ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯಲ್ಲಿ ಪಿತೃಪಕ್ಷ ಆಚರಣೆಗೆ ಸಡಗರದಿಂದ ಸಿದ್ಧತೆಗಳು ನಡೆಯುತ್ತಿವೆ. ಮಹಾಲಯ ಅಮಾವಾಸ್ಯೆಯಂದೇ ಬಹುತೇಕರು ಹಬ್ಬ ಆಚರಣೆ ಮಾಡುವುದು ಸಾಮಾನ್ಯವಾಗಿದೆ. ಮಹಾತ್ಮ ಗಾಂಧೀಜಿ ಅಹಿಂಸಾವಾದಿಯಾಗಿದ್ದು, ಅವರ ಜನ್ಮದಿನದಂದೇ ಹಬ್ಬ ಬಂದಿದ್ದರೂ ಪ್ರಾಣಿ ವಧೆಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸುವ ಗೋಜಿಗೆ ಹೋಗದಿರುವುದು ವಿಶೇಷವಾಗಿದೆ.ಹಬ್ಬದ ಮುನ್ನಾ ದಿನವಾದ ಮಂಗಳವಾರ ಮಂಡ್ಯ ನಗರ ಹಾಗೂ ಇತರ ತಾಲೂಕು ಕೇಂದ್ರಗಳಲ್ಲಿ ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಖರೀದಿ ಬಿರುಸಾಗಿತ್ತು. ಮಾರುಕಟ್ಟೆಗಳಲ್ಲಿ ಜನಜಂಗುಳಿಯೇ ನೆರೆದಿತ್ತು. ಹಬ್ಬಕ್ಕೆ ಬೇಕಾದ ಎಡೆಸಾಮಾನು, ಬಟ್ಟೆ, ಹಣ್ಣು, ಹೂವು ಹಾಗೂ ಇತರ ವಸ್ತುಗಳ ಖರೀದಿ ಪ್ರಕ್ರಿಯೆ ಬಿರುಸಿನಿಂದ ನಡೆದಿತ್ತು.
ಹಿಂದಿನ ದಿನವೇ ಹಬ್ಬಕ್ಕೆ ಬೇಕಾದ ಬಹುತೇಕ ಅಗತ್ಯ ವಸ್ತುಗಳನ್ನು ಖರೀದಿಸುವುದರಿಂದ ನಗರದ ಪೇಟೆಬೀದಿ, ಮಾರುಕಟ್ಟೆ ರಸ್ತೆ, ಹಳೇ ಎಂ.ಸಿ.ರಸ್ತೆಯಲ್ಲಿ ಕಿಕ್ಕಿರಿದ ಜನಸಂದಣಿ ನೆರೆದಿತ್ತು. ಹೂವು ಮತ್ತು ಹಣ್ಣುಗಳ ವ್ಯಾಪಾರ ಬಿರುಸಿನಿಂದ ಸಾಗಿತ್ತು.ಪಿತೃಪಕ್ಷದಲ್ಲಿ ಪೂರ್ವಜರಿಗೆ ಎಡೆ ಇಡುವ ಸಂಪ್ರದಾಯ ಹಿಂದಿನಿಂದಲೂ ನಡೆದುಬಂದಿದೆ. ಮಾಂಸದೂಟದ ಜೊತೆಗೆ ಎಡೆ ಸಾಮಾನುಗಳನ್ನು ಇಟ್ಟು ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಈ ಸಾಮಾನುಗಳನ್ನು ಮಾರುವವರ ಸಂಖ್ಯೆ ಹೆಚ್ಚಾಗಿ ಕಂಡುಬಂದಿತು. ಅರಿಶಿನ-ಕುಂಕುಮ, ಧೂಪ, ಕರ್ಪೂರ, ಗಂಧದ ಪುಡಿ, ಎಲೆ-ಅಡಿಕೆ, ಬಾಚಣಿಗೆ, ವಿಭೂತಿ, ದಾರ, ಬಳೆ ಬಂಗಾರ ಮುಂತಾದ ವಸ್ತುಗಳನ್ನು ಒಳಗೊಂಡ ಎಡೆ ಸಾಮಾನುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಎಡೆ ಸಾಮಾನು ಒಂದು ಕಟ್ಟು 40 ರು. ಮತ್ತು 60 ರು. ದರದಲ್ಲಿ ಮಾರಾಟವಾಗುತ್ತಿತ್ತು. ಮಾರುಕಟ್ಟೆಯಲ್ಲಿ ಎಡೆ ಸಾಮಾನಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿತ್ತು.
