ಕೊಡ ನೀರಿಗಾಗಿ ರಾತ್ರಿಪೂರಾ ಮಹಪರದಾಟ

| Published : Mar 04 2024, 01:17 AM IST

ಸಾರಾಂಶ

ಕೈಕೊಟ್ಟ ಮಳೆಯಿಂದಾಗಿ ತಾಲೂಕಿನಾದ್ಯಂತ ಬಹುತೇಕ ಕೆರೆಗಳು ಭೀಮಾ ನದಿ ಒಣಗಿದ್ದು ಬೇಸಿಗೆ ಪ್ರಾರಂಭವಾಗುತ್ತಿದ್ದಂತೆಯೇ ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿವ ನೀರಿಗಾಗಿ ಹಾಹಾಕಾರ ಎದುರಾಗಿದೆ.

ಶಿವಲಿಂಗೇಶ್ವರ ಎಸ್.ಜೆ.

ಕನ್ನಡಪ್ರಭ ವಾರ್ತೆ ಕರಜಗಿ

ಕೈಕೊಟ್ಟ ಮಳೆಯಿಂದಾಗಿ ತಾಲೂಕಿನಾದ್ಯಂತ ಬಹುತೇಕ ಕೆರೆಗಳು ಭೀಮಾ ನದಿ ಒಣಗಿದ್ದು ಬೇಸಿಗೆ ಪ್ರಾರಂಭವಾಗುತ್ತಿದ್ದಂತೆಯೇ ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿವ ನೀರಿಗಾಗಿ ಹಾಹಾಕಾರ ಎದುರಾಗಿದೆ.

ಗ್ರಾಮದಲ್ಲಿ ಕೊಳವೆ ಭಾವಿಗಳೇ ನೀರಿನ ಪ್ರಮುಖ ಮೂಲವಾಗಿದೆ. ಕೆರೆ ಕಟ್ಟೆಗಳು ಹಳ್ಳಗಳು ನದಿಗಳು ತುಂಬಿದರಷ್ಟೇ ಅಂತರ್ಜಲ ಮಟ್ಟ ಸುಧಾರಿಸಿ ನೀರಿನ ಬವಣೆ ದೂರವಾಗುತ್ತದೆ. ಈ ಬಾರಿ ಮಳೆ ಕೈಕೊಟ್ಟಿದರಿಂದ ಎಲ್ಲವೂ ಖಾಲಿಯಾಗಿದ್ದು ನೀರಿಗಾಗಿ ಜನ ಪರದಾಡುವ ಪರಿಸ್ಥಿತಿ ಎದುರಾಗಿದೆ.

ಅಫಜಲ್ಪುರ ತಾಲೂಕಿನ ದಿಕ್ಸಂಗಾ ಕೆ., ತೆಲ್ಲೂಣಗಿ, ಜೇವರಗಿ ಬಿ, ಜೇವರಗಿ ಕೆ, ನಂದರಗಾ, ರಾಮನಗರ, ಶಿವಬಾಳ ನಗರ, ದೇವಪ್ಪ ನಗರ, ಉಪ್ಪರವಾಡಿ, ಬಳೂರ್ಗಿ, ಚಿಂಚೋಳಿ, ಮಾಶಾಳ, ರೇವೂರ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಉದ್ಭವಿಸುವುದು ಸರ್ವೇಸಾಮಾನ್ಯ. ಪ್ರತಿ ವರ್ಷವೂ ಭರವಸೆ ನೀಡುವುದೇ ರಾಜಕಾರಣಿಗಳ ಕೆಲಸವಾಗಿದೆ.

ರಾಮನಗರ ಗ್ರಾಮದಲ್ಲಿ ಕುಡಿವ ನೀರಿಗಾಗಿ ಜನರು ರಾತ್ರಿ ಹೊತ್ತು ಕೊಡಗಳನ್ನು ಸಾಲು ಸಾಲಾಗಿ ಪಾಳಿ ಇಟ್ಟು ನಿದ್ದೆಗೆಡುವ ಪರಿಸ್ಥಿತಿ ಎದುರಾಗಿದೆ. ನಂದರಗಾ ಗ್ರಾ.ಪಂ. ವ್ಯಾಪ್ತಿಯ ದಿಕ್ಸಂಗಾ ಕೆ. ಗ್ರಾಮದಲ್ಲಿ ಪಂಚಾಯ್ತಿ ವತಿಯಿಂದ 3 ಬೋರ್‌ವೆಲ್‌ ಇದ್ದು, ಅದರಲ್ಲಿ 2 ಬೋರ್‌ವೆಲ್‌ ಬಂದಾಗಿವೆ. 1 ಮಾತ್ರ ಚಾಲ್ತಿಯಲ್ಲಿದೆ ಅದು ಇಂದೋ ನಾಳೆ ಅನ್ನುವ ಪರಸ್ಥಿತಿಯಲ್ಲಿದೆ.

