ಸಾರಾಂಶ
ಗೋಪಾಲ್ ಯಡಗೆರೆ
ಶಿವಮೊಗ್ಗ : ರಸ್ತೆ ಮತ್ತು ವಿದ್ಯುತ್ ಸ್ಥಾವರ (ಎಂಆರ್‌ಎಸ್) ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದ್ದ ಹಾಗೂ ಹಾಲಿ ಏರ್ ಪೋರ್ಟ್ ರಸ್ತೆ ಯಾಗಿ ಬಳಕೆಯಾಗುತ್ತಿರುವ, ನಗರಕ್ಕೆ ಸೇರಿಕೊಂಡಿರುವ ಕೋಟ್ಯಂತರ ರು. ಬೆಲೆಯ ಜಾಗವನ್ನು ಖಾಸಗಿ ವ್ಯಕ್ತಿಗೆ ಖಾತೆ ಮಾಡಿಕೊಡುವ ಮೂಲಕ ಸರ್ಕಾರಿ ಆಸ್ತಿಯನ್ನು ಪರಭಾರೆ ಮಾಡುವ ಹುನ್ನಾರವೊಂದು ಬೆಳಕಿಗೆ ಬಂದಿದೆ.
ಇದೊಂದು ಉದ್ದೇಶಪೂರ್ವಕವಾಗಿ ಮಾಡಿದ ಪ್ರಕರಣವೆಂಬಂತೆ ಕಂಡು ಬಂದಿದ್ದು, ರಾಜ್ಯ ಉಚ್ಚ ನ್ಯಾಯಾಲಯದ ತೀರ್ಪು ಮತ್ತೆ ಕೆಳಹಂತದ ಅಧಿಕಾರಿಗಳ ವರದಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಈ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಮಾಡಿಕೊಡಲಾಗಿದೆ.
ಶಿವಮೊಗ್ಗ ಉಪ ವಿಭಾಗದಲ್ಲಿ ಈ ಹಿಂದೆ ಎಸಿಯಾಗಿ ಕಾರ್ಯ ನಿರ್ವಹಿಸಿದ್ದ ಟಿ.ವಿ.ಪ್ರಕಾಶ್ ಹಾಗೂ ರವೀಂದ್ರ ನಾಯಕ್ ಅಧಿಕಾರದ ಅವಧಿಯಲ್ಲಿ ಇದೆಲ್ಲ ನಡೆದಿದ್ದರೆ, ಇದಕ್ಕೆ ಪೂರಕವಾಗಿ ಈಗಿನ ಡಿಡಿಎಲ್‌ಆರ್ ಕಚೇರಿಯಲ್ಲಿ ಇಡೀ ಸ.ನಂ.ನ ಎಲ್ಲ ಭೂಮಿಯ ಪೋಡಿಯನ್ನು ರದ್ದು ಮಾಡುವ ಮೂಲಕ ಆಗಿರುವ ಯಡವಟ್ಟನ್ನು ಸಮರ್ಥಿಸುವ ರೀತಿಯಲ್ಲಿ ಕೆಲಸ ಮಾಡಲಾಗಿದೆ.
ಕಂದಾಯ ಇಲಾಖೆಯ ಅಧಿಕಾರಿಗಳಾಗಿ ಸರ್ಕಾರದ ಜಾಗವನ್ನು ಉಳಿಸಬೇಕಾದ ಹಾಗೂ ಕಾಯ್ದೆ, ಕಾನೂನುಗಳನ್ನು ಪಾಲಿಸಬೇಕಾದ ಅಧಿಕಾರಿಗಳೇ ಭೂ ಮಾಫಿಯಾದೊಂದಿಗೆ ಕೈ ಜೋಡಿಸಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಏರ್ಪೋರ್ಟ್ ರಸ್ತೆಯನ್ನೇ ಅಕ್ರಮವಾಗಿ ಖಾತೆ ಎರಿಸುವ ಮೂಲಕ ಇತಿಹಾಸ ಬರೆದಿದ್ದಾರೆ.
