ಕನ್ನಡಪ್ರಭ ವಾರ್ತೆ ಹೊನ್ನಾವರ

ವಿದ್ಯಾರ್ಥಿಗಳು ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಬೇಕು. ತಂತ್ರಜ್ಞಾನ ತುಂಬಾ ಬೆಳೆಯುತ್ತಿದೆ. ಆದರೆ ಹಳ್ಳಿಯ ಭಾಗದಲ್ಲಿ ಟೆಕ್ನಾಲಜಿ ಹೆಚ್ಚು ಬರುವಂತಾಗಬೇಕು. ಎಐನಿಂದ ಕೆಲಸ ಹೋಗುವುದಿಲ್ಲ. ಬದಲಾಗಿ ಕೆಲಸ ಹೆಚ್ಚಿಗೆ ಸಿಗುತ್ತದೆ. ಹೊನ್ನಾವರದ ಎಸ್‌ಡಿಎಂ ಕಾಲೇಜಿನಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಲ್ಯಾಬ್ ನಿರ್ಮಾಣವಾಗಬೇಕು ಎಂದು ಬಿ.ಎನ್.ಬಿ.ಸೆಕ್ಯುರಿಟಿ & ಪ್ರೈ .ಲಿ.ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆನಂದ್ ಭಟ್ಟ ತಿಳಿಸಿದರು.ಪಟ್ಟಣದ ಎಂಪಿಇ ಸೊಸೈಟಿ ಹಾಗೂ ಎಸ್.ಡಿ.ಎಂ. ಪೂರ್ವ ವಿದ್ಯಾರ್ಥಿ ಸಂಘದ ವತಿಯಿಂದ ನಡೆದ ಎಸ್‌ಡಿಎಂ ಸಂಭ್ರಮ -೨೦೨೬, ಪೂರ್ವ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ನಾವು ಮುಂದಿನ ತಲೆಮಾರಿಗೆ ಏನನ್ನು ನೀಡುತ್ತೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ. ಸುಮಾರು ೪೦ ರಿಂದ ೪೫ ವರ್ಷ ನಾವು ನಡೆದು ಬಂದ ಹಾದಿಯ ಬಗ್ಗೆ ಅವಲೋಕನ ಮಾಡುವುದಿಲ್ಲ. ಆ ಬಳಿಕ ನಮಗೆ ಎಲ್ಲವೂ ನೆನಪಾಗುತ್ತಾ ಬರುತ್ತದೆ. ಪದವಿ ಕಾಲೇಜುಗಳಲ್ಲಿ ಹೆಚ್ಚಾಗಿ ಪೂರ್ವ ವಿದ್ಯಾರ್ಥಿ ಸಂಘ ಗಟ್ಟಿಯಾಗಿರುವುದಿಲ್ಲ. ಆದರೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪೂರ್ವ ವಿದ್ಯಾರ್ಥಿ ಸಂಘ ಗಟ್ಟಿಯಾಗಿರುತ್ತದೆ. ಆದರೆ ಎಸ್‌ಡಿಎಂ ಕಾಲೇಜು ಒಂದು ಹೊಸತನವನ್ನು ತೋರಿಸಿಕೊಟ್ಟಿದೆ. ಕಾಲೇಜಿಗೆ ಮತ್ತು ಸಂಸ್ಥೆಗೆ ನಮ್ಮಿಂದಾದ ಕೊಡುಗೆಯನ್ನು ನಾವು ನೀಡಲು ಸಿದ್ದವಾಗಿರಬೇಕು ಎಂದರು.ಆಸ್ಸೆಮ್ ಶಿಕ್ಷಣ ಸಂಸ್ಥೆ ಕಲ್ಮಾಡಿಯ ಪ್ರಾಚಾರ್ಯ ಪ್ರೊ. ಪವನ್ ಕಿರಣ್‌ಕೆರೆ ಮಾತನಾಡಿ, ಉತ್ತರ ಕನ್ನಡ ಜಿಲ್ಲೆ ಸಂಸ್ಕಾರಕ್ಕೆ ಹೆಸರುವಾಸಿಯಾಗಿದೆ. ಹೊನ್ನಾವರ ಸಹ ಆತಿಥ್ಯಕ್ಕೆ ಪ್ರಸಿದ್ಧವಾಗಿದೆ. ಇದಕ್ಕೆ ಕಾರಣ ಇಲ್ಲಿನ ಶಿಕ್ಷಣ ಸಂಸ್ಥೆಗಳು. ಗುರುವಿಗೆ ನಮಸ್ಕರಿಸುವ ಸಂಸ್ಕೃತಿ ಹೆಚ್ಚಾಗಬೇಕು. ಬದುಕಿನ ಭಿಕ್ಷೆ ನೀಡಿದ್ದು ಗುರು ಎನ್ನುವುದನ್ನು ಅರ್ಥೈಸಿಕೊಳ್ಳಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂಪಿಇ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿದರು. ಇದೇ ಸಂದರ್ಭ ನಿವೃತ್ತ ಪ್ರಾಚಾರ್ಯರು, ಉಪನ್ಯಾಸಕರನ್ನು, ಕ್ಲರ್ಕ್, ಅಟೆಂಡರ್‌ಗಳನ್ನು ಸನ್ಮಾನಿಸಲಾಯಿತು. ಅಲ್ಲದೆ ಪೂರ್ವ ವಿದ್ಯಾರ್ಥಿಗಳಾದ ೧೯೬೪ರಿಂದ ೧೯೬೮ ವರೆಗಿನ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಈ ಹಿಂದೆ ಕಾಲೇಜಿನಲ್ಲಿ ವಿವಿಧ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಪೂರ್ವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಬಳಿಕ ಪೂರ್ವ ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು.ಎಂಪಿಇ ಸೊಸೈಟಿ ಉಪಾಧ್ಯಕ್ಷ ನಾಗರಾಜ್ ಕಾಮತ್, ಕಾರ್ಯದರ್ಶಿ ಎಸ್.ಎಂ.ಭಟ್, ಖಜಾಂಚಿ ಸುರೇಶ್ ಶೇಟ್, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜಯ್ ಕಾಮತ್, ಪದವಿ ಕಾಲೇಜು ಪ್ರಾಚಾರ್ಯ ಡಾ. ಜಿ.ಎನ್. ಭಟ್, ಪಪೂ ಕಾಲೇಜು ಪ್ರಾಚಾರ್ಯ ಎಂ.ಎಚ್. ಭಟ್, ಪಪೂ ಕಾಲೇಜು ಹಂಗಾಮಿ ಪ್ರಾಚಾರ್ಯ ಡಾ.ರಾಜು ಮಾಳಗಿಮನಿ, ಸೆಂಟ್ರಲ್ ಸ್ಕೂಲ್ ಪ್ರಾಚಾರ್ಯೆ ಡಾ. ವಿಜಯಲಕ್ಷ್ಮೀ ನಾಯ್ಕ, ಪೂರ್ವ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಡಾ. ಪಿ.ಎಂ. ಹೊನ್ನಾವರ, ಡಾ. ಎಂ.ಪಿ. ಕರ್ಕಿ ಇನ್‌ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ & ರಿಸರ್ಚ್ ನಿರ್ದೇಶಕ ಡಾ.ಶಿವರಾಮ್ ಶಾಸ್ತ್ರಿ ಉಪಸ್ಥಿತರಿದ್ದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಸ್ವಾಗತಿಸಿದರು. ಎಂಪಿಇ ಸೊಸೈಟಿಯ ಪಿಆರ್ ಓ ಡಾ. ಡಿ.ಎಲ್. ಹೆಬ್ಬಾರ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪದವಿ ಪ್ರಾಚಾರ್ಯ ಡಾ. ಜಿ.ಎನ್. ಭಟ್ ವಂದಿಸಿದರು. ಬಳಿಕ ಪೂರ್ವ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.