ಸಾರಾಂಶ
ಧಾರವಾಡ:
ಕೃತಕ ಬುದ್ಧಿಮತ್ತೆ ಬೇಕು-ಬೇಡ ಎನ್ನುವ ಪ್ರಶ್ನೆಗಳಿದ್ದರೂ ಭವಿಷ್ಯವನ್ನು ಸ್ವೀಕರಿಸಲೇಬೇಕು. ಈ ನೂತನ ತಂತ್ರಜ್ಞಾನದ ಪ್ರಯೋಜನ ಪಡೆಯದೇ ಇದ್ದಲ್ಲಿ ಸ್ಪರ್ಧಾ ಜಗತ್ತಿನಲ್ಲಿ ನಾವು ಹಿಂದೆ ಬೀಳುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ)ಯ ಉತ್ತಮ ಅಂಶಗಳನ್ನು ಬಳಸಿಕೊಂಡು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಸಲಹೆ ನೀಡಿದರು.ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಕವಿವಿ ಸುವರ್ಣ ಮಹೋತ್ಸವ ಭವನದಲ್ಲಿ ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಸೋಮವಾರ ದಿಕ್ಸೂಚಿ ಭಾಷಣದಲ್ಲಿ ಕೃತಕ ಬುದ್ಧಿಮತ್ತೆ ಕುರಿತು ಮಾತನಾಡಿದ ಅವರು, ವಾಟ್ಸ್‌ಆ್ಯಪ್, ಗೂಗಲ್, ಫೇಸ್‌ಬುಕ್, ಟ್ವೀಟರ್ (ಎಕ್ಸ್), ಇನ್‌ಸ್ಟ್ರಾಗ್ರಾಂ ದೊಡ್ಡ ಮಾಧ್ಯಮಗಳೆಂದು ತಿಳಿದುಕೊಂಡಿದ್ದೇವು. ಇದೀಗ ಸಂಕ್ರಮಣದ ಕಾಲ, ಈ ಮಾಧ್ಯಮಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲವನ್ನು ಏಕಕಾಲಕ್ಕ ಓದಿ ಅರ್ಥ ಮಾಡಿಕೊಳ್ಳುವ ಮತ್ತು ಕೇಳಿದ ಮಾಹಿತಿಯನ್ನು ಕ್ಷಣಾಮಾತ್ರದಲ್ಲಿ ಒದಗಿಸುವ ಶಕ್ತಿ ಕೃತಕ ಬುದ್ಧಿಮತ್ತೆಗಿದೆ ಎಂದು ಪಿಪಿಟಿ ಮೂಲಕ ಎಐನಿಂದ ಮಾಧ್ಯಮ ಕ್ಷೇತ್ರಕ್ಕೆ ಆಗುವ ಪ್ರಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಮಾತನಾಡಿದ ಶಬ್ದಗಳನ್ನು ಅಕ್ಷರ ರೂಪಕ್ಕೆ ತರುವುದು, ಸಂದರ್ಭಕ್ಕೆ ತಕ್ಕಂತೆ ವಿಡಿಯೋ, ಚಿತ್ರಗಳನ್ನು ಒದಗಿಸುವುದು, ಭಾವಚಿತ್ರ ವೀಕ್ಷಿಸಿ ಗುರುತಿಸುವುದು, ದೊಡ್ಡ ಸುದ್ದಿಯನ್ನು ಚಿಕ್ಕ ಗಾತ್ರದಲ್ಲಿ ಆಕರ್ಷಕವಾಗಿ ಮಾಡುವುದು, ಒಂದು ಸುದ್ದಿಯನ್ನು ಬರೀ ಪತ್ರಿಕೆ ಮಾತ್ರವಲ್ಲದೇ ಫೇಸ್‌ಬುಕ್, ಟ್ವೀಟರ್ ಸೇರಿದಂತೆ ಡಿಜಿಟಲ್ ಮಾಧ್ಯಮಕ್ಕೂ ಕಳುಹಿಸುವ ತಂತ್ರಜ್ಞಾನ, ಯಾವ ಸುದ್ದಿ ಸತ್ಯ ಅಥವಾ ಸುಳ್ಳು ಎಂಬುದನ್ನು ಸಹ ಈ ಎಐ ತಂತ್ರಜ್ಞಾವು ಪತ್ತೆ ಹಚ್ಚಲಿದೆ. ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಸಣ್ಣ ಸಣ್ಣ ವಿಡಿಯೋ ತುಕುಣುಕಗಳ ಭರಾಟೆ ಶುರುವಾಗಿದ್ದು, ಇಂತಹ ವಿಡಿಯೋಗಳನ್ನು ತಯಾರು ಮಾಡಲು ಚಿಕ್ಕ ಚಿಕ್ಕ ಸ್ಕ್ರೀಪ್ಟ್‌ಗಳನ್ನು ಸಹ ಎಐ ನೀಡುತ್ತಿದೆ. ಅಲ್ಲದೇ, ಚೀನಾದಲ್ಲಿ ಮೊದಲ ಬಾರಿಗೆ ಎಐ ನಿರೂಪಕಿ ಸುದ್ದಿ ಸಹ ಓದಿದ್ದಾರೆ. ಇದು ಕನ್ನಡದ ಫಸ್ಟ್ ನ್ಯೂಸ್ ಪ್ರಯೋಗ ಮಾಡಿದೆ ಎಂದರು.ಏನು ಎತ್ತ ಎಐನತ್ತ..
