ಅಖಿಲ ಭಾರತ ಕ್ರಾಸ್‌ಕಂಟ್ರಿ: ಮಂಗಳೂರು ವಿ.ವಿ. ಸಮಗ್ರ ಚಾಂಪಿಯನ್ಸ್

| Published : Mar 11 2024, 01:15 AM IST

ಅಖಿಲ ಭಾರತ ಕ್ರಾಸ್‌ಕಂಟ್ರಿ: ಮಂಗಳೂರು ವಿ.ವಿ. ಸಮಗ್ರ ಚಾಂಪಿಯನ್ಸ್
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ವಿವಿಯನ್ನು ಪ್ರತಿನಿಧಿಸಿದ ಪುರುಷ ಮತ್ತು ಮಹಿಳೆಯರ 12 ಜನರ ತಂಡದಲ್ಲಿ 10 ಜನ ಕ್ರೀಡಾಪಟುಗಳು ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದು, ಮಂಗಳೂರು ವಿವಿಯು ಸಮಗ್ರ ಚಾಂಪಿಯನ್ ಆಗಿ ಹೊರ ಹೊಮ್ಮಲು ಈ ಹತ್ತು ಜನ ಕ್ರೀಡಾಪಟುಗಳು ನಿರ್ಣಾಯಕ ಪಾತ್ರ ವಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಮಹಾರಾಷ್ರ‍್ಟದ ಪರ್ಭಾನಿನಲ್ಲಿ ಮಾ. 10ರಂದು ನಡೆದ ಅಖಿಲ ಭಾರತ ಅಂತರ್ ವಿವಿ ಮಹಿಳಾ ಹಾಗೂ ಪುರುಷರ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್ 2024 ರಲ್ಲಿ ಮಂಗಳೂರು ವಿವಿಯು ಮಹಿಳೆ ಮತ್ತು ಪುರುಷ ಎರಡು ವಿಭಾಗದಲ್ಲಿ ಚಾಂಪಿಯನ್ ಆಗಿ ಸಮಗ್ರ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.

ಪುರುಷರ ವೈಯಕ್ತಿಕ ವಿಭಾಗ:ಪುರುಷರ ವೈಯಕ್ತಿಕ ವಿಭಾಗದಲ್ಲಿ ಮಂಗಳೂರು ವಿವಿಯ ಚಂದನ್ (ಕಾಲ: 32 ನಿ 23 ಸೆ) ದ್ವಿತೀಯ, ಅಕ್ಷಯ್ ಕುಮಾರ್ (ಕಾಲ: 33ನಿ 04 ಸೆ) ಎಂಟನೇ ಸ್ಥಾನ, ಅಂಕಿತ್ (ಕಾಲ: 33ನಿ 40 ಸೆ) ಹದಿನಾಲ್ಕನೇ ಸ್ಥಾನ ಹಾಗು ಅರವಿಂದ್ ಯಾದವ್ (ಕಾಲ: 34 ನಿ 32ಸೆ) 27 ನೇ ಸ್ಥಾನ ಪಡೆದರು. ಇವರೆಲ್ಲರೂ ಆಳ್ವಾಸ್‌ನ ವಿದ್ಯಾರ್ಥಿಗಳಾಗಿದ್ದಾರೆ.

ಮಹಿಳೆಯರ ವೈಯಕ್ತಿಕ ವಿಭಾಗ: ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಮಂಗಳೂರು ವಿವಿಯ ಬಸಂತಿ ಕುಮಾರಿ (ಕಾಲ: 39ನಿ 35 ಸೆ) ನಾಲ್ಕನೇ ಸ್ಥಾನ, ಕೆ ಎಂ ಅಂಜಲಿ (ಕಾಲ: 40ನಿ 28 ಸೆ) ಎಂಟನೇ ಸ್ಥಾನ, ಕೆ ಎಂ ಸೋನಿಯಾ (ಕಾಲ: 40ನಿ 28ಸೆ) ಒಂಬತ್ತನೇ ಸ್ಥಾನ, ಚೈತ್ರಾ ದೇವಾಡಿಗ (ಕಾಲ: 41ನಿ 30 ಸೆ) 15 ನೇ ಸ್ಥಾನ ಪಡೆದರು. ಈ ನಾಲ್ವರು ಆಳ್ವಾಸ್‌ನ ವಿದ್ಯಾರ್ಥಿಗಳಾಗಿದ್ದಾರೆ. ಮಂಗಳೂರು ವಿವಿಯನ್ನು ಪ್ರತಿನಿಧಿಸಿದ ಪುರುಷ ಮತ್ತು ಮಹಿಳೆಯರ ತಂಡದಲ್ಲಿದ್ದ ಹತ್ತು ಕ್ರೀಡಾಪಟುಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾ ದತ್ತು ಶಿಕ್ಷಣ ಯೋಜನೆಯಡಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಕಳೆದ ಬಾರಿಯ ಅಂತರ್ ವಿವಿ ಅಖಿಲ ಭಾರತ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್ ನಲ್ಲಿ ಮಂಗಳೂರು ವಿವಿಯು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಶ್ಲಾಘಿಸಿದ್ದಾರೆ.

ಮಂಗಳೂರು ವಿವಿಯನ್ನು ಪ್ರತಿನಿಧಿಸಿದ ಪುರುಷ ಮತ್ತು ಮಹಿಳೆಯರ 12 ಜನರ ತಂಡದಲ್ಲಿ 10 ಜನ ಕ್ರೀಡಾಪಟುಗಳು ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದು, ಮಂಗಳೂರು ವಿವಿಯು ಸಮಗ್ರ ಚಾಂಪಿಯನ್ ಆಗಿ ಹೊರ ಹೊಮ್ಮಲು ಈ ಹತ್ತು ಜನ ಕ್ರೀಡಾಪಟುಗಳು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ವೈಯಕ್ತಿಕ ನೆಲೆಯಲ್ಲಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಸ್ಥಾನ ಪಡೆದ ಎಂಟು ಜನ ವಿದ್ಯಾರ್ಥಿಗಳು ಆಳ್ವಾಸ್ ನ ವಿದ್ಯಾರ್ಥಿಗಳಾಗಿದ್ದಾರೆ.

ಅಖಿಲ ಭಾರತ ಅಂತರ್ ವಿವಿ ಪುರುಷರ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್ ನಲ್ಲಿ ಮಂಗಳೂರು ವಿವಿಯು 51 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಪಟ್ಟ ಪಡೆದರೆ 61 ಅಂಕಗಳೊಂದಿಗೆ ರಾಜಸ್ಥಾನ ವಿವಿಯು ದ್ವಿತೀಯ ಸ್ಥಾನ, 63 ಅಂಕಗಳೊಂದಿಗೆ ಗುರು ಕಾಶಿ ವಿವಿಯು ತೃತೀಯ ಸ್ಥಾನ ಪಡೆಯಿತು. ಮಹಿಳಾ ವಿಭಾಗದಲ್ಲಿ ಮಂಗಳೂರು ವಿವಿಯು 36 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಪಟ್ಟಗಳಿಸಿದರೆ, ಶಿವಾಜಿ ವಿವಿಯು 44 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ಗೋರಖ್‌ಪುರದ ದೀನ್ ದಯಾಳ್ ವಿವಿಯು 106 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆಯಿತು.

-