ಅಧಿಕಾರಿಗಳು ನಡೆಸಿರುವ ಈ ಭಾನಗಡಿಯಿಂದಾಗಿ ಸ್ಥಳೀಯರು ತೊಂದರೆ ಅನುಭವಿಸುವಂತಾಗಿದ್ದು, ತಪ್ಪಿತಸ್ಥರ ಅಧಿಕಾರಿ ಗಳು ಹಾಗೂ ಖಾತೆ ಮಾಡಿಸಿಕೊಂಡಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಜಿಲ್ಲಾಡಳಿತವನ್ನು ಅಗ್ರಹಿಸಿದ್ದಾರೆ.ಏನಿದು ಈ ಹಗರಣ ?:
ಶಿವಮೊಗ್ಗ ನಗರದ ವಿದ್ಯಾನಗರದ ಸಮೀಪದ ಊರಗಡೂರಿನ ಸರ್ವೇ ನಂಬರ್ 103 ರಲ್ಲಿ ನಂಜುಂಡ ಜೋಯ್ಸ್ ಎಂಬುವರಿಗೆ ಸೇರಿದ 3.15 ಎಕರೆಯಲ್ಲಿ 1.22 ಎಕರೆಯನ್ನು 1962 ರಲ್ಲಿ ಎಂಆರ್‌ಎಸ್ ಸ್ಥಾಪನೆಗಾಗಿ ಸ್ವಾಧೀನಪಡಿಸಿಕೊಂಡು ಪರಿಹಾರವನ್ನೂ ನೀಡಲಾಗಿತ್ತು. 3.15 ಎಕರೆ ಜಾಗದಲ್ಲಿ ಎಂಆರ್‌ಎಸ್‌ಗೆ 1.22 ಎಕರೆ ಸ್ವಾಧೀನವಾದ ನಂತರ 1.33 ಎಕರೆ ಜಾಗ ಉಳಿದಿತ್ತು. ಅದರಲ್ಲಿ ರೇವಣ್ಣ ಎಂಬುವರು ಕೆಲ ವರ್ಷಗಳ ಕಾಲ ಉಳುಮೆ ಮಾಡಿಕೊಂಡಿದ್ದರು. ಇವರ ನಂತರ ಬೊಮ್ಮಣ್ಣ ಎಂಬುವರು ಉಳುಮೆ ಮಾಡುತ್ತಿದ್ದರು.
1972ರಲ್ಲಿ ಉಳುವವನೆ ಹೊಲದೊಡೆಯ ಎಂಬ ಕಾಯ್ದೆ ರಾಜ್ಯದಲ್ಲಿ ಜಾರಿಗೆ ಬಂದ ಬಳಿಕ 1977 ರಲ್ಲಿ ಬೊಮ್ಮಣ್ಣ ಅವರು ಅವರು ಈ ಕಾಯ್ದೆಯಡಿ ಭೂಮಿಗಾಗಿ ಅರ್ಜಿ ಸಲ್ಲಿಸಿದ್ದರು. ಆ ಬಗ್ಗೆ ಕೋರ್ಟ್‌ನಲ್ಲಿ ವಿಚಾರಣೆ ನಡೆದಾಗ ಮೂಲ ಮಾಲೀಕ ರಾಗಿದ್ದ ನಂಜುಂಡ ಜೋಯ್ಸ್ ಹಾಗೂ ರೇವಣ್ಣನ ಪತ್ನಿ ರಂಗಮ್ಮ ಎನ್ನುವರು ಸದರಿ ಜಾಗವನ್ನು ಬೊಮ್ಮಣ್ಣ ಎನ್ನುವವರೇ ಉಳುಮೆ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಮೇರೆಗೆ ಬೊಮ್ಮಣ್ಣನಿಗೆ 1.10 ಎಕರೆ ಜಾಗವನ್ನು ಆಗಿನ ಎಸಿ ಮಂಜೂರು ಮಾಡಿದ್ದರು. ಜೊತೆಗೆ ಅಂದಿನ ತಹಸೀಲ್ದಾರ್ ಸಹ ಫಾರಂ ನಂಬರ್ 10 ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೊಮ್ಮಣ್ಣ ತಮ್ಮ ಜಾಗವನ್ನು ಅನುಭವಿಸುತ್ತಾ ಬಂದಿದ್ದರು.
