ಸಾರಾಂಶ
ಹಿರಿಯೂರು: ನಡವಳಿಕೆ, ಬದುಕು ಮತ್ತು ಸಾಧನೆಗಳು ಮತ್ತೊಬ್ಬರಿಗೆ ಮಾದರಿಯಾದಾಗ ಮಾತ್ರ ಚರಿತ್ರೆ ಸೃಷ್ಟಿಯಾಗುತ್ತದೆ. ಅಂತಹ ಚರಿತ್ರೆ ಸೃಷ್ಟಿಗೆ ಚಿತ್ರಕಲಾವಿದ ಪಿ.ಆರ್.ತಿಪ್ಪೇಸ್ವಾಮಿ ಅವರ ಬದುಕು ಕಾರಣವಾಗಿದೆ ಎಂದು ಕಾಗಿನೆಲೆ ಕನಕ ಗುರು ಪೀಠದ ಪೀಠಾಧ್ಯಕ್ಷ ಜಗದ್ಗುರು ನಿರಂಜನಾನಂದ ಪುರಿ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಪಿ.ಆರ್. ತಿಪ್ಪೇಸ್ವಾಮಿ ಅವರ ನವೀಕೃತ ಸ್ಮಾರಕ ಲೋಕಾರ್ಪಣೆ ಹಾಗೂ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಾಮಾಜಿಕ ಕ್ಷೇತ್ರದಲ್ಲಿ ಪ್ರಾಮಾಣಿಕ ಕೆಲಸ ಮಾಡಿದರೆ ಬಹುದೊಡ್ಡ ಸಾಧಕರಾಗಬಹುದು ಎನ್ನುವುದಕ್ಕೆ ತಿಪ್ಪೇಸ್ವಾಮಿ ಅವರು ಸಾಕ್ಷಿಯಾಗಿದ್ದಾರೆ. ವಿವಾಹವಾಗದೇ ಚಿತ್ರಕಲೆಯನ್ನೇ ಜೀವನದ ಉಸಿರನ್ನಾಗಿಸಿಕೊಂಡು ಅದರ ಜೊತೆಯಲ್ಲೇ ಜೀವಿಸುತ್ತಾ ಬದುಕಿದ ಮಹಾನ್ ಸಾಧಕ ಅವರು.
ರಾಜ್ಯ ಕಂಡ ಶ್ರೇಷ್ಠ ಜಾನಪದ ವಿದ್ವಾಂಸ, ಸಾಹಿತಿ, ಕಲಾವಿದರಾಗಿದ್ದ ಅವರು ಚತುರ್ಮುಖ ಬ್ರಹ್ಮ ಎಂದೇ ಕರೆಸಿಕೊಂಡಿದ್ದು, ಕಡಿಮೆ ಸಾಧನೆಯಲ್ಲ. ಅವರ ನೆರವು ಪಡೆದವರು ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ವರ್ಗದ ಮಕ್ಕಳಿಗೂ ವಿದ್ಯೆ, ಅನ್ನದಾನ ಮಾಡಿ ಸಾವಿರಾರು ಜನರ ಬದುಕಿಗೆ ಆಸರೆಯಾಗಿ ಎಲ್ಲರ ಮನಸ್ಸಲ್ಲಿ ಇಂದು ಸ್ಥಿರವಾಗಿ ಉಳಿದಿದ್ದಾರೆ. ಪಿಆರ್‌ಟಿ ಪ್ರತಿಷ್ಠಾನದ ಸಹಕಾರದಿಂದ ಅವರ ಸ್ಮಾರಕದ ಕೆಲಸ ಆಗಿದೆ. ಇದೇ ರೀತಿ ಎಲ್ಲರೂ ಒಂದಾಗಿ ಊರೂಗಳ ಅಭಿವೃದ್ಧಿಗೂ ಮುಂದಾಗಿ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಪಿ.ಆರ್.ತಿಪ್ಪೇಸ್ವಾಮಿ ಸ್ಮಾರಕ ನಿರ್ಮಾಣ ಕಾರ್ಯ ಮಾದರಿ ಕೆಲಸವಾಗಿದೆ. ಸರಸ್ವತಿ ಪುತ್ರರು ಎಂದು ನಾವೆಲ್ಲಾ ಆರಾಧಿಸುವ ನಾಡಿನ ದೊಡ್ಡ ದೊಡ್ಡ ಕವಿಗಳ ಒಡನಾಟ ಹೊಂದಿದ್ದ ತಿಪ್ಪೇಸ್ವಾಮಿ ಅವರು ಭಾಗ್ಯವಂತರು. ಅವರ ಪ್ರತಿಷ್ಠಾನಕ್ಕೆ 10 ಲಕ್ಷ ರು. ಗೌರವಧನಕ್ಕೆ ಮನವಿ ಮಾಡಲಾಗಿದೆ. ವಾರದೊಳಗೆ ಗೌರವಧನ ತಲುಪುತ್ತದೆ. ಯುವಕರಿಗೆ ಅವರನ್ನ ಹೆಚ್ಚು ಪರಿಚಯಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದರು.
ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ, ದೇಶದ ನೂರಾರು ಕಲಾವಿದರಿಗೆ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಪಿ.ಆರ್.ತಿಪ್ಪೇಸ್ವಾಮಿ ಅವರು ದಾರಿದೀಪವಾಗಿದ್ದಾರೆ. ಆದುದರಿಂದಲೇ ಇಂದು ಸ್ಮಾರಕವಾಗಿ ಉಳಿದಿದ್ದಾರೆ. ಅವರು ಬರೆದ ಕೃತಿಗಳನ್ನು ಮಾರಾಟ ಮಾಡದೆ ಸ್ನೇಹಿತರಿಗೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಆಸೆ-ಆಮಿಷಕ್ಕೆ ಬಲಿಯಾಗದೆ ಸ್ವಾರ್ಥ ರಹಿತ ಬದುಕನ್ನು ಅಳವಡಿಸಿಕೊಂಡಿದ್ದರು. ಬೆಂಗಳೂರಿನ ಒಂದು ವೃತ್ತಕ್ಕೆ ಮತ್ತು ಮೈಸೂರಿನ ವಿಶ್ವವಿದ್ಯಾಲಯದ ವಸ್ತು ಸಂಗ್ರಹಾಲಯಕ್ಕೆ ಪಿ.ಆರ್.ಟಿ ಹೆಸರನ್ನು ನಾಮಕರಣ ಮಾಡಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ ಪಿಆರ್‌ಟಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ್ ಕದಂಬ, ಗೌರವ ಕಾರ್ಯದರ್ಶಿ ಮಹದೇವ ಶೆಟ್ಟಿ, ಪತ್ರಿಕೆಯೊಂದರ ಸಂಪಾದಕ ಎಸ್.ನಾಗಣ್ಣ, ಚಿಕ್ಕಣ್ಣ, ಎಚ್.ಎಂ.ಪರಮೇಶ್ವರಯ್ಯ, ಡಾ.ಬಿ.ಕೆ.ರವಿ, ಚಂದ್ರಶೇಖರ್ ಒಡೆಯರ್, ಡಾ.ಎಂ.ವೈ.ರಾಜೀವ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರತಾಪ್ ಸಿಂಹ, ಉಪಾಧ್ಯಕ್ಷೆ ಮಹೇಶ್ವರಿ ಗೋಡೆ ತಿಪ್ಪೇಸ್ವಾಮಿ, ಸ್ಮಾರಕ ಶಿಲ್ಪಿ ನರಸಿಂಹರಾಜು, ತುಮಕೂರಿನ ಡೇವಿಡ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ ಬಾಬು, ಮೃತ್ಯುಂಜಯ, ಮಾನಸ, ಶಂಕರ್ ಮುಂತಾದವರು ಉಪಸ್ಥಿತರಿದ್ದರು.
ಇದೇ ವೇಳೆ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.