ಮನೆ ಮಂದಿಗೆಲ್ಲಾ ಹೊಸ ಬಟ್ಟೆ ಖರೀದಿ ನಡೆಯುವುದು ಪಿತೃಪಕ್ಷ ಅಥವಾ ಗೌರಿ-ಗಣೇಶ ಹಬ್ಬದಲ್ಲಿ ಮಾತ್ರ. ಅದರಲ್ಲೂ ಪಿತೃಪಕ್ಷಕ್ಕೆ ಹೆಚ್ಚಿನ ಆದ್ಯತೆ. ಹಬ್ಬದ ಪ್ರಯುಕ್ತ ಬಟ್ಟೆ ಅಂಗಡಿಗಳಲ್ಲಿ ಹೊಸ ಬಟ್ಟೆ ಖರೀದಿಗೆ ಜನ ಮುಗಿಬಿದ್ದಿದ್ದರು. ಹಿರಿಯರಿಗೆ ಎಡೆ ಇಡಲು ಬೇಕಾದ ಬಿಳಿ ವಸ್ತ್ರ, ಟವೆಲ್, ಪಂಚೆ, ಸೀರೆಗಳ ಖರೀದಿಯಲ್ಲಿ ಜನರು ತೊಡಗಿದ್ದರಲ್ಲದೆ, ಹಬ್ಬದ ಸಲುವಾಗಿ ತಾವೂ ಸೇರಿದಂತೆ ಮಕ್ಕಳು ಹೊಸ ಬಟ್ಟೆ ಖರೀದಿಸಿದರು.ಶ್ರೀಮಸಣಮ್ಮ ದೇವಿಗೆ ಮಾಂಸವೇ ಪ್ರಸಾದ:
ಮಂಡ್ಯ ತಾಲೂಕು ಸಾತನೂರು ಗ್ರಾಮದಲ್ಲಿ ಶ್ರಿಮಸಣಮ್ಮನ ದೇವಾಲಯದಲ್ಲಿ ದೇವರಿಗೆ ಮಾಂಸದ ಪ್ರಸಾದವನ್ನು ನೈವೇದ್ಯಕ್ಕೆ ಇಡಲಾಗುತ್ತಿದೆ. ಇದು ಪಿತೃಪಕ್ಷ ಹಬ್ಬದಲ್ಲಿ ನಡೆಯುವ ವಿಶೇಷ ಆಚರಣೆ. ಹಬ್ಬದ ದಿನದಂದು ದೇವರಿಗೆ ಪೂಜೆ ಮಾಡಿ, ಸಾವಿರಾರು ಭಕ್ತರಿಗೆ ಪ್ರಸಾದದ ರೂಪದಲ್ಲಿ ಬೇಯಿಸಿದ ಮಾಂಸ ಮತ್ತು ಅನ್ನ ನೀಡಲಾಗುತ್ತದೆ.ಹಣ್ಣು-ತರಕಾರಿ ಬೆಲೆ ಹೆಚ್ಚಳಪಿತೃಪಕ್ಷ ಆಚರಣೆ ಹಿನ್ನೆಲೆಯಲ್ಲಿ ಹೂವು-ಹಣ್ಣು, ತರಕಾರಿ ಬೆಲೆ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿತ್ತು.
