ಸಾರಾಂಶ
ಸುರೇಶ ಯಳಕಪ್ಪನವರ
ಹಗರಿಬೊಮ್ಮನಹಳ್ಳಿ: ತುಂಗಭದ್ರಾ ನದಿಯನ್ನು ಆಶ್ರಯಿಸಿದ್ದ ಹಗರಿಬೊಮ್ಮನಹಳ್ಳಿ ತಾಲೂಕಿಗೆ ಇದೀಗ ಕುಡಿಯುವ ನೀರಿಗೆ ಬರ ಆವರಿಸಿದೆ.ತಾಲೂಕಿನ ೩೨ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಇಲಾಖೆ ಸಮಸ್ಯೆ ಪರಿಹರಿಸಲು ಹರಸಾಹಸ ಪಡುತ್ತಿದೆ. ಬೇಸಿಗೆ ಆರಂಭವಾಗುವ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ತಾಲೂಕಿನ ಬನ್ನಿಗೋಳ ಬಳಿಯ ಜಾಕ್‌ವೆಲ್‌ನಿಂದ ಹಗರಿಬೊಮ್ಮನಹಳ್ಳಿ ಪಟ್ಟಣ, ಕೊಟ್ಟೂರು, ಕೂಡ್ಲಿಗಿ ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.
ತುಂಗಭದ್ರಾ ಹಿನ್ನೀರಿನ ಪ್ರಮಾಣ ದಿನೇ ದಿನೇ ತಗ್ಗುತ್ತಿದ್ದು, ಪಟ್ಟಣದ ೨೩ ವಾರ್ಡ್‌ಗಳಿಗೆ ಬೋರ್‌ವೆಲ್ ನೀರೇ ಆಸರೆಯಾಗಿದೆ. ಈಗಾಗಲೇ ಪಟ್ಟಣದಲ್ಲಿರುವ ೮೯ ಕೊಳವೆ ಬಾವಿಗಳ ಪೈಕಿ ೪೮ ಕೊಳವೆಬಾವಿಗಳು ಸ್ಥಗಿತಗೊಂಡಿವೆ. ಇದರಿಂದ ಬಾಡಿಗೆ ಕೊಳವೆ ಬಾವಿಗಳನ್ನು ಪಡೆದು ನೀರು ಪೂರೈಸುವ ಸ್ಥಿತಿ ಎದುರಾಗಿದೆ. ಈಗಾಗಲೇ ಟ್ಯಾಂಕರ್ ಮೂಲಕ ನೀರು ಪೂರೈಸಲು ₹೧೫ ಲಕ್ಷ ಮೊತ್ತದಲ್ಲಿ ಟೆಂಡರ್ ಕರೆಯಲಾಗಿದೆ. ಪಟ್ಟಣದ ನೆಹರು ನಗರ, ರಾಮ್‌ರಹಿಂ ನಗರ, ಕೆವಿಒರ್ ಕಾಲನಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ತಾಲೂಕಿನ ಉಲುವತ್ತಿ, ಚಿಮ್ನಳ್ಳಿ, ಸೊನ್ನ, ಬಾಚಿಗೊಂಡನಹಳ್ಳಿ, ಬಲ್ಲಾಹುಣಿಸಿ, ಕೆಚ್ಚಿನಬಂಡಿ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಈಗಾಗಲೇ ಖಾಸಗಿ ಬೋರ್‌ವೆಲ್‌ಗಳ ಮೊರೆಹೋಗಿ ಎಂದು ಶಾಸಕರು ಮೀಟಿಂಗ್‌ನಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ತಾಲೂಕಿನ ಅಲ್ಲಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಳವಡಿಕೆಗೆ ಸಾರ್ವಜನಿಕರು ಮೂಗುಮುರಿಯುತ್ತಿದ್ದಾರೆ. ಖಾಸಗಿ ಬೋರ್‌ವೆಲ್‌ಗಳೇ ಗ್ರಾಪಂಗಳ ಜೀವಾಳಗಳಾಗಿವೆ. ತುಂಗಾಭದ್ರಾ ಹಿನ್ನಿರು ಪ್ರದೇಶದ ಪಕ್ಕದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಅಂತರ್ಜಲ ಪ್ರಮಾಣ ಕುಸಿತ ಕಂಡಿರುವುದರಿಂದ ಬೋರ್‌ವೆಲ್‌ಗಳು ಕೈಕೊಟ್ಟಿವೆ. ಗ್ರಾಪಂನವರು ಹೊಸದಾಗಿ ಕೊಳವೆಬಾವಿ ಕೊರೆಸಲು ಗ್ರಾಪಂಗಳಲ್ಲಿನ ೧೪ನೇ ಹಣಕಾಸು ಯೋಜನೆ ಅನುದಾನ ಬಳಕೆ ಮಾಡುತ್ತಿದ್ದಾರೆ. ಬರ ನಿರ್ವಹಣೆಯಡಿ ಬಾಡಿಗೆ ಕೊಳವೆಬಾವಿ ಮತ್ತು ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ತಹಸೀಲ್ದಾರ್ ಅಧಿಕಾರ ಹೊಂದಿದ್ದಾರೆ. ಬೋರ್‌ವೆಲ್‌ಗಳ ಆಳ ಹೆಚ್ಚಿಸುವುದು, ಪೈಪ್‌ಲೈನ್ ವಿಸ್ತರಿಸುವ ಹೊಣೆ ಕುಡಿವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಹೊತ್ತಿದ್ದು, ಸಮರ್ಪಕವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಸಜ್ಜಾಗಿದ್ದಾರೆ.ತಾಲೂಕಿನ ಹಳೇ ಚಿಮ್ನಳ್ಳಿ ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ ಮನೆ ಮನೆಗೆ ನಳಗಳನ್ನು ಅಳವಡಿಸಲಾಗಿದೆ. ಆದರೆ, ನೆಲ್ಕುದ್ರಿ ಗ್ರಾಪಂ ವ್ಯಾಪ್ತಿಗೆ ನಿರ್ವಹಣೆ ಜವಾಬ್ದಾರಿ ವಹಿಸಿ ಒಂದು ವರ್ಷವಾದರೂ ಜನರಿಗೆ ಸಮರ್ಪಕವಾಗಿ ನೀರೊದಗಿಸಿಲ್ಲ. ಈ ಗ್ರಾಮದಲ್ಲಿರುವ ₹೫೦ ಲಕ್ಷ ಮೊತ್ತದ ಬೃಹತ್ ಜಲಾಗಾರಕ್ಕೆ ನೀರು ಸರಬರಾಜು ಮಾಡದೆ ನಿರ್ಲಕ್ಷ್ಯ ತೋರಿದ್ದಾರೆ.ಟಾಸ್ಕ್‌ಫೋರ್ಸ್ ಸಭೆ: ಸಾರ್ವಜನಿಕರು ನೀರನ್ನು ಪೋಲು ಮಾಡದೆ ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ತೀರಾ ಸಮಸ್ಯೆ ಇರುವ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಗಮನಹರಿಸಿ ನೀರು ಪೂರೈಕೆ ಮಾಡಲಾಗುವುದು. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಅಗತ್ಯವಿರುವೆಡೆ ಕೊಳವೆಬಾವಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು ನೀರು ಪೂರೈಸಲಾಗುವುದು. ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರತಿ ೧೫ ದಿನಗಳಿಗೊಮ್ಮೆ ಟಾಸ್ಕ್‌ಫೋರ್ಸ್ ಸಭೆ ನಡೆಸಲಾಗುವುದು ಎಂದು ತಹಸೀಲ್ದಾರ್ ಚಂದ್ರಶೇಖರ ಶಂಭಣ್ಣ ಗಾಳಿ ತಿಳಿಸಿದರು.ಗಮನ ಹರಿಸಿ: ಕೇಂದ್ರ ಸರ್ಕಾರ ಕುಡಿಯುವ ನೀರಿಗಾಗಿ ಜಾರಿ ಮಾಡಿರುವ ಜೆಜೆಎಂ ಯೋಜನೆ ತಾಲೂಕಿನಲ್ಲಿ ಪೂರ್ಣಗೊಳ್ಳದೆ ಇರುವುದರಿಂದ ಅಲ್ಲಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಕುಡಿಯುವ ನೀರು ಸರಬರಾಜು ಇಲಾಖೆಯವರು ಸಮಸ್ಯೆ ಇರುವ ಹಳ್ಳಿಗಳತ್ತ ಚಿತ್ತ ಹರಿಸಿ ನೀರು ಪೂರೈಕೆ ಮಾಡಬೇಕು ಗ್ರಾಪಂ ಮಾಜಿ ಸದಸ್ಯ ಗೌರಜ್ಜನವರ ಗಿರೀಶ್ ತಿಳಿಸಿದರು.