ಪ್ರಪಂಚದಲ್ಲಿ ಏನು ನಡೆಯುತ್ತಿದೆ ಎನ್ನುವುದು ಸೇರಿದಂತೆ ಯಾವ ಸುದ್ದಿ ಚಾಲ್ತಿಯಲ್ಲಿದೆ. ಜನರು ಯಾವ ಸುದ್ದಿಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ ಎಂಬುದನ್ನು ಸಹ ಎಐ ತಂತ್ರಜ್ಞಾನವು ಗುರುತಿಸುತ್ತಿದ್ದು, ಯಾವ ಸುದ್ದಿಗಳನ್ನು ಜನರಿಗೆ ನೀಡಬೇಕು ಎನ್ನುವ ನಿರ್ಣಯಗಳನ್ನು ಸಹ ಬರುವ ದಿನಗಳಲ್ಲಿ ಅದು ತೆಗೆದುಕೊಳ್ಳಲಿದೆ. ಹೀಗಾಗಿ ಕೃತಕ ಬುದ್ಧಿಮತ್ತೆಯು ಭವಿಷ್ಯದ ಮಾಧ್ಯಮ ಆಗುವುದರಲ್ಲಿ ಸಂಶಯವೇ ಇಲ್ಲ. ಇಷ್ಟಾಗಿಯೂ ಈ ತಂತ್ರಜ್ಞಾನದಲ್ಲೂ ಸಾಕಷ್ಟು ಸವಾಲುಗಳಿವೆ. ಸದ್ಯ ಇಂಗ್ಲಿಷ್ ಭಾಷೆಯಲ್ಲಿ ನಿಖರ ಮಾಹಿತಿ ನೀಡುತ್ತಿದ್ದರೂ ಹಿಂದಿ, ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲಿ ನಿಖರತೆ, ಸ್ಪಷ್ಟತೆ ಇಲ್ಲ. ಬರುವ ದಿನಗಳಲ್ಲಿ ಐಎ ತಂತ್ರಜ್ಞಾನ ಮತ್ತಷ್ಟು ಅಭಿವೃದ್ಧಿಗೊಂಡು ಮಾಧ್ಯಮ ಲೋಕದ ಎಲ್ಲ ರೀತಿಯ ಬೇಡಿಕೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಲಿದೆ. ಇದರಿಂದ ಶೇ. 40ರಷ್ಟು ಮಾನವ ಸಂಪನ್ಮೂಲ ಕಡಿತ ಆಗುವ ಎಲ್ಲ ಆತಂಕಗಳೂ ಇವೆ ಎಂದು ರವಿ ಹೆಗಡೆ ಹೇಳಿದರು.ಕರ್ನಾಟಕ ವಿವಿ ಕುಲಪತಿ ಡಾ. ಕೆ.ಬಿ. ಗುಡಸಿ ಅಧ್ಯಕ್ಷತೆ ವಹಿಸಿದ್ದರು. ಕೊಪ್ಪಳ ವಿವಿ ಕುಲಪತಿ ಪ್ರೊ. ಬಿ.ಕೆ. ರವಿ, ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ. ನಿರಂಜನ ವಾನಳ್ಳಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಜೆ.ಎಂ. ಚೆಂದುನವರ, ಪ್ರಾಧ್ಯಾಪಕ ಡಾ. ಸಂಜಯ ಮಾಲಗತ್ತಿ ಹಾಗೂ ಡಾ. ಪ್ರಶಾಂತ ವೇಣುಗೋಪಾಲ್ ಇದ್ದರು.
;Resize=(128,128))
;Resize=(128,128))
;Resize=(128,128))