ಹಾಗೆಯೇ ಇನ್ನುಳಿದ 23 ಗುಂಟೆ ಜಾಗದಲ್ಲಿ ನಿಂಗಪ್ಪ, ಸೀನಪ್ಪ ಮತ್ತಿತರರು ಉಳುಮೆ ಮಾಡುತ್ತಿದ್ದರು. 1992 ರಲ್ಲಿ ತಾವು ಇದನ್ನು ಉಳುಮೆ ಮಾಡುತ್ತಿಲ್ಲ ಎಂದು 1977 ರಲ್ಲಿ ಎಸಿ ಕೋರ್ಟ್‌ನಲ್ಲಿ ಹೇಳಿಕೆ ನೀಡಿದ್ದ ದಿವಂಗತ ರೇವಣ್ಣನ ಪತ್ನಿ ರಂಗಮ್ಮ ತನಗೆ ಈ ಭೂಮಿ ನೀಡುವಂತೆ ಅರ್ಜಿ ಸಲ್ಲಿಸಿದರು. ಈ ಅರ್ಜಿ ಸತ್ಯಾಸತ್ಯತೆಯನ್ನು ಸರಿಯಾಗಿ ಪರಿಶೀಲಿಸದ ಅಂದಿನ ಎಸಿ ಆಕೆಗೆ ಒಂದು ಎಕರೆ ಮಂಜೂರು ಮಾಡಿ ಆದೇಶ ಹೊರಡಿಸಿದ್ದರು. ಆದರೆ ಸದರಿ ಜಾಗದ ಖಾತೆ ಮಾಡಲು ಅಗತ್ಯವಾಗಿದ್ದ ಫಾರಂ ನಂಬರ್ 10 ನ್ನು ನೀಡುವ ಮೊದಲು ಸ್ಥಳ ಪರಿಶೀಲನೆ ನಡೆಸಿದ್ದ ಅಂದಿನ ವಿಎ ಹಾಗೂ ಆರ್‌ಐ ರಂಗಮ್ಮಗೆ ಮಂಜೂರು ಮಾಡಿರುವ ಜಾಗ ಅವರ ಸ್ವಾಧೀನದಲ್ಲಿಲ್ಲ ಎಂದು ವರದಿ ನೀಡಿದ್ದರಿಂದ ತಹಶೀಲ್ದಾರ್ ಫಾರಂ ನಂಬರ್ 10 ವಿತರಿಸಿರಲಿಲ್ಲ. ಹೀಗಾಗಿ ಭೂಮಿ ಬೊಮ್ಮಣ್ಣ ಅವರ ಬಳಿಯೇ ಉಳಿಯಿತು.
ಆದರೆ 92 ರಲ್ಲಿ ಎಸಿ ನೀಡಿದ್ದ ಆದೇಶ ಪತ್ರವನ್ನು ಹಾಗೆಯೇ ಇಟ್ಟುಕೊಂಡಿದ್ದ ರಂಗಮ್ಮನ ಪುತ್ರಿ ಬುಳ್ಳಮ್ಮ 2007ರಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ಬೊಮ್ಮಣ್ಣ, ನಿಂಗಪ್ಪ, ಸಿದ್ದಪ್ಪ ಮತ್ತಿತರ ವಿರುದ್ಧ ಕೇಸ್ ಹಾಕಿ ಸದರಿ ಜಾಗವನ್ನು ಸ್ವಾಧೀನಕ್ಕೆ ಕೊಡಿಸುವಂತೆ ಕೋರಿದ್ದರು. ಆದರೆ ಬೊಮ್ಮಣ್ಣ ಹೈ ಕೋರ್ಟ್ ಮೆಟ್ಟಿಲೇರಿ ತಮ್ಮ ಪರವಾಗಿ ತೀರ್ಪು ಪಡೆದಿದ್ದರು.
ಪಟ್ಟುಬಿಡದ ಬುಳ್ಳಮ್ಮ ಬೊಮ್ಮಣ್ಣನಿಗೆ 1.10 ಎಕರೆ ಭೂಮಿ ನೀಡಿರುವುದು ತಪ್ಪು ಎಂದು ಹೇಳಿ ರಾಜ್ಯ ಸರ್ಕಾರವನ್ನು ಪ್ರತಿವಾದಿಯನ್ನಾಗಿಸಿ ಹೈಕೋರ್ಟಿನಲ್ಲಿ ಮತ್ತೊಂದು ಕೇಸು ಹಾಕಿದರು. ಹೈ ಕೋರ್ಟ್ ಬುಳ್ಳಮ್ಮನ ಅರ್ಜಿಯನ್ನು ವಜಾಗೊಳಿಸಿತು.
ಮತ್ತೆ ಪಟ್ಟು ಬಿಡದ ಬುಳ್ಳಮ್ಮ ಮತ್ತಿತರರು ಮತ್ತೊಮ್ಮೆ ಜಿಲ್ಲಾ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ವಿಷಯ ತಿಳಿದ ಬೊಮ್ಮಣ್ಣ ಹೈ ಕೋರ್ಟ್‌ನಲ್ಲಿ ಕೇಸ್ ವಜಾಗೊಂಡಿರುವುದನ್ನು ಜಿಲ್ಲಾ ನ್ಯಾಯಾಲಯದ ಗಮನಕ್ಕೆ ತಂದಾಗ ಜಿಲ್ಲಾ ಕೋರ್ಟ್ ಬುಳ್ಳಮ್ಮಗೆ ದಂಡ ವಿಧಿಸಿ ಎಚ್ಚರಿಕೆಯನ್ನೂ ನೀಡಿತ್ತು.
ಖಾತೆ ಏರಿಸಿದ ಎಸಿಗಳು!:
ಇಷ್ಟೆಲ್ಲಾ ಬೆಳವಣಿಗೆ ಆದ ನಂತರವೂ ಸುಮ್ಮನಾಗದ ಬುಳ್ಳಮ್ಮ ಮತ್ತಿತರರು 1992 ರಲ್ಲಿ 1 ಎಕರೆಯನ್ನು ಮಂಜೂರು ಮಾಡಿ ಅಂದಿನ ಎಸಿ ನೀಡಿದ್ದ ಆದೇಶವನ್ನೇ ಮುಂದಿಟ್ಟುಕೊಂಡು ಉಪ ವಿಭಾಗಾಧಿಕಾರಿಗಳಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸುತ್ತಾರೆ.
ಹಾಗೆಯೇ ನಿಂಗಪ್ಪ, ಸಿದ್ದಪ್ಪ ಮತ್ತಿತರರು ಸಹ ಎಸಿಗೆ ಅರ್ಜಿ ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಸದರಿ ಸರ್ವೆ ನಂಬರ್‌ಗೆ ಸಂಬಂಧಿಸಿದಂತೆ ಹೈ ಕೋರ್ಟ್ ನೀಡಿರುವ ಆದೇಶದ ಕುರಿತು ಸಂಬಂಧಪಟ್ಟ ಕ್ಲರ್ಕ್ ಎಸಿ ಗಮನಕ್ಕೆ ತರುವುದಿಲ್ಲ. ಜೊತೆಗೆ ಅಂದಿನ ಎಸಿಯಾಗಿದ್ದ ಟಿ.ವಿ. ಪ್ರಕಾಶ್ ಹಾಗೂ ರವೀಂದ್ರ ನಾಯಕ್ ವಾಸ್ತವಾಂಶವನ್ನು ಗಮನಿಸದೆ, ಕೇವಲ 22 ಗುಂಟೆ ಉಳುಮೆ ಮಾಡುತ್ತಿದ್ದ ನಿಂಗಪ್ಪ ಮತ್ತಿತರರಿಗೆ 1 ಎಕರೆ 5 ಗುಂಟೆ ಹಾಗೂ ಬುಳ್ಳಮ್ಮಗೆ 1 ಎಕರೆಯನ್ನು ಮಂಜೂರು ಮಾಡಿದರು. ಅಷ್ಟೇ ಅಲ್ಲ. ಫಾರಂ ನಂ 10 ನ್ನು ವಿತರಿಸುವಂತೆ ತಹಸೀಲ್ದಾರ್‌ಗೆ ಅದೇಶಿಸಿ ತಹಸೀಲ್ದಾರ್ ಮಾಡಬೇಕಾಗಿದ್ದ ಕೆಲಸನ್ನು ತಾವೇ ಮಾಡುತ್ತಾರೆ. ಅಂದರೆ ಫಾರಂ ನಂಬರ್ 10 ಇಲ್ಲದೆ 1992 ರಲ್ಲಿ ಅಂದಿನ ಎಸಿ ನೀಡಿದ್ದ ಆದೇಶದ ಆಧಾರದ ಮೇಲೆ ಇಬ್ಬರಿಗೂ ಉಳುವವನೆ ಭೂಮಿ ಒಡೆಯ ಕಾಯ್ದೆಯಡಿ ಪಹಣಿ ಏರಿಸಿ ಖಾತೆ ಮಾಡುತ್ತಾರೆ. ಅಂದರೆ ಅಲ್ಲಿ ಭೂಮಿ ಇದ್ದುದೇ 1.33 ಎಕರೆ ಭೂಮಿಯಾದರೆ, ಮಂಜೂರು ಮಾಡಿದ್ದು 2.20 ಎಕರೆ. ಸಹಜ ನ್ಯಾಯದಡಿ ಭೂಮಿ ಹೊಂದಿದ್ದ ಬೊಮ್ಮಣ್ಣ ಅವರಿಗೆ ಏನೂ ಇಲ್ಲದಂತೆ ಮಾಡಿದ್ದಾರೆ.ಬಾಕ್ಸ್:
