ಆಕಾಶ ಕೊಲೆ ಪ್ರಕರಣ: ಕಾರಣ ಇನ್ನೂ ನಿಗೂಢ

| Published : Jun 24 2024, 01:31 AM IST

ಆಕಾಶ ಕೊಲೆ ಪ್ರಕರಣ: ಕಾರಣ ಇನ್ನೂ ನಿಗೂಢ
Share this Article
  • FB
  • TW
  • Linkdin
  • Email

ಸಾರಾಂಶ

ಆಕಾಶ ಕೊಲೆ ಪ್ರಕರಣದಲ್ಲಿ ಈಗಾಗಲೇ 12 ಜನರಲ್ಲಿ 8 ಜನರನ್ನು ಪೊಲೀಸರು ಬಂಧಿಸಿದ್ದು, ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಅವರ ಪುತ್ರ ಆಕಾಶ ಮಠಪತಿ ಸಾವಿನ ಪ್ರಕರಣ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಈಗಾಗಲೇ 12 ಜನರಲ್ಲಿ 8 ಜನರನ್ನು ಪೊಲೀಸರು ಬಂಧಿಸಿದ್ದು, ಉಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇಲ್ಲಿನ ಲೋಹಿಯಾ ನಗರದಲ್ಲಿ ಶನಿವಾರ ಸಂಜೆ ಆಕಾಶನ ಶವ ಪತ್ತೆಯಾಗಿತ್ತು. ಕುಟುಂಬದವರ ಗಮನಕ್ಕೆ ಬರುತ್ತಿದ್ದಂತೆ ಶವವನ್ನು ಕಿಮ್ಸ್‌ಗೆ ಸಾಗಿಸಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಆಕಾಶನ ತಂದೆ ಶೇಖರಯ್ಯ ಮಠಪತಿ ಅವರಿಂದ, ಆಕಾಶನ ಪತ್ನಿ ಕಾವ್ಯ, ಅತ್ತೆ ಶ್ರೀದೇವಿ, ಮಾವ ಮೋಹನ ನಾಯಕ್ ಹಾಗೂ ಅಳಿಯ ಭರತ ನಾಯಕ್ ಸೇರಿದಂತೆ 12 ಜನರ ವಿರುದ್ಧ ದೂರು ದಾಖಲಿಸಿಕೊಂಡಿದ್ದರು.

8 ಜನರ ಬಂಧನ:

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹು-ಧಾ ಮಹಾನಗರ ಪೊಲೀಸ್‌ ಆಯುಕ್ತೆ ರೇಣುಕಾ ಸುಕುಮಾರ್, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 12 ಜನರಲ್ಲಿ ಅರ್ಜುನ ಮಳಗಿ, ಸಂಜು ಕೊಪ್ಪದ, ರಾಹುಲ್ ಕಾಂಬ್ಳೆ, ವಿನಾಯಕ ತಾಳಿಕೋಟೆ, ಮನೋಜ, ಚಮಕ್ ಅಲಿಯಾಸ್ ಮೌನೇಶ, ಮಹೇಶ ಹಾಗೂ ಕಾರ್ತಿಕನನ್ನು ಬಂಧಿಸಲಾಗಿದೆ. ಇನ್ನುಳಿದ ಆಕಾಶನ ಪತ್ನಿ, ಅತ್ತೆ, ಮಾವ ಹಾಗೂ ಅಳಿಯನ ಬಂಧನಕ್ಕೆ ಬಲೆ ಬೀಸಲಾಗಿದೆ.

ಕುಡಿಯುವ ವಿಚಾರದಲ್ಲಿ ಕಪಾಳಕ್ಕೆ ಹೊಡೆದಿದ್ದರು ಎನ್ನುವ ಕಾರಣಕ್ಕೆ ಗಲಾಟೆ ಆರಂಭವಾಗಿದೆ. ಈ ವೇಳೆ ಆರೋಪಿ ರಾಹುಲ್ ಕಾಂಬ್ಳೆ ಆಕಾಶನಿಗೆ ಹೊಡೆದಿದ್ದಾನೆ. ಹೀಗಾಗಿ ಕೆಳಗೆ ಬಿದ್ದು ಆಕಾಶ ಮೃತಪಟ್ಟಿದ್ದಾನೆ. ಕುಡಿಯುವ ವಿಚಾರಕ್ಕೆ ಗಲಾಟೆ ಆಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಎಫ್‌ಎಸ್‌ಎಲ್ ವರದಿ ಬಂದ ಮೇಲೆ ತನಿಖೆ ಮಾಡಲಾಗುವುದು ಎಂದು ತಿಳಿಸಿದರು.

