ಸಾರಾಂಶ
ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರವೂ ಪರೀಕ್ಷೆ ರದ್ದುಗೊಳಿಸುವ ಬದಲು ರಾಜ್ಯ ಸರ್ಕಾರ ಪರೀಕ್ಷೆ ಮುಂದೂಡಿದೆ.
ಬಳ್ಳಾರಿ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 5, 8, 9ನೇ ತರಗತಿಯ ಪಬ್ಲಿಕ್ ಪರೀಕ್ಷೆಯನ್ನು ರದ್ದುಗೊಳಿಸಲು ಆಗ್ರಹಿಸಿ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಇದೇ ವೇಳೆ ಮಾತನಾಡಿದ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ, 5, 8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳ ಪಬ್ಲಿಕ್ ಪರೀಕ್ಷೆಗಳನ್ನು ರದ್ದುಗೊಳಿಸಬೇಕೆಂದು ಸುಪ್ರೀಂಕೋರ್ಟ್ ತೀರ್ಪು ಹೊರಡಿಸಿದೆ. ಆದರೆ, ರಾಜ್ಯ ಸರ್ಕಾರವು ಆದೇಶ ಹೊರಡಿಸಿ ಪರೀಕ್ಷೆಗಳನ್ನು ಮಧ್ಯಂತರದಲ್ಲಿ ತಡೆ ಹಿಡಿದಿದ್ದು, ಪರೀಕ್ಷೆಗಳನ್ನು ಮುಂದೂಡಿದೆ. ಒಂದೆಡೆ ಪರೀಕ್ಷೆ ರದ್ದುಗೊಳಿಸಿ ಹಲವು ಆದೇಶಗಳನ್ನು ನ್ಯಾಯಾಲಯಗಳು ನೀಡುತ್ತಿದ್ದರೂ ಪರೀಕ್ಷೆ ನಡೆಸಲೇಬೇಕು ಎಂದು ಸರ್ಕಾರ ಹಠಕ್ಕೆ ಬಿದ್ದಿರುವುದು ಏಕೆ ಎಂದು ಪ್ರಶ್ನಿಸಿದರು.ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರವೂ ಪರೀಕ್ಷೆ ರದ್ದುಗೊಳಿಸುವ ಬದಲು ರಾಜ್ಯ ಸರ್ಕಾರ ಪರೀಕ್ಷೆ ಮುಂದೂಡಿದೆ. ಇದರಿಂದ ರಾಜ್ಯದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಶೈಕ್ಷಣಿಕ ವರ್ಷದ ಪರೀಕ್ಷೆಗಳನ್ನು ರದ್ದುಪಡಿಸಿ, ಮುಂದಿನ ವರ್ಷ ಪ್ರಜಾತಾಂತ್ರಿಕ ಪ್ರಕ್ರಿಯೆ ಮೂಲಕ ಪಬ್ಲಿಕ್ ಪರೀಕ್ಷೆಗಳನ್ನು ನಡೆಸುವ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಈರಣ್ಣ, ಉಪಾಧ್ಯಕ್ಷ ಎಂ.ಶಾಂತಿ, ಉಮಾ, ಪ್ರಮೋದ್ ಮತ್ತು ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯರು ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.