ಸಾರಾಂಶ
ಕುಮಟಾದ ಡಾ. ಎ.ಬಿ. ಬಾಳಿಗಾ ಕಾಲೇಜಿನಲ್ಲಿ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಜೂ. ೪ರಂದು ನಡೆಯಲಿದ್ದು, ಸಕಲ ಸಿದ್ಧತೆಯನ್ನು ಜಿಲ್ಲಾ ಚುನಾವಣಾ ಆಯೋಗ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.
ಕಾರವಾರ: ಕುಮಟಾದ ಡಾ. ಎ.ಬಿ. ಬಾಳಿಗಾ ಕಾಲೇಜಿನಲ್ಲಿ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಜೂ. ೪ರಂದು ನಡೆಯಲಿದ್ದು, ಸಕಲ ಸಿದ್ಧತೆಯನ್ನು ಜಿಲ್ಲಾ ಚುನಾವಣಾ ಆಯೋಗ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ ೮ ಗಂಟೆಗೆ ಕೌಂಟಿಂಗ್ ಆಬ್ಸರ್ವರ್, ಆರ್‌ಒ, ಎಆರ್‌ಒ, ಅಭ್ಯರ್ಥಿ ಅಥವಾ ಏಜೆಂಟರ ಸಮ್ಮುಖದಲ್ಲಿ ಭದ್ರತಾ ಕೊಠಡಿ ತೆರೆದು ಮತ ಎಣಿಕಾ ಕೊಠಡಿಗೆ ಯಂತ್ರ ತೆಗೆದುಕೊಂಡು ಹೋಗಿ ಎಣಿಕೆ ಆರಂಭಿಸಲಾಗುತ್ತದೆ. ೮ ವಿಧಾನಸಭಾ ಕ್ಷೇತ್ರದಿಂದ ೧೯೭೯ ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್, ೨೦೪೪ ವಿವಿಪ್ಯಾಟ್ ಇದೆ. ಪ್ರತಿ ಕ್ಷೇತ್ರಕ್ಕೆ ಪ್ರತ್ಯೇಕ ತಲಾ ಒಂದರಂತೆ ಕೊಠಡಿ, ಪ್ರತಿ ಕೊಠಡಿಯಲ್ಲಿ ೧೪ ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಒಟ್ಟೂ ೧೧೨ ಟೆಬಲ್ ಆಗಲಿದ್ದು, ೧೧೨ ಕೌಂಟಿಂಗ್ ಸೂಪವೈಸರ್, ೧೧೨ ಕೌಂಟಿಂಗ್ ಅಸಿಸ್ಟೆಂಟ್, ೧೧೨ ಮೈಕ್ರೋ ಆಬ್ಸರ್ವರ್ ನಿಯೋಜಿಸಲಾಗಿದೆ. ಅಂಚೆ ಮತ ಎಣಿಕೆಗೆ ಪ್ರತ್ಯೇಕ ಕೊಠಡಿಯಿದ್ದು, ೨೦ ಟೆಬಲ್ ಇರುತ್ತದೆ. ಒಟ್ಟೂ ೫೬೨ ಅಧಿಕಾರಿಗಳು, ಸಿಬ್ಬಂದಿ ಈ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.ಖಾನಾಪುರ ೨೩, ಕಿತ್ತೂರು ೧೭, ಹಳಿಯಾಳ ೧೬, ಕಾರವಾರ ೧೯, ಕುಮಟಾ ೧೬, ಭಟ್ಕಳ ೧೮, ಶಿರಸಿ ೧೯, ಯಲ್ಲಾಪುರ ೧೭ ಸುತ್ತಿನಲ್ಲಿ ಮತ ಎಣಿಕೆ ನಡೆಯಲಿದೆ. ಅಭ್ಯರ್ಥಿಗಳ ಪರವಾಗಿ ಒಟ್ಟೂ ೩೧೮ ಕೌಂಟಿಂಗ್ ಏಜೆಂಟ್ ಅನುಮತಿ ಪಡೆದುಕೊಂಡಿದ್ದಾರೆ. ಮತ ಎಣಿಕೆಯ ದಿನ ಭದ್ರತೆಗಾಗಿ ೪ ಡಿಎಸ್‌ಪಿ, ೧೫ ಸಿಪಿಐ, ೪೦ ಪಿಎಸ್‌ಐ, ೫೪ ಎಎಸ್‌ಐ, ೧೦೪ ಎಚ್‌ಸಿ, ೧೭೦ ಪಿಸಿ, ೩೮ ಡಬ್ಲುಪಿಸಿ, ೫ ಡಿಎಆರ್, ೨ ಕೆಎಸ್‌ಆರ್‌ಪಿಯನ್ನು ಪೊಲೀಸ್ ಇಲಾಖೆಯಿಂದ ನಿಯೋಜನೆ ಮಾಡಲಾಗಿದೆ ಎಂದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕಾರವಾರ ಅರ್ಬನ್ ಬ್ಯಾಂಕಿನ ವ್ಯವಸ್ಥಾಪಕರಿಗೆ ಪ್ರಕರಣದ ಸಮಗ್ರ ವರದಿ ನೀಡುವಂತೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ಗೋಕರ್ಣ ದೇವಸ್ಥಾನ ದುರಸ್ತಿ ಬಗ್ಗೆ ಪ್ರಶ್ನಿಸಿದಾಗ, ಹೆಬ್ಬಾಗಿಲು ಬಳಿ ಮಾತ್ರ ದುರಸ್ತಿಗೆ ತೆಗೆದುಕೊಳ್ಳಲಾಗಿದೆ. ಬೇರೆ ಯಾವುದೇ ದುರಸ್ತಿ ಕೆಲಸ ಮಾಡುವುದಿಲ್ಲ ಎಂದರು. ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಇದ್ದರು.