ಸಾರಾಂಶ
ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಮತ್ತು ನಂಬಿಕೆಯನ್ನು ಉಳಿಸಿಕೊಳ್ಳುವ ಜೊತೆಗೆ ಕ್ಷೇತ್ರ ಮತ್ತು ಜಿಲ್ಲೆಯ ಜನರ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಆರ್‍ಯವೈಶ್ಯ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಶಕ್ತಿಮೀರಿ ಶ್ರಮಿಸುತ್ತೇನೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ಶ್ರೀಕನ್ಯಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಶ್ರೀವಾಸವಿ ಅಮ್ಮನವರ ವಿಶ್ವರೂದರ್ಶನ (ವಾಸವಿ ಅಗ್ನಿಪ್ರವೇಶ) ದಿನಾಚರಣೆ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪಾಲ್ಗೊಂಡು ದೇವಿಯ ದರ್ಶನಾಶೀರ್ವಾದ ಪಡೆದರು.ಈ ವೇಳೆ ಮಾತನಾಡಿದ ಸಚಿವರು, ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಮತ್ತು ನಂಬಿಕೆಯನ್ನು ಉಳಿಸಿಕೊಳ್ಳುವ ಜೊತೆಗೆ ಕ್ಷೇತ್ರ ಮತ್ತು ಜಿಲ್ಲೆಯ ಜನರ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಆರ್‍ಯವೈಶ್ಯ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಶಕ್ತಿಮೀರಿ ಶ್ರಮಿಸುವುದಾಗಿ ತಿಳಿಸಿದರು.
ರಾಜ್ಯ ಆರ್‍ಯವೈಶ್ಯ ಮಹಾಸಭಾ ಜಿಲ್ಲಾಧ್ಯಕ್ಷ ಎನ್.ಎನ್.ನಾರಾಯಣಸ್ವಾಮಿ ಮಾತನಾಡಿ, ಚಲುವರಾಯಸ್ವಾಮಿ ಅವರು ಈ ಹಿಂದೆ ಸಚಿವರಾಗಿದ್ದ ಅವಧಿಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಕ್ಷೇತ್ರ ಚಿತ್ರಣವನ್ನೇ ಬದಲಿಸಿದ್ದಾರೆ ಎಂದರು.ಕಳೆದ ಚುನಾವಣೆ ವೇಳೆ ಗೆಲುವು ಸಾಧಿಸುವ ಜೊತೆಗೆ ಸರ್ಕಾರದಲ್ಲಿ ಅತ್ಯಂತ ಜವಾಬ್ದಾರಿಯುತ ಸ್ಥಾನಮಾನ ಸಿಗಲೆಂದು ಶ್ರೀಕನ್ಯಿಕಾಪರಮೇಶ್ವರಿ ಶ್ರೀದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಅದರಂತೆ ಕೃಷಿ ಸಚಿವರಾಗಿದ್ದಾರೆ. ಇವರಿಂದ ರಾಜ್ಯದ ರೈತರಿಗೆ ಹೆಚ್ಚು ಅನುಕೂಲವಾಗುವ ಜೊತೆಗೆ ತಾಲೂಕು ಮತ್ತು ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಹೊಂದಬೇಕಿದೆ ಎಂದರು.
ಈ ವೇಳೆ ಪಟ್ಟಣದ ಆರ್‍ಯವೈಶ್ಯ ಮಂಡಳಿಯಿಂದ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ರಾಜ್ಯ ಆರ್‍ಯವೈಶ್ಯ ಮಹಾಸಭಾ ಉಪಾಧ್ಯಕ್ಷೆ ರಾಜೇಶ್ವರಿ ನಾರಾಯಣ, ಆರ್‍ಯವೈಶ್ಯ ಮಂಡಳಿಯ ಅಧ್ಯಕ್ಷ ಎನ್.ವಿ.ರಮೇಶ್, ಕಾರ್ಯದರ್ಶಿ ಫಣಿಕಿರಣ್, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಸೇರಿದಂತೆ ವಾಸವಿ ಮಹಿಳಾ ಮಂಡಳಿ, ವಾಸವಿ ಯುವಜನ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಸಮಾಜದ ಮುಖಂಡರು ಇದ್ದರು.