ರಾಮನಗರ ಗ್ರಾಮಗಳಲ್ಲಿ ಗ್ರಾಪಂ ವ್ಯಾಪ್ತಿಯಿಂದ 5 ಬೋರ್‌ವೆಲ್‌ ಕೊರೆಸಿದೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ರಮೇಶ ಬಾಕೆ ಅವರು ತಮ್ಮ ಸ್ವಂತ ಕರ್ಚಿನಿಂದ ರಾಮನಗರದಲ್ಲಿ ಬೋರ್‌ವೆಲ್‌ ಕೊರೆಸಿದರೂ ಅದು ಕೂಡ ಪ್ರಯೋಜನವಾಗಿಲ್ಲ.

ಕುಡಿವ ನೀರಿಗಾಗಿ ಸಾರ್ವಜನಿಕರು ಪಡುತ್ತಿರುವ ಕಷ್ಟಕ್ಕೆ ಕೊನೆ ಇಲ್ಲದಂತಾಗಿದೆ. ಜಿಲ್ಲಾಡಳಿತ ಹಾಗೂ ತಾಲೂಕು ಆಡಾಳಿತ ಅಧಿಕಾರಿಗಳು ನೀರಿನ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ದಿಕ್ಸಂಗಾ ಕೆ. ಮತ್ತು ರಾಮನಗರ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಜಿಲ್ಲಾ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ವಾರದಲ್ಲಿ ಎರಡು ಮೂರು ಸಭೆ ನಡೆಸಿ ಕುಡಿವ ನೀರಿಗೆ ಪ್ರಥಮ ಆದ್ಯತೆ ಎಂದು ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಗ್ರಾಮೀಣದ ಪ್ರದೇಶದ ಜನರ ನೀರಿನ ಸಮಸ್ಯೆ ಅಧಿಕಾರಿಗಳು ಕಿವಿಗೊಡುತ್ತಿಲ್ಲ.

ಗ್ರಾಮದಲ್ಲಿ ಇದ್ದ ಕೊಳವೆ ಬಾವಿ ಕೂಡ ಅಂತರ್‌ಜಲ ಬತ್ತಿ ಹೋಗಿದೆ. ದನಕರುಗಳ ಪಾಡು ಬ್ಯಾಡ್ರಿ ಎಪ್ಪ, ಸದ್ಯಕ್ಕೆ ಜಿಲ್ಲಾಡಳಿತ ಪ್ರತಿದಿನ ಟ್ಯಾಂಕರ್‌ ಮೂಲಕವಾದರೂ ನೀರು ಕೊಡಬೇಕು ಎನ್ನುವುದು ಗ್ರಾಮಸ್ಥರ ಬೇಡಿಕೆಯಾಗಿದೆ.

ಈ ಬಗ್ಗೆ ಕ್ಷೇತ್ರದ ಶಾಸಕರು ಲಕ್ಷವಹಿಸಿ ಈ ಬಾಗದ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರೆಸಲು ಮುದಾಗಬೇಕು ಎನ್ನುವುದು ಜನರ ಬೇಡಿಕೆಯಾಗಿದೆ.

ಅಧಿಕಾರಿಗಳು ಬರೀ ಕಾಗದ ಪತ್ರದಲ್ಲೆ ನೀರಿನ ಸಮಸ್ಯೆ ಕೇಳುತ್ತಿದ್ದಾರೆ. ನಮ್ಮ ಗ್ರಾಮಗಳಿಗೆ ಭೇಟಿನೀಡಿ ಒಂದೆರಡು ದಿನದಲ್ಲಿ ಬೋರ್‌ ಹಾಕಿಸುತ್ತೆವೆಂದು ಹೊದವರು ಇನ್ನೂವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಹಿಗೆ ಮುಂದುವರೆದರೆ ಮುಂಬರುವ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ.

- ಇಮಾಮ ಪಟೇಲ್, ಯುವ ಮುಂಖಡರು. ದಿಕ್ಸಂಗಾ