ಜಿಲ್ಲಾದ್ಯಂತ ಸಂಕ್ರಾಂತಿ ಹಬ್ಬಕ್ಕೆ ಸಡಗರದ ಸಿದ್ಧತೆ

| Published : Jan 15 2024, 01:47 AM IST

ಸಾರಾಂಶ

ರಾಮನಗರ: ಮಳೆ ಕೊರತೆಯಿಂದಾಗಿ ನಿರೀಕ್ಷೆಯಂತೆ ಬೆಳೆ ರೈತರ ಕೈಸೇರಿಲ್ಲ. ವಸ್ತುಗಳ ಬೆಲೆ ಏರಿಕೆ ನಡುವೆಯೂ ಸುಗ್ಗಿ ಹಬ್ಬ ಸಂಕ್ರಾಂತಿಗೆ ಜಿಲ್ಲೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ.

ರಾಮನಗರ: ಮಳೆ ಕೊರತೆಯಿಂದಾಗಿ ನಿರೀಕ್ಷೆಯಂತೆ ಬೆಳೆ ರೈತರ ಕೈಸೇರಿಲ್ಲ. ವಸ್ತುಗಳ ಬೆಲೆ ಏರಿಕೆ ನಡುವೆಯೂ ಸುಗ್ಗಿ ಹಬ್ಬ ಸಂಕ್ರಾಂತಿಗೆ ಜಿಲ್ಲೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ.

ಸಂಕ್ರಾಂತಿ ರೈತ ಸಮುದಾಯಕ್ಕೆ ಸುಗ್ಗಿಯ ಹಬ್ಬವಾದರೆ, ಮಹಿಳೆಯರಿಗೆ ಎಳ್ಳು-ಬೆಲ್ಲ ಹಂಚಿ ಸಂತೋಷ ಪಡುವ ಹಬ್ಬವೂ ಹೌದು. ಹೀಗಾಗಿ ಎಡೆ ಸಂಭ್ರಮದ ವಾತಾವರಣ ನೆಲೆಸಿದೆ.

ಹಳ್ಳಿಗಳಲ್ಲಿ ರೈತನ ಕೃಷಿ ಸಂಗಾತಿ ರಾಸುಗಳನ್ನು ಸ್ವಚ್ಛಗೊಳಿಸಿ ಕೊಂಬಿಗೆ ಬಣ್ಣ ಹಚ್ಚುವುದು, ಕಿಚ್ಚು ಹಾಯಿಸುವ ದೃಶ್ಯ ಮಾಮೂಲಿ. ಅದೇ ರೀತಿ ಪಟ್ಟಣ ಪ್ರದೇಶದಲ್ಲಿ ಬಣ್ಣದ ರಂಗೋಲಿ ಬಿಟ್ಟು, ಎಳ್ಳು-ಬೆಲ್ಲ ಹಂಚಿಕೆ ಮಾಡುವ ಸಡಗರ. ಹಬ್ಬವನ್ನು ಸಂತಸದಿಂದ ಆಚರಿಸಲು ಭರದ ಸಿದ್ಧತೆಗಳು ನಡೆದಿವೆ.

ಹಬ್ಬದ ಮುನ್ನಾ ದಿನವಾದ ಭಾನುವಾರ ನಗರದ ಎಪಿಎಂಸಿ ಮಾರುಕಟ್ಟೆ, ಎಂ.ಜಿ.ರಸ್ತೆ , ಹಳೇ ಬಸ್ ನಿಲ್ದಾಣ ವೃತ್ತ ಜನರಿಂದ ತುಂಬಿಹೋಗಿತ್ತು ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ಬಂದ ಜನರು ಹಬ್ಬದ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದರು.

