ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ಭಾರಿ ಪ್ರಯಾಸದಿಂದ ದೊರಕಿದ ಪಿಯು ಕಾಲೇಜನ್ನು ಉಳಿಸಿಕೊಳ್ಳುವ ದಿಶೆಯಲ್ಲಿ ಪದ್ಮಶ್ರೀ ಪುರಸ್ಕೃತ ಅಕ್ಷರಸಂತ ಹರೇಕಳ ಹಾಜಬ್ಬಈಗ ಇಳಿವಯಸ್ಸಿನಲ್ಲೂ ಹೊಸದಾಗಿ ಮಕ್ಕಳ ಸೇರ್ಪಡೆಗೆ ಸ್ಕೂಲ್‌ಗಳಿಗೆ ಅಲೆದಾಟ ನಡೆಸುತ್ತಿದ್ದಾರೆ. ನಿರಂತರ ಪ್ರಯತ್ನದ ಫಲವಾಗಿ ಹಾಜಬ್ಬ ಸ್ಥಾಪಿಸಿದ ಹರೇಕಳ ನ್ಯೂಪಡ್ಪು ಹೈಸ್ಕೂಲ್‌ಗೆ 2024ರಲ್ಲಿ ಪಿಯು ಕಾಲೇಜು ಮಂಜೂರುಗೊಂಡಿತ್ತು. ಅದೇ ವರ್ಷ ಪಿಯು ಕಾಲೇಜಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗಕ್ಕೆ ಪ್ರವೇಶ ಆರಂಭಿಸಲಾಯಿತು. ಪ್ರಥಮ ಪಿಯುಗೆ 20 ಮಂದಿ ಮಕ್ಕಳು ಸೇರ್ಪಡೆಯಾಗಿದ್ದರು.

20 ಮಂದಿಯಲ್ಲಿ 20 ಮಂದಿ ಪಾಸ್‌ ಆದರೂ ದ್ವಿತೀಯ ಪಿಯು ಹೋದವರು 12 ಮಂದಿ ಮಾತ್ರ. ಉಳಿದ 8 ಮಂದಿ ಹೆಣ್ಮಕ್ಕಳು ಸಮೀಪದ ಕೊಣಾಜೆ ಹೆಣ್ಮಕ್ಕಳ ಪಿಯು ಕಾಲೇಜಿಗೆ ತೆರಳಿದರು. ಇದರಿಂದಾಗಿ ಈ ವರ್ಷ ದ್ವಿತೀಯ ಪಿಯುನಲ್ಲಿ 12 ಮಂದಿ ಮಾತ್ರ ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿದ್ದಾರೆ.

2025ರಲ್ಲಿ ಪ್ರಥಮ ಪಿಯುಗೆ ಸೇರಿದ ಮಕ್ಕಳ ಸಂಖ್ಯೆ ಕೇವಲ 11 ಮಾತ್ರ. ಈಗ ಇರುವ ಒಟ್ಟು ಮಕ್ಕಳ ಸಂಖ್ಯೆ 23. ಒಬ್ಬರು ಪ್ರಾಂಶುಪಾಲರು, ಮೂವರು ಅತಿಥಿ ಉಪನ್ಯಾಸಕರು ಹಾಗೂ ಇಬ್ಬರು ನಿಯೋಜಿತ ಉಪನ್ಯಾಸಕರು ಇದ್ದಾರೆ. ಈ ಬಾರಿಯೂ ಮಕ್ಕಳ ಸಂಖ್ಯೆ ಕಡಿಮೆಯಾದರೆ ಪಿಯು ವಿಭಾಗ ಮುಚ್ಚುವ ಪರಿಸ್ಥಿತಿ ಎದುರಾಗಬಹುದು ಎಂಬ ಭೀತಿಯಿಂದ ಶಾಲಾ ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷರೂ ಆಗಿರುವ ಹಾಜಬ್ಬರೇ ಸ್ವತಃ ಮಕ್ಕಳನ್ನು ಇಲ್ಲಿಗೆ ಸೆಳೆಯಲು ಟೊಂಕಕಟ್ಟಿದ್ದಾರೆ. 60 ಮಕ್ಕಳ ಸೇರ್ಪಡೆ ಗುರಿ: ಈ ವರ್ಷ ಪ್ರಥಮ ಪಿಯುಗೆ ಕನಿಷ್ಠ 60 ಮಕ್ಕಳನ್ನು ಸೇರ್ಪಡೆಗೊಳಿಸಬೇಕು ಎನ್ನುವುದು ಹಾಜಬ್ಬರ ಬಯಕೆ. ಇದಕ್ಕಾಗಿ ಹಾಜಬ್ಬರು ಸುತ್ತಮುತ್ತಲಿನ ಖಾಸಗಿ ಹಾಗೂ ಸರ್ಕಾರಿ ಹೈಸ್ಕೂಲ್‌ಗಳ ಮೊರೆ ಹೋಗಿದ್ದಾರೆ. ಸ್ವತಃ ಹಾಜಬ್ಬ ಹಾಗೂ ಅವರ ಪಿಯು ಕಾಲೇಜಿನ ಪ್ರಾಂಶುಪಾಲರ ಜೊತೆ ಹೈಸ್ಕೂಲ್‌ಗಳಿಗೆ ತೆರಳಿ, ನಿಮ್ಮಲ್ಲಿಂದ ಮಕ್ಕಳನ್ನು ನಮ್ಮ ಪಿಯು ಕಾಲೇಜಿಗೆ ಕಳುಹಿಸುವಂತೆ ಬೇಡಿಕೊಂಳ್ಳುತ್ತಿದ್ದಾರೆ.


