‘ಆಲಮಟ್ಟಿ ಡ್ಯಾಂಗೆ ರಾಜಕೀಯಕ್ಕೆ ಮಹಾ ಕ್ಯಾತೆ’

| Published : Sep 14 2025, 01:04 AM IST

ಸಾರಾಂಶ

ಆಲಮಟ್ಟಿ ಅಣೆಕಟ್ಟನ್ನು ಎತ್ತರಿಸುವ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ರಾಜಕಾರಣಕ್ಕಾಗಿ ಆಕ್ಷೇಪ ತೆಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಆಲಮಟ್ಟಿ ಅಣೆಕಟ್ಟನ್ನು ಎತ್ತರಿಸುವ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ರಾಜಕಾರಣಕ್ಕಾಗಿ ಆಕ್ಷೇಪ ತೆಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಮೈಸೂರು ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನ್ಯಾಯ ಮಂಡಳಿಯೇ ಅಣೆಕಟ್ಟನ್ನು 519 ಮೀ. ಗಳಿಂದ 524 ಮೀ.ವರೆಗೆ ಏರಿಸಲು 2010ರಲ್ಲಿ ಹೇಳಿದೆ. 15 ವರ್ಷಗಳಾಗಿದ್ದು ರಾಜಕಾರಣಕ್ಕಾಗಿ ಈಗ ಆಕ್ಷೇಪ ತೆಗೆದಿದ್ದಾರೆ ಎಂದರು.

ಗೋವಾ ಮಹದಾಯಿ ಯೋಜನೆಯನ್ನು ಹಾಗೂ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿರುವ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಯವರು, ಈ ಬಗ್ಗೆ ಪ್ರಧಾನಮಂತ್ರಿಯವರು ಅವರಿಗೆ ತಿಳಿ ಹೇಳಬೇಕು ಎಂದರು.

ತಮಿಳುನಾಡಿನಲ್ಲಿ ಡಿಎಂಕೆಯ ಎಂ.ಕೆ.ಸ್ಟಾಲಿನ್‌ ಮುಖ್ಯಮಂತ್ರಿ ಎಂದಾಗ, ಸಿಎಂ ಯಾರೇ ಇರಲಿ. ಪ್ರಧಾನ ಮಂತ್ರಿ ಯಾರು? ಅವರು ಎಲ್ಲಾ ಮುಖ್ಯಮಂತ್ರಿಗಳಿಗೆ ತಿಳಿ ಹೇಳಬೇಕು ಎಂದರು.ಬಾಕ್ಸ್...

ವಿರೋಧ ಪಕ್ಷದವರ ಒತ್ತಡಕ್ಕೆ

ಮಣಿಪುರಕ್ಕೆ ಪ್ರಧಾನಿ ಭೇಟಿ

ಮೂರು ವರ್ಷಗಳ ನಂತರ ಪ್ರಧಾನಿ ನರೇಂದ್ರ ಮೋದಿಯವರು ಮಣಿಪುರಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಗಲಾಟೆ ಆಗುವಾಗ ಭೇಟಿ ನೀಡದೆ, ಈಗ ಪರಿಸ್ಥಿತಿ ಸುಧಾರಿಸಿದ ಮೇಲೆ ಭೇಟಿ ನೀಡುತ್ತಿದ್ದಾರೆ. ಇಷ್ಟು ವರ್ಷ ಏಕೆ ಹೋಗಲಿಲ್ಲ? ವಿರೋಧ ಪಕ್ಷದವರ ಒತ್ತಡಕ್ಕೆ ಮಣಿದು ಈಗ ಭೇಟಿ ನೀಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ಧರ್ಮಸ್ಥಳ ಪ್ರಕರಣದ ತನಿಖೆಯಲ್ಲಿ ವಿಳಂಬ ಇಲ್ಲ:

ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದಲ್ಲಿ ಎಸ್ಐಟಿಯಿಂದ ತನಿಖೆ ವಿಳಂಬವಾಗುತ್ತಿಲ್ಲ. ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಹಾಗೆಂದು ಅನಗತ್ಯವಾಗಿ ವಿಳಂಬ ಮಾಡುವಂತಿಲ್ಲ. ನನಗೆ ತಿಳಿದಂತೆ ವಿಳಂಬವಾಗುತ್ತಿಲ್ಲ ಎಂದು ಹೇಳಿದರು.

