಳಿಕ ಈಗ ಮತ್ತೊಬ್ಬ ಅಧಿಕಾರಿ ವರ್ಗಾವಣೆ ದಂಧೆಯ ಒತ್ತಡದಿಂದಾಗಿ ಸಾವಿಗೆ ಶರಣಾಗಿದ್ದಾರೆ ಎಂದರು.

ಪರಶುರಾಮ ಸಾವು ಇಡೀ ರಾಜ್ಯದ ವರ್ಗಾವಣೆ ದಂಧೆಯನ್ನು ಅನಾವರಣ ಮಾಡಿದೆ. ಸಾವಿನ ಪ್ರಕರಣ ಕುರಿತು ಇದೀಗ ದೂರು ದಾಖಲು ಮಾಡಿಕೊಳ್ಳಲಾಗಿದೆ. ಪರಶುರಾಮ ಅವರ ಪತ್ನಿ, ಅನೇಕರು ಹೋರಾಟ ಮಾಡಿದ ಮೇಲೆ ದೂರು ದಾಖಲು ಮಾಡಿದ್ದಾರೆ. ಆದರೆ ಯಾರೂ ಕೇಳದಿದ್ದರೂ ಕೇವಲ ಒಂದು ಗಂಟೆಯಲ್ಲೇ ಗೃಹ ಸಚಿವ ಡಾ.‌ಪರಮೇಶ್ವರ ಅವರು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದಾರೆ. ಈವರೆಗೂ ಸಿಐಡಿಗೆ ನೀಡಿದ ಪ್ರಕರಣಗಳು ಏನಾಗಿದೆ ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಅಲ್ಲಿಯವರೆಗೆ ಬಿಜೆಪಿ ಹೋರಾಟ ಮಾಡುತ್ತದೆ ಎಂದರು.

ನಾಚಿಕೆಯಾಗಬೇಕು: ದಲಿತರು ಈ ಏರಿಯಾದಲ್ಲಿರಬಾರದು ಎಂದು ಹೇಳಿ ಜಾತಿನಿಂದನೆ ಮಾಡಿರುವ ಶಾಸಕ ಚೆನ್ನಾರಡ್ಡಿ ಹಾಗೂ ಅವರ ಪುತ್ರನನ್ನು ಕೂಡಲೇ ಬಂಧಿಸಬೇಕು. ಶಾಸಕ ಜಾತಿ ನಿಂದನೆ ಮಾಡುತ್ತಾನೆಂದರೆ ನಾವು ಇನ್ನು ಯಾವ ಕಾಲದಲ್ಲಿದ್ದೇವೆ ಎಂದು ಪ್ರಶ್ನೆ

ಮಾಡಿಕೊಳ್ಳಬೇಕು. ಇದಕ್ಕೆ ಸಿದ್ದರಾಮಯ್ಯ ಅವರೇ ಉತ್ತರಿಸಬೇಕು ಎಂದರು.

ವರ್ಗಾವಣೆ ಮಾಡಿದ ಅಧಿಕಾರಿ ಮೇಲೆ ಕ್ರಮ ಆಗಬೇಕು. ದೂರು ದಾಖಲಿಸಲು ವಿಳಂಬ ಮಾಡಿದ ಅಧಿಕಾರಿ ಅಮಾನತು ಆಗಬೇಕು.‌ ಒತ್ತಡ ಹಾಕಿದ ಸಚಿವರ ಮೇಲೂ ಕ್ರಮವಾಗಬೇಕು. ವರದಿ ಬರುವ ಮೊದಲೇ ಗೃಹ ಸಚಿವರು ಹೃದಯಾಘಾತ ಎಂದು ಹೇಳಿದ್ದು ಅನುಮಾನಕ್ಕೆ ಕಾರಣವಾಗಿದೆ‌. ಸಚಿವರು ಹಾರಿಕೆ ಉತ್ತರ ನೀಡಬಾರದು‌ ಎಂದರು.

ಬೇಲ್ ಮೇಲಿದ್ದಾರೆ: ಪಿಎಸ್‌ಐ ಅಕ್ರಮ ಸೇರಿ ನಮ್ಮ ಸರ್ಕಾರದ ಮೇಲೆ ಲಂಚದ ರೇಟ್ ಹಾಕಿ ಜಾಹೀರಾತು ನೀಡಿದ ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್‌ ಅವರೆಲ್ಲ ಬೇಲ್ ಮೇಲಿದ್ದಾರೆ. ಅಕ್ರಮವಾಗಿದ್ದರೆ ಯಾಕೆ ತನಿಖೆ ಮಾಡಲಿಲ್ಲ ಎಂದು ಪ್ರಶ್ನೆ‌ ಮಾಡಿದರು.

ರಾಯರಡ್ಡಿ ಹೇಳಿದ್ದು ಸತ್ಯ: ವರ್ಗಾವಣೆ ದಂಧೆ ಹಿಂದಿನಿಂದಲೂ ಇದೆ, ಈಗಲೂ ಇದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದು ಸತ್ಯ. ಹಿಂದೆ ಇತ್ತೋ ಇಲ್ವೋ ಗೊತ್ತಿಲ್ಲ, ಈಗ ಇದೆ ಅಂತ ಹೇಳಿದ್ದು ಮಾತ್ರ ಸತ್ಯ ಎಂದು ವ್ಯಂಗ್ಯವಾಡಿದರು.

ನನ್ನ ಅಣ್ಣನಿಗೆ ಆದ ಅನ್ಯಾಯ ಯಾರಿಗೂ ಅಗಬಾರದು. ಈ ವರ್ಗಾವಣೆ ದಂಧೆಗೆ ಬ್ರೇಕ್ ಬೀಳಬೇಕು. ದೂರು ದಾಖಲಿಸಲು ವಿಳಂಬ ಮಾಡಿದ ಎಸ್ಪಿ ಅಮಾನತಾಗಬೇಕು. ನನ್ನ ಅಣ್ಣನ ಪತ್ನಿ ಪದವೀಧರೆಯಾಗಿದ್ದು, ಆಕೆಗೆ ಅದೇ ಪಿಎಸ್‌ಐ ಹುದ್ದೆ ನೀಡಬೇಕು. ಶಾಸಕ, ಆತನ ಪುತ್ರನನ್ನು ಬಂಧಿಸಿ, ಜೈಲಿಗೆ ಕಳುಹಿಸಬೇಕು.

- ಹನುಮಂತಪ್ಪ, ಪರಶುರಾಮ ಸಹೋದರಕೋಟ್

ಪ್ರಕರಣದಲ್ಲಿ ಮಾಜಿ ಸಚಿವರೊಬ್ಬರ ಕೈವಾಡ ಇದೆ. ಎಸ್ಪಿ ಅವರಿಗೆ ಕಾಲ್ ಮಾಡಿ, ಒತ್ತಡ ಹಾಕಿದ್ದಾರೆ. ಎಸ್ಪಿ ಅವರ ಕಾಲ್ ಡಿಟೇಲ್ ನೋಡಿದರೆ ಈ ಸತ್ಯ ಬಯಲಾಗಲಿದೆ.

- ರಾಜೂಗೌಡ, ಮಾಜಿ ಸಚಿವ