ಸಂವಿಧಾನ ಆಶ್ರಯದಲ್ಲಿ ಎಲ್ಲರೂ ಸುಖಿಗಳು: ಸಾಹಿತಿ ಮುಕುಂದರಾಜ್‌

| Published : Feb 02 2024, 01:02 AM IST

ಸಂವಿಧಾನ ಆಶ್ರಯದಲ್ಲಿ ಎಲ್ಲರೂ ಸುಖಿಗಳು: ಸಾಹಿತಿ ಮುಕುಂದರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದು ಹೋಗುತ್ತಿರುವ ಸಂವಿಧಾನದ ಮೌಲ್ಯಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡಬೇಕಾದ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಸಂವಿಧಾನದ ಆಶ್ರಯದಲ್ಲಿ ನಾವೆಲ್ಲರೂ ಸುಖವಾಗಿದ್ದೇವೆ. ನಮಗೆ ಸಾರ್ವಭೌಮತ್ವ ಒದಗಿಸಿರುವ ಸಂವಿಧಾನಕ್ಕೆ ಕುತ್ತು ಬರುವಂತಹ ಪರಿಸ್ಥಿತಿಯಲ್ಲಿದ್ದೇವೆ. ಸ್ವಾತಂತ್ರ್ಯ ಪಡೆದ ವಿಚಾರಗಳನ್ನು ಸಂಭ್ರಮಿಸುವಾಗ ಸ್ವಾತಂತ್ರ್ಯ ಕಳೆದುಕೊಂಡದ್ದು ಯಾವಾಗ ಎಂದು ವಿಮರ್ಶಿಸಿಕೊಳ್ಳಬೇಕಿದೆ ಎಂದು ಸಾಹಿತಿ ಎಲ್.ಎನ್. ಮುಕುಂದರಾಜ್ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಶಿವಮೊಗ್ಗ: ಕಳೆದು ಹೋಗುತ್ತಿರುವ ಸಂವಿಧಾನದ ಮೌಲ್ಯಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡಬೇಕಾದ ಗುರುತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ಸಾಹಿತಿ ಎಲ್.ಎನ್. ಮುಕುಂದರಾಜ್ ಹೇಳಿದರು.

ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಗುರುವಾರ ಆಯೋಜಿಸಿದ್ದ 18ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಕನ್ನಡ ಸಾಹಿತ್ಯ ಸವಾಲುಗಳು ಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಸಾಂವಿಧಾನಿಕ ಆಶಯಗಳ ಕುರಿತು ಅವರು ಮಾತನಾಡಿ, ಸಂವಿಧಾನದ ಆಶ್ರಯದಲ್ಲಿ ನಾವೆಲ್ಲರೂ ಸುಖವಾಗಿದ್ದೇವೆ. ನಮಗೆ ಸಾರ್ವಭೌಮತ್ವ ಒದಗಿಸಿರುವ ಸಂವಿಧಾನಕ್ಕೆ ಕುತ್ತು ಬರುವಂತಹ ಪರಿಸ್ಥಿತಿಯಲ್ಲಿದ್ದೇವೆ. ಸ್ವಾತಂತ್ರ್ಯ ಪಡೆದ ವಿಚಾರಗಳನ್ನು ಸಂಭ್ರಮಿಸುವಾಗ ಸ್ವಾತಂತ್ರ್ಯ ಕಳೆದುಕೊಂಡದ್ದು ಯಾವಾಗ ಎಂದು ವಿಮರ್ಶಿಸಿಕೊಳ್ಳಬೇಕಿದೆ ಎಂದರು.

ಕನ್ನಡ ಸಾಹಿತ್ಯದ ಮೂಲಕ ಕವಿ ಸಮಾಜದಲ್ಲಿನ ಅಂಕುಡೊಂಕುಗಳ ವಿರುದ್ಧವಾಗಿ ಮಾತನಾಡಲು ಹಿಂಜರಿಯುವ ಪರಿಸ್ಥಿತಿ ಇದೆ.‌ ಶರಣರು ಇಂತಹ ಪ್ರಯೋಗಗಳನ್ನು ಮಾಡಿದಾಗ ಬೃಹತ್ ಹತ್ಯಾಕಾಂಡವೇ ನಡೆದುಹೋಗಿದೆ.‌ ಸಾಮಾನ್ಯ ಜನರ ಗೋಳಿನ ವಿರುದ್ಧದ ಉತ್ಪನ್ನಗಳೇ ವಚನ ಸಾಹಿತ್ಯ. 12ನೇ ಶತಮಾನದಲ್ಲಿದ್ದ ತೆರಿಗೆ ಪದ್ಧತಿಯ ಇಕ್ಕಟ್ಟು ಇಂದಿಗೂ ಉಳಿದಿದೆ ಎಂದು ಹೇಳಿದರು.