---

ದಸರಾ ಒಂದು ಧರ್ಮಕ್ಕೆ

ಸೇರಿದ ಕಾರ್ಯಕ್ರಮವಲ್ಲ

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಅವರಿಗೆ ಅವಕಾಶ ಕೊಡಬಾರದು ಎಂದು ನ್ಯಾಯಾಲಯಕ್ಕೆ ಅರ್ಜಿ ಹಾಕಿರುವ ಬಗ್ಗೆ ಮಾತನಾಡಿ, ನ್ಯಾಯಾಲಯದಲ್ಲಿ ವಿಷಯ ಇತ್ಯರ್ಥವಾಗಲಿ ಎಂದು ಸಿದ್ದರಾಮಯ್ಯ ಹೇಳಿದರು.

ದಸರಾ ಒಂದು ಧರ್ಮಕ್ಕೆ ಸೇರಿದ ಕಾರ್ಯಕ್ರಮವಲ್ಲ. ಸಾಂಸ್ಕೃತಿಕವಾಗಿ ಎಲ್ಲ ಧರ್ಮದ ಜನರು ಇದರಲ್ಲಿ ಭಾಗವಹಿಸುತ್ತಾರೆ. ದಸರಾ ನಾಡಹಬ್ಬವಾಗಿದ್ದು, ಒಂದು ಧರ್ಮದವರು ಮಾತ್ರ ಭಾಗವಹಿಸಬೇಕು ಎಂದೇನೂ ಇಲ್ಲ. ಸಾರ್ವತ್ರಿಕ ಹಬ್ಬದಲ್ಲಿ ಎಲ್ಲ ಜಾತಿ ಮತ್ತು ಧರ್ಮದವರು ಭಾಗವಹಿಸಬಹುದು. ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಶಾಂತಿಭಂಗ ಮಾಡುವ ಕೆಲಸ ಮಾಡಿದರೆ ಪೊಲೀಸ್‌ನವರು ಕ್ರಮ ಕೈಗೊಳ್ಳುತ್ತಾರೆ ಎಂದರು.ತಮಿಳನಾಡಿಗೆ ಭರ್ಜರಿ ನೀರು: ಸಿಎಂ

ಎರಡು ರಾಜ್ಯಗಳ ಹಿತದೃಷ್ಟಿಯಿಂದ ಸಮುದ್ರ ಪಾಲಾಗುತ್ತಿರುವ ಹೆಚ್ಚುವರಿ ನೀರು ಸಂಗ್ರಹಣೆ ಮಾಡಲು ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ತಮಿಳುನಾಡು ಮತ್ತು ಕೇಂದ್ರ ಸರ್ಕಾರ ರಾಜಕೀಯ ಮಾಡದೆ ತಕ್ಷಣವೇ ಅನುಮತಿ ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.ತಾಲೂಕಿನ ಬ್ಲಫ್‌ನಲ್ಲಿ ಕನ್ನಡ ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ವತಿಯಿಂದ ನಡೆದ ಗಗನಚುಕ್ಕಿ ಜಲಪಾತೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮೇಕೆದಾಟು ಅಣೆಕಟ್ಟು ಯೋಜನೆಯಿಂದ 66 ಟಿಎಂಸಿಯಷ್ಟು ನೀರನ್ನು ಸಂಗ್ರಹ ಮಾಡಲು ಅವಕಾಶವಿದೆ. ಹೆಚ್ಚುವರಿ ನೀರು ಸಂಗ್ರಹಿಸಲು ಈ ಯೋಜನೆ ಅಗತ್ಯವಾಗಿದೆ. ತಮಿಳುನಾಡಿನವರು ರಾಜಕೀಯಕ್ಕಾಗಿ ಯೋಜನೆಗೆ ತಡೆಯೊಡ್ಡದೆ ಸಹಕಾರ ನೀಡಬೇಕು ಎಂದರು.ತಮಿಳುನಾಡಿಗೆ ವಾರ್ಷಿಕ 177.25 ಟಿಎಂಸಿ ನೀರನ್ನು ಮಾತ್ರ ನೀಡಬೇಕು. ಈ ವರ್ಷ ಸೆಪ್ಟೆಂಬರ್‌ವರೆಗೆ 98 ಟಿಎಂಸಿಯಷ್ಟು ಮಾತ್ರ ನೀರನ್ನು ಕೊಡಬೇಕಾಗಿತ್ತು. ಆದರೆ, 221 ಟಿಎಂಸಿ ನೀರು ಹರಿದುಹೋಗಿದೆ. ಹೆಚ್ಚುವರಿಯಾಗಿ 122 ಟಿಎಂಸಿ ನೀರು ಹರಿದುಹೋಗಿದೆ ಎಂದು ತಿಳಿಸಿದರು.