ರೈತರು ಜಾನುವಾರುಗಳಿಗೆ ಹೊಸ ಹಗ್ಗ, ಕರಿದಾರ, ಗೆಜ್ಜೆ, ಕೊರಳಿಗೆ ಕಟ್ಟುವ ಗಂಟೆ, ಗೊಂಡದ ಹಾರ, ಚಗರೆಯಿಂದ ಮಾಡಿದ ಹಗ್ಗ ಸೇರಿದಂತೆ ಅವುಗಳನ್ನು ಸಿಂಗರಿಸುವ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಗ್ರಾಮೀಣ ಮಹಿಳೆಯರು ಹಣ್ಣು, ತರಕಾರಿ, ಹೂವು, ಹಬ್ಬಕ್ಕೆ ಬೇಕಾದ ದಿನಸಿ ಸಾಮಗ್ರಿಗಳು, ಎಳ್ಳು, ಬೆಲ್ಲ, ಸಕ್ಕರೆ ಅಚ್ಚು, ಬೆಲ್ಲದ ಅಚ್ಚು, ಜೀರಿಗೆ ಕಾಳು, ಕಲ್ಯಾಣ ಸೇವೆ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಕೊಳ್ಳುವಲ್ಲಿ ಮಗ್ನರಾಗಿದ್ದರು.

ಜಾನುವಾರುಗಳ ವಸ್ತುಗಳೂ ಭರ್ಜರಿ ಮಾರಾಟ: ಜಾನುವಾರುಗಳಿಗೆ ಕಟ್ಟುವ ಹಗ್ಗ ಮೂಗುದಾರಕ್ಕೆ 100 ರಿಂದ 200 ರು., ಉದ್ದನೆಯ ಹಗ್ಗ ಕನಿಷ್ಠ 70 ರಿಂದ 200 ರು.ವರೆಗೆ ಮಾರಾಟವಾಗುತ್ತಿತ್ತು. ಹಸುವಿನ ಕೊರಳಿಗೆ ಕಟ್ಟುವ ಗಂಟೆ ಸಣ್ಣ ಗಾತ್ರದಿಂದ ದೊಡ್ಡ ಗಾತ್ರದವರೆಗೆ ಕನಿಷ್ಠ 50 ರಿಂದ 100 ರು.ವರೆಗೆ ಇತ್ತು. ಕೊರಳಿಗೆ ಕಟ್ಟುವ ವಿವಿಧ ಗಾತ್ರದ ಗಂಟೆಗಳನ್ನು ಒಳಗೊಂಡ ಹಗ್ಗ ಜೊತೆಗೆ 300 ರು.ನಿಂದ 400 ರು.ವರೆಗೆ ಮಾರಾಟ ಮಾಡುತ್ತಿದ್ದರು. ಹುರಿ - 80 ರು., ಕರಿದಾರ - 30 ರು., ಕತ್ತಿನ ಹುರಿ - 60 ರು., ದುಂಡೆ ಹುರಿ- 30 ರು., ಪ್ಲಾಸ್ಟಿಕ್ ಹಾರ 120 ರು., ಕೊಂಡೆ ಜೊತೆ 80 ರು., ಕುಚ್ಚು - 500 ರು., ಕೊಂಬಿಗೆ ಹಾಕುವ ಹನ್ಸ್ ಜೊತೆ 120 ರು.ಗೆ ಮಾರಾಟವಾಗುತ್ತಿತ್ತು.

ಹೂವು-ಹಣ್ಣಿನ ಬೆಲೆ ದುಬಾರಿ:

ಪ್ರಮುಖ ಸ್ಥಳಗಳಲ್ಲಿ ಎಳ್ಳು-ಬೆಲ್ಲ ವ್ಯಾಪಾರದ ಭರಾಟೆ ಜೋರಾಗಿತ್ತು. ಸಕ್ಕರೆ ಅಚ್ಚು, ಬೆಲ್ಲದ ಅಚ್ಚು, ಜೀರಿಗೆ ಕಾಳು, ಕಲ್ಯಾಣಸೇವೆಗೆ ಹೆಚ್ಚಿನ ಬೇಡಿಕೆ ಇತ್ತು. ರೆಡಿಮೇಡ್ ಎಳ್ಳು ಬೆಲ್ಲ ಕೆಜಿಗೆ 300 ರುಪಾಯಿಗೆ ಮಾರಾಟ ಆಗುತ್ತಿತ್ತು. ಒಂದು ಕಬ್ಬಿನ ಜೊಲ್ಲೆ 20 ರಿಂದ 50 ರು. ಬೆಲೆ ಇತ್ತು. ಕಡಲೆ ಕಾಯಿ ಸೇರಿಗೆ 25 ರುಪಾಯಿ ನಿಗದಿಯಾಗಿತ್ತು.

