ಸಾರಾಂಶ
ಕಡೂರು, ನನ್ನ ಕಡೂರು ವಿಧಾನಸಭಾ ಕ್ಷೇತ್ರದ ಗಡಿಭಾಗವಾದ ಅಂತರಘಟ್ಟೆಯಲ್ಲಿ ಸುಮಾರು ₹2 ಕೋಟಿ ವೆಚ್ಚದಲ್ಲಿ ರೈತ ಭವನ ನಿರ್ಮಾಣಕ್ಕಾಗಿ ಎಲ್ಲ ರೀತಿಯ ಸಿದ್ಧತೆ ನಡೆದಿದೆ ಎಂದು ಶಾಸಕ ಕೆ.ಎಸ್.ಆನಂದ್ ಪ್ರಕಟಿಸಿದರು.
ಕ್ಷೇತ್ರದ ಅಂತರಘಟ್ಟೆ ಗ್ರಾಮದಲ್ಲಿ ₹60 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಕನ್ನಡಪ್ರಭ ವಾರ್ತೆ, ಕಡೂರುನನ್ನ ಕಡೂರು ವಿಧಾನಸಭಾ ಕ್ಷೇತ್ರದ ಗಡಿಭಾಗವಾದ ಅಂತರಘಟ್ಟೆಯಲ್ಲಿ ಸುಮಾರು ₹2 ಕೋಟಿ ವೆಚ್ಚದಲ್ಲಿ ರೈತ ಭವನ ನಿರ್ಮಾಣಕ್ಕಾಗಿ ಎಲ್ಲ ರೀತಿಯ ಸಿದ್ಧತೆ ನಡೆದಿದೆ ಎಂದು ಶಾಸಕ ಕೆ.ಎಸ್.ಆನಂದ್ ಪ್ರಕಟಿಸಿದರು.
ಸೋಮವಾರ ಕ್ಷೇತ್ರದ ಅಂತರಘಟ್ಟೆ ಗ್ರಾಮದಲ್ಲಿ ₹60 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಪಕ್ಕದ ಅಜ್ಜಂಪುರ ಮತ್ತು ಹೊಸದುರ್ಗ ತಾಲೂಕುಗಳ ಸಂಪರ್ಕ ಕೊಂಡಿಯಂತಾಗಿರುವ ಅಂತರಘಟ್ಟೆ ಗ್ರಾಮ ಮುಖ್ಯ ಕೇಂದ್ರ ಬಿಂದುವಾಗಿದೆ. ಈ ಭಾಗದ ರೈತರ ಅನುಕೂಲಕ್ಕಾಗಿ ವಿಶ್ವೇಶ್ವರಯ್ಯ ಜಲ ನಿಗಮದ ಯೋಜನೆ ಯಡಿ ಈಗಾಗಲೇ ರೈತ ಭವನ ನಿರ್ಮಿಸಲು ಅಗತ್ಯ ಸಿದ್ಧತೆ ಮಾಡಲಾಗಿದೆ. ಶೀಘ್ರದಲ್ಲಿಯೇ ಭವನ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.ಗ್ಯಾರಂಟಿ ಯೋಜನೆಗಳ ಅನುಷ್ಠಾನದ ನಡುವೆಯೂ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಅನುದಾನದ ಕೊರತೆ ಯಾಗಿಲ್ಲ. ವಿರೋಧ ಪಕ್ಷಗಳ ಆರೋಪ ಸುಳ್ಳಾಗಿದೆ. ಈಗಾಗಲೇ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಅಂತರಘಟ್ಟೆ ಗ್ರಾ.ಪಂ ವ್ಯಾಪ್ತಿಯ ಹಡಗಲು ಗ್ರಾಮದ ಸಮುದಾಯ ಭವನ ನಿರ್ಮಾಣಕ್ಕೆ ₹15 ಲಕ್ಷ ಹೂಲಿಹಳ್ಳಿ ಮತ್ತು ಮಾಳೇಗುತ್ತೆ ಗ್ರಾಮದ ಸಮುದಾಯ ಭವನ ನಿರ್ಮಾಣಕ್ಕೆ ತಲಾ ₹10 ಲಕ್ಷ ಅಂತರಘಟ್ಟೆಯ ಶ್ರೀ ದುರ್ಗಾಂಬ ಸಮುದಾಯ ಭವನ ನಿರ್ಮಾಣಕ್ಕೆ ₹20 ಲಕ್ಷ ಧಾರ್ಮಿಕ ದತ್ತಿ ಇಲಾಖೆಯಡಿ ಅಂತರಘಟ್ಟೆ ಕಾಲೋನಿಯ ಶ್ರೀ ಹಟ್ಟಿ ಮಾರಿಯಮ್ಮ ದೇವಸ್ಥಾನದ ಅಭಿವೃದ್ದಿಗೆ ₹5 ಲಕ್ಷ ಅನುದಾನ ನೀಡುವ ಮೂಲಕ ಗಡಿಭಾಗದ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದೆ ಎಂದರು.