ಈ ಬಾರಿ ರಾಜ್ಯದ ಎಲ್ಲಾ ಜಲಾಶಗಳು ಭರ್ತಿಯಾಗಿವೆ. ಉತ್ತಮ ಮಳೆಯಾದರೆ ನೀರು ಇಟ್ಟುಕೊಳ್ಳಲು ಆಗಲ್ಲ. ಹೆಚ್ಚುವರಿ ನೀರು ಬಿಟ್ಟಾಗಲೆಲ್ಲಾ ತಮಿಳುನಾಡಿನವರು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದೆ ಸಮುದ್ರ ಪಾಲಾಗುತ್ತಿದೆ. ಅಣೆಕಟ್ಟೆ ನಿರ್ಮಾಣವಾದರೆ ಹೆಚ್ಚುವರಿ ನೀರನ್ನು ಸಂಗ್ರಹಿಸಿ ಮಳೆ ಕಡಿಮೆ ಇರುವ ದಿನಗಳಲ್ಲಿ ಬಳಕೆ ಮಾಡಿಕೊಳ್ಳಲು, ನೀವು ಕೇಳಿದಾಗ ನೀರು ಬಿಡಲು ಅನುಕೂಲವಾಗಲಿದೆ ಎಂದು ಹೇಳಿದರು.ರಾಜ್ಯದಲ್ಲಿ ಉತ್ತಮ ಮಳೆಯಾದರೆ ನೀರಿನ ಸಮಸ್ಯೆ ಬರಲ್ಲ. ಎರಡು ರಾಜ್ಯಗಳ ನಡುವೆ ಕಾವೇರಿ ವಿವಾದ ಬರಲ್ಲ. ಆದ್ದರಿಂದ ಮೇಕೆದಾಟು ಯೋಜನೆಗೆ ತಮಿಳುನಾಡು ಸೇರಿದಂತೆ ಕೇಂದ್ರ ಸರ್ಕಾರ ಕೂಡ ಕರ್ನಾಟಕದ ರಾಜ್ಯದ ಹಿತದೃಷ್ಟಿಯಿಂದ ವಿಳಂಬ ಮಾಡದೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ಮೈಷುಗರ್‌ನಲ್ಲಿ ಬಾಯ್ಲಿಂಗ್ ಹೌಸ್ ನಿರ್ಮಾಣಕ್ಕೆ ಅನುಮತಿ ನೀಡಲು ನಾನು ಸಿದ್ಧನಿದ್ದೇನೆ. ಮೈಷುಗರ್ ಯಾವುದೇ ಕಾರಣಕ್ಕೂ ನಷ್ಟದಲ್ಲಿ ನಡೆಯಬಾರದು. ಕಾರ್ಖಾನೆ ನಷ್ಟದಲ್ಲಿ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಸಚಿವರು ಮತ್ತು ಕಾರ್ಖಾನೆಯ ಅಧ್ಯಕ್ಷರದ್ದಾಗಿದೆ ಎಂದರು.

ನಾನು ಅಧಿಕಾರಕ್ಕೆ ಬಂದ ನಂತರ ಈವರೆಗೆ ಕಾರ್ಖಾನೆಗೆ 113 ಕೋಟಿ ರೂ. ಹಣ ನೀಡಿದ್ದೇನೆ. ಅಧಿಕಾರಕ್ಕೆ ಬಂದ ಕೂಡಲೇ ₹50 ಕೋಟಿ ನೀಡಿದ್ದು, ಕಾರ್ಖಾನೆಯ ₹53 ಕೋಟಿ ವಿದ್ಯುತ್ ಬಿಲ್ ಬಾಕಿ ಮನ್ನಾ ಮಾಡಿದ್ದೇನೆ. ಅಲ್ಲದೆ ಈ ಸಾಲಿನಲ್ಲಿ ಕಬ್ಬು ಅರೆಯಲು ₹10 ಕೋಟಿ ಕೊಟ್ಟಿದ್ದೇನೆ ಎಂದು ಹೇಳಿದರು.ಸರ್ಕಾರದಿಂದ ಹಣ ಪಡೆಯುವುದಷ್ಟೇ ಮುಖ್ಯವಲ್ಲ. ಕೊಟ್ಟ ಹಣವನ್ನು ಸದ್ಬಳಕೆ ಮಾಡಿಕೊಂಡು ಕಾರ್ಖಾನೆ ನಷ್ಟವಿಲ್ಲದೆ ಲಾಭದಾಯಕವಾಗಿ ನಡೆಸಬೇಕು. ನಾನು ಅಧಿಕಾರದಲ್ಲಿರುವಾಗ ಕಾರ್ಖಾನೆಗೆ ಎಷ್ಟೇ ಹಣ ನೀಡಲು ಸಿದ್ಧನಿದ್ದೇನೆ. ಆದರೆ ಮುಂದೆ ಅಧಿಕಾರಕ್ಕೆ ಬರುವವರು ಕಾರ್ಖಾನೆಗೆ ಹಣ ಕೊಡುತ್ತಾರೆಂಬುದಕ್ಕೆ ಏನು ಗ್ಯಾರಂಟಿ ಎಂದು ಪ್ರಶ್ನಿಸಿದರು.

