ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ದಕ್ಷಿಣ ಭಾರತದಲ್ಲೇ ಶೋಷಿತ ಹಾಗೂ ಎಲ್ಲಾ ಜನಸಮುದಾಯದ ನಾಯಕರಾಗಿರುವ ಸಿಎಂ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಲು ನಡೆಸುತ್ತಿರುವ ಪಿತೂರಿಯ ವಿರುದ್ಧ ಬುಧವಾರ ಎಲ್ಲಾ ದಲಿತ, ಹಿಂದುಳಿದ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ತಿಳಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲಭೂತವಾದಿಗಳು ಕೇಂದ್ರ ಸರ್ಕಾರವನ್ನು ಬಳಸಿಕೊಂಡು ರಾಜ್ಯಪಾಲರ ಮೂಲಕ ನೋಟೀಸ್ ಕೊಡಿಸಿ ಸಿದ್ದರಾಮಯ್ಯ ಅವರ ಸರ್ಕಾರವನ್ನು ಅಸ್ತಿರಗೊಳಿಸಲು ನಡೆಸುತ್ತಿರುವ ಷಡ್ಯಂತ್ರದ ಬಗ್ಗೆ ಎಲ್ಲಾ ಸಂಘಟನೆಗಳು ಖಂಡಿಸಿ ಈ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಹೇಳಿದರು.
ಸಿದ್ದರಾಮಯ್ಯ ಅವರ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಭ್ರಷ್ಟಾಚಾರದ ಯಾವುದೇ ಕಪ್ಪುಚುಕ್ಕಿಯನ್ನು ತಮಗೆ ತಾಕಿಸಿಕೊಂಡಿಲ್ಲ. ಆದರೆ ಹಗರಣವೇ ಅಲ್ಲದ ಮುಡಾ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಜೆಡಿಎಸ್ ನವರು ಬೀದಿ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ರಾಜ್ಯದಲ್ಲಿ ನಡೆದಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಬಗ್ಗೆ ಈಗಾಗಲೇ ತನಿಖಾ ತಂಡ ರಚಿಸಿ ಸಂವಿಧಾನ ಬದ್ಧವಾಗಿ ತನಿಖೆ ನಡೆಯುತ್ತಿದೆ. ಅದೇ ರೀತಿ ಮುಡಾ ನಿವೇಶನ ಹಂಚಿಕೆ ಬಗ್ಗೆ ಸಂಪೂರ್ಣ ದಾಖಲೆಗಳ ಸಹಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನದಲ್ಲಿ ಹಾಗೂ ಮಾಧ್ಯಮಗಳ ಮೂಲಕ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಹೀಗಿದ್ದರೂ ಬಿಜೆಪಿ ಜೆಡಿಎಸ್‌ನವರು ಪಾದಯಾತ್ರೆ ಮೂಲಕ ಬೀದಿ ರಂಪ ಮಾಡುತ್ತಿರುವುದು ಸಿದ್ದರಾಮಯ್ಯನವರ ರಾಜಕೀಯ ಭವಿಷ್ಯವನ್ನು ತೇಜೋವಧೆಗೆ ಕುತಂತ್ರ ಎಂದು ಹೇಳಿದರು.ಮುಖ್ಯಮಂತ್ರಿಯವರಿಗೆ ರಾಜ್ಯಪಾಲರು ನೋಟೀಸ್ ನೀಡಿರುವುದು ಅಸಂವಿಧಾನಿಕ ಹಾಗೂ ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿದ ನಿಂಗಯ್ಯ ಅವರು, ಈ ಕುರಿತು ದೂರು ನೀಡಿರುವ ದೂರುದಾರರ ಹಿನ್ನೆಲೆ ಪರಿಶೀಲಿಸಬೇಕು. ಅದನ್ನು ಬಿಟ್ಟು ಏಕಾಏಕಿಯಾಗಿ ರಾಜ್ಯಪಾಲರು ನೋಟೀಸ್ ನೀಡಿರುವ ಕ್ರಮವನ್ನು ಖಂಡಿಸಿದರು.ಎಲ್ಲಾ ಜನವರ್ಗದ ನಾಯಕರಾಗಿರುವ ಸಿದ್ದರಾಮಯ್ಯನವರ ಪರವಾಗಿ ಇಡೀ ರಾಜ್ಯದ ಜನತೆ ಬೆಂಬಲಕ್ಕೆ ನಿಂತಿದ್ದಾರೆ. ಇಂತಹವರನ್ನು ಅಧಿಕಾರದಿಂದ ಇಳಿಸಲು ನಡೆಸುತ್ತಿರುವ ಪಿತೂರಿಯ ವಿರುದ್ಧ ಸಹಸ್ರಾರು ಸಂಖ್ಯೆಯಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು, ಸಾರ್ವಜನಿಕರು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿ ತಾಲೂಕು ಕಚೇರಿಯಿಂದ ಮೆರವಣಿಗೆ ಹೊರಟು ಎಂ.ಜಿ ರಸ್ತೆ ಮೂಲಕ ಸಾಗಿ, ಆಜಾದ್ ಪಾರ್ಕ್‌ನಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ ಮಾತನಾಡಿದರು. ಸುದ್ದಿಗೋಷ್ಟಿಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಮಂಜೇಗೌಡ, ಅಹಿಂದ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಿ.ಸಿ ಪುಟ್ಟೇಗೌಡ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಂ ಮಂಜುನಾಥ್, ನೇಕಾರ ಸಂಘದ ಅಧ್ಯಕ್ಷ ನಾರಾಯಣ, ಮಾದಿಗ ದಂಡೋರ ಸಮಿತಿ ಅಧ್ಯಕ್ಷ ರಮೇಶ್, ಮುಸ್ಲಿಂ ಧರ್ಮಗುರು ಔರಂಗ ಪಾಷ, ನಗರಸಭಾ ಸದಸ್ಯ ಮುನೀರ್, ಪರಮೇಶ್, ಮಲ್ಲೇಶ್‌ಸ್ವಾಮಿ, ಜೇಮ್ಸ್ ಡಿಸೋಜ ಸೇರಿದಂತೆ ಶೋಷಿತ ವರ್ಗಗಳ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.