ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ನಡೆ ಮತ್ತು ನುಡಿಗಳನ್ನು ಒಂದೇ ಎನ್ನುವಂತೆ ಬದುಕಿ, ಅರಿವು, ಆಚಾರ, ಅನುಭಾವದಿಂದ ಮಾನವ ಬದುಕಿಗೆ ದಾರಿದೀಪವಾದ ಜಂಗಮ ಪುಂಗವರಲ್ಲಿ ಲಿಂ.ಶಾಂತವೀರ ಪಟ್ಟಾಧ್ಯಕ್ಷರು ಅಗ್ರಗಣ್ಯರು ಎಂದು ಶಿವಮೊಗ್ಗದ ಮುರುಘಾಮಠ ಹಾಗೂ ಆನಂದ ಪುರದ ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.ನಗರದ ಸಿಂಧಗಿಮಠದಲ್ಲಿ ನಡೆದ ಲಿಂ. ಶಾಂತವೀರ ಪಟ್ಟಾಧ್ಯಕ್ಷರ 43ನೇ ಪುಣ್ಯ ಸ್ಮರಣೋತ್ಸವದ 7ನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ವರಲ್ಲೂ ಸಮಾನ ಮನೋಭಾವ ಹೊಂದಿದ್ದ ಲಿಂ. ಶಾಂತವೀರ ಪಟ್ಟಾಧ್ಯಕ್ಷರು ಸದಾಚಾರಿ ಆಗಿದ್ದರು. ಅವರು ನುಡಿದಂತೆ ನಡೆದರು. ಭಕ್ತರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಮಾತೃ ಹೃದಯಿ ಅವರಾಗಿದ್ದರು. ಅಂತರಂಗ ಬಹಿರಂಗದಲ್ಲಿ ಭಕ್ತರ ಉದ್ಧಾರ ಮಾಡುವ ತುಡಿತವಿರಬೇಕು. ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರು ಇವುಗಳನ್ನೆಲ್ಲ ಅಳವಡಿಸಿಕೊಂಡವರು. ಹಾನಗಲ್ಲ ಗುರುಕುಮಾರ ಶ್ರೀಗಳ ಗರಡಿಯಲ್ಲಿ ಪಳಗಿ, ಧರ್ಮ ಭೋಧನೆ ಮೂಲಕ ಶಿವಾನುಭವ ಸಂಸ್ಕಾರ ಕೊಟ್ಟವರು. ಮಹಾತ್ಮರ ಜೀವನ ದರ್ಶನವೇ ಒಂದು ಆದರ್ಶ. ತಮ್ಮ ಅನ್ನ, ಅಕ್ಷರ, ಕಾಯಕದ ಜೊತೆಗೆ ಧಾರ್ಮಿಕ ಪಾಠ ಶಾಲೆ ಮೂಲಕ ಸಾವಿರಾರು ಶಾಸ್ತ್ರಿಗಳ, ನೂರಾರು ಶ್ರೀಗಳನ್ನು ನಾಡಿಗೆ ಪರಿಚಯಿಸುವ ಮೂಲಕ ಹಾವೇರಿಯ ಸಿಂಧಗಿ ಮಠ ನಾಡಿನಾದ್ಯಂತ ಹೆಸರುವಾಸಿಯಾಗಿದೆ ಎಂದರು.ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಅನ್ನ, ಅಕ್ಷರ, ಕಾಯಕದ ಜೊತೆಗೆ ಧಾರ್ಮಿಕ ಪಾಠ ಶಾಲೆ ಮೂಲಕ ಸಾವಿರಾರು ಶಾಸ್ತ್ರಿಗಳ, ನೂರಾರು ಶ್ರೀಗಳನ್ನು ನಾಡಿಗೆ ಪರಿಚಯಿಸುವ ಮೂಲಕ ಹಾವೇರಿಯ ಸಿಂಧಗಿ ಮಠ ನಾಡಿನಾದ್ಯಂತ ಹೆಸರುವಾಸಿಯಾಗಿದೆ ಎಂದು ಹೇಳಿದರು.
ಸರಿಗಮಪ ಖ್ಯಾತಿಯ ಜ್ಞಾನೇಶ ಬಳ್ಳಾರಿ ಇವರಿಂದ ವಿಶೇಷ ಸಂಗೀತ ಕಾರ್ಯಕ್ರಮ ಜರುಗಿತು.ಇದೇ ಸಂದರ್ಭದಲ್ಲಿ ಇಂಡಸ್ಟ್ರಿಯಲ್ ಯುಥ್ ಐಕಾನ್ ಪ್ರಶಸ್ತಿ ಪುರಸ್ಕೃತ ಜಯರಾಜ ಬಸವರಾಜ ಸಿಂಧೂರ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಾಹಿತಿ ಸತೀಶ ಕುಲಕರ್ಣಿ ಅವರಿಗೆ ವಿಶೇಷ ಸನ್ಮಾನ ಜರುಗಿತು.
ಸಮಾಜ ಸೇವೆಗೈದ ಮಹನೀಯರಾದ ಶಂಭುಲಿಂಗಪ್ಪ ಮಹಾಂತ, ಗೌತಮ ಭಾಪಣಾ, ಆನಂದ ಬೆಣಗ, ಶೇಖಪ್ಪ ಹತ್ತಿಕಾಳ, ಭರತಕುಮಾರ ಜೈನ್, ಬಸವರಾಜ ಕೊತಂಬರಿ, ಮಲಕಪ್ಪ ವಾಲಿ, ಅಶೋಕ ಬನ್ನಿಹಳ್ಳಿ ಹಾಗೂ ಸಿದ್ದಲಿಂಗಪ್ಪ ಬಶೆಟ್ಟಿಯವರಿಗೆ ಗೌರವಿಸಲಾಯಿತು.ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ, ಹೋತನಹಳ್ಳಿ ಸಿಂಧಗಿಮಠದ ಶಂಭುಲಿಂಗ ಪಟ್ಟಾಧ್ಯಕ್ಷರು, ಸಿಂದಗಿ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶಿವಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಿವಬಸಯ್ಯ ಆರಾಧ್ಯಮಠ, ಸಿದ್ದಯ್ಯ ಶಾಸ್ತ್ರಿ ಹಿರೇಮಠ, ಶಿವಣ್ಣ ಶಿರೂರ, ವಿ.ಎಚ್.ಕೆ. ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜಿ.ಎಸ್. ಭಟ್ ಕಾರ್ಯಕ್ರಮ ನಿರ್ವಹಿಸಿದರು.