ಸಾರಾಂಶ
ಕಲಬುರಗಿ : ನಿರಂತರ ವಿಭಜನೆಯಿಂದ ಗುಲ್ಬರ್ಗಾ ವಿಶ್ವವಿದ್ಯಾಲಯ ನಾಲ್ಕು ಹೋಳಾದ ಬಳಿಕ ಅದರ ವ್ಯಾಪ್ತಿ, ವಿಸ್ತಾರ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ವಿವಿಯ ‘ಜ್ಞಾನಗಂಗೆ’ ಕ್ಯಾಂಪಸ್‌ನ 800 ಎಕರೆ ಭೂಮಿ ಮೇಲೆ ಸ್ಥಳೀಯ ಜನಪ್ರತಿನಿಧಿಗಳು ಕಣ್ಣುಹಾಕಿದ್ದಾರೆ.
ಹಸಿರು ವನಸಿರಿಯಲ್ಲಿ ಜ್ಞಾನಗಂಗೆ ಕ್ಯಾಂಪಸ್ಸಿರಬೇಕೆಂಬ ಶಿಕ್ಷಣ ತಜ್ಞರ ದೂರದೃಷ್ಟಿಯಂತೆ 45 ವರ್ಷಗಳ ಹಿಂದೆ ಜ್ಞಾನಗಂಗೆ 800 ಎಕರೆ ವಿಶಾಲ ಕ್ಯಾಂಪಸ್ಸಲ್ಲಿ ತಲೆ ಎತ್ತಿತ್ತು. ಕಲ್ಯಾಣ ಕರ್ನಾಟಕದ ಏಕೈಕ ವಿವಿಯಾಗಿದ್ದ ಜ್ಞಾನಗಂಗೆಯಡಿಯಲ್ಲಿ ಕಲಬುರಗಿ, ಬಳ್ಳಾರಿ, ಕೊಪ್ಪಳ, ರಾಯಚೂರು, ಬೀದರ್, ಯಾದಗಿರಿ ಹಾಗೂ ವಿಜಯನಗರ ಜಿಲ್ಲೆಗಳಿದ್ದವು. ಆನಂತರ ವಿಶ್ವ ವಿದ್ಯಾಲಯ ವಿಭಜನೆ ಪ್ರಕ್ರಿಯೆಯಲ್ಲಿ ಗುಲ್ಬರ್ಗ ವಿವಿ ನಾಲ್ಕು ಹೋಳಾಗಿ ಈಗ ಕಲಬುರಗಿ ಜಿಲ್ಲೆಗಷ್ಟೇ ಸೀಮಿತವಾಗಿದೆ. ಇದರಿಂದ ವ್ಯಾಪ್ತಿ- ವಿಸ್ತಾರ ಕ್ಷೀಣಿಸುತ್ತಿರುವಾಗ ವಿವಿಗೆ 800 ಎಕರೆ ಭೂಮಿ ಬೇಕೆ? ಎಂಬ ಪ್ರಶ್ನೆ ಎದ್ದಿದೆ.
ಇಲ್ಲಿನ ಸಂಸದರು, ಸಚಿವರು ತಾವು ತರುವ ವಿವಿಧ ಇಲಾಖೆಯ ಯೋಜನೆಗಳಿಗೆ ಕಟ್ಟಡಕ್ಕೆ ಸುಲಭದಲ್ಲಿ ಕೈಗೆಟುಕುವ ಜ್ಞಾನಗಂಗೆ ಕ್ಯಾಂಪಸ್‌ನ ಬಂಗಾರದಂತಹ ಭೂಮಿ ಪಡೆಯಲು ಮುಗಿಬೀಳಲಾರಂಭಿಸಿದ್ದಾರೆ. ದುರಂತವೆಂದರೆ, ವಿವಿ ಅಭಿವೃದ್ಧಿಗೆ ಜಿಲ್ಲೆಯ ಜನನಾಯಕರು ಆಸಕ್ತಿ ತೋರುತ್ತಿಲ್ಲ. ಬದಲಿಗೆ ಅದರ ಭೂಮಿಯನ್ನು ಶೈಕ್ಷಣಿಕ ಉದ್ದೇಶ ಬಿಟ್ಟು ಅನ್ಯ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಪ್ರಯತ್ನ ನಡೆಸಿದ್ದಾರೆ.
