ಸಾರಾಂಶ
ಗದಗ: ಸದೃಢ ಹಾಗೂ ಮಾದರಿ ಸಮಾಜ ನಿರ್ಮಾಣವಾಗಬೇಕಾದರೆ, ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ನೀಡುವುದು ಬಹಳ ಮುಖ್ಯ. ಸಂಸ್ಕಾರಭರಿತ ಶಿಕ್ಷಣದಿಂದ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಉಡುಪಿಯ ಕಡಪಾಡಿ ಪಡುಕುತ್ಯಾರು ಸರಸ್ವತಿ ಪೀಠದ ಜ. ಅನಂತ ಶ್ರೀವಿಭೂಶಿತ ಕಾಳಹಸ್ತೇಂದ್ರ ಸ್ವಾಮೀಜಿ ಹೇಳಿದರು.
ಅವರು ನಗರದ ವಿಜಯ ನಗರ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣವಾದ ಶ್ರೀ ವಿಶ್ವಕರ್ಮ ಭವನ ಉದ್ಘಾಟನೆ, 6ನೇ ವರ್ಷದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ವಿಶ್ವಕರ್ಮ ನೌಕರಶ್ರೀ, ವಿಶ್ವಕರ್ಮ ಸಾಧಕಶ್ರೀ ಪ್ರಶಸ್ತಿ ಪ್ರದಾನ ಹಾಗೂ ಸಂಘದ ನಿವೃತ್ತ ಸದಸ್ಯರಿಗೆ ಸನ್ಮಾನ, ಕಟ್ಟಡಕ್ಕೆ ದೇಣಿಗೆ ನೀಡಿದ ದಾನಿಗಳ ಭಾವಚಿತ್ರ ಅನಾವರಣ ಸಮಾರಂಭದ ಸಾನ್ನಿಧ್ಯವಹಿಸಿ, ಆಶೀರ್ವಚನ ನೀಡಿದರು.ವಿಶ್ವಕರ್ಮರು ಸಮಾಜ ಸಂಘಟನೆಯಲ್ಲಿ ಎಲ್ಲರೂ ಒಮ್ಮನಸ್ಸಿನಿಂದ ಒಳಗೊಂಡಾಗ ಮಾತ್ರ ಸಮಾಜ ಎಲ್ಲ ಸ್ತರದಿಂದ ಬಲಾಢ್ಯವಾಗಲು ಸಾಧ್ಯ. ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಸಂಘ ರಾಜ್ಯದಲ್ಲಿಯೇ ಮಾದರಿಯಾಗಿ, ರಾಜಗೋಪಾಲ ಕಡ್ಲಿಕೊಪ್ಪ ಸಾರಥ್ಯದಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತಿರುವುದು ಸಂತೋಷದ ಸಂಗತಿ ಎಂದರು.
ಎಪಿಎಂಸಿ ಸದಸ್ಯ ಅಪ್ಪಣ್ಣ ಇನಾಮತಿ ಮಾತನಾಡಿ, ವಿಶ್ವಕರ್ಮರ ಕೌಶಲ್ಯ ಮಾದರಿಯದು. ನವ ತಲೆಮಾರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ತಮ್ಮ ಉದ್ಯೋಗದಲ್ಲಿ ಪ್ರಗತಿ ಹೊಂದಬೇಕು. ಜಿಲ್ಲಾ ವಿಶ್ವಕರ್ಮ ನೌಕರರ ಸಂಘ ಮತ್ತೊಬ್ಬರು ಅನುಕರಣೆ ಮಾಡುವ ರೀತಿಯಲ್ಲಿ ಸಮಾಜ ಸಂಘಟಿಸುವುದರೊಂದಿಗೆ ಅಭಿವೃದ್ಧಿ ಕಾರ್ಯ ಸಾಕಾರಗೊಳಿಸುವಲ್ಲಿ ರಾಜಗೋಪಾಲ ಕಡ್ಲಿಕೊಪ್ಪ ಪಾತ್ರ ಹಿರಿದು ಎಂದರು.ಅಧ್ಯಕ್ಷತೆ ವಹಿಸಿದ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಡಿ. ಕಡ್ಲಿಕೊಪ್ಪ ಮಾತನಾಡಿ, ನಮ್ಮೆಲ್ಲರ ಕನಸಿನ ವಿಶ್ವಕರ್ಮ ಭವನ ಲೋಕಾರ್ಪಣೆಗೊಂಡಿದೆ. ಇನ್ನು ಪಂಚ ಕಸಬುಗಳ ತರಬೇತಿ ಕೇಂದ್ರ ಹಾಗೂ ವಿದ್ಯಾರ್ಥಿ ವಸತಿ ನಿಲಯಗಳು ನಿರ್ಮಾಣವಾಗಬೇಕು. ಹೀಗಾಗಿ ಸಮಾಜ ಬಾಂಧವರು ತಮ್ಮ ತನು, ಮನ, ಧನದ ಸಹಕಾರ ನೀಡಬೇಕು ಎಂದರು.
