ಅ.ಭಾ. ಮಹಿಳಾ ಕ್ರೀಡಾಕೂಟ: ಮಂಗಳೂರು ವಿ.ವಿ. ಚಾಂಪಿಯನ್‌

| Published : Jan 01 2024, 01:15 AM IST

ಸಾರಾಂಶ

ಒಡಿಶಾಲದಲ್ಲಿ ನಡೆದ ಅಖಿಲ ಭಾರತ ಅಂತರ ವಿವಿ ಮಹಿಳಾ ಕ್ರೀಡಾಕೂಟದಲ್ಲಿ ಆಳ್ವಾಸ್‌ ವಿದ್ಯಾರ್ಥಿಗಳಿದ್ದ ಮಂಗಳೂರು ವಿವಿ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಒಡಿಶಾದ ಭುವನೇಶ್ವರದಲ್ಲಿ ಶುಕ್ರವಾರ ಮುಕ್ತಾಯಗೊಂಡ ೮೩ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಮಹಿಳಾ ಕ್ರೀಡಾಕೂಟದಲ್ಲಿ ೫೬ ಅಂಕಗಳನ್ನು ಪಡೆದ ಮಂಗಳೂರು ವಿಶ್ವವಿದ್ಯಾಲಯವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಪದಕ ಪಡೆದ ಎಲ್ಲ ಕ್ರೀಡಾಪಟುಗಳು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು.೨ ಚಿನ್ನ, ಒಂದು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳೊಂದಿಗೆ ಒಟ್ಟು ಏಳು ಪದಕಗಳನ್ನು ಆಳ್ವಾಸ್ ಕಾಲೇಜಿನ ಆರು ವಿದ್ಯಾರ್ಥಿನಿಯರು ಪಡೆದಿದ್ದಾರೆ. ಈ ಪೈಕಿ ಅಂಜಲಿ ಸಿ. ಎರಡು ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಭವಾನಿ ಯಾದವ್, ಉದ್ದ ಜಿಗಿತದಲ್ಲಿ ಚಿನ್ನ, ತನುಶ್ರೀ ಹೆಪ್ಟತ್ಲಾನ್‌ನಲ್ಲಿ ಚಿನ್ನ, ಅಂಜಲಿ ಸಿ. ೧೦೦ ಮೀಟರ್ಸ್ ಹರ್ಡಲ್ಸ್‌ನಲ್ಲಿ ಬೆಳ್ಳಿ, ಟ್ರಿಪಲ್ ಜಂಪ್‌ನಲ್ಲಿ ಕಂಚು, ಅಂಜಲಿ ಶಾಟ್‌ಪುಟ್‌ನಲ್ಲಿ ಕಂಚು, ಶ್ರೀದೇವಿಕಾ ಉದ್ದಜಿಗಿತದಲ್ಲಿ ಕಂಚು, ಶಿವಾನಿ ಗಾಯಕವಾಡ ೪೦೦ ಮೀಟರ್‌ ಓಟದಲ್ಲಿ ಕಂಚು, ಸಾಕ್ಷಿ ಶರ್ಮಾ ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯವನ್ನು ಒಟ್ಟು ೩೩ ಕ್ರೀಡಾಪಟುಗಳು ಪ್ರತಿನಿಧಿಸಿದ್ದು, ಈ ಪೈಕಿ ೨೬ ಆಳ್ವಾಸ್ ವಿದ್ಯಾರ್ಥಿನಿಯರು. ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಆಳ್ವಾಸ್‌ನ ಎಲ್ಲ ಕ್ರೀಡಾಪಟುಗಳು ಆಳ್ವಾಸ್ ಕ್ರೀಡಾ ದತ್ತು ಯೋಜನೆಯಡಿ ಶಿಕ್ಷಣ ಪಡೆಯುತ್ತಿದ್ದು, ಚಿನ್ನದ ಪದಕ ಪಡೆದ ಕ್ರೀಡಾಪಟುಗಳಿಗೆ ೧೦೦೦೦ ರು., ಬೆಳ್ಳಿಯ ಪದಕ ಪಡೆದವರಿಗೆ ೭೫೦೦ ರು. ಹಾಗೂ ಕಂಚಿನ ಪದಕ ಪಡೆದವರಿಗೆ ೫೦೦೦ ರು. ನಗದು ಬಹುಮಾನವನ್ನು ಸಂಸ್ಥೆಯ ವತಿಯಿಂದ ನೀಡುವುದಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಘೋಷಿಸಿದರು.