ಸಾರಾಂಶ
ಐನೋರಹೊಸಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಕಳೆದ 10 ತಿಂಗಳಲ್ಲಿ 3.38 ಲಕ್ಷ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಐನೋರಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಸಂಘದಲ್ಲಿ ಅವ್ಯವಹಾರ ನಡೆದಿದ್ದು ತನಿಖೆ ಮಾಡಬೇಕೆಂದು ಒತ್ತಾಯಿಸಿ ಗುರುವಾರ ಆಡಳಿತ ಮಂಡಳಿಯ 9 ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ.ತಾಲೂಕಿನ ಐನೋರಹೊಸಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಕಳೆದ 10 ತಿಂಗಳಲ್ಲಿ 3.38 ಲಕ್ಷ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ರೈತ ಸಂಘಟನೆಯ ಮುಖಂಡರು ಆರೋಪಿಸಿ ಸೂಕ್ತ ತನಿಖೆ ನಡೆಸಬೇಕೆಂದು ವಿಸ್ತರಣಾಧಿಕಾರಿಗಳಿಗೆ ಮಂಗಳವಾರ ಮನವಿಯನ್ನು ಸಲ್ಲಿದ್ದರು. ಇದರ ಬೆನ್ನೆಲ್ಲೇ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಸಂಘಂದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಬುಧವಾರ ಸ್ಪಷ್ಟನೆ ನೀಡಿದ್ದರು.
ಘಟನೆಗೆ ಸಂಬಂಧಿಸಿದಂತೆ ಗುರುವಾರ ಮತ್ತೊಂದು ಹೈಡ್ರಾಮ ನಡೆದಿದ್ದು, ಸಂಘದಲ್ಲಿ ಅವ್ಯವಹಾರ ನಡೆದಿರುವುದು ನಿಜ. ಅದನ್ನು ಸೂಕ್ತ ರೀತಿಯಲ್ಲಿ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ, ಸಂಘದ ಉಪಾಧ್ಯಕ್ಷ ನಾಗರಾಜರೆಡ್ಡಿ, ಆಡಳಿತ ಮಂಡಳಿಯ ಸದಸ್ಯರಾದ ಜಗದೀಶ್, ರಾಜಣ್ಣ, ಪ್ರಸಾದ್, ಮಾಲ, ಚಂದ್ರಪ್ಪ, ಪಾರ್ವತಮ್ಮ, ರತ್ನಮ್ಮ ಮತ್ತು ಶಾರದ ಅವರು ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆಯನ್ನು ಸಂಘದ ಕಾರ್ಯದರ್ಶಿಗೆ ನೀಡಿದರು.ಈ ವೇಳೆ ಸಂಘದ ನಿರ್ದೇಶಕ ಜಗದೀಶ್ ಮಾತನಾಡಿ, ಸಂಘದಲ್ಲಿ ಕಳೆದ 5 ವರ್ಷಗಳಿಂದ ಸಂಘದಲ್ಲಿ ಅವ್ಯವಹಾರ ನಡೆದಿರುವುದು ನಿಜವಾಗಿದ್ದು, ಪೋರ್ಜರಿ ಸಹಿ ಮಾಡುವ ಮೂಲಕ ಸಂಘದ ಕಾರ್ಯದರ್ಶಿ ಬೇರೆಯವರಿಗೆ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಇದರಿಂದ ಸಂಘಕ್ಕೆ ಲಕ್ಷಾಂತರ ರೂ. ನಷ್ಟ ಉಂಟಾಗಿದ್ದು, ಕ್ರಮ ಜರುಗಿಸುವಂತೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಅವ್ಯವಹಾರದ ಬಗ್ಗೆ ರೈತ ಸಂಘದ ಮುಖಂಡರಿಗೆ ತಿಳಿಸಿದಾಗ ರೈತ ಸಂಘಟನೆಯವರು ರೈತರ ಪರವಾಗಿ ಪ್ರತಿಭಟನೆ ಮಾಡಿ ತನಿಖೆಗೆ ಒತ್ತಾಯ ಮಾಡಿದ್ದಾರೆ.ಆಡಳಿತ ಮಂಡಳಿಯ ಸದಸ್ಯರನ್ನು ಅದ್ಯಕ್ಷ ಹಾಗೂ ಕಾರ್ಯದರ್ಶಿ ಕಡೆಗಣಿಸುತ್ತಾ ಬಂದಿದ್ದು, ಯಾವುದೇ ಸಭೆಗಳಿಗೆ ನಿರ್ದೇಶಕರನ್ನು ಕರೆಯುತ್ತಿಲ್ಲ. ಆಡಳಿತ ಮಂಡಳಿಯ ಗಮನಕ್ಕೆ ತರದೇ ಹಣಕಾಸಿನ ವರ್ಗಾವಣೆ ಮಾಡಿ ಈಗ ಆಡಳಿತ ಮಂಡಳಿಗೆ ತಿಳಿಸಿ ಹಣದ ವ್ಯವಹಾರ ಮಾಡಲಾಗಿದೆ ಎಂದು ಕಾರ್ಯದರ್ಶಿ ಸುಳ್ಳನ್ನು ಹೇಳುತ್ತಿದ್ದಾರೆ.
ಸಂಘದಲ್ಲಿ ಆಡಳಿತ ಮಂಡಳಿಗೆ ಯಾವುದೇ ಮಾಹಿತಿ ನೀಡದೇ ಮತ್ತು ಸಭೆಯಲ್ಲಿ ನಮೂದು ಮಾಡದೇ ಹಣಕಾಸಿನ ವಿಚಾರದಲ್ಲಿ ಅವ್ಯವಹಾರ ನಡೆದಿದೆ. ಇದಕ್ಕೆ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿ ನೇರ ಹೊಣೆಯಾಗಿದ್ದು, ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ, ಹಣ ದುರ್ಬಳಕೆ ಮಾಡಿಕೊಂಡಿರುವವರ ವಿರುದ್ದ ಕ್ರಮ ಜರುಗಿಸಿ ಬಡ ರೈತರಿಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಸಿ 9 ಮಂದಿ ರಾಜೀನಾಮೆಯನ್ನು ನೀಡಿದ್ದೇವೆ ಎಂದರು.