ಮಳೆ ಕೊರತೆ ಕಾರಣಕ್ಕೆ ಮಾರುಕಟ್ಟೆಯಲ್ಲಿ ಅವರೆಕಾಯಿ ದುಬಾರಿಯಾಗಿತ್ತು. ನಾಟಿ ಅವರೆಕಾಯಿ ಪ್ರತಿ ಕೆ.ಜಿಗೆ 70 ರಿಂದ90 ರು. ಇದ್ದರೆ, ಉಳಿದಿದ್ದು 40 ರಿಂದ 50 ರುಪಾಯಿ ಇತ್ತು. ತರಕಾರಿ ಬೆಲೆ ಮಾಮೂಲಿ ದಿನಗಳಂತಿತ್ತು. ಆದರೆ, ಹಬ್ಬದ ಕಾರಣ ಹೂವಿನ ಬೆಲೆ ಗಗನಮುಖಿಯಾಗಿತ್ತು. ವಿವಿಧ ಮಾದರಿಯ ಹೂವು 80 ರಿಂದ 100 ರು.ವರೆಗೆ ನಿಗದಿಯಾಗಿತ್ತು. ಸೇವಂತಿಗೆ ಪ್ರತಿ ಮಾರು 50 ರಿಂದ 60 ರು., ಕನಕಾಂಬರ 80 ರು., ಕಾಕಡ 60 ರು., ಮರಳೆ 180 ರು., ಚೆಂಡು ಹೂವು 50 ರು., ಬಟಾನ್ ರೋಸ್ 100 ಗ್ರಾಂಗೆ 40 ರು. ಇತ್ತು.

ಗ್ರಾಮೀಣ ಪ್ರದೇಶದ ಜನರು ಹಬ್ಬದ ಮುನ್ನಾ ದಿನವೇ ಜಾನುವಾರುಗಳ ಮೈ ತೊಳೆದು, ಕೊಂಬುಗಳನ್ನು ಸವರಿ ನುಣುಪಾಗಿಸಿ ವಿಶೇಷ ಮೆರುಗು ಬರುವಂತೆ ಮಾಡುವ ಕಾರ್ಯ ನಡೆಸಿದ್ದರು. ದನ-ಕರುಗಳನ್ನು ಸಿಂಗಾರಕ್ಕೆ ಸಿದ್ಧತೆ ನಡೆಸಿದ್ದರು.

ನಗರ ಪ್ರದೇಶದಲ್ಲಿ ಮಹಿಳೆಯರು ಎಳ್ಳು-ಬೆಲ್ಲ ತಯಾರಿಯಲ್ಲಿ ತೊಡಗಿಸಿಕೊಂಡು ಹಬ್ಬಕ್ಕೆ ಭರ್ಜರಿ ಸಿದ್ಧತೆ ನಡೆಸಿದ್ದರು. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಿರುವ ಮನೆಯಲ್ಲಿ ಹಬ್ಬದ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಹೆಣ್ಣು ಮಕ್ಕಳು ಹೊಸಬಟ್ಟೆಯನ್ನು ತೊಟ್ಟು, ಎಳ್ಳು-ಬೆಲ್ಲ ವಿನಿಮಯ ಮಾಡುವ ಸಂಭ್ರಮದಲ್ಲಿದ್ದರು.

14ಕೆಆರ್ ಎಂಎನ್ 8,9.ಜೆಪಿಜಿ

8.ಸಂಕ್ರಾಂತಿ ಹಬ್ಬದ ಪ್ರಯುಕ್ತ ಕಬ್ಬಿನ ಜೊಲ್ಲೆ ಖರೀದಿಯಲ್ಲಿ ಗ್ರಾಹಕರು ತೊಡಗಿರುವುದು.

9.ಜಾನುವಾರುಗಳನ್ನು ಸಿಂಗರಿಸುವ ವಸ್ತುಗಳ ಖರೀದಿಯಲ್ಲಿ ಜನರು ತೊಡಗಿರುವುದು.