ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಿರ್ಮಿಸಿರುವ ಶ್ರೀಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆ ಮಾಡಲು ಪ್ರಧಾನಿ ಮೋದಿ ಅವರು ಏ.15 ರಂದು ಶ್ರೀಮಠಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲು ಶ್ರೀಕ್ಷೇತ್ರದಲ್ಲಿ ಸಕಲ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಿರ್ಮಿಸಿರುವ ಶ್ರೀಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆ ಮಾಡಲು ಪ್ರಧಾನಿ ಮೋದಿ ಅವರು ಏ.15 ರಂದು ಶ್ರೀಮಠಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲು ಶ್ರೀಕ್ಷೇತ್ರದಲ್ಲಿ ಸಕಲ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.ನರೇಂದ್ರ ಮೋದಿ ಅವರು ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿಯಾಗಿದ್ದಾರೆ. ಹಾಗಾಗಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀ, ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀ ಹಾಗೂ ಪ್ರಧಾನಿ ಮೋದಿ ಅವರ ಭಾವಚಿತ್ರವುಳ್ಳ ಬೃಹತ್ ಕಟೌಟ್‌ಗಳು, ಓಂ ಚಿತ್ರವುಳ್ಳ ಕೇಸರಿ ಬಾವುಟಗಳು ಕ್ಷೇತ್ರದ ತುಂಬೆಲ್ಲಾ ರಾರಾಜಿಸುತ್ತಿವೆ. ಶ್ರೀಮಠವನ್ನು ವಿದ್ಯುತ್ ದೀಪಾಲಂಕಾರದಿಂದ ವಿಶೇಷ ರೀತಿಯಲ್ಲಿ ಸಿಂಗರಿಸಲಾಗಿದೆ.
ಮೋದಿ ಅವರು ಸಂಚರಿಸುವ ಮಾರ್ಗದಲ್ಲಿ ಬೃಹತ್ತಾದ ಹತ್ತಾರು ಮಹಾದ್ವಾರ ನಿರ್ಮಿಸಲಾಗಿದೆ. ಸ್ವಚ್ಛತಾ ಕಾರ್ಯ, ಹೆಲಿಪ್ಯಾಡ್‌ನಿಂದ ಶ್ರೀಮಠಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆವರೆಗೆ ಡಾಂಬರೀಕರಣ, ರಸ್ತೆ ಬದಿಯಲ್ಲಿ ಗಿಡ ನೆಡುವ ಕೆಲಸಗಳು ಭರದಿಂದ ನಡೆಯುತ್ತಿವೆ. ಒಟ್ಟಾರೆ ಶ್ರೀಮಠವನ್ನು ವಿಶೇಷ ರೀತಿಯಲ್ಲಿ ಅಲಂಕರಿಸಲಾಗುತ್ತಿದೆ.ಬೃಹತ್ ವೇದಿಕೆ:
