ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಸ್ವ-ಸಹಾಯ ಸಂಘಗಳಿಗೆ ಉತ್ತೇಜನ ಹಾಗೂ ಗ್ರಾಮೀಣ ಬಡ ಮಹಿಳೆಯರ ಆರ್ಥಿಕ ಸಬಲೀಕರಣ ಮಾಡುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಅದಕ್ಕಾಗಿ ನಗರ ಪ್ರದೇಶದಲ್ಲಿ ಸ್ವ-ಸಹಾಯ ಸಂಘಗಳ ಮಹಿಳೆಯರು ನಡೆಸುವ ಅಕ್ಕ ಕೆಫೆ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ, ಜಿಪಂ ಮತ್ತು ತಾಪಂ ಮುಧೋಳ ಆಶ್ರಯದಲ್ಲಿ ತಾಪಂ ಮಳಿಗೆಯಲ್ಲಿ ಪ್ರಾರಂಭಿಸಲಾದ ಅಕ್ಕ ಕೆಫೆ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಆಹಾರವನ್ನು ಶುಚಿ-ರುಚಿಯಾಗಿ ಗುಣಮಟ್ಟದ ಆಹಾರ ತಯಾರಿಸಿ ಕೈಗೆಟಗುವ ದರದಲ್ಲಿ ಮಹಿಳೆಯರೇ ನಡೆಸುವ ಅಕ್ಕ ಕೆಫೆ ಇದಾಗಿದೆ ಎಂದು ಹೇಳಿದರು.
ರಾಜ್ಯಾದ್ಯಂತ ಒಂದೇ ಮಾದರಿಯ ಅಕ್ಕ ಕೆಫೆಯನ್ನು ನಾಮಕರಣ ಹಾಗೂ ಬ್ರಾಂಡಿಂಗ್‌ನೊಂದಿಗೆ ಸಂಜೀವಿನಿ ಸ್ವಸಹಾಯ ಗುಂಪಿನ ಮಹಿಳೆಯರು ನಡೆಸುವ ಉದ್ಯೋಗವಾಗಿದೆ. ಗ್ರಾಮೀಣ ಪ್ರದೇಶದಲ್ಲಿನ ಬಡತನದ ಪ್ರಮಾಣ ಕಡಿಮೆ ಮಾಡುವುದು. ಗ್ರಾಮೀಣ ಬಡ ಮಹಿಳೆಯರ ಆರ್ಥಿಕ ಸಬಲೀಕರಣ ಮಾಡುವುದು. ಉತ್ತಮ ಗುಣಮಟ್ಟದ ಶುಚಿ-ರುಚಿಯಾದ ಪೌಷ್ಟಿಕ ಆಹಾರ ಒದಗಿಸುವುದು. ಮಹಿಳೆಯರಿಗೆ ಗುಣಮಟ್ಟದ ಆಹಾರ ಸಾಮರ್ಥ್ಯ ಅಭಿವೃದ್ಧಿ ತರಬೇತಿ ನೀಡುವುದು ಅಕ್ಕ ಕೆಫೆಯ ಮುಖ್ಯ ಉದ್ದೇಶವಾಗಿದೆ ಎಂದರು.ಜಿಪಂ ಸಿಇಒ ಶಶಿಧರ್ ಕುರೇರ ಮಾತನಾಡಿ, ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಅಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಮಹಿಳೆಯರ ಬಡತನದ ಪ್ರಮಾಣ ಕಡಿಮೆ ಮಾಡಿ ಜೀವನೋಪಾಯ ಯೋಜನೆ ಅನುಷ್ಠಾನ ಮಾಡಿ ಸ್ವಯಂ ಉದ್ಯೋಗ ಉತ್ತೇಜಿಸಿ ಸರ್ಕಾರ ಅನೇಕ ಯೋಜನೆ ಜಾರಿಗೆ ತಂದಿದೆ. ಅದರಲ್ಲಿ ಅಕ್ಕ ಕೆಫೆ, ಮಹಿಳೆಯರು ಉತ್ಪಾದಿಸುವ ವಸ್ತುಗಳನ್ನು ಮಾರಾಟ ಮಾಡಲು ಶೀಘ್ರದಲ್ಲೇ ನಗರದಲ್ಲಿ ಸೂಪರ್ ಮಾರ್ಕೆಟ್ ತೆರೆಯಲಾಗುವುದು. ಈಗಾಗಲೇ ಜಿಲ್ಲೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೊಂದು ಮಹಿಳಾ ಸ್ವ ಸಹಾಯ ಸಂಘಗಳ ವತಿಯಿಂದ ಸಹೋದರಿ ಕ್ಯಾಂಟೀನ್ ತೆರೆಯಲಾಗಿದೆ ಎಂದರು.
ಮುಧೋಳ-ಲೋಕಾಪೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಎಪಿಎಂಸಿ ನಾಮ ನಿರ್ದೇಶನ ಅಧ್ಯಕ್ಷ ಸಂಗಪ್ಪ ಇಮ್ಮನ್ನವರ, ರಾಜೂಗೌಡ ಪಾಟೀಲ, ಒಬಿಸಿ ಜಿಲ್ಲಾಧ್ಯಕ್ಷ ಮುದಕಣ್ಣ ಅಂಬಿಗೇರ, ಜಿಪಂ ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ, ತಾಪಂ ಇಒ ಉಮೇಶ ಸಿದ್ನಾಳ, ಜಿಪಂ ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ, ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ರಾಜು ವಾರದ, ತಾಪಂ ಎನ್‌ಆರ್‌ಎಲ್‌ಎಂ ಹೊಳೆಬಸು ಕರೆಹೊನ್ನ ಹಾಗೂ ತಾಲೂಕಿನ ಮಹಿಳಾ ಸಂಘದ ಒಕ್ಕೂಟದ ಅಧ್ಯಕ್ಷರು ಮತ್ತು ಮಹಿಳೆಯರು ಭಾಗವಹಿಸಿದ್ದರು.