ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಧಾರವಾಡ ಪ್ರಥಮ ರ‍್ಯಾಂಕ್‌ ಗಳಿಸುವ ಗುರಿ: ಜಿಲ್ಲಾಧಿಕಾರಿ ದಿವ್ಯಪ್ರಭು

| Published : Feb 26 2025, 01:04 AM IST

ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಧಾರವಾಡ ಪ್ರಥಮ ರ‍್ಯಾಂಕ್‌ ಗಳಿಸುವ ಗುರಿ: ಜಿಲ್ಲಾಧಿಕಾರಿ ದಿವ್ಯಪ್ರಭು
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯು ರಾಜ್ಯಕ್ಕೆ ಮೊದಲ ರ್ಯಾಂಿಕ್‌ ಗಳಿಸುವ ಗುರಿ ಹೊಂದಿರುವುದಾಗಿ ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಹುಬ್ಬಳ್ಳಿ: ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಿಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಫಲಿತಾಂಶ ಸುಧಾರಣೆಗೆ ಮಿಷನ್ ವಿದ್ಯಾಕಾಶಿ ಕಾರ್ಯಕ್ರಮದ ಅಡಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯು ರಾಜ್ಯಕ್ಕೆ ಮೊದಲ ರ‍್ಯಾಂಕ್‌ ಗಳಿಸುವ ಗುರಿ ಹೊಂದಿರುವುದಾಗಿ ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ 28,666 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಅಲ್ಲದೇ ಹೊಸದಾಗಿ ಬಾಹ್ಯ ಅಭ್ಯರ್ಥಿಯಾಗಿ 511 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. 1,437 ವಿದ್ಯಾರ್ಥಿಗಳು ಪುನರಾವರ್ತಿತರಾಗಿದ್ದು, 135 ವಿದ್ಯಾರ್ಥಿಗಳು ಪುನರಾವರ್ತಿತ ಬಾಹ್ಯ ಅಭ್ಯರ್ಥಿಗಳಾಗಿದ್ದಾರೆ. ಒಟ್ಟಾರೆಯಾಗಿ 30,749 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದರು.

ಜಿಲ್ಲಾದ್ಯಂತ ಒಟ್ಟು‌ 447 ಪ್ರೌಢಶಾಲೆಗಳಿವೆ. 106 ಪರೀಕ್ಷಾ ಕೇಂದ್ರಗಳಲ್ಲಿ ಮಾ. 21ರಿಂದ ಏಪ್ರಿಲ್ 4ರ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ. ಜಿಲ್ಲಾ ಹಂತದಲ್ಲಿ ಜಾಗೃತ ದಳದ ಅಧಿಕಾರಿಗಳನ್ನು ನೇಮಕ ಮಾಡಿ, ಪರೀಕ್ಷಾ ಕೇಂದ್ರಗಳ ಸುತ್ತಲೂ ಪೊಲೀಸರನ್ನು ನೇಮಕಗೊಳಿಸಲಾಗುತ್ತದೆ ಎಂದರು.

ಕಳೆದ 10 ವರ್ಷಗಳಲ್ಲಿ ಜಿಲ್ಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆಯುವಲ್ಲಿ ಪ್ರಯತ್ನಿಸುತ್ತಿದೆ. 2019ರಲ್ಲಿ 27ನೇ ಸ್ಥಾನ, 2012 ಮತ್ತು 2022ರಲ್ಲಿ ಬಿ ಗ್ರೇಡ್, 2023ರಲ್ಲಿ 24ನೇ ಸ್ಥಾನ ಹಾಗೂ 2024ರಲ್ಲಿ 22ನೇ ಸ್ಥಾನ ಪಡೆದುಕೊಂಡಿತು. ಹೀಗಾಗಿ, ಈ ಬಾರಿ ಉತ್ತಮ ಫಲಿತಾಂಶದೊಂದಿಗೆ ಜಿಲ್ಲೆಯನ್ನು ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆಯುವ ಗುರಿ ಹೊಂದಿರುವುದಾಗಿ ತಿಳಿಸಿದರು.