ಈಗಾಗಲೇ ಇಎಸ್‌ಐಸಿ ಆಸ್ಪತ್ರೆ ಸಂಕೀರ್ಣ, ನಿಮ್ಹಾನ್ಸ್ ಘಟಕ, ಕೆಪಿಟಿಸಿಎಲ್ ಸ್ಟೇಷನ್ ಸೇರಿದಂತೆ ಶಿಕ್ಷಣೇತರ ಅಭಿವೃದ್ಧಿ ಚಟುವಟಿಕೆಗಳಿಗೆ ಬೇರೆ ಬೇರೆ ಇಲಾಖೆಗಳಿಗೆ 300 ಎಕರೆಗೂ ಹೆಚ್ಚು ಭೂಮಿಯನ್ನು ನೀಡಲಾಗಿದೆ. ಉಳಿದ ಭೂಮಿ ಮೇಲೂ ಸ್ಥಳೀಯ ಜನಪ್ರತಿನಿಧಿಗಳು ಕಣ್ಣು ಹಾಕಿದ್ದಾರೆ.
2 ದಶಕಗಳಿಂದ ಕಾಯಂ ಬೋಧಕರಿಲ್ಲ:
ವಿವಿಯಲ್ಲಿ ಕಾಯಂ ಬೋಧಕರಿಲ್ಲದೆ ಬರೋಬ್ಬರಿ ಎರಡು ದಶಕವಾಯ್ತು, ಶೈಕ್ಷಣಿಕ ಚಟುವಟಿಕೆಗೆ ಗ್ರಹಣ, ಇಲ್ಲಿರುವ 36 ವಿಭಾಗಗಳ ಪೈಕಿ ಎರಡಲ್ಲಿ ಶೂನ್ಯ ಸಾಧನೆ. ಹತ್ತಕ್ಕೂ ಹೆಚ್ಚು ವಿಭಾಗಗಳಲ್ಲಿ ಇರುವುದು ನಾಲ್ಕರಿಂದ ಎಂಟು ವಿದ್ಯಾರ್ಥಿಗಳು. ಹೀಗಾಗಿ ಹಲವು ವಿಭಾಗಗಳಿಗೆ ಬಾಗಿಲು ಮುಚ್ಚುವ ಭೀತಿ. ಸಂಶೋಧನೆ ನಿಂತ ನೀರು, ಪರೀಕ್ಷಾಂಗದಲ್ಲಿ ಅಂಧೇರಿ ದರ್ಬಾರ್. ಇದು ಗುಲ್ಬರ್ಗ ವಿವಿ (ಜ್ಞಾನಗಂಗೆ) ಚಿತ್ರಣ.
ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ರಾಜ್ಯದ ಈಶಾನ್ಯ ಭಾಗದ ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣ ಪಸರಿಸುವ ಉದಾತ್ತ ಚಿಂತನೆಯೊಂದಿಗೆ ಜನ್ಮ ತಳೆದಿರುವ ಗುಲ್ಬರ್ಗ ವಿವಿ ಆರಂಭದಲ್ಲಿ ಗಮನಾರ್ಹ ಸಾಧನೆ ಮಾಡಿದರೂ ಕಳೆದೆರಡು ದಶಕದಿಂದ ಕಾಯಂ ಬೋಧಕರಿಲ್ಲದೆ, ಅಭಿವೃದ್ಧಿ ಅನುದಾನ ಬಾರದೆ, ಕಾಲೇಜು, ವಿದ್ಯಾರ್ಥಿಗಳ ಸಂಖ್ಯೆ, ವ್ಯಾಪ್ತಿ ಕ್ಷೀಣಿಸಿ ನಿತ್ರಾಣವಾಗಿದೆ. ಹಿಂದುಳಿದ ಭಾಗದಲ್ಲಿನ ಉನ್ನತ ಶಿಕ್ಷಣ ಕ್ರಾಂತಿ ಉದ್ದೇಶ ಠುಸ್ ಆಗಿದೆ.
