ಅಕ್ಷರ ದಾಸೋಹದ ಕಾರ್ಯ ಶ್ಲಾಘನೀಯ: ರಜನಿ ಪಾಟೀಲ

| Published : Jan 12 2024, 01:46 AM IST

ಸಾರಾಂಶ

ಶಾಲಾ ಮಕ್ಕಳಿಗೆ ಪ್ರತಿನಿತ್ಯ ಶುಚಿ-ರುಚಿಯಾದ ಬಿಸಿ ಬಿಸಿಯಾದ ಬಿಸಿಯೂಟ ನೀಡುವಲ್ಲಿ ಅಕ್ಷರ ದಾಸೋಹದ ಕಾರ್ಯಕರ್ತರ ಸೇವೆ ಅಮೋಘ ಮತ್ತು ಶ್ಲಾಘನೀಯವಾಗಿದೆ ಎಂದು ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ರಜನಿ ಪಾಟೀಲ ಹೇಳಿದರು.

ಗದಗ: ಶಾಲಾ ಮಕ್ಕಳಿಗೆ ಪ್ರತಿನಿತ್ಯ ಶುಚಿ-ರುಚಿಯಾದ ಬಿಸಿ ಬಿಸಿಯಾದ ಬಿಸಿಯೂಟ ನೀಡುವಲ್ಲಿ ಅಕ್ಷರ ದಾಸೋಹದ ಕಾರ್ಯಕರ್ತರ ಸೇವೆ ಅಮೋಘ ಮತ್ತು ಶ್ಲಾಘನೀಯವಾಗಿದೆ ಎಂದು ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ರಜನಿ ಪಾಟೀಲ ಹೇಳಿದರು.

ಅವರು ನಗರದ ಸರಕಾರಿ ಪ್ರಾಥಮಿಕ ಶಾಲೆ ನಂ.೨ರಲ್ಲಿ ಇನ್ನರ್‌ವೀಲ್ ಕ್ಲಬ್ ನಿಂದ ನಡೆದ ಬಿಸಿಯೂಟ ತಯಾರಕರಿಗೆ ಸೀರೆಗಳನ್ನು ವಿತರಿಸಿ ಮಾತನಾಡಿ, ಮಕ್ಕಳು ಪ್ರತಿದಿನ ಬಿಸಿಯೂಟವನ್ನು ಶಾಲೆಯಲ್ಲಿ ಸೇವಿಸುವುದರಿಂದ ಅಪೌಷ್ಟಿಕತೆ ಹೋಗಲಾಡುತ್ತದೆ. ಸತ್ವಯುತ ಪೌಷ್ಟಿಕಾಂಶಗಳಿಂದ ಆರೋಗ್ಯಕ್ಕೆ ಪ್ರೇರಣೆಯಾಗಿದೆ. ಸರ್ವರಲ್ಲೂ, ಸಹಭೋಜನದಿಂದ ಸಮಾನತೆ ಉಂಟಾಗುತ್ತದೆ ಎಂದರು.

ಕ್ಲಬ್‌ನ ಕಾರ್ಯದರ್ಶಿ ಹೇಮಾ ಪೊಂಗಾಲಿಯಾ ಮಾತನಾಡಿ, ಇನ್ನರವೀಲ್ ಕ್ಲಬ್ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಶ್ರಮವಹಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಮಾತನಾಡಿ, ಬಿಸಿಯೂಟದ ಸಿಬ್ಬಂದಿಗಳು ಅಚ್ಚುಕಟ್ಟಾಗಿ ಅಡುಗೆ ಸಿದ್ಧಪಡಿಸಿ ಮಕ್ಕಳಿಗೆ ಉಣಬಡಿಸುತ್ತಿದ್ದು ಅವರ ಕಾರ್ಯ ಮೆಚ್ಚುವಂತಹದ್ದು ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕ, ಶಿಕ್ಷಕಿಯರು ಹಾಗೂ ಮುದ್ದುಮಕ್ಕಳು, ಕ್ಲಬ್ಬಿನ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಹೇಮಾ ಪೊಂಗಾಲಿಯಾ ಸ್ವಾಗತಿಸಿದರು. ವಿದ್ಯಾ ಗಂಜಿಹಾಳ ನಿರೂಪಿಸಿದರು. ಶುಭಾ ಕುಂದಗೋಳ ವಂದಿಸಿದರು.