ಡಿಡಿಎಲ್ಆರ್ ಸಹಕಾರ !:
ಉಳುವವನೆ ಭೂ ಒಡೆಯ ಕಾಯ್ದೆಯಡಿ ಖಾತೆ ಏರಿಸಲು ಕಾನೂನಿನಲ್ಲಿ ಅವಕಾಶ ಇಲ್ಲದಿದ್ದಾಗ್ಯೂ ಭೂ ಮಾಫಿಯಾದೊಂದಿಗೆ ಕೈ ಜೋಡಿಸಿ ಎಸಿಗಳು ಮಾಡಿದ್ದ ತಪ್ಪನ್ನು ಸರಿಪಡಿಸುವಂತೆ ಸ್ಥಳೀಯರು ಡಿಡಿಎಲ್ಅರ್‌ಗೆ ಅರ್ಜಿ ಸಲ್ಲಿಸುತ್ತಾರೆ. ಸ್ಥಳ ಪರಿಶೀಲನೆ ನಡೆಸಿದ ಡಿಡಿಎಲ್ಅರ್ ಬುಳ್ಳಮ್ಮಗೆ ಮಂಜೂರಾಗಿರುವ ಜಾಗ ಏರ್‌ಪೋರ್ಟ್ ರಸ್ತೆಗೆ ಬಳಕೆಯಾಗಿರುವುದನ್ನು ಮನಗಾಣುತ್ತಾರೆ. ಆದರೂ ‘ನಿಗೂಢ’ ಕಾರಣದಿಂದ ಸರ್ವೆ ನಂಬರ್ 103/1ರಲ್ಲಿರುವ ಇತರೆ ಖಾತೆದಾರರ ಪೋಡನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಸದರಿ ಸರ್ವೇ ನಂಬರ್‌ನಲ್ಲಿರುವವರು ಪರಸ್ಪರ ಕಿತ್ತಾಡಿಕೊಳ್ಳುವಂತಾಗಿದೆ.
ಒಟ್ಟಿನಲ್ಲಿ ತಮಗಿಲ್ಲದ ಅಧಿಕಾರವನ್ನು ಬಳಸುವ ಹಾಗೂ ಹೈ ಕೋರ್ಟ್ ಆದೇಶಗಳನ್ನೇ ಗಾಳಿಗೆ ತೂರುವ ಮೂಲಕ ಕಂದಾಯ ವಿಭಾಗದ ಹಿರಿಯ ಅಧಿಕಾರಿಗಳು ನಡೆಸಿರುವ ಗೋಲ್ ಮಾಲ್ ಇದೀಗ ಚರ್ಚೆಗೆ ಕಾರಣವಾಗಿದೆ. ಜಿಲ್ಲಾಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕು.ಇನ್ನು, ಕೋಟ್ಯಂತರ ರು. ಬೆಲೆ ಬಾಳುವ ಏರ್ ಪೋರ್ಟ್ ರಸ್ತೆಯನ್ನೇ ಬುಳ್ಳಮ್ಮಗೆ ಖಾತೆ ಮಾಡಿಕೊಟ್ಟಿರುವ ಹಿಂದಿನ ಎಸಿಗಳಾದ ಟಿ.ವಿ.ಪ್ರಕಾಶ್ ಮತ್ತು ರವೀಂದ್ರ ನಾಯಕ್, ಎಸಿ ಕಚೇರಿಯಲ್ಲಿ ಹೈ ಕೋರ್ಟ್ ಕಡತ ನಿರ್ವಹಿಸುವ ಮಹಿಳಾ ಕ್ಲರ್ಕ್ ಹಾಗೂ ಡಿಡಿಎಲ್ಆರ್ ಶ್ರೀನಿವಾಸ್ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಸಿದ್ದಾರೆ ಗ್ರಾಮಸ್ಥರು.