ಸಾರಾಂಶ
ಜನಗಣತಿಯ ಜೊತೆಗೆ ಜಾತಿಗಣತಿಯನ್ನು ಕೈಗೊಳ್ಳುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಜಾತಿಗಣತಿಯನ್ನು ಕೈಗೊಂಡರೆ ಒಳಿತು.
ಕನ್ನಡಪ್ರಭ ವಾರ್ತೆ ರಾಮನಗರ
ಕರ್ನಾಟಕದಲ್ಲಿ ವಾಸವಿರುವ ಎಲ್ಲ ಮರಾಠಿಗರು ಕನ್ನಡಿಗರು. ನಾವೆಲ್ಲರು ಮಹಾರಾಷ್ಟ್ರ ಏಕೀಕರಣ ಸಮಿತಿಯ ಧೋರಣೆಗಳನ್ನು ವಿರೋಧಿಸುತ್ತೇವೆ. ಎಂಇಎಸ್ ವಿಸರ್ಜಿಸಿ ಎಂದು ಬೆಳಗಾವಿ, ಬೀದರ್‌ನಲ್ಲೇ ಹೇಳಲು ಸಿದ್ಧ ಎಂದು ಮಾಜಿ ಗೃಹ ಸಚಿವ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.ನಗರದ ಡಾ.ಬಿ.ಅರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್, ಜಿಲ್ಲಾ ಕ್ಷತ್ರಿಯ ಮರಾಠ ಸೇವಾ ಟ್ರಸ್ಟ್‌ಗಳು ಸ್ಥಳೀಯ ನಗರಸಭೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಕಾರದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ 398ನೇ ಜಯಂತ್ಯುತ್ಸವ ಹಾಗೂ ಪರಿಷತ್‌ನ 50ನೇ ವರ್ಷದ ಸುರ್ವಣ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.ಜನಗಣತಿಯ ಜೊತೆಗೆ ಜಾತಿಗಣತಿಯನ್ನು ಕೈಗೊಳ್ಳುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಜಾತಿಗಣತಿಯನ್ನು ಕೈಗೊಂಡರೆ ಒಳಿತು. ದೇಶದಲ್ಲಿ ಮರಾಠ ಸಮುದಾಯದವರ ಸಂಖ್ಯೆ ಸುಮಾರು 10 ಕೋಟಿ ಇರಬಹುದು. ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕಾಗಿದೆ. ಇದು ಜಾತಿ ಗಣತಿಯ ವೇಳೆ ಗೊತ್ತಾಗಲಿದೆ. ಗಣತಿ ವೇಳೆಯಲ್ಲಿ ಕ್ಷತ್ರಿಯ ಇತ್ಯಾದಿಯನ್ನು ಬರೆಯದೆ ಮರಾಠಾ ಅಂತಲೇ ಬರೆಯಿರಿ ಎಂದು ಅವರು ಮರಾಠ ಸಮುದಾಯಕ್ಕೆ ಸಲಹೆ ನೀಡಿದರು.ಇತ್ತೀಚೆಗೆ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಘಟನೆಯಲ್ಲಿ ನಿರ್ಧಯವಾಗಿ ಪ್ರಾಣ ತೆಗೆದವರ ಮತ್ತು ಅವರನ್ನು ಬೆಂಬಲಿಸಿದವರನ್ನು ಸದೆಬಡಿಯಬೇಕಾಗಿದೆ. ಕೇಂದ್ರ ಸರ್ಕಾರ ಹಾಗೊಮ್ಮೆ ಕೇಂದ್ರ ಸರ್ಕಾರ ಯದ್ದ ಘೋಷಿಸಿದರೆ ಎಲ್ಲರ ಬೆಂಬಲ ಇರಲಿ. ಹುತಾತ್ಮರಾದ ಸೈನಿಕರ ಪೈಕಿ ಮರಾಠ ಯೋಧರ ಸಂಖ್ಯೆ ದೊಡ್ಡದಿದೆ ಎಂದರು.ಶಿವಾಜಿ ಮಹಾರಾಜರ ಜಯಂತಿ ಸೇರಿದಂತೆ ಮಹನೀಯರ ಜಯಂತಿಗಳ ಬಗ್ಗೆ ಇಂದಿನ ಪೀಳಿಗೆಯಲ್ಲಿ ಹೆಮ್ಮೆ ಮೂಡಬೇಕು. ಮಹನೀಯರ ಮೌಲ್ಯಗಳಿಗೆ ತಾವು ಸಹ ಸಮರ್ಪಿಸಿಕೊಳ್ಳುವ ಮನೋಭಾವ ಇಂದಿನ ಪೀಳಿಗೆಯಲ್ಲಿ ಬರಲಿ ಎಂದು ಅವರು ಆಶಿಸಿದರು.ಜಿಲ್ಲೆಯ ಮರಾಠ ಸಮುದಾಯದ ವತಿಯಿಂದ ಶ್ರೀ ಪಾಂಡುರಂಗಸ್ವಾಮಿ ದೇವಾಲಯ, ಮಾತೆ ಅಂಬಾಭವಾನಿ ಪಿ.ಜಿ.ಆರ್.ಸಿಂಧ್ಯಾ ಕಟ್ಟಡಗಳ ನಿರ್ಮಾಣಕ್ಕೆ ತಮ್ಮ ನೇತೃತ್ವದ ಸಿಂಧ್ಯಾ ಟ್ರಸ್ಟ್ ವತಿಯಿಂದ 10 ಲಕ್ಷ ರು. ದೇಣಿಗೆ ಘೋಷಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಇಕ್ಬಾಲ್ ಹುಸೇನ್, ಕೋಟಿ ಜನ ಹುಟ್ಟುತ್ತಾರೆ, ಸಾಯುತ್ತಾರೆ. ಆದರೆ ಕೆಲವರ ಜಯಂತಿಗಳನ್ನಷ್ಟೇ ಆಚರಿಸುತ್ತೇವೆ. ಇತಿಹಾಸದ ಪುಟಗಳಲ್ಲಿ ಆದರ್ಶರಾಗಿ, ಅಮರರಾಗಿರುವವರ ಜಯಂತಿಗಳನ್ನು ನಾವು ಆಚರಿಸುತ್ತಿದ್ದೇವೆ ಎಂದರು.ಒಬ್ಬ ರಾಜನ ಮಗ ರಾಜನಾಗುವುದು, ಪ್ರಧಾನಿಯ ಮಗ ಮುಖ್ಯಮಂತ್ರಿ ಆಗುವುದು, ಮುಖ್ಯಮಂತ್ರಿಯ ಮಗ ಮುಖ್ಯಮಂತ್ರಿಯಾಗುವುದರಲ್ಲಿ ಮಹತ್ವವೇನಿಲ್ಲ. ಬಡ ಕುಟುಂಬದಲ್ಲಿ ಜನಿಸಿದ ಶಿವಾಜಿಯವರು ದೇಶದ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ತಮ್ಮ ತಾಯಿಯವರಿಂದ ಪ್ರಭಾವಿತರಾಗಿ ರಾಜನಾಗಿ ಎತ್ತರಕ್ಕೆ ಬೆಳೆದರು. ವಿಜಯನಗರ ಸಾಮ್ರಾಜ್ಯದ ಪತನಾನಂತರ ಮೊಘಲರು, ಸುಲ್ತಾನರ ಆಳ್ವಿಕೆಯಲ್ಲಿ ಭಾರತೀಯ ಪರಂಪರೆ, ಸಂಸ್ಕೃತಿಗಳನ್ನು ಉಳಿಸುವುದು ಕಷ್ಟವಾಗಿತ್ತು. ಅಂತಹ ಹೊತ್ತಿನಲ್ಲಿ ಶಿವಾಜಿ ಮಹಾರಾಜರು ಅವರೆನೆಲ್ಲ ಮಣಿಸಿದರು. ಅವರ ಆಳ್ವಿಕೆಯಲ್ಲಿ ಪಾರದರ್ಶಕತೆ ಇತ್ತು. ಹೊಲಸು ರಾಜಕಾರಣ ಇರಲಿಲ್ಲ. ಶಿವಾಜಿ ಕೇವಲ ಮರಾಠಿಗರಿಗೆ ಮಾತ್ರ ಆಡಳಿತಗಾರರಲ್ಲ, ಅವರನ್ನು ಸೂರ್ಯ, ಚಂದ್ರರಿರುವರೆಗೂ ಇಡೀ ದೇಶ ಅವರನ್ನು ಸ್ಮರಿಸುತ್ತದೆ ಎಂದರು.