ಸಂವಿಧಾನ ನಮಗೆ ಯಾವುದೇ ವ್ಯವಸ್ಥೆಗಳನ್ನು ಟೀಕಿಸುವ ವಿಮರ್ಶಿಸುವ ಅವಕಾಶ ಮಾಡಿಕೊಟ್ಟಿದೆ. ಇಂದು ಶಿಕ್ಷಣ ಕಲಿತವರಿಂದಲೇ ಸಂವಿಧಾನದ ವ್ಯವಸ್ಥೆ ಕುತ್ತು ಬಂದಿದೆ. ಸಂವಿಧಾನವನ್ನು ಬದಲಾಯಿಸಲು ಬಂದಿದ್ದೇವೆ ಎನ್ನುವ ಅಹಂಕಾರ ರಾಜಕಾರಣಿಗಳಲ್ಲಿದೆ. ಸಂವಿಧಾನದ ಐಕ್ಯ ಕೆಲವೇ ವರ್ಷಗಳ‌ ಹತ್ತಿರದಲ್ಲಿದ್ದೇವೆ. ನಾಳೆ ಏನಾಗಲಿದೆ ಎಂದು ಹೇಳುವ ಶಕ್ತಿ ಕನ್ನಡದ ಶರಣರಿಗೆ, ದಾಸರಿಗಿದೆ. ಕನ್ನಡ ಸಾಹಿತ್ಯ ಅಂತಹ ಅದ್ಭುತ ಶಕ್ತಿ ಹೊಂದಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯದಲ್ಲಿ ಜೀವ ವಿರೋಧಿ ನಿಲುವು ಕುರಿತು ಲೇಖಕ ಬಿ.ಚಂದ್ರೇಗೌಡ ಮಾತನಾಡಿ, ಜೀವ ವಿರೋಧಿ ನಿಲುವುಗಳನ್ನು ಕನ್ನಡದಲ್ಲಿ ಮೊದಲು ತೋರಿಸಿಕೊಟ್ಟವರು ಕುವೆಂಪು. ಮೂಲ ರಾಮಾಯಣದ ವೈಫಲ್ಯಗಳನ್ನು ಗಮನದಲ್ಲಿಟ್ಟುಕೊಂಡು ರಾಮಾಯಣ ದರ್ಶನಂ ಎಂಬ ಅದ್ಭುತ ಕೃತಿಯನ್ನು ರಚಿಸಿದರು.‌ ಮನುಕುಲದ ನಿಲುವುಗಳನ್ನು ಪ್ರತಿಪಾದಿಸುವಲ್ಲಿ ಕುವೆಂಪು ಬರುವವರೆಗೂ ಕನ್ನಡ ಸಾಹಿತ್ಯ ಕಾಯಬೇಕಾಗಿತ್ತು. ಮಾನವೀಯ ಕಾಳಜಿಯ ಲೇಖಕ ಎಂದಿಗೂ ವರ್ಣಬೇಧ ಪರವಾಗಿ ಇರುವುದಿಲ್ಲ ಎಂದು ಹೇಳಿದರು.

ಜಾನಪದ ಜಾಗತೀಕರಣ ಕುರಿತಾಗಿ ಪ್ರಾಧ್ಯಾಪಕ ಡಾ.ಮೋಹನ್ ಚಂದ್ರಗುತ್ತಿ ಮಾತನಾಡಿದರು. ಸಾಹಿತಿ ಪ್ರೊ.ಮಾರ್ಷಲ್ ಶರಾಮ್ ಅಧ್ಯಕ್ಷತೆ ವಹಿಸಿದ್ದರು.

- - - -1ಎಸ್‌ಎಂಜಿಕೆಪಿ17:

ಕನ್ನಡ ಸಾಹಿತ್ಯ ಸವಾಲುಗಳು ಗೋಷ್ಠಿಯಲ್ಲಿ ಕನ್ನಡ ಸಾಹಿತ್ಯದಲ್ಲಿ ಜೀವ ವಿರೋಧಿ ನಿಲುವು ಕುರಿತು ಲೇಖಕ ಬಿ.ಚಂದ್ರೇಗೌಡ ಮಾತನಾಡಿದರು.