ಸಾರಾಂಶ
ಜಿಲ್ಲೆಯಲ್ಲಿ ಒಂದು ನೂರಕ್ಕೂ ಹೆಚ್ಚು ಮಹಿಳೆಯರು ಬರವಣಿಗೆಯಲ್ಲಿ ತೊಡಗಿಕೊಂಡಿರುವುದು ಮಹಿಳಾ ಅಸ್ಮಿತೆಯ ಹೆಗ್ಗುರುತಾಗಿದೆ.
ಕೊಪ್ಪಳ: ಜಿಲ್ಲೆಯಲ್ಲಿ ಪ್ರತಿ ಬಾರಿ ನಡೆಯುವ ಆನೆಗೊಂದಿ ಉತ್ಸವದಲ್ಲಿ ಮಹಿಳಾ ವಿಷಯ ಕುರಿತಂತೆ ಒಂದು ಗೋಷ್ಠಿ ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿಯ ಆನೆಗೊಂದಿ ಉತ್ಸವದಲ್ಲಿ ಮಹಿಳಾ ಗೋಷ್ಠಿ ಕೈ ಬಿಟ್ಟಿರುವುದಕ್ಕೆ ಜಿಲ್ಲೆಯ ಸಾಹಿತ್ಯಾಸಕ್ತ ಲೇಖಕಿಯರು ಆನೆಗೊಂದಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಳಿನ್ ಅತುಲ್ ಮುಂದೆ ತಮ್ಮ ಅಸಮಾಧಾನ ತೋಡಿಕೊಂಡು ಮನವಿ ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ಒಂದು ನೂರಕ್ಕೂ ಹೆಚ್ಚು ಮಹಿಳೆಯರು ಬರವಣಿಗೆಯಲ್ಲಿ ತೊಡಗಿಕೊಂಡಿರುವುದು ಮಹಿಳಾ ಅಸ್ಮಿತೆಯ ಹೆಗ್ಗುರುತಾಗಿದೆ. ಮಹಿಳಾ ಸಂವೇದನೆಯ ಕುರಿತು ಚರ್ಚೆಗಳು ಹಿಂದಿಗಿಂತಲೂ ವರ್ತಮಾನದಲ್ಲಿ ತುಂಬ ಅಗತ್ಯವಿದೆ. ಮಹಿಳೆಯನ್ನು ಒಂದು ಜ್ಞಾನಶಿಸ್ತನ್ನಾಗಿ ಪರಿಭಾವಿಸಿರುವ ಸಂದರ್ಭದಲ್ಲೂ ಲಿಂಗ ತಾರತಮ್ಯದ ನೆಲೆಗಳು ಸಾಮಾಜಿಕ ವ್ಯವಸ್ಥೆಯಲ್ಲಿ ಇನ್ನೂ ಹೋಗದಿರುವುದನ್ನು ಕಾಣುತ್ತೇವೆ ಎಂದಿದ್ದಾರೆ.ಉತ್ಸವಗಳಲ್ಲಿ ವಿದ್ವಾಂಸರು, ಜನಸಾಮಾನ್ಯರು ಒಂದೇ ವೇದಿಕೆಯಡಿ ಇರುವುದರಿಂದ ಮಹಿಳೆಯ ಬಗೆಗಿನ ಅರಿವು, ತಿಳಿವಳಿಕೆಗಳು, ಹೆಣ್ಣಿನ ಬಗೆಗಿನ ಗ್ರಹಿಕೆಗಳ ಚರ್ಚೆ ಆಗಬೇಕಾದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿಕೊಟ್ಟರು.
ಹೀಗಾಗಿದ್ದಾಗ್ಯೂ ಆನೆಗೊಂದಿ ಉತ್ಸವದಲ್ಲಿ ಮಹಿಳಾಗೊಷ್ಠಿ ಕೈಬಿಟ್ಟಿರುವುದು ಕೊಪ್ಪಳ ಜಿಲ್ಲೆಯ ಲೇಖಕಿಯರಿಗೆ ತುಂಬ ಅಸಮಾಧಾನವಾಗಿದೆ ಎಂದು ಲೇಖಕಿಯರ ಸಂಘ ಭಾನುವಾರ ಜಿಲ್ಲಾಧಿಕಾರಿಗೆ ಲಿಖಿತ ಪತ್ರ ನೀಡಿ ಗಮನ ಸೆಳೆದರು.ಇನ್ನು ಆನೆಗೊಂದಿ ಉತ್ಸವದಲ್ಲಿ ಮಹಿಳಾಗೋಷ್ಠಿ ಆಯೋಜಿಸಿ ಮಹಿಳಾ ಬರಹಗಾರ್ತಿಯರಿಗೆ ಆದ್ಯತೆ ನೀಡಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಡಿಸಿ ನಳೀನ ಅತುಲ್ ಅರ್ದ ಗಂಟೆ ಮಹಿಳಾ ಗೋಷ್ಠಿ ನಡೆಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದರು.
ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಡಾ.ಮುಮ್ತಾಜ್ ಬೇಗಂ, ಪದಾಧಿಕಾರಿಗಳಾದ ಸೋಮಕ್ಕ, ಎಚ್.ನಾಗರತ್ನ, ವಿಜಯಲಕ್ಷ್ಮಿ ಕಲಾಲ್, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ, ಗಂಗಾವತಿ ತಾಲ್ಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಲಕ್ಷ್ಮಿದೇವಿ ಇತರರು ಇದ್ದರು.