ಪಾವೂರು ಹಾಗೂ ಕೊಣಾಜೆ ಪಡ್ಪುವಿನ ಸರ್ಕಾರಿ ಹೈಸ್ಕೂಲ್‌, ಹರೇಕಳದ ರಾಮಕೃಷ್ಣ ಹೈಸ್ಕೂಲ್‌ಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದ ಕೂಡಲೇ ಹಾಜಬ್ಬ ಹೋಗಿ ಬಂದಿದ್ದಾರೆ. ಈ ಹೈಸ್ಕೂಲ್‌ ಅಲ್ಲದೆ, ತಮ್ಮ ಹೈಸ್ಕೂಲ್‌ನ ಮಕ್ಕಳು ಸೇರಿಸಿದರೆ ಈ ಬಾರಿ ಪ್ರಥಮ ಪಿಯುಗೆ 60 ಸಂಖ್ಯೆ ದಾಟಬಹುದು ಎನ್ನುವುದು ಹಾಜಬ್ಬರ ಲೆಕ್ಕಾಚಾರ.

ಖಾಸಗಿ ಶಾಲೆಗಳ ಮಕ್ಕಳು ಇಲ್ಲಿ ಪರೀಕ್ಷೆಗೆ: ಹರೇಕಳ ಹಾಜಬ್ಬ ಸ್ಥಾಪಿಸಿದ ಈ ಶಿಕ್ಷಣ ಸಂಸ್ಥೆಯಲ್ಲಿ ಈಗ ಪ್ರಾಥಮಿಕದಿಂದ ಹೈಸ್ಕೂಲ್‌, ಪಿಯು ತನಕ ತರಗತಿ ಇದೆ. ಕಳೆದ ಎರಡು ವರ್ಷಗಳಿಂದ ಸಮೀಪದ ಇತರೆ ಅನುದಾನ ರಹಿತ ಖಾಸಗಿ ಹೈಸ್ಕೂಲ್‌ ಹಾಗೂ ಪಿಯು ಕಾಲೇಜುಗಳಿಂದ ಇಲ್ಲಿ ಪರೀಕ್ಷೆಗೆ ಕುಳಿತುಕೊಳ್ಳುತ್ತಾರೆ. ಸದ್ಯ ಒಂದೇ ಕಟ್ಟಡದಲ್ಲಿ ಪ್ರಾಥಮಿಕದಿಂದ ಪಿಯು ವರೆಗೆ ತರಗತಿ ನಡೆಯುತ್ತದೆ. ಮುಂದೆ ಪಿಯು ವಿಭಾಗಕ್ಕೆ ಪ್ರತ್ಯೇಕ ಜಾಗ ಮೀಸಲಿರಿಸಿದ್ದು, ಅಲ್ಲಿಯೇ ಕಟ್ಟಡ ರಚನೆಗೊಂಡು ಪಿಯು ತರಗತಿ ನಡೆಯಲಿದೆ. ಸದ್ಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದಿದ್ದು, ಪಿಯು ಪ್ರವೇಶಾತಿ ಇನ್ನೂ ಶುರುವಾಗಿಲ್ಲ. ಈ ಬಾರಿಯಾದರೂ ನಮ್ಮ ಶಾಲೆಯಲ್ಲಿ ಕನಿಷ್ಠ 60 ಮಕ್ಕಳು ಸೇರ್ಪಡೆಯಾಗಬೇಕು ಎಂಬ ಇರಾದೆಯಲ್ಲಿ ಸಮೀಪದ ಹೈಸ್ಕೂಲ್‌ಗಳಿಗೆ ತೆರಳಿ ಆಹ್ವಾನಿಸಿದ್ದೇವೆ. ನಮ್ಮ ಪಿಯು ಕಾಲೇಜಿಗೆ ಹೊಸ ಕಟ್ಟಡಕ್ಕೆ ಅನುದಾನ ಬಿಡುಗಡೆಯಾಗಿದ್ದು, ಹೊಸ ಕಟ್ಟಡ ಕೂಡ ಬೇಗನೆ ರಚನೆಗೊಳ್ಳಲಿದೆ ಎನ್ನುವುದನ್ನೂ ಪೋಷಕರಿಗೆ, ಮಕ್ಕಳಿಗೆ ಮನದಟ್ಟು ಮಾಡಿದ್ದೇವೆ. -ಹರೇಕಳ ಹಾಜಬ್ಬ, ಉಪಾಧ್ಯಕ್ಷರು, ಸರ್ಕಾರಿ ಪಿಯು ಕಾಲೇಜು ಮೇಲುಸ್ತುವಾರಿ ಸಮಿತಿ