ಕಾರ್ಖಾನೆ ಬಾಯ್ಲಿಂಗ್ ಹೌಸ್‌ಗೆ ಅಗತ್ಯವಿರುವ ಹಣವನ್ನು ದೊರಕಿಸಿಕೊಡಲು ಬದ್ಧನಿದ್ದೇನೆ. ಡಿಸ್ಟಿಲರಿ ಘಟಕಕ್ಕೂ ಹಣ ನೀಡಲು ಸಿದ್ಧ. ಆದರೆ ಕಾರ್ಖಾನೆ ಯಾವುದೇ ಕಾರಣಕ್ಕೂ ನಷ್ಟದಲ್ಲಿ ನಡೆಯದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.ಬಿಜೆಪಿಯಿಂದ ಧರ್ಮ, ಜಾತಿ ನಡುವೆಬೆಂಕಿ ಹಚ್ಚುವ ಕೆಲಸ: ಬಿಜೆಪಿಯವರು ಧರ್ಮ-ಧರ್ಮಗಳ ನಡುವೆ, ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ. ಪ್ರಚೋದನೆ ಮಾಡುವುದೇ ವಿಪಕ್ಷದವರ ಕೆಲಸ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಶಿವನಸಮುದ್ರದ ಬ್ಲಪ್‌ನಲ್ಲಿ ಕನ್ನಡ ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆಯಿಂದ ನಡೆದ ಗಗನಚುಕ್ಕಿ ಜಲಪಾತೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ, ರಾಜ್ಯದಲ್ಲಿ ಆಶಾಂತಿ ವಾತಾವರಣ ಸೃಷ್ಟಿಸಿ, ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವುದು, ಎತ್ತಿಕಟ್ಟುವುದು ಬಿಜೆಪಿಯವರ ಕೆಲಸ. ಇದರ ಜೊತೆಗೆ ಈಗ ಜೆಡಿಎಸ್‌ನವರೂ ಸೇರಿಕೊಂಡಿದ್ದಾರೆ. ಅವರ ಮಾತುಗಳಿಗೆ ಯಾರೂ ಕಿವಿಗೊಡಬಾರದು ಎಂದರು.ರಾಜ್ಯದಲ್ಲಿ ಉತ್ತಮ ಮಳೆಯಿಂದ 82 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಸುಮಾರು 5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ನಾನು ಈಗಾಗಲೇ ಡೀಸಿ ಮತ್ತು ಸಿಇಒ ಅವರ ಸಭೆ ಕರೆದು ಹತ್ತು ದಿನಗಳೊಳಗೆ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ ಎಂದರು.

ಕಳೆದ ವರ್ಷ ಕಲಬುರಗಿಯಲ್ಲಿ ಆದ ಮಳೆ ಹಾನಿಗೆ ₹600 ಕೋಟಿ ಹಣ ಬಿಡುಗಡೆ ಮಾಡಿದ್ದೇನೆ. ಈ ವರ್ಷವೂ ಬೆಳೆ ಪರಿಹಾರ ನೀಡುವುದಕ್ಕೆ ಯಾವುದೇ ಹಣಕಾಸಿನ ತೊಂದರೆ ಇಲ್ಲ. ನಮ್ಮಲ್ಲಿ ಅಭಿವೃದ್ಧಿಗೂ ಹಣವಿದೆ, ಗ್ಯಾರಂಟಿ ಯೋಜನೆಗಳಿಗೂ ಹಣವಿದೆ. ಬೆಳೆ ಪರಿಹಾರಕ್ಕೂ ಹಣವಿದೆ. ಈ ಬಗ್ಗೆ ಜನರಿಗೆ ಯಾವುದೇ ಆತಂಕ ಬೇಡ ಎಂದರು.