ಕೇಂದ್ರ ಬಜೆಟ್‌ ಹುಸಿಯಾದ ರೇಷ್ಮೆನಗರಿ ಜನರ ನಿರೀಕ್ಷೆ

| Published : Feb 02 2024, 01:02 AM IST

ಸಾರಾಂಶ

ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು. ಅದಕ್ಕಾಗಿ ಎಸ್.ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು ಎಂಬ ಬೇಡಿಕೆಯನ್ನು ರೈತರು ಕೇಂದ್ರದ ಎದುರು ಇಟ್ಟಿದ್ದರು. ಆದರೆ, ಕೇಂದ್ರ ಸರ್ಕಾರ ಇದಕ್ಕೆ ಸೊಪ್ಪು ಹಾಕಿಲ್ಲ. ಸಹಜವಾಗಿಯೇ ಇದು ರೈತ ಸಮುದಾಯದಲ್ಲಿ ಬೇಸರ ಮೂಡಿಸಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲಿ ಅತಿ ಜರೂರಾಗಿದ್ದ ಮೇಕೆದಾಟು ಅಣೆಕಟ್ಟೆ , ರೇಲ್ವೆ ಯೋಜನೆಗಳು ಸೇರಿದಂತೆ ಯಾವೊಂದು ಯೋಜನೆಗಳ ಬಗ್ಗೆಯೂ ಪ್ರಸ್ತಾಪ ಮಾಡದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ರವರು ಗುರುವಾರ ಮಂಡಿಸಿದ ಕೇಂದ್ರ ಬಜೆಟ್ ಜಿಲ್ಲೆಯ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ.

ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಮನಗರ ಜಿಲ್ಲೆಗೆ ಮಹತ್ವದ ಕೊಡುಗೆಗಳೇನು ಸಿಕ್ಕಿಲ್ಲ. ರಾಜ್ಯ ಸರ್ಕಾರ ಹಾಗೂ ಸಂಸದರು ಮೇಕೆದಾಟು, ರೇಲ್ವೆ ಯೋಜನೆಗಳನ್ನು ಸಾಕಾರಗೊಳಿಸುವ ಕುರಿತು ಗಮನ ಸೆಳೆದರೂ ಪ್ರಯೋಜನವಾಗುತ್ತಿಲ್ಲ. ವಿತ್ತ ಸಚಿವರು ತಮ್ಮಕೊನೆಯ ಬಜೆಟ್ ನಲ್ಲಿಯೂ ನಿರಾಸೆ ಮೂಡಿಸಿದ್ದಾರೆ.

ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು. ಅದಕ್ಕಾಗಿ ಎಸ್.ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು ಎಂಬ ಬೇಡಿಕೆಯನ್ನು ರೈತರು ಕೇಂದ್ರದ ಎದುರು ಇಟ್ಟಿದ್ದರು. ಆದರೆ, ಕೇಂದ್ರ ಸರ್ಕಾರ ಇದಕ್ಕೆ ಸೊಪ್ಪು ಹಾಕಿಲ್ಲ. ಸಹಜವಾಗಿಯೇ ಇದು ರೈತ ಸಮುದಾಯದಲ್ಲಿ ಬೇಸರ ಮೂಡಿಸಿದೆ.

ಆದರೂ ಕೃಷಿ ಕ್ಷೇತ್ರದ ತ್ವರಿತ ಬೆಳವಣಿಗೆಗೆ ಕೋಯ್ಲು ನಂತರದ ಚಟುವಟಿಕೆಗಳಿಗೆ ಪೂರಕವಾಗಿ ಖಾಸಗಿ ಮತ್ತು ಸಾರ್ವಜನಿಕ ವಲಯದಿಂದ ಬಂಡವಾಳ ಹೂಡಿಕೆ. ಅಧುನಿಕ ಸಂಗ್ರಹಣಾ ವ್ಯವಸ್ಥೆ, ಸಮರ್ಥ ಪೂರೈಕೆ ಸರಪಳಿ, ಪ್ರಾಥಮಿಕ ಮತ್ತು ಮಾಧ್ಯಮಿಕ ಸಂಸ್ಕರಣೆ ಮತ್ತು ಮಾರುಕಟ್ಟೆ ಸೃಷ್ಟಿ ಮತ್ತು ಬ್ರಾಂಡಿಂಗ್ ವ್ಯವಸ್ಥೆ ಜಾರಿಗೆ ಮುಂದಾಗಿರುವುದು ರೈತ ವಲಯದಲ್ಲಿ ತುಸು ಸಮಾಧಾನ ತರಿಸಿದೆ.

ಏಷ್ಯಾದಲ್ಲಿಯೇ ಪ್ರಖ್ಯಾತ ರೇಷ್ಮೆ ಮಾರುಕಟ್ಟೆ ಹೊಂದಿರುವ ರಾಮನಗರ ಜಿಲ್ಲೆಯಲ್ಲಿ ಮುಖ್ಯವಾಗಿ ರೈಲ್ವೆ ಸೌಲಭ್ಯದ ವಿಚಾರದಲ್ಲಿಯೇ ಕೊರತೆಗಳು ಹೆಚ್ಚಾಗಿ ಕಾಡುತ್ತಿದೆ. ಆದರೆ, ಈ ಬಗ್ಗೆ ಬಜೆಟ್‌ನಲ್ಲಿ ವಿಷಯ ಪ್ರಸ್ತಾಪವಾಗದಿರುವುದು ಜನರ ಬೇಸರಕ್ಕೆ ಕಾರಣವಾಗಿದೆ.

ಹೆಜ್ಜಾಲ ಮೂಲಕ ಕನಕಪುರ, ಮಳವಳ್ಳಿ, ಕೊಳ್ಳೇಗಾಲ ಮೂಲಕ ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುವ ಹೊಸ ರೈಲ್ವೆ ಮಾರ್ಗ ಕಲ್ಪಿಸಬೇಕೆಂಬುದು ಹತ್ತಾರು ವರ್ಷಗಳ ಬೇಡಿಕೆಯಾಗಿದೆ. ಬಿಡದಿವರೆಗೆ ಸಬ್‌ಅರ್ಬನ್‌ ರೈಲ್ವೆ ಯೋಜನೆ ವಿಸ್ತರಣೆ ಬಗ್ಗೆ ಈ ಬಾರಿಯ ಬಜೆಟ್ ನಲ್ಲಿಯೂ ಯೋಜನೆಗೆ ಅನುಮೋದನೆ ದೊರಕಿಲ್ಲ.

ನಿರಂತರವಾಗಿ ಬರಗಾಲಕ್ಕೆ ತುತ್ತಾಗಿರುವ ರೇಷ್ಮೆನಗರಿಯ ರೈತರು ಗೂಡಿನ ಬೆಲೆಯಿಂದ ಹೈರಾಣಾಗಿದ್ದಾರೆ. ದೇಶಿ ರೇಷ್ಮೆಯ ಬೆಲೆಯಲ್ಲಿ ಹೆಚ್ಚಳ ಕಾಣುತ್ತಲೇ ಇಲ್ಲ. ಆಮದು ರೇಷ್ಮೆಯ ದರಗಳನ್ನು ಹೆಚ್ಚಿಸಿ, ಅಂತಾರಾಷ್ಟ್ರೀಯ ಗುಣಮಟ್ಟದ ರೇಷ್ಮೆಗೆ ಹಾಲಿ ಪದ್ಧತಿಯಲ್ಲಿ ಸುಧಾರಣೆ ತರುವುದು ಅಥವಾ ನೂತನ ಪದ್ಧತಿಯನ್ನು ಜಾರಿಗೆ ತರಬೇಕೆಂಬ ಕೂಗಿಗೆ ಕೇಂದ್ರ ಸರ್ಕಾರ ಸೊಪ್ಪು ಹಾಕದಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ.

ಕೋವಿಡ್ 19ರ ಬಳಿಕ ಚನ್ನಪಟ್ಟಣದ ಕರಕುಶಲ ಉದ್ಯಮ ಸಂಕಷ್ಟಕ್ಕೆ ಸಿಲುಕಿತು. ಆಗ ಕೇಂದ್ರ ಸರ್ಕಾರ ದೇಶಿ ಆಟಿಕೆ ಉದ್ಯಮಕ್ಕೆ ಉತ್ತೇಜನ ನೀಡುವುದಾಗಿ ಹೇಳಿತ್ತು. ಚನ್ನಪಟ್ಟಣದಲ್ಲಿ ಕೇಂದ್ರ ಸರ್ಕಾರ ಆಟಿಕೆಗಳ ನಿರ್ಮಾಣದ ಕ್ಲಸ್ಟರ್‌ ತೆರೆದು ಸಾಂಪ್ರದಾಯಿಕ ಬೊಂಬೆಗಳ ಉದ್ಯಮಕ್ಕೆ ಚೈತನ್ಯ ತುಂಬಲಿದೆ ಎಂಬ ನಿರೀಕ್ಷೆಗಳು ಈಡೇರಿಲ್ಲ.

ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿರುವ ಕಾರಣ ಟ್ರಾಮಾ ಸೆಂಟರ್ ಸ್ಥಾಪನೆ, ಬಿಡದಿ, ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಸಹಸ್ರಾರು ಕಾರ್ಮಿಕರ ಹಿತದೃಷ್ಟಿಯಿಂದ ಜಿಲ್ಲೆಗೆ ಸುಸಜ್ಜಿತ ಇಎಸ್‌ಐ ಆಸ್ಪತ್ರೆ ಅತ್ಯವಶ್ಯಕ ವಾಗಿತ್ತು. ಕೇಂದ್ರ ಸರ್ಕಾರ ಈ ಬಜೆಟ್‌ನಲ್ಲಿಯೂ ಸುಸಜ್ಜಿತ ಇಎಸ್‌ಐ ಆಸ್ಪತ್ರೆಗೆ ಅನುಮೋದನೆ ನೀಡಿಲ್ಲ.