ಪಾರದರ್ಶಕವಾಗಿ ಮತ್ತು ಸರ್ಕಾರದ ಸೂಚನೆ, ಆದೇಶಗಳಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವಲ್ಲಿ ಜಿಲ್ಲಾಡಳಿತದಿಂದ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಮುಖ್ಯ ಅಧೀಕ್ಷಕರು, ಪ್ರಶ್ನೆ ಪತ್ರಿಕೆ ಪಾಲಕರು, ಪರೀಕ್ಷಾ ಕೇಂದ್ರಕ್ಕೆ ಇಬ್ಬರಂತೆ ಸ್ಥಳೀಯ ನಿರೀಕ್ಷಕರನ್ನು ನೇಮಕ ಮಾಡಲಾಗಿದೆ.

ಈ ವೇಳೆ ಜಿಪಂ ಸಿಇಒ ಭುವನೇಶ ಪಾಟೀಲ, ಡಿಸಿಪಿ ಮಹಾನಿಂಗ ನಂದಗಾವಿ‌, ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುರೇಶ ಕೆ.ಪಿ, ಡಿಡಿಪಿಐ ಎಸ್.ಎಸ್. ಕೆಳದಿಮಠ ಇದ್ದರು. ಪಿಯುಸಿ ಪರೀಕ್ಷೆಗೆ 27,830 ವಿದ್ಯಾರ್ಥಿಗಳಿಂದ ನೋಂದಣಿ

ಮಾ. 1ರಿಂದ 20ರ ವರೆಗೆ ಪಿಯುಸಿ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯ 27,830 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲಿ 13,100 ವಿದ್ಯಾರ್ಥಿಗಳು ಹಾಗೂ 14,730 ವಿದ್ಯಾರ್ಥಿನಿಯರಿದ್ದಾರೆ. ಕಲಾ ವಿಭಾಗದಲ್ಲಿ 5,413, ವಾಣಿಜ್ಯ ವಿಭಾಗದಿಂದ 8,464 ಮತ್ತು ವಿಜ್ಞಾನ ವಿಭಾಗದಿಂದ 13,958 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ 173 ಕಾಲೇಜುಗಳಿದ್ದು, 41 ಪರೀಕ್ಷಾ ಕೇಂದ್ರ ತೆರೆಯಲಾಗಿದೆ‌‌. ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕರನ್ನು ಪರೀಕ್ಷೆಯ ನೋಡಲ್‌ ಅಧಿಕಾರಿಯಾಗಿ ನೇಮಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾ ಮುಖ್ಯ ಅಧೀಕ್ಷಕರು, ಸಹ ಮುಖ್ಯ ಅಧೀಕ್ಷಕರು ಹಾಗೂ ಸ್ಥಾನಿಕ ಜಾಗೃತ ದಳ, ತಾಲೂಕು ಜಾಗೃತ ದಳ ಮತ್ತು ಜಿಲ್ಲಾ ಜಾಗೃತ ದಳ ಸದಸ್ಯರನ್ನು ನೇಮಿಸಲು ಕ್ರಮ ಕೈಗೊಳ್ಳಲಾಗಿದೆ‌.

ಮಾರ್ಗಾಧಿಕಾರಿಗಳ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುವುದು. ಪ್ರಶ್ನೆ ಪತ್ರಿಕೆಗಳನ್ನು ಸ್ವೀಕರಿಸಲು ಹಾಗೂ ಪರೀಕ್ಷಾ ದಿನದಂದು ಮಾರ್ಗಾಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ, ಉಪನಿರ್ದೇಶಕರು, ಪಪೂ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಖಜಾನೆ, ಧಾರವಾಡ ಅಧಿಕಾರಿಗಳನ್ನೊಳಗೊಂಡ ಜಿಲ್ಲಾ ಮಟ್ಟದ ತ್ರಿ ಸದಸ್ಯ ಸಮಿತಿ ರಚಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 15 ಮಾರ್ಗಗಳನ್ನು ಗುರುತಿಸಿ ಪ್ರತಿ ಮಾರ್ಗಕ್ಕೆ 3 ಜನ ಅಧಿಕಾರಿಗಳ ಸದಸ್ಯ ಸಮಿತಿಯ ತಂಡ ರಚಿಸಿ, 45 ಅಧಿಕಾರಿಗಳನ್ನು ಮಾರ್ಗಾಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ‌ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಮಾಹಿತಿ ನೀಡಿದರು.