ಅಂತರಘಟ್ಟೆ ಗ್ರಾಮದ ಕೆರೆಯ ಅಧುನೀಕರಣಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಉಳಿದಂತೆ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ಹಂತ ಹಂತವಾಗಿ ಮಾಡಲಾಗುತ್ತಿದ್ದು. ಅಂತರಘಟ್ಟೆ ಗ್ರಾಪಂ ನೂತನ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಲಾಗಿದೆ. ನರೇಗಾ ಹಾಗೂ ಸರಕಾರದ ಅನುದಾನ ಬಳಸಿ ಅತ್ಯಲ್ಪ ಅವಧಿಯಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಗೊಂಡು ಮಾದರಿ ಪಂಚಾಯಿತಿ ಕಟ್ಟಡವಾಗಿ ಸಾರ್ವಜನಿಕರ ಬಳಕೆಗೆ ಲೋಕಾರ್ಪಣೆಗೊಳ್ಳಬೇಕಿದೆ ಎಂದರು.ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಆಸಂದಿ ಕಲ್ಲೇಶ್ ಮಾತನಾಡಿ, ಹಿಂದುಳಿದ ವರ್ಗಗಳೇ ಹೆಚ್ಚಾಗಿರುವ ಅಂತರಘಟ್ಟೆ ಹಾಗು ಸುತ್ತಮುತ್ತಲಿನ ಗಡಿ ಭಾಗಗಳ ಅಭಿವೃದ್ಧಿಗೆ ನಮ್ಮ ಶಾಸಕ ಆನಂದ್ ರವರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬರ ಮನೆ ತಲುಪಿವೆ. ಶಾಸಕರು ನಮ್ಮ ಭಾಗದ ವಿವಿಧ ಗ್ರಾಮ ಗಳ ಸಮುದಾಯ ಭವನ,ಸಿ.ಸಿ.ರಸ್ತೆಗಳ ನಿರ್ಮಾಣಕ್ಕೆ ಸುಮಾರು ₹70 ಲಕ್ಷ ಅನುದಾನ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್, ಗ್ರಾ.ಪಂ ಅಧ್ಯಕ್ಷ ಕರಿಯಪ್ಪ,ಜನಪ್ರತಿನಿಧಿಗಳು ಮತ್ತು ಮುಖಂಡರಾದ ಸವಿತಾ ಪಾಟೀಲ್, ಅಂಜನಪ್ಪ, ಚಂದ್ರಪ್ಪ, ಅರೇಹಳ್ಳಿ ಶಿವು, ಸುರೇಶ್, ಪಾರ್ವತಮ್ಮ, ಅಶೋಕ್, ಕೆ.ಆರ್ ಐ ಡಿ ಎಲ್ ನಿಗಮದ ಎಇಇ ಅಶ್ವಿನಿ, ಗಿರೀಶ್, ಪಿಡಿಒ ಆನಂದ್ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಮತ್ತಿತರರು ಇದ್ದರು.28ಕೆಕೆಡಿಯು1.ಕಡೂರು ತಾಲೂಕಿನ ಅಂತರಘಟ್ಟೆ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಎಸ್.ಆನಂದ್ ಭೂಮಿಪೂಜೆ ನೆರವೇರಿಸಿದರು. ಕರಿಯಪ್ಪ, ಅಂಜನಪ್ಪ, ಸವಿತಪಾಟೀಲ್, ಆಸಂದಿ ಕಲ್ಲೇಶ್, ಗುಮ್ಮನಹಳ್ಳಿ ಅಶೋಕ್, ಅರೇಹಳ್ಳಿ ಶಿವು, ಪಿಡಿಒ ಆನಂದ್, ಗಿರೀಶ್ ಪಾರ್ವತಮ್ಮ, ಚಂದ್ರಪ್ಪ ಮತ್ತಿತರಿದ್ದರು.