ಮಹಿಳಾ ಕುಸ್ತಿಪಟುಗಳ ಎಐಎಂಎಸ್‌ಎಸ್ ಪ್ರತಿಭಟನೆ

| Published : Dec 26 2023, 01:30 AM IST

ಸಾರಾಂಶ

ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಐಎಂಎಸ್‌ಎಸ್‌ ಪ್ರತಿಭಟಿಸಿತು.

ದಾವಣಗೆರೆ: ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ರಾಜ್ಯ ಮತ್ತು ಜಿಲ್ಲಾ ಸಮಿತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟಿಸಲಾಯಿತು.

ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಎಐಎಂಎಸ್ಎಸ್ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರವು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಹೆಸರು ಮಾಡಿದ ಮಹಿಳಾ ಕ್ರೀಡಾಪಟುಗಳಿಗೆ ನ್ಯಾಯ ಒದಗಿಸುವಂತೆ ಘೋಷಣೆ ಕೂಗಿದರು.

ಇದೇ ವೇಳೆ ಮಾತನಾಡಿದ ಎಐಎಂಎಸ್ಎಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಕುಕ್ಕವಾಡ, ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ, ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್ ಶರಣ್ ಸಿಂಗ್‌ನ ಆಪ್ತನೇ ಈಗ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದು, ಇದರಿಂದ ನೊಂದ ಮಹಿಳಾ ಕುಸ್ತಿಪಟುಗಳು ತಮಗೆ ನ್ಯಾಯ ದೊರಕುವುದಿಲ್ಲವೆಂದು ಕುಸ್ತಿ ಕ್ರೀಡೆಯನ್ನೇ ತ್ಯಜಿಸುವುದಾಗಿ ಘೋಷಿಸಿದ್ದಾರೆ ಎಂದರು.

ಸಂಘಟನೆ ರಾಜ್ಯಾಧ್ಯಕ್ಷೆ ಅಪರ್ಣಾ ಮಾತನಾಡಿ, ಮಹಿಳಾ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಿದಾಗಿನಿಂದಲೂ ಆಪಾದಿತನಾಗಿರುವ ಬಿಜೆಪಿ ಸಂಸದ ಬ್ರಿಜ್‌ಗೆ ರಕ್ಷಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಕೇಂದ್ರ ಗೃಹ ಸಚಿವರು ದೂರು ನೀಡಿದವರನ್ನು ಭೇಟಿಯಾಗಿ ನ್ಯಾಯ ಕೊಡಿಸುವ ಭರವಸೆ ನೀಡಿದ್ದರೂ ಅದು ಕಾರ್ಯ ರೂಪಕ್ಕೆ ಬಂದಿಲ್ಲ. ಮಹಿಳೆಯರಿಗೆ ಸೂಕ್ತ ಭದ್ರತೆ ನೀಡುವಲ್ಲಿ ಸರ್ಕಾರ ಸೋತಿದೆ ಎಂದು ದೂರಿದರು.

ಸಾಕ್ಷಿ ಮಲ್ಲಿಕ್‌ ಅಂತಹ ಪ್ರತಿಭಾವಂತ ಕ್ರೀಡಾಪಟು ಕ್ರೀಡಾ ಲೋಕಕ್ಕೆ ವಿದಾಯ ಹೇಳಿದ ನಂತರ ವೀರೇಂದ್ರ ಸಿಂಗ್‌ ಸಾಧನೆಗೆ ದೊರೆತಿದ್ದ ಪದ್ಮಶ್ರೀ ಪ್ರಶಸ್ತಿ ಸರ್ಕಾರಕ್ಕೆ ಮರಳಿಸಿದ್ದಾರೆ. ವಿನೇಶ್ ಫೋಗಾಟ್ ಪ್ರಧಾನಿ ನೀಡಿದ್ದ ಪ್ರಶಸ್ತಿ ಮರಳಿಸಿದ್ದರೂ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದಿರುವುದು ವಿಪರ್ಯಾಸ. ಕುಸ್ತಿಪಟುಗಳ ಹೋರಾಟವನ್ನು ಸಂಘಟನೆ ಬೆಂಬಲಿಸಿ, ನಿಮ್ಮೊಂದಿಗೆ ನಾವಿದ್ದೇವೆಂಬ ಸಂದೇಶ ಸಾರುತ್ತಿದೆ ಎಂದು ತಿಳಿಸಿದರು.

ಹೋರಾಟಗಾರರ ಸಾಕ್ಷಿ ಮಲ್ಲಿಕ್‌, ಬಜರಂಗ ಪುನಿಯಾ, ವೀರೇಂದ್ರ ಸಿಂಗ್‌ರಿಗೆ ಸರ್ಕಾರವು ನ್ಯಾಯವನ್ನು ಖಾತರಿಪಡಿಸಬೇಕು. ಆ ಎಲ್ಲರ ಮನವೊಲಿಸಿ, ಕ್ರೀಡೆಗೆ ಮರಳಿ ಕರೆ ತರಬೇಕು. ಮಹಿಳೆಯರ ಘನತೆ ಮತ್ತು ಗೌರವ ಕಾಪಾಡಿ, ಉದ್ಯೋಗ ಸ್ಥಳದಲ್ಲಿ, ಕ್ರೀಡಾ ಕ್ಷೇತ್ರದಲ್ಲಿ ಸರ್ಕಾರ ಸುರಕ್ಷಿತ, ಸುಭದ್ರ ವಾತಾವರಣ ಖಾತರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಕೆನರಾ ಬ್ಯಾಂಕ್ ಸ್ಟಾಫ್ ಪೆಡರೇಷನ್‌ ಮಾಜಿ ಅಧ್ಯಕ್ಷ ಹಿರೇಮಠ, ಎಐಎಂಎಸ್ಎಸ್‌ ಜಿಲ್ಲಾ ಕಾರ್ಯದರ್ಶಿ ಕೆ.ಭಾರತಿ, ಜಿಲ್ಲಾ ಸಮಿತಿಯ ಮಮತಾ, ಸರಸ್ವತಿ, ಸುಜಾತ, ರೇಖಾ, ನಾಗಜ್ಯೋತಿ, ನಾಗಲಕ್ಷ್ಮಿ, ಕವಿತಾ ಇತರರು ಇದ್ದರು.