ಹಲವು ವಿಭಾಗಗಳಲ್ಲಿ ಶೂನ್ಯ ಸಾಧನೆ!:1970ರಿಂದ 1980ರವರೆಗೆ ಇಲ್ಲಿದ್ದ ಧಾರವಾಡ ಕರ್ನಾಟಕ ವಿವಿ ಸ್ನಾತಕೋತ್ತರ ಕೇಂದ್ರವೇ 1980ರ ಸೆ.10ರಂದು ಗುಲ್ಬರ್ಗ ವಿವಿಯಾಗಿ ಜನ್ಮ ತಾಳಿತು. ಕಾಯಂ ಬೋಧಕರಿಲ್ಲದ್ದರಿಂದ 36 ಅಧ್ಯಯನ ವಿಭಾಗಗಳ ಪೈಕಿ ಹತ್ತಕ್ಕೂ ಹೆಚ್ಚು ವಿಭಾಗಗಳು ಬಾಗಿಲು ಮುಚ್ಚುವ ಹಂತ ತಲುಪಿವೆ. ವಿದ್ಯಾರ್ಥಿಗಳ ಪ್ರವೇಶವೇ ಇಲ್ಲದೆ ಅದಾಗಲೇ ಅಪ್ಲೈಡ್ ಸೈನ್ಸ್, ಮಟೇರಿಯಲ್ ಸೈನ್ಸ್ ವಿಭಾಗಗಳ ಬಾಗಿಲು ಮುಚ್ಚಿವೆ, ಲಲಿತ ಕಲೆ, ಸಂಗೀತ, ಕನ್ನಡ ಹಾಗೂ ಹಿಂದಿ ವಿಭಾಗದಲ್ಲಿನ ಹಲವು ಡಿಪ್ಲೋಮಾ ಕೋರ್ಸ್‌ಗಳು ಇದೇ ದಾರಿಯಲ್ಲಿವೆ
ಬೋಧಕರಿಲ್ಲದೆ ಹಳಿತಪ್ಪಿದ ಶೈಕ್ಷಣಿಕ ಚಟುವಟಿಕೆ!
ಜ್ಞಾನಗಂಗೆಗೆ 2 ದಶಕಗಳಿಂದ ಬೋಧಕ ಸಿಬ್ಬಂದಿ ಬರ ಕಾಡುತ್ತಿದೆ. ಮಂಜೂರಾದ ಬೋಧಕರ 206 ಹುದ್ದೆಗಳಲ್ಲಿ ಕೆಲಸದಲ್ಲಿರುವವರು 36 ಮಾತ್ರ. 170 ಹುದ್ದೆಗಳು ಖಾಲಿ, ಇನ್ನು ಮಂಜೂರಾದ 432 ಬೋಧಕೇತರ ಹುದ್ದೆಗಳಲ್ಲಿ 164 ಮಾತ್ರ ಕಾರ್ಯನಿರ್ವಹಿಸುತ್ತಿದ್ದು 268 ಖಾಲಿ. ಮಂಜೂರಾದ ಪ್ರೊಫೆಸರ್ 36 ಹುದ್ದೆಗಳ ಪೈಕಿ ಕೆಲಸದಲ್ಲಿರುವವರು ಕೇವಲ ಇಬ್ಬರು, 34 ಹುದ್ದೆ ಖಾಲಿ. ಸಹಾಯಕ ಪ್ರೊಫೆಸರ್ 55 ಹುದ್ದೆಗಳಲ್ಲಿ ಕೆಲಸದಲ್ಲಿರುವವರು 12 ಮಂದಿ, 55 ಹುದ್ದೆ ಖಾಲಿ. ಹೀಗಾಗಿ 160 ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಂಡು ವಿವಿ ನಡೆಸಲಾಗುತ್ತಿದೆ.ನಿಯಮದಂತೆ ಪ್ರತಿ ವಿಭಾಗಕ್ಕೆ ಒಬ್ಬ ಪ್ರೊಫೆಸರ್, ಇಬ್ಬರು ಸಹ ಪ್ರಾಧ್ಯಾಪಕರು, 4 ಸಹಾಯಕ ಪ್ರಾಧ್ಯಾಪಕರು ಸೇರಿ ಕನಿಷ್ಠ 7 ಬೋಧಕರಿರಬೇಕು. ಇಲ್ಲಿ ಪ್ರತಿ ವಿಭಾಗಕ್ಕೆ ಒಬ್ಬರು, ಇಬ್ಬರಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಸಹಜವಾಗಿಯೇ ಇಲ್ಲಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದೆ.
ನಿವೃತ್ತ ನೌಕರರ ಪಿಂಚಣಿಗೂ ಹಣವಿಲ್ಲ!