ಶ್ರೀಗುರು ಭೈರವೈಕ್ಯ ಮಂದಿರದ ಉದ್ಘಾಟನೆ ಬಳಿಕ ಕ್ಷೇತ್ರದ ಬಿಜಿಎಸ್ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಭಕ್ತ ಸಂಗಮ ವೇದಿಕೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಪಾಲ್ಗೊಂಡು ಭಕ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಹಾಗಾಗಿ 500 ಅಡಿ ಅಗಲ 600 ಅಡಿ ಉದ್ದ ವಿಸ್ತೀರ್ಣದ ಬೃಹತ್ ಪೆಂಡಾಲ್‌ನಲ್ಲಿ 40 ಅಡಿ ಉದ್ದ 80 ಅಡಿ ಅಗಲದ ಸುಸಜ್ಜಿತ ವೇದಿಕೆ ನಿರ್ಮಾಣಗೊಳ್ಳುತ್ತಿದೆ. ಭಕ್ತರು ಕೂರಲು 70 ಸಾವಿರಕ್ಕೂ ಹೆಚ್ಚು ಕುರ್ಚಿಗಳನ್ನು ಪೆಂಡಾಲ್‌ನಲ್ಲಿ ಹಾಕಲಾಗುತ್ತಿದೆ.ತಪಾಸಣೆಗೆ 10 ತಂಡ:
ಪ್ರಧಾನಿ ಮೋದಿ ಅವರ ಭದ್ರತಾ ಸುರಕ್ಷತೆ ದೃಷ್ಟಿಯಿಂದ ಶ್ವಾನದಳ, ಬಾಂಬ್ ಪತ್ತೆ ಮತ್ತು ನಿಷ್ಕ್ರೀಯ ದಳದ ಸಿಬ್ಬಂದಿ ಶ್ರೀಕ್ಷೇತ್ರದಾದ್ಯಂತ ಇಂಚಿಂಚೂ ತಪಾಸಣೆ ನಡೆಸುತ್ತಿದ್ದಾರೆ. ಇದಕ್ಕಾಗಿ 80 ಮಂದಿ ಸಿಬ್ಬಂದಿ ಒನ್ನೊಳಗೊಂಡ ಮಂಡ್ಯ, ಮೈಸೂರು, ಚಾಮರಾಜನಗರ, ಮಂಗಳೂರು, ಉಡುಪಿ, ದಕ್ಷಿಣ ಕನ್ನಡ, ಹಾಸನ, ಕೊಡಗು, ಶಿವಮೊಗ್ಗ, ಧಾರವಾಡ, ರಾಯಚೂರು ಜಿಲ್ಲೆಗಳ 10 ತಂಡವನ್ನು ನಿಯೋಜಿಸಲಾಗಿದೆ.ಮೂರು ಹೆಲಿಪ್ಯಾಡ್ ನಿರ್ಮಾಣ:
ಪ್ರಧಾನಿ ಮೋದಿ ಅವರು ಬಂದಿಳಿಯಲು ಆದಿಚುಂಚನಗಿರಿ ಕ್ಷೇತ್ರದ ಸಂಸ್ಕೃತ ಕಾಲೇಜಿನ ತಪೋವನದ ಆವರಣದಲ್ಲಿ ಮೂರು ಹೆಲಿಪ್ಯಾಡ್‌ಗಳನ್ನು ನಿರ್ಮಿಸಿ ಮೂರು ಅಗ್ನಿಶಾಮಕ ಮತ್ತು ಆ್ಯಂಬುಲೆನ್ಸ್ ವಾಹನಗಳನ್ನು ಸ್ಥಳದಲ್ಲಿರಿಸಲಾಗಿದೆ.ಮೋದಿ ಅವರು ಪ್ರಯಾಣಿಸುವ ತಲಾ 15 ಟನ್ ಸಾಮರ್ಥ್ಯದ ಮೂರು ವಿಶೇಷ ವಿಮಾನಗಳ ಸಂಚಾರ, ಲ್ಯಾಂಡಿಂಗ್ ಹಾಗೂ ಟೇಕ್‌ಆಫ್ ವೇಳೆ ಯಾವುದೇ ಸಣ್ಣ ಪುಟ್ಟ ಅಡಚಣೆಯಾಗದಂತೆ ಜಿಲ್ಲಾಡಳಿತ ಹಾಗೂ ವಿಶೇಷ ರಕ್ಷಣಾ ತಂಡ (ಎಸ್‌ಪಿಜಿ) ಕಟ್ಟೆಚ್ಚರ ವಹಿಸಿದೆ.
ಪರೀಕ್ಷೆ ನಡೆಸಿದ ಹೆಲಿಕಾಪ್ಟರ್:ಮೋದಿ ಶ್ರೀಮಠಕ್ಕೆ ಭೇಟಿ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಕ್ಷೇತ್ರದ ತಪೋವನದಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್‌ಗೆ ಬಂದಿಳಿದ ವಿಶೇಷ ಹೆಲಿಕಾಪ್ಟರ್ ಪರೀಕ್ಷೆ ನಡೆಸಿತು. ಮೂರು ವಿಶೇಷ ಹೆಲಿಕಾಪ್ಟರ್‌ಗಳು ತಲಾ 15 ಟನ್ ಸಾಮರ್ಥ್ಯ ಹೊಂದಿರುವುದರಿಂದ ಸುರಕ್ಷತೆ ದೃಷ್ಟಿಯಿಂದ ಮೂರು ಹೆಲಿಪ್ಯಾಡ್ ಸುತ್ತಲೂ ಭದ್ರವಾದ ಬ್ಯಾರಿಕೇಡ್ ನಿರ್ಮಿಸುವಂತೆ ಎಸ್‌ಪಿಜಿ ತಂಡದ ಅಧಿಕಾರಿಗಳು ಸೂಚಿಸಿದರು.