ರಾಯಚೂರು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಡಿ. ಬಡಿಗೇರ, ಶಿರಸಂಗಿ ವಿಶ್ವಕರ್ಮ ವಿಕಾಸ ಸಂಸ್ಥೆಯ ಅಧ್ಯಕ್ಷ ಪಿ.ಬಿ. ಬಡಿಗೇರ, ಬೀದರ ಜಿಲ್ಲಾ ವಿಶ್ವಕರ್ಮ ಸಮಾಜ ಪ್ರಧಾನ ಕಾರ್ಯದರ್ಶಿ ಶಿವಾನಂದ ವಿಶ್ವಕರ್ಮ, ನಿವೃತ್ತ ಪೊಲೀಸ್ ಅಧೀಕ್ಷಕ ಎ.ಆರ್. ಬಡಿಗೇರ ಮಾತನಾಡಿದರು.ಈ ವೇಳೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘದ ನಿವೃತ್ತ ಸದಸ್ಯರ ಸನ್ಮಾನ, ವಿಶ್ವಕರ್ಮ ನೌಕರಶ್ರೀ, ವಿಶ್ವಕರ್ಮ ಸಾಧಕಶ್ರೀ ಪ್ರಶಸ್ತಿ ಪ್ರದಾನ ಮತ್ತು ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಅಭಿನಂದಿಸಲಾಯಿತು.
ಶಿರಹಟ್ಟಿ ತಹಸೀಲ್ದಾರ್ ಅನಿಲ ಬಡಿಗೇರ, ಲಕ್ಷ್ಮೇಶ್ವರ ತಹಸೀಲ್ದಾರ್ ವಾಸುದೇವ ಎ. ಸ್ವಾಮಿ, ಉದ್ಯಮಿಗಳಾದ ನಿರಂಜನ ಎನ್. ಬಡಿಗೇರ, ಸಂಘದ ಗೌರವ ಅಧ್ಯಕ್ಷ ಎ.ಎನ್. ಬಡಿಗೇರ, ವಿಶ್ವಕರ್ಮ ಮಹಾಸಭಾ ಧಾರವಾಡ ಜಿಲ್ಲಾ ಅಧ್ಯಕ್ಷ ಕಾಳಪ್ಪ ಬಡಿಗೇರ, ನಿರ್ದೇಶಕರಾದ ಬಿ.ಎಂ. ಬಡಿಗೇರ, ಕೆ.ಎಸ್. ಬಡಿಗೇರ, ಮಹಿಳಾ ಮಂಡಳ ಅಧ್ಯಕ್ಷೆ ಶಿವಲೀಲಾ ಬಡಿಗೇರ, ಮಹಿಳಾ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷೆ ರಿಂದಮ್ಮ ವಡ್ಡಟ್ಟಿ, ಬಿ.ಎಂ. ಬಡಿಗೇರ ಇದ್ದರು. ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮೌನೇಶ ಸಿ. ಬಡಿಗೇರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕಮ್ಮಾರ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಬಿ.ಎಂ. ಬಡಿಗೇರ ವಂದಿಸಿದರು.