ತುಮಕೂರು ಮೂಲದ ಸಹಾಯಕ ಉಪನ್ಯಾಸಕ ಮಂಜುನಾಥ್ ಉಪನ್ಯಾಸ ನೀಡಿ, ಶಿವಾಜಿ ಮಹಾರಾಜರ ಬಾಲ್ಯ, ಅವರ ತಾಯಿ ಜೀಜಾಬಾಯಿಯವರು ಬೀರಿದ ಪ್ರಭಾವ, 16ನೇ ವಯಸ್ಸಿಗೆ ಖಡ್ಗ ಜಳಪಿಸಿದ್ದು, ಮೊಘಲರನ್ನು ಮಣಿಸಿದ ಸಂದರ್ಭ, ಶಿವಾಜಿ ಮಹಾರಾಜರ ಆಡಳಿತ ಮುಂತಾದ ವಿಚಾರಗಳಲ್ಲಿ ಸಭಿಕರ ಗಮನ ಸೆಳೆದರು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೆಂಗಳೂರು ಗವಿಪುರಂ ಗೋಸಾಯಿ ಮಹಾಸಂಸ್ಥಾನದ ವೇದಾಂತಚಾರ್ಯ ಶ್ರೀ ಮಂಜುನಾಥಸ್ವಾಮಿ ವಹಿಸಿ, ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ಎಸ್.ಸುರೇಶ್ ರಾವ್ ಸಾಠೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ಜಿಲ್ಲಾಧ್ಯಕ್ಷ ಸೋಮಶೇಖರರಾವ್ ಕಾಂಬ್ಳೆ, ಪ್ರಧಾನ ಕಾರ್ಯದರ್ಶಿ ತುಕಾರಾಮ್ ಖಾಂಡೆ, ಖಜಾಂಚಿ ಬಾಬುರಾವ್ ಕಾಂಬ್ಳೆ, ರಾಮನಗರ ಜಿಲ್ಲಾ ಕ್ಷತ್ರಿಯ ಮರಾಠ ಸೇವಾ ಟ್ರಸ್ಟ್ ಅಧ್ಯಕ್ಷ ಎಲ್.ನಾರಾಯಣ ರಾವ್ ಚವ್ಹಾಣ್, ಕಾರ್ಯದರ್ಶಿ ಶ್ರೀನಿವಾಸ ರಾವ್ ನಲಿಗೆ, ಯುವ ಘಟಕದ ಅಧ್ಯಕ್ಷ ಚಂದನ್ ಮೋರೆ, ಪ್ರಮುಖರಾದ ಎಸ್.ಆರ್.ಶಿಂಧೆ, ಟಿ.ಅರ್. ಸುನೀಲ್ ಚವ್ಹಾಣ್, ವೆಂಕಟರಾವ್, ಅಣ್ಣಾಸ್ವಾಮಿ ರಾವ್, ಪ್ರವೀಣ್ ಮಾನೆ, ಅರವಿಂದ್, ಶಿವಜಿ ಪ್ರಾತ್ರಧಾರಿ ಭರತ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಇದೇ ವೇದಿಕೆಯಲ್ಲಿ 2 ಬಾರಿ ಮುಖ್ಯಮಂತ್ರಿಗಳ ಪದಕ ಪುರಸ್ಕೃತರಾದ ರಾಜ್ಯ ಪೊಲೀಸ್ ಇಂಟೆಲಿಜೆನ್ಸ್‌ನ ಅಧಿಕಾರಿ ರಮೇಶ್‌ರಾವ್ ಕಾಂಬೇಕರ್ ಮತ್ತು ಸಮಾಜ ಸೇವಲ ಮೋಹನ್ ರಾವ್ ಅಂಬೇಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಮೆರವಣಿಗೆ-ಸಂಸದರಿಂದ ಉದ್ಘಾಟನೆವೇದಿಕೆ ಕಾರ್ಯಕ್ರಮಕ್ಕೆ ಮುನ್ನ ನಡೆದ ಶಿವಾಜಿ ಮಹಾರಾಜರ ಭಾವಿಚಿತ್ರದ ಮೆರವಣಿಗೆಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್ ಚಾಲನೆ ನೀಡಿದರು.-------
4ಕೆಆರ್ ಎಂಎನ್ 4.ಜೆಪಿಜಿರಾಮನಗರದ ಡಾ.ಬಿ.ಅರ್.ಅಂಬೇಡ್ಕರ್ ಭವನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 398 ನೇ ಜಯಂತ್ಯೋತ್ಸವ ಹಾಗೂ ಪರಿಷತ್‌ನ 50ನೇ ವರ್ಷದ ಸುರ್ವಣ ಮಹೋತ್ಸವ ಸಮಾರಂಭವನ್ನು ಶಾಸಕ ಇಕ್ಬಾಲ್ ಹುಸೇನ್ ಉದ್ಘಾಟಿಸಿದರು.