ಇನ್ನು ಮಾಹೆಯಾನ ಪ್ರತಿ ಮನೆಯಲ್ಲಿ ಸುಮಾರು 300 ಯೂನಿಟ್‌ಗಳಷ್ಟು ವಿದ್ಯುತ್ ಉಳಿತಾಯಕ್ಕೆ ಪೂರಕವಾಗಿ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಕೆಯಾಗಲಿದೆ. ಆಯುಷ್ಮಾನ್ ಭಾರತ ಸೌಲಭ್ಯ ವಿಸ್ತರಣೆ ಮಾಡಿರುವುದರಿಂದ ಅಂಗನವಾಡಿ, ಆಶಾ ಕಾರ್ಯಕರ್ತಯರು ಮತ್ತು ಸಹಾಯಕರಿಗೂ ಅದರ ಲಾಭ ಸಿಗಲಿದೆ.

ಕೇಂದ್ರ ಬಜೆಟ್ ನಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ಹೇಳಿಕೆಗಳು ಕಾಣಿಸುತ್ತಿವೆ. ದೇಸಿ ಮತ್ತು ಸಂಸ್ಕೃತದ ಪದಗಳನ್ನು ಬಳಸಿ, ಹೊಸ ಹೆಸರಿಟ್ಟು ಒಂದಷ್ಟು ಯೋಜನೆ ಘೋಷಿಸಿದ್ದು, ಆ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ನಮ್ಮ ಗ್ಯಾರಂಟಿಗಳನ್ನು ವಿರೋಧ ಮಾಡಿದಂತವರು ಗ್ಯಾರಂಟಿ ಹೆಸರಿನಲ್ಲಿ ಚುನಾವಣೆಗೆ ಹೊರಟಿದ್ದಾರೆ. ಬೆಲೆ ಏರಿಕೆ ನಿಯಂತ್ರಿಸುವ ಕುರಿತು ಸ್ಪಷ್ಟತೆ ಇಲ್ಲ. ಎಕನಾಮಿಕ್ ಸರ್ವೆ ಇಟ್ಟಿದ್ದರೆ ದೇಶ ಕಳೆದ ಸಾಲಿನಲ್ಲಿ ಯಾವ ರೀತಿ ಸಾಧನೆ ಮಾಡಿದೆ ಎಂಬುದು ಗೊತ್ತಾಗುತ್ತಿತ್ತು. ಆದರೀಗ ಅನುಮಾನಗಳು ಪ್ರಾರಂಭವಾಗಿದೆ. ಸಂಸತ್ ಚುನಾವಣೆಗೆ ಸಂಬಂಧಪಟ್ಟಂತೆ ಒಂದಷ್ಟು ಘೋಷಣೆಗಳು, ಒಂದಷ್ಟು ಹೇಳಿಕೆಗಳಿಂದ ಕೂಡಿರುವ ಬಜೆಟ್‌ ಇದಾಗಿದೆ.

- ಡಿ.ಕೆ.ಸುರೇಶ್, ಸಂಸದರು, ಬೆಂಗಳೂರು ಗ್ರಾಮಾಂತರ ಕ್ಷೇತ್ರ

--

ಕೇಂದ್ರ ಆಯವ್ಯಯದಲ್ಲಿ ಮಹದಾಯಿ ಹಾಗೂ ಮೇಕೆದಾಟು ಯೋಜನೆ ಪ್ರಸ್ತಾಪ ಮಾಡದಿರುವುದು ಬೇಸರ ತರಿಸಿದೆ. ಆದರೆ, ಪ್ರವಾಸೋದ್ಯಮ ಇಲಾಖೆಗೆ 75000 ಕೋಟಿ ಧೀರ್ಘಾವಧಿಗೆ ಬಡ್ಡಿ ಸಾಲ, ಹಿಂದಿನ ತೆರಿಗೆ ಮುಂದುವರಿಕೆ ಹಾಗೂ 7 ಲಕ್ಷದವರೆಗೂ ತೆರಿಗೆ ವಿನಾಯಿತಿ ನೀಡಿರುವುದು. ಹಾಲು ಉತ್ಪನ್ನ ಗಳ ಉತ್ತೇಜನಕ್ಕಾಗಿ ಡೇರಿಗಳ ಸಂಖ್ಯೆ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ.

- ಕುಮಾರಸ್ವಾಮಿ, ರಾಜ್ಯ ಸಲಹೆಗಾರರು, ಜಯಕರ್ನಾಟಕ ಜನಪರ ವೇದಿಕೆ