ಕಾಲಿಗೆ ಬಿದ್ದ ಆಟೋರಿಕ್ಷಾ ಚಾಲಕ:

ಕಿಮ್ಸ್‌ನ ಶವಾಗಾರದ ಮುಂದೆ ಜಮಾವಣೆಗೊಂಡ ನೂರಾರು ಆಟೋ ಚಾಲಕರು ಆಕಾಶನ ಸಾವಿಗೆ ನ್ಯಾಯ ಕೊಡಿಸುವಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಆಟೋರಿಕ್ಷಾ ಚಾಲಕ ಹನುಮಂತಪ್ಪ ಪವಾಡೆ ಮಾತನಾಡಿ, ಆಟೋ ಚಾಲಕರ ಸಂಘದ ಅಧ್ಯಕ್ಷನ ಮಗನದ್ದೇ ಈ ಪರಿಸ್ಥಿತಿ ಆದರೆ ನಮ್ಮಂಥವರ ಪರಿಸ್ಥಿತಿ ಏನಾಗಬೇಕು? ಕೂಡಲೇ ಆಕಾಶ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ಹಳೇ ಹುಬ್ಬಳ್ಳಿ ಠಾಣೆ ಪಿಐ ಸುರೇಶ ಯಳ್ಳೂರ ಅವರ ಕಾಲಿಗೆ ಬಿದ್ದು ಅಂಗಲಾಚಿದರು. ನಂತರ ಆಟೋ ಚಾಲಕರನ್ನು ಸಮಾಧಾನಪಡಿಸಿದ ಯಳ್ಳೂರ, ಪೊಲೀಸರ ಮೇಲೆ ನಂಬಿಕೆ ಇಡಿ. ಆಕಾಶ ಸಾವಿಗೆ ನ್ಯಾಯ ಕೊಡಿಸುತ್ತೇವೆ. ಈಗಾಗಲೇ ತನಿಖೆ ನಡೆಯುತ್ತಿದೆ ಎಂದರು.

ಈ ವೇಳೆ ಎಸಿಪಿ ವಿನೋದ ಮುಕ್ತೇದಾರ ಮಾತನಾಡಿ, ಮೃತ ಆಕಾಶ ನಮಗೂ ಮಗನಿದ್ದಂತೆ ಅವನಿಗೆ ಅನ್ಯಾಯವಾಗಿದೆ. ಈ ಸಾವಿಗೆ ಸೂಕ್ತ ನ್ಯಾಯ ಕೊಡಿಸುವ ಭರವಸೆ ನೀಡಿದ ಬಳಿಕ ಆಟೋ ಚಾಲಕರು ಪ್ರತಿಭಟನೆ ಕೈಬಿಟ್ಟರು. ಈ ವೇಳೆ ಶಿವಪ್ರಕಾಶ ನಾಯಕ ಸೇರಿದಂತೆ ಆಟೋರಿಕ್ಷಾ ಚಾಲಕರಾದ ರಾಜೇಶ ಬಿಜವಾಡ, ನಾಗರಾಜ ಕಟ್ಟಿಮನಿ, ಅಂಬಾಸಾ ಬದ್ದಿ, ಮಂಜು ಬಳ್ಳಾರಿ, ಸಂತೋಷ ಜಾಧವ, ಕಿರಣ ಬುಗಡಿ, ನಾಗರಾಜ ಗಬ್ಬೂರ ಸೇರಿದಂತೆ ನೂರಾರು ಆಟೋ ಚಾಲಕರಿದ್ದರು.

ಮೃತ ದೇಹ ರವಾನೆ:

ಇಲ್ಲಿನ ಕಿಮ್ಸ್‌ನಲ್ಲಿ ಭಾನುವಾರ ಮರಣೋತ್ತರ ಪರೀಕ್ಷೆ ನಂತರ ಕಿಮ್ಸ್‌ನಿಂದ ಲೋಹಿಯಾನಗರಕ್ಕೆ ಆಕಾಶ ಮಠಪತಿ ಮೃತ ದೇಹವನ್ನು ಮೆರವಣಿಗೆ ಮೂಲಕ ರವಾನೆ ಮಾಡಲಾಯಿತು. ಮೆರವಣಿಗೆಯಲ್ಲಿ ನೂರಾರು ಆಟೋಗಳು ಪಾಲ್ಗೊಂಡಿದ್ದವು. ಆಕಾಶನ ಪ್ರಾರ್ಥಿವ ಶರೀರ ಮನೆಗೆ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ನಂತರ ಆನಂದ ನಗರದಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.