ಅಂಗಡಿ ಮುಂಗಟ್ಟುಗಳು ಬಂದ್:ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಶ್ರೀಮಠದ ಆವರಣ ಹಾಗೂ ಮಠದ ಮುಖ್ಯದ್ವಾರದ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ಬದಿಯ ಎಲ್ಲಾ ಬಗೆಯ ಹೋಟೆಲ್, ಅಂಗಡಿ ಮುಂಗಟ್ಟುಗಳನ್ನು ಸೋಮವಾರದಿಂದಲೇ ಮುಚ್ಚಿಸಲಾಗಿತ್ತು.
ಅಧಿಕಾರಿಗಳು ಕ್ಷೇತ್ರದಲ್ಲೇ ಮೊಕ್ಕಾಂ:ಜಿಲ್ಲಾಧಿಕಾರಿ ಡಾ.ಕುಮಾರ, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಜಿ.ಆದರ್ಶ ಸೇರಿದಂತೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿ ಅಗತ್ಯ ಕ್ರಮ ವಹಿಸಿದ್ದಾರೆ.ಎಸ್‌ಪಿಜಿ ಹಿಡಿತದಲ್ಲಿ ಶ್ರೀಮಠನಾಗಮಂಗಲ:
ಪ್ರಧಾನಿ ನರೇಂದ್ರ ಮೋದಿ ಅವರು ಆದಿಚುಂಚನಗಿರಿ ಮಠಕ್ಕೆ ಬಂದು ಹೋಗುವವರೆಗೆ ಶ್ರೀಮಠದ ಭದ್ರತೆ ಎಸ್‌ಪಿಜಿ ತಂಡದ ಹಿಡಿತದಲ್ಲಿರುತ್ತದೆ ಎನ್ನಲಾಗಿದ್ದು, ಇದಕ್ಕಾಗಿ ಐಜಿ, ಡಿಐಜಿ, ಎಸ್‌ಪಿ ದರ್ಜೆಯ ವಿಶೇಷ ರಕ್ಷಣಾ ತಂಡದ (ಎಸ್‌ಪಿಜಿ) ಅಧಿಕಾರಿಗಳನ್ನೊಳಗೊಂಡ ತಂಡವು ಭದ್ರತೆಯ ಉಸ್ತುವಾರಿ ವಹಿಸಲಿದೆ ಎಂದು ಹೇಳಲಾಗಿದೆ.ಬಿಗಿ ಪೊಲೀಸ್ ಭದ್ರತೆ:ಏ.15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಮಠಕ್ಕೆ ಭೇಟಿ ನೀಡುವ ಹಿನ್ನಲೆಯಲ್ಲಿ ಆದಿಚುಂಚನಗಿರಿ ಕ್ಷೇತ್ರದಲ್ಲಿ ಭದ್ರತೆಗಾಗಿ 5 ಮಂದಿ ಎಸ್‌ಪಿ, 7 ಮಂದಿ ಎಎಸ್‌ಪಿ, 18 ಡಿವೈಎಸ್‌ಪಿ, 55 ಇನ್ಸ್‌ಪೆಕ್ಟರ್, 130 ಮಂದಿ ಪಿಎಸ್‌ಐ ಸೇರಿದಂತೆ 1500 ಕ್ಕೂ ಹೆಚ್ಚು ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿಗಳನ್ನೊಳಗೊಂಡ ಬಿಗಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಇದರ ಜೊತೆಗೆ 8ಕೆಎಸ್‌ಆರ್‌ಪಿ, 9 ಡಿಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.