ಸಾರಾಂಶ
ಬಂಗಾರಪೇಟೆ: ಮುಖ್ಯಮಂತ್ರಿ ಬದಲಾವಣೆ ಎಂಬುದು ಮಾಧ್ಯಮಗಳ ಕಲ್ಪಿತ ಸೃಷ್ಟಿಯಾಗಿದ್ದು, ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿರುವ ತೀರ್ಪಿನ ಬಗ್ಗೆ ಧೃತಿಗೆಡುವುದಿಲ್ಲ, ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಒಳಗೊಂಡಂತೆ ೧೩೬ ಶಾಸಕರು ಹಾಗೂ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿದ್ದಾರೆ ಎಂದು ಕೆಯುಐಡಿಎಫ್‌ಸಿ ಅಧ್ಯಕ್ಷ ಹಾಗೂ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ತಾಲೂಕಿನ ಎಸ್‌ಎನ್ ಸಿಟಿಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನ್ಯಾಯಾಲಯವು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ತನಿಖೆ ಅಗತ್ಯವಿದೆ ಎಂದು ತಿಳಿಸಿದೆಯೇ ಹೊರತು ಪ್ರಾಸಿಕ್ಯೂಷನ್‌ಗೆ ಅವಕಾಶ ನೀಡಿಲ್ಲ, ಕಾಂಗ್ರೆಸ್ಸಿನ ಹೈಕಮಾಂಡ್ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಒಳಗೊಂಡಂತೆ ರಾಜ್ಯದ ಎಲ್ಲಾ ಸಚಿವರು ಮತ್ತು ಶಾಸಕರು ಸಿದ್ದರಾಮಯ್ಯನವರ ಪರವಾಗಿದ್ದೇವೆ, ಮುಖ್ಯಮಂತ್ರಿ ಬದಲಾವಣೆ ಎಂಬುದು ಕೇವಲ ಮಾಧ್ಯಮಗಳ ಸುಳ್ಳು ಸುದ್ದಿ ಎಂದು ಕಿಡಿಕಾರಿದರು.ರಾಜಭವನ, ತನಿಖಾ ಸಂಸ್ಥೆಗಳ ದುರುಪಯೋಗ: ಪ್ರಧಾನಿ ಮೋದಿ ಮತ್ತು ಅಮಿತ್ ಷಾ ರಾಜಭವನ, ತನಿಖಾ ಸಂಸ್ಥೆಗಳನ್ನು ಬಿಜೆಪಿ ಕಚೇರಿಯನ್ನಾಗಿಸಿಕೊಂಡು ರಾಜ್ಯಪಾಲರ ದಿಕ್ಕು ತಪ್ಪಿಸಿ ಅಧಿಕಾರ ದುರುಪಯೋಗಪಡಿಸಿಕೊಂಡು ಸಿದ್ದರಾಮಯ್ಯನವರ ಜನಪರ ಯೋಜನೆಗಳನ್ನು ಸಹಿಸದೆ ರಾಜಕೀಯ ಷಡ್ಯಂತ್ರ ರೂಪಿಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿಸಿದ್ದಾರೆ ಎಂದು ಆರೋಪಿಸಿದರು.
ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ: ಮುಡಾ ಹಗರಣದಲ್ಲಿ ಯಾವುದೇ ಸತ್ಯಾಂಶವಿಲ್ಲ. ಬಿಜೆಪಿ ಅಧಿಕಾರಾವಧಿಯಲ್ಲಿ ಬಸವರಾಜ ಬೊಮ್ಮಾಯಿ ಅವರ ಆಡಳಿತದಲ್ಲಿ ಮತ್ತು ಜೆಡಿಎಸ್- ಬಿಜೆಪಿ ಸದಸ್ಯರನ್ನೊಳಗೊಂಡ ಮುಡಾ ಪ್ರಾಧಿಕಾರದಲ್ಲಿ ಸೈಟ್ ಹಂಚಿಕೆಯಾಗಿದೆ. ಈ ಹಂತದಲ್ಲಿ ಸಿದ್ದರಾಮಯ್ಯನವರ ಪಾತ್ರ ಏನೂ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಉಚ್ಚನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗುವುದು.ಹರಿಯಾಣ ಒಳಗೊಂಡಂತೆ ೫ ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಮೇಲೆ ಮುಡಾ ಪ್ರಕರಣ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ, ರಾಷ್ಟ್ರವ್ಯಾಪಿ ಬಿಜೆಪಿ ವಿರೋಧಿ ಅಲೆಯಿದ್ದು, ಕಾಂಗ್ರೆಸ್ ಅಭೂತಪೂರ್ವ ಯಶಸ್ಸು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬಿಜೆಪಿ ಹಗರಣಗಳ ವಿರುದ್ಧ ಹೋರಾಟಕ್ಕೆ ಸಿದ್ಧ: ಅನಗತ್ಯವಾಗಿ ವಿರೋಧ ಪಕ್ಷದ ನಾಯಕರು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸಲು ಸುಳ್ಳು ಅಪಪ್ರಚಾರ ಮುಂದುವರೆಸಿದರೆ ಬಿಜೆಪಿ ಅಧಿಕಾರವಧಿಯಲ್ಲಿ ನಡೆದಂತ ಭೋವಿ ನಿಗಮ, ಕೊರೋನಾ, ದೇವರಾಜ್ ಅರಸು ಟರ್ಮಿನಲ್ ಒಳಗೊಂಡಂತೆ ಸಾವಿರಾರು ಕೋಟಿ ರು. ಹಗರಣಗಳ ವಿರುದ್ಧ ಕಾಂಗ್ರೆಸ್ ಪಕ್ಷ ಬೀದಿಗಿಳಿದು ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.