ಸಾರಾಂಶ
ರಾಣಿಬೆನ್ನೂರು: ತಾಲೂಕಿನಲ್ಲಿ ಹಲವಾರು ಐತಿಹ್ಯಗಳು ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಅನೇಕ ತಾಣಗಳಿದ್ದರೂ ಅಭಿವೃದ್ಧಿಯಾಗದ ಕಾರಣ ಅವುಗಳು ಇದುವರೆಗೂ ಬೆಳಕಿಗೆ ಬಂದಿಲ್ಲ. ಅವುಗಳನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಿ ತಾಲೂಕನ್ನು ಪ್ರವಾಸಿ ತಾಣವನ್ನಾಗಿಸುವ ಚಿಂತನೆಯಿದೆ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ತಾಲೂಕಿನ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಣೆ ಮಾಡಿದ ನಂತರ ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಸ್ಥಳಗಳಿಗೆ ಒಂದು ಸಲ ಭೇಟಿ ನೀಡಬೇಕು ಎನ್ನುವ ಶಾಸಕ ಪ್ರಕಾಶ ಕೋಳಿವಾಡ ಒತ್ತಾಯದ ಮೇರೆಗೆ ಅಲ್ಲಿಗೆ ಭೇಟಿ ನೀಡಿರುವೆ ಎಂದರು. ತಾಲೂಕಿನ ಅರೇಮಲ್ಲಾಪುರ ಬಳಿಯ ಬೆಟ್ಟದ ಮಲ್ಲೇಶ್ವರ ದೇವಸ್ಥಾನ ನಿಜಕ್ಕೂ ಒಂದು ಸುಂದರ ತಾಣವಾಗಿದೆ. ಅಲ್ಲಿಗೆ ಹೋದರೆ ಮನಸ್ಸಿಗೆ ಮುದವಾಗುತ್ತದೆ. ಆ ಪ್ರದೇಶದಲ್ಲಿ ಸಿದ್ಧಾರೂಢರು ಹಾಗೂ ಮುಪ್ಪಿನಾರ್ಯ ಶ್ರೀಗಳು ತಪಸ್ಸು ಮಾಡಿದ್ದಾರೆ ಎಂದು ಹಿರಿಯರು ಹೇಳುತ್ತಾರೆ.ಇದನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಅರಣ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಜತೆಗೆ ಅಲ್ಲಿಗೆ ಭೇಟಿ ನೀಡಿ ಬಂದಿದ್ದೇವೆ. ಅಲ್ಲಿಗೆ ಹೋಗಿ ಬರಲು 10 ಜೀಪ್‌ಗಳನ್ನು ವ್ಯವಸ್ಥೆ ಮಾಡಬೇಕು. ಮುಂಬರುವ ಆ. 15ರಿಂದ ಅಲ್ಲಿಗೆ ಸಾರಿಗೆ ವ್ಯವಸ್ಥೆ ಮಾಡುವ ಜತೆಗೆ ಒಪನ್ ಏರಿಯಾದಲ್ಲಿ ಕ್ಯಾಂಟಿನ್ ವ್ಯವಸ್ಥೆ ಮಾಡುವುದು. ನೇಚರ್ ಕ್ಯಾಂಪ್ ಮಾಡಲು ಚಿಂತನೆ ನಡೆಸಲಾಗಿದೆ. ಇದರ ಬಗ್ಗೆ ಸಮಗ್ರ ಅಧ್ಯಯನ ಮಾಡಲು ಪ್ರವಾಸೋದ್ಯಮ ಇಲಾಖೆ ಎಂಡಿ ಅವರಿಗೆ ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ. ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ 1971ರಲ್ಲಿ ನಡೆದ ಯುದ್ಧದ ಸಮಯದಲ್ಲಿ ಬಳಸಲಾದ ವಾರ್ ಟ್ಯಾಂಕ್ ತರುವ ಪ್ರಯತ್ನ ಯಶಸ್ವಿಯಾಗಿದ್ದು ಆ. 15ರಂದು ಅದನ್ನು ಅರೇಮಲ್ಲಾಪುರದ ಬೆಟ್ಟದ ಮಲ್ಲಿಕಾರ್ಜುನ ಪ್ರದೇಶದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು ಎಂದರು.ಇದಲ್ಲದೆ ಐರಣಿ ಗ್ರಾಮದ ಕೋಟೆಗೆ ಭೇಟಿ ನೀಡಿದ್ದು, ಅಲ್ಲಿನ ಸ್ಥಿತಿಯನ್ನು ದುರಸ್ತಿ ಮಾಡಿ ಆ ಭಾಗಕ್ಕೆ ಬಂದವರಿಗೆ ತಿಳಿಸಲು ವ್ಯವಸ್ಥೆ ಮಾಡಲಾಗಿದೆ. ಮಾಗೋಡ ರಸ್ತೆಯಲ್ಲಿರುವ ಭೀಮನ ದೋಣಿ ಆಕರ್ಷಣಿಯವಾಗಿದೆ. ಇವುಗಳ ಜತೆಯಲ್ಲಿ ದೊಡ್ಡಕೆರೆ, ಚೌಡಯ್ಯದಾನಪುರ ಹಾಗೂ ಕೃಷ್ಣಮೃಗಕ್ಕೆ ಭೇಟಿ ನೀಡಿ ಅವುಗಳನ್ನು ಪ್ರವಾಸೋದ್ಯಮ ತಾಣಗಳನ್ನಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ಶಾಸಕ ಪ್ರಕಾಶ ಕೋಳಿವಾಡ, ಹಾವೆಮುಲ್ ಅಧ್ಯಕ್ಷ ಮಂಜನಗೌಡ ಪಾಟೀಲ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ಡಾ. ಆರ್.ಎಂ. ಕುಬೇರಪ್ಪ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.