ಗುಲ್ಬರ್ಗ ವಿವಿ ಆರ್ಥಿಕ ದಾರಿದ್ರ್ಯಕ್ಕೊಳಗಾಗಿದೆ. ಕಾಲೇಜುಗಳು ಕಮ್ಮಿಯಾದವು, ಬರುವ ಶುಲ್ಕದ ಮೊತ್ತವೂ ತಗ್ಗಿತು. ಕಳೆದ 3 ವರ್ಷದಿಂದ ಸರಕಾರ ನಯಾಪೈಸೆ ಅನುದಾನ ನೀಡಿಲ್ಲ. ತನ್ನ 618 ನಿವೃತ್ತ ನೌಕರರಿಗೆ ಮಾಸಿಕ 3 ಕೋಟಿ ರು. ನಂತೆ ವಾರ್ಷಿಕ 36 ಕೋಟಿ ರು. ಪಿಂಚಣಿ ನೀಡಲಿಕ್ಕೂ ವಿವಿ ಪರದಾಡುತ್ತಿದೆ. ಸರಕಾರ ಪಿಂಚಣಿ ಬಾಬ್ತು ರೂಪದಲ್ಲಿ ವಾರ್ಷಿಕ 16. 50 ಕೋಟಿ ರು. ಅನುದಾನ ನೀಡಿ ಕೈತೊಳೆದುಕೊಂಡಿದೆ. ಉಳಿದ ಹಣವನ್ನು ಆಂತರಿಕ ಸಂಪನ್ಮೂಲದಿಂದಲೇ ಹೊಂದಿಸುವ ಕಸರತ್ತು ಇಲ್ಲಿ ಅನಿವಾರ್ಯ. 2024- 25ರ ಪಿಂಚಣಿ ಅನುದಾನವಾಗಿ ಸರಕಾರದಿಂದ 12. 37 ಕೋಟಿ ರು. ಬಂದಿದೆ. ಆದರೆ ಪಿಂಚಣಿಗೆ 30. 95 ಕೋಟಿ ರು. ಹಣ ಬೇಕು. ಹೀಗಾಗಿ ವಾರ್ಷಿಕ 18-20 ಕೋಟಿ ರು. ಕೊರತೆಯನ್ನು ಹೊಂದಿಸುವುದೇ ದೊಡ್ಡ ತಲೆನೋವಾಗಿದೆ.
ಕಳೆದ 4 ವರ್ಷದಿಂದ ಅದು ಹೇಗೋ 70 ಕೋಟಿ ಪಿಂಚಣಿ ಮೊತ್ತವನ್ನು ವಿವಿ ಸಂಪನ್ಮೂಲದಿಂದಲೇ ಭರಿಸಿರುವುದು ಗಮನಾರ್ಹ. ಭದ್ರತಾ ಸಿಬ್ಬಂದಿ 52, ವಾರ್ಷಿಕ 1.50 ಕೋಟಿ ರು. ಪಗಾರ, 268 ಖಾಲಿ ಬೋಧಕೇತರ ಹುದ್ದೆಗಳಿಗೆ ಪ್ರತಿಯಾಗಿ ದಿನಗೂಲಿ ಆಧಾರದ ಮೇಲೆ 291 ನೇಮಕ ಮಾಡಿಕೊಳ್ಳಲಾಗಿದೆ. ಇವರ 8 ಕೋಟಿ ರು. ಪಗಾರ ನೀಡಲಿಕ್ಕೂ ತಿಣುಕಾಡುತ್ತಿದೆ ವಿವಿ.
ಕಾಲೇಜುಗಳು, ವಿದ್ಯಾರ್ಥಿ ಸಂಖ್ಯೆಯಲ್ಲಿ ಭಾರಿ ಕುಸಿತ!
ಗುವಿವಿ ವ್ಯಾಪ್ತಿಯಲ್ಲಿ 2022- 23ರಲ್ಲಿ ಇದ್ದ 196 ಕಾಲೇಜುಗಳ ಸಂಖ್ಯೆ 2023- 24ರಲ್ಲಿ 121 ಕ್ಕೆ, 2024- 25ರಲ್ಲಿ 114 ಕ್ಕೆ ಕುಸಿದಿದೆ. 2022- 23 ರಲ್ಲಿದ್ದ 20,196 ವಿದ್ಯಾರ್ಥಿಗಳ ಸಂಖ್ಯೆ ಇಂದು 11,967 ಕ್ಕೆ ಕುಸಿದಿದೆ. ಇದು ನೇರವಾಗಿ ವಿವಿ ಸಂಪನ್ಮೂಲ ಕ್ರೋಢೀಕರಣಕ್ಕೆ ಮಾರಕ ಪರಿಣಾಮ ಬೀರಿದೆ. ಇಲ್ಲಿನ ಪರೀಕ್ಷಾಂಗದಲ್ಲಿ ಅಂಧಾ ದರ್ಬಾರ್ ಸಾಗಿದೆ. ಪರೀಕ್ಷೆ ಮುಗಿದರೂ ಪ್ರಮಾಣ ಪತ್ರ ಸಮಯಕ್ಕೆ ಸರಿಯಾಗಿ ದೊರಕದೆ ವಿದ್ಯಾರ್ಥಿಗಳ ಗೋಳು ಮುಗಿಲು ಮುಟ್ಟಿದೆ. ಎರಡೆರಡು ಬಾರಿ ಲೋಕಾಯುಕ್ತರ ದಾಳಿಯೂ ಆಗಿದೆ. ಬಸವಾದಿ ಶರಣರ ಅಧ್ಯಯನ ಪೀಠ, ಪಾಲಿ, ಹೇಮರೆಡ್ಡಿ ಮಲ್ಲಮ್ಮ, ಅಂಬಿಗರ ಚೌಡಯ್ಯ, ಸೇವಾಲಾಲ್, ದಾಸ ಸಾಹಿತ್ಯ ಪೀಠ ಸೇರಿ 11 ಅಧ್ಯಯನ ಪೀಠಗಳು ಹೆಸರಿಗೆ ಮಾತ್ರ ಎಂಬಂತಾಗಿವೆ. ಪ್ರಸಾರಾಂಗ ಸೊರಗಿದೆ. ವಿಶಾಲ ಗ್ರಂಥಾಲಯ ಬಳಕೆಯಾಗದೆ ಭಣಗುಡುತ್ತಿದೆ. ಇಲ್ಲಿನ ಕ್ಯಾಂಟೀನ್ ಬಂದ್ ಆಗಿದೆ.
ಕ್ಯಾಂಪಸ್ ಭೂಮಿ ಪರಭಾರೆಗೆ ತೀವ್ರ ವಿರೋಧ ಗುಲ್ಬರ್ಗ ವಿವಿ ಉಳಿಯಬೇಕು, ಕ್ಯಾಂಪಸ್‌ನಲ್ಲಿ ಅನ್ಯ ಇಲಾಖೆಗಳು ತಲೆ ಎತ್ತುವುದಕ್ಕೆ, ಭೂಮಿ ಪರಭಾರೆಗೆ ನಮ್ಮ ತೀವ್ರ ವಿರೋಧವಿದೆ. ಈ ಭಾಗದ ಜನತೆ ಮುಂದಾಗಿ ವಿವಿ ಉಳಿಸಬೇಕಿದೆ. ಇಲ್ಲಿನ ಜನನಾಯಕರು ಕೂಡಾ ಕ್ಯಾಂಪಸ್ ಭೂಮಿಯನ್ನು ಜ್ಞಾನಗಂಗೆಯೇ ಬಿಟ್ಟುಕೊಡಬೇಕು. ರಾಜ್ಯದ ಯಾವ ವಿವಿ ಭೂಮಿ ಮೇಲೆ ಯಾರೂ ಕಣ್ಣು ಹಾಕಿಲ್ಲ. ಆದರೆ ಕಲಬುರಗಿಯಲ್ಲೇ ಜ್ಞಾನಗಂಗೆ ಭೂಮಿ ಮೇಲೆ ಎಲ್ಲರ ಕಣ್ಣು ಬಿದ್ದಿರೋದು ಅಚ್ಚರಿ. ಶೈಕ್ಷಣಿಕ ಪರಿಸರ ಉಳಿಯಬೇಕಾದರೆ ವಿವಿಗೆ ಸಮಗ್ರ ಕಾಯಕಲ್ಪವಾಗಬೇಕು. ಅನುದಾನ ನೀಡಿದರೆ ಸಂಶೋಧನೆ, ಸಾಧನೆಗೆ ನಾವು ಸದಾ ಸಿದ್ಧ.
- ಪ್ರೊ. ರಮೇಶ ಲಂಡನಕರ್ ಕುಲಸಚಿವರು (ಹಂಗಾಮಿ)ಜ್ಞಾನಗಂಗೆ, ಗುಲ್ಬರ್ಗ ವಿವಿ, ಕಲಬುರಗಿ