ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಕರ್ನಾಟಕ ಪ್ರೌಢಶಾಲೆಯ ಎಂಟು ವಿದ್ಯಾರ್ಥಿಗಳಿಗೆ ಶಾಲೆಯ ವಿಜ್ಞಾನ ಶಿಕ್ಷಕ ರಫೀಕ್ ತಾಳಿಕೋಟಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ವಿಮಾನ ಪ್ರಯಾಣದ ಉಡುಗೊರೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೀದರ್

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಕರ್ನಾಟಕ ಪ್ರೌಢಶಾಲೆಯ ಎಂಟು ವಿದ್ಯಾರ್ಥಿಗಳಿಗೆ ಶಾಲೆಯ ವಿಜ್ಞಾನ ಶಿಕ್ಷಕ ರಫೀಕ್ ತಾಳಿಕೋಟಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ವಿಮಾನ ಪ್ರಯಾಣದ ಉಡುಗೊರೆ ನೀಡಿದ್ದಾರೆ.

ಮಂಗಳವಾರ ವಿದ್ಯಾರ್ಥಿಗಳು ಬೀದರ್‌ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಿದರು. ಶಾಲಾ ಮಕ್ಕಳಿಗೆ ಹೊಸ ಅನುಭವ ನೀಡುವ ಹಾಗೂ ಶೈಕ್ಷಣಿಕ ಸಾಧನೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಶಿಕ್ಷಕರು ಈ ವಿಶೇಷ ಪ್ರಯತ್ನ ಮಾಡಿದ್ದಾರೆ.

ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಿ, ಅವರ ಕನಸುಗಳಿಗೆ ಪ್ರೇರಣೆ ನೀಡಿದ ಶಿಕ್ಷಕ ರಫೀಕ್ ತಾಳಿಕೋಟಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಪ್ರಯತ್ನ ಇತರ ಶಿಕ್ಷಕರಿಗೂ ಮಾದರಿಯಾಗಿದೆ.

ವಿದ್ಯಾರ್ಥಿಗಳ ಅನಿಸಿಕೆ: ವಿಮಾನದಲ್ಲಿ ಪ್ರಯಾಣಿಸಬೇಕು ಎಂಬುದು ನಮ್ಮ ಬಹುದಿನಗಳ ಕನಸಾಗಿತ್ತು. ಶಿಕ್ಷಕರು ನಮ್ಮ ಸಾಧನೆಯನ್ನು ಗುರುತಿಸಿ, ತಮ್ಮ ಸ್ವಂತ ಖರ್ಚಿನಲ್ಲಿ ಈ ಅವಕಾಶ ಕಲ್ಪಿಸಿರುವುದು ತುಂಬಾ ಸಂತೋಷ ತಂದಿದೆ.

ಈ ಅನುಭವ ನಮ್ಮ ಜೀವನದಲ್ಲಿ ಮರೆಯಲಾಗದ ನೆನಪಾಗಿ ಉಳಿಯಲಿದೆ. ಮುಂದೆಯೂ ಚೆನ್ನಾಗಿ ಓದಿ, ಉನ್ನತ ಸಾಧನೆ ಮಾಡಿ ನಮ್ಮ ಶಿಕ್ಷಕರಿಗೆ ಹಾಗೂ ಶಾಲೆಗೆ ಕೀರ್ತಿ ತರಲು ಪ್ರಯತ್ನಿಸುತ್ತೇವೆ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುವುದಷ್ಟೇ ಅಲ್ಲದೆ, ಜೀವನದಲ್ಲಿ ದೊಡ್ಡ ಕನಸುಗಳನ್ನು ಕಾಣಬೇಕು ಮತ್ತು ಅವುಗಳನ್ನು ನನಸು ಮಾಡಿಕೊಳ್ಳುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಶಾಲೆಯ ಮಕ್ಕಳಿಗೂ ವಿಮಾನಯಾನದಂತಹ ವಿಭಿನ್ನ ಅನುಭವ ಸಿಗಬೇಕು ಎಂಬ ಉದ್ದೇಶದಿಂದ ನನ್ನ ಸ್ವಂತ ಖರ್ಚಿನಲ್ಲಿ ಈ ಅವಕಾಶ ಕಲ್ಪಿಸಿದ್ದೇನೆ. ಈ ಪ್ರಯತ್ನ ಇತರ ವಿದ್ಯಾರ್ಥಿಗಳಿಗೂ ಓದಿನಲ್ಲಿ ಆಸಕ್ತಿ ಮೂಡಿಸಿ, ಸಾಧನೆಗೆ ಪ್ರೇರಣೆಯಾಗಲಿ ಎಂಬುದು ನನ್ನ ಆಶಯ ಎಂದು ವಿಜ್ಞಾನ ಶಿಕ್ಷಕ ರಫೀಕ್ ತಾಳಿಕೋಟಿ ಹೇಳಿದರು.