ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕೃಷಿ ಪ್ರವಾಸೋದ್ಯಮದಿಂದ ಆರ್ಥಿಕ ಬಲವರ್ಧನೆ, ಪರಿಸರ ಸಂರಕ್ಷಣೆ, ಶೈಕ್ಷಣಿಕ ಅನುಭವಿಸಲು ಅವಕಾಶ ಸಿಗುತ್ತದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.ಮೈಸೂರು ತಾಲೂಕಿನ ನಾಗನಹಳ್ಳಿಯಲ್ಲಿರುವ ಸಾವಯವ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೃಷಿ ಪರಿಸರ ಪ್ರವಾಸೋದ್ಯಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಪ್ರವಾಸೋದ್ಯಮದಿಂದ ನಗರ ಜೀವನ ನಡೆಸುತ್ತಿರುವ ಜನರಿಗೆ ಗ್ರಾಮೀಣ ಬದುಕಿನ ಸುವಾಸನೆ ಅನುಭವಿಸಲು ಅವಕಾಶ ಸಿಗುತ್ತದೆ ಎಂದರು.
ಕೃಷಿ, ತೋಟಗಾರಿಕೆ, ಜೇನು ಸಾಕಾಣಿಕೆ, ಪಶುಸಂಗೋಪನೆಗಳ ಹಾರೈಕೆ, ಸಾವಯವ ಕೃಷಿಯ ಅನುಭವ, ನೈಸರ್ಗಿಕ ಸೌಂದರ್ಯವನ್ನು ನೋಡುವ ಅವಕಾಶ ಸಿಗುತ್ತದೆ. ಹಾಗೂ ಬಂದಂತ ವೀಕ್ಷಕರಿಗೆ ಗ್ರಾಮೀಣ ಪ್ರದೇಶದ ಕ್ರೀಡೆಗಳನ್ನು ಆಡಲು ಅವಕಾಶವನ್ನು ನೀಡಲಾಗುತ್ತಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.ಗ್ರಾಮೀಣ ಪ್ರದೇಶದ ಮಹಿಳೆಯರು ತಯಾರಿಸುವ ಸಾಂಪ್ರದಾಯಿಕ ಆಹಾರವನ್ನು ಇಲ್ಲಿ ಸವಿಯಬಹುದು. ಜೊತೆಗೆ ಜಾನಪದ ಮತ್ತು ಸಾಂಸ್ಕೃತಿಕ ಕಲೆಗಳನ್ನು ಪ್ರದರ್ಶನ ಕಂಡು ನನಗೆ ಖುಷಿಯಾಯಿತು. ಇದರಿಂದ ಗ್ರಾಮೀಣ ಮಟ್ಟದ ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಕೃಷಿ ಪ್ರವಾಸೋದ್ಯಮವು ನಮ್ಮ ರಾಜ್ಯದ ಗ್ರಾಮೀಣ ಅಭಿವೃದ್ಧಿ, ಆರ್ಥಿಕ ಸಬಲೀಕರಣ ಮತ್ತು ಸಾಂಸ್ಕೃತಿಕ ಸಂರಕ್ಷಣೆಗೆ ದಾರಿ ತೋರಿಸುವ ಮಹತ್ವದ ಹೆಜ್ಜೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಂಡ್ಯ ಕೃಷಿ ವಿಜ್ಞಾನಿಗಳ ವಿವಿ ವಿಶೇಷಾಧಿಕಾರಿ ಡಾ.ಕೆ.ಎಂ. ಹರಿಣಿಕುಮಾರ್ ಮಾತನಾಡಿ, ಕೃಷಿ ಪರಿಸರ ಪ್ರವಾಸೋದ್ಯಮವು ನಮ್ಮ ಕೃಷಿ ಸಂಸ್ಕೃತಿ, ಪರಿಸರ ಸಂರಕ್ಷಣೆ ಮತ್ತು ಆರ್ಥಿಕ ಶಕ್ತಿಕರಣವನ್ನು ಒಟ್ಟಿಗೆ ಕೊಂಡಯುವ ಮಹತ್ವದ ಬೆಳವಣಿಗೆಯಾಗಿದೆ. ನಮ್ಮ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ವಿಜ್ಞಾನಿಗಳು ಮತ್ತು ರೈತರು ಕೈಜೋಡಿಸಿ ಈ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದರು.ಗ್ರಾಮೀಣ ಅಭಿವೃದ್ಧಿ ಕೇಂದ್ರದ ನಿರ್ದೇಶಕಿ ರಾಜೇಶ್ವರಿ ಮಾತನಾಡಿ, ಯುವಕರು, ಮಹಿಳೆಯರು ಮತ್ತು ಸ್ಥಳೀಯ ಕಲಾವಿದರಿಗೆ ಉತ್ತಮವಾದ ಗ್ರಾಮೀಣ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕೃಷಿ ಪರಿಸರ ಪ್ರವಾಸೋದ್ಯಮ ನೆರವಾಗಲಿದೆ. ನಮ್ಮ ಉದ್ದೇಶವು ಗ್ರಾಮಗಳನ್ನು ಸ್ವಾವಲಂಬಿ ಮತ್ತು ಸುಸಜ್ಜಿತವಾಗಿಸುವುದು. ಕೃಷಿ ಪರಿಸರ ಪ್ರವಾಸೋದ್ಯಮ ಕೇವಲ ಪ್ರವಾಸೋದ್ಯಮವಲ್ಲ. ಇದು ಗ್ರಾಮೀಣ ಅಭಿವೃದ್ಧಿ, ರೈತರ ಸಬಲೀಕರಣ ಮತ್ತು ಪರಿಸರ ಸಂರಕ್ಷಣೆಯನ್ನ ಮಾಡುವಂತಹ ಕೇಂದ್ರವಾಗಿದೆ ಎಂದರು.
ಶಿಕ್ಷಣ ನಿರ್ದೇಶಕ ಡಾ.ಎನ್. ಶಿವಕುಮಾರ್, ಸಂಶೋಧನಾ ನಿರ್ದೇಶಕ ಡಾ.ಜಿ.ಎಂ. ದೇವಗಿರಿ, ವಿಸ್ತರಣಾ ನಿರ್ದೇಶಕ ಡಾ.ಸಿ. ರಾಮಚಂದ್ರ, ಕುಲಸಚಿವರಾದ ಡಾ.ಬಿ.ಎಸ್. ಫಾತಿಮಾ, ಡಾ.ಕೆ.ಎನ್. ಮುನಿಸ್ವಾಮಿಗೌಡ, ಡಾ.ಆರ್. ವಿನಯ್ ಕುಮಾರ್ ಮೊದಲಾದವರು ಇದ್ದರು.