ಜಾನಪದದ ತೊಟ್ಟಿಲು ಅಜ್ಜಂಪುರ: ಬಸವರಾಜು ನೆಲ್ಲಿಸರ

| Published : Aug 23 2025, 02:00 AM IST

ಸಾರಾಂಶ

ಅಜ್ಜಂಪುರ, ಜಾನಪದದ ತೊಟ್ಟಿಲಾಗಿದೆ ಅಜ್ಜಂಪುರ ಎಂದು ಜಾನಪದ ವಿಧ್ವಾಂಸ ಬಸವರಾಜು ನೆಲ್ಲಿಸರ ಅಭಿಪ್ರಾಯಪಟ್ಟರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರು ಕರ್ನಾಟಕ ಜಾನಪದ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ವಿಶ್ವ ಜಾನಪದ ದಿನಾಚರಣೆಯಲ್ಲಿ ಮಾತನಾಡಿ, ಇಂದು ಜಾನಪದ ಕಲೆಗಳು ಕೇವಲ ಸಮಾರಂಭ ಮೆರವಣಿಗೆಗೆ ಸೀಮಿತವಾಗುತ್ತಿವೆ. ವರ್ತಮಾನದಲ್ಲಿ ಈ ಕಲೆಯನ್ನು ಬೆಳೆಸಲು ಜಾನಪದ ಅಕಾಡಮಿ ಮತ್ತು ರಾಜಕಾರಣಿಗಳು, ಸಾಹಿತಿಗಳು ಹಾಗೂ ಸರ್ಕಾರ ಇಂತಹ ಕಲಾವಿದರಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದರು.

- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಿಶ್ವ ಜಾನಪದ ದಿನಾಚರಣೆ

ಕನ್ನಡಪ್ರಭ ವಾರ್ತೆ, ಅಜ್ಜಂಪುರ

ಜಾನಪದದ ತೊಟ್ಟಿಲಾಗಿದೆ ಅಜ್ಜಂಪುರ ಎಂದು ಜಾನಪದ ವಿಧ್ವಾಂಸ ಬಸವರಾಜು ನೆಲ್ಲಿಸರ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರು ಕರ್ನಾಟಕ ಜಾನಪದ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ವಿಶ್ವ ಜಾನಪದ ದಿನಾಚರಣೆಯಲ್ಲಿ ಮಾತನಾಡಿ, ಇಂದು ಜಾನಪದ ಕಲೆಗಳು ಕೇವಲ ಸಮಾರಂಭ ಮೆರವಣಿಗೆಗೆ ಸೀಮಿತವಾಗುತ್ತಿವೆ. ವರ್ತಮಾನದಲ್ಲಿ ಈ ಕಲೆಯನ್ನು ಬೆಳೆಸಲು ಜಾನಪದ ಅಕಾಡಮಿ ಮತ್ತು ರಾಜಕಾರಣಿಗಳು, ಸಾಹಿತಿಗಳು ಹಾಗೂ ಸರ್ಕಾರ ಇಂತಹ ಕಲಾವಿದರಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದರು.

ಇಂದಿನ ಯುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಜಾನಪದ ಹಾಡನ್ನು ಕಲಿತು ಬೆಳೆಸಲು ಮುಂದೆ ಬರಬೇಕು ಎಂದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ದೇಶ ಸ್ವಾತಂತ್ರ್ಯಗಳಿಸಲು ಲಾವಣಿ ಪದಗಳು, ಸೋಬಾನೆ ಪದಗಳು, ಜಾನಪದ ನುಡಿಗಟ್ಟುಗಳು ಹೆಚ್ಚು ಪ್ರಭಾವ ಬೀರಿದ್ದವು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಗಿಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ ನಮ್ಮ ಜಾನಪದ ಕಲೆ ಸಂಸ್ಕೃತಿ ನಾಶವಾದರೆ, ನಮ್ಮ ಪರಂಪರೆ ದೇಶವೇ ನಾಶವಾದಂತೆ ಮತ್ತು ನಮ್ಮ ಮನುಕುಲದ ಅಸ್ಥಿತ್ವ ನಾಶವಾದಂತೆ ಎಂದರು. ಜಾನಪದ ಆಂತರ್ಯದ ಸೌಂದರ್ಯವಾಗಿರುತ್ತದೆ ಎಂದರು. ಸಹಾಯಕ ನಿರ್ದೇಶಕ ಡಾ. ರಮೇಶ್ ಮಾತನಾಡಿ ಕಲಾವಿದರ ಮಾಸಾಶನ ಪಡೆಯಲು ಕನಿಷ್ಠ 25 ವರ್ಷ ಜಾನಪದ ಸೇವೆ ಸಲ್ಲಿಸಿದ ದಾಖಲೆ ಇರಬೇಕು ಎಂದರು. ತರೀಕೆರೆ, ಕಡೂರು ಮತ್ತು ಅಜ್ಜಂಪುರ ತಾಲೂಕಿನ 142 ಕಲಾವಿದರಿಗೆ ಮಾಶಾಸನ ನೀಡಲಾಗುತ್ತಿದೆ ಎಂದು ವಿವರಿಸಿದರು.ಪ್ರಾಂಶುಪಾಲ ಕೆ.ಆರ್ ರಾಜಣ್ಣ ಮಾತನಾಡಿ ಈ ವಿಶ್ವ ಜಾನಪದ ದಿನಾಚರಣೆ ನಮ್ಮ ಕಾಲೇಜಿನಲ್ಲಿ ನಡೆಯುತ್ತಿರುವುದು ತುಂಬಾ ಸಂತೋಷವಾಗುತ್ತಿದೆ ಎಂದರು.

ರಂಗ ಸಂಘಟಕ ಎ.ಸಿ ಚಂದ್ರಪ್ಪ, ನಾಟಕ ಅಕಾಡೆಮಿ ಎನ್ ನಮ್ರತಾ, ವೀರಗಾಸೆ ಕಲಾವಿದ ಹೂಲಿಹಳ್ಳಿ ರವಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮುಗಳಿ ಲಕ್ಷ್ಮಿದೇವಮ್ಮ. ಜಾನಪದ ಪ್ರಶಸ್ತಿ ಪುರಸ್ಕೃತ ಎಂ. ಆರ್. ಬಸಪ್ಪ, ಜಾನಪದ ಅಕಾಡಮಿ ಮಾಜಿ ಸದಸ್ಯ ಡೊಳ್ಳು ರಂಗಸ್ವಾಮಿ ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಮಾರಂಭಕ್ಕೂ ಮುನ್ನ ಮೆರವಣಿಗೆಯನ್ನು ಪಟ್ಟಣದ ತಹಸೀಲ್ದಾರ್ ವಿನಾಯಕ್ ಸಾಗರ್ ಉದ್ಘಾಟಿಸಿದರು. ಡೊಳ್ಳುಕುಣಿತ ಕಲಾವಿದರು, ಕಂಸಾಳೆ ತಂಡ, ಚಿಟ್ಟೆ ಮೇಳದವರು, ವೀರಗಾಸೆ ಕಲಾವಿದರು ಮತ್ತು ಜಾನಪದ ಹಾಡುಗಾರರು ಸೋಬಾನೆ ಪದ ಹಾಡುಗಾರರು ಹಾಗೂ ಚೌಡಿಕೆ ಮೇಳದವರು ತಮ್ಮ ಕಲೆಗಳ ಪ್ರದರ್ಶನ ನೀಡಿದರು.

ಪಲ್ಲವಿಯವರು ಜಾನಪದ ಶೈಲಿಯಲ್ಲಿ ನಿರೂಪಿಸಿದರು. ಭಕ್ತನ ಕಟ್ಟೆ ಲೋಕೇಶ‍್ ತಂಡ ನಾಡಗೀತೆ, ಜಾನಪದ ಗೀತೆ ಹಾಡಿ ರಂಜಿಸಿತು.