ಪ್ರತಿ ಕೆಜಿ ಹಣ್ಣುಗಳು (ಮಿಕ್ಸ್)-200 ರು., ಸೇಬು-180 ರಿಂದ 309 ರು., ಕಿತ್ತಳೆ-199 ರು., ಮ್ಯಾಂಡರೀನ್ ಕಿತ್ತಳೆ-259 ರು. ಮೂಸಂಬಿ-80 ರು., ದಾಳಿಂಬೆ-350 ರು., ಬಾಳೆಹಣ್ಣು-80 ರು., ಜಂಬೋಗೌಹಾ ಸೀಬೆಹಣ್ಣು-115 ರು.ಗೆ ಮಾರಾಟವಾಗುತ್ತಿತ್ತು.ತರಕಾರಿಗಳ ಪೈಕಿ ಪ್ರತಿ ಕೆಜಿ ಮಿಕ್ಸ್ ತರಕಾರಿ-50 ರು., ಟಮೋಟೋ -50 ರು., ಬೀನಿಸ್-60 ರಿಂದ 100 ರು., ಗೆಡ್ಡೆಕೋಸು-50 ರು., ಕ್ಯಾರೆಟ್-50 ರು., ಬಿಟ್‌ರೂಟ್-50 ರು., ಬದನೆಕಾಯಿ 20 ರು., ನೇರಳೆ ಬದನೆ-30 ರು., ಆಲೂಗಡ್ಡೆ-50 ರು., ದಪ್ಪ ಮೆಣಸಿನಕಾಯಿ-೪೦ ರು., ಸುವರ್ಣಗೆಡ್ಡೆ-೭೦ ರು., ಹಸಿಮೆಣಸಿನಕಾಯಿ 50 ರಿಂದ 80 ರು. (ಪ್ರತಿ ಕೆಜಿ), ಸವತೆಕಾಯಿ ೧ಕ್ಕೆ 10 ರು., ಕೊತ್ತಂಬರಿ ಸೊಪ್ಪು ಕಟ್ಟು 25 ರು., ಸಬ್ಸಿಗೆ ೨೦ ರು., ಮೆಂತ್ಯ ೨೦ ರು., ನಿಂಬೆಹಣ್ಣು 3 ಕ್ಕೆ 20 ರು.,
ಸೇವಂತಿಗೆ ಹೂವು ಪ್ರತಿ ಮಾರು 80-100 ರು. ಮಲ್ಲಿಗೆ-೧೦೦-೧೨೦ ರು., ಕನಕಾಂಬರ-80 ರಿಂದ 100 ರು., ಬಿಡಿ ಹೂವು ಸೇವಂತಿಗೆ ಮತ್ತು ಗುಲಾಬಿ ೧೦೦ ಗ್ರಾಂಗೆ ೨೦ ರಿಂದ ೩೦ ರು.ವರೆಗೆ ಮಾರಾಟವಾಗುತ್ತಿತ್ತು. ಹಾರಗಳು ೧೪೦ ರು.ನಿಂದ ೮೦೦ ರು.ವರೆಗೆ ಮಾರಾಟವಾಗುತ್ತಿತ್ತು.ಮಾಂಸ ಮಾರಾಟ ನಿಷೇಧವಿಲ್ಲಪ್ರತಿ ವರ್ಷ ಗಾಂಧೀ ಜಯಂತಿಯಂದು ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗುತ್ತಿತ್ತು. ಆದರೆ, ಪಿತೃಪಕ್ಷದ ದಿನವೇ ಗಾಂಧೀ ಜಯಂತಿ ಬಂದಿದೆ. ಬಾಡೂಟವೇ ಈ ಹಬ್ಬದ ಪ್ರಮುಖ ಭಕ್ಷ್ಯ. ಹೀಗಾಗಿ ಹಬ್ಬದ ನೆಪದಲ್ಲಿ ಎಲ್ಲೆಡೆ ಬಾಡೂಟದ ಘಮಲು ಸಾಮಾನ್ಯ. ಪ್ರತಿ ಮನೆಯಲ್ಲೂ ಅದ್ಧೂರಿಯಾಗಿ ಈ ಹಬ್ಬ ಆಚರಿಸಲಾಗುತ್ತದೆ. ಮನೆಗೊಂದರಂತೆ ಮೇಕೆ, ಕುರಿಯನ್ನು ಬಲಿಕೊಟ್ಟು ಅತಿಥಿಗಳು, ನೆಂಟರಿಷ್ಟರಿಗೆ ಬಾಡೂಟ ಬಡಿಸಲಾಗುತ್ತದೆ. ಗ್ರಾಮೀಣ ಜನರು ಹಬ್ಬ ಆಚರಣೆಗೆ ಭರ್ಜರಿ ತಯಾರಿ ನಡೆಸಿರುವುದರಿಂದ ಮಾಂಸ ಮಾರಾಟಕ್ಕೆ ನಿಷೇಧ ಹೇರಿದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಜೊತೆಗೆ ಹಬ್ಬವನ್ನು ಮುಂದೂಡುವ ಸಂಪ್ರದಾಯವೂ ಇಲ್ಲದಿರುವುದರಿಂದ ನಾಳೆಯೇ ಬಹುಪಾಲು ಜನರು ಹಬ್ಬ ಮಾಡಿ ಮುಗಿಸಲಿದ್ದಾರೆ.