ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಸರ್ಕಾರ ಜನರ ಮನೆ ಬಾಗಿಲಿಗೆ ಹೋಗಿ ಜನರ ಸಮಸ್ಯೆ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು, ಜನರ ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸಲು ಆಗುವುದಿಲ್ಲ. ಆದರೆ ಯಾವುದನ್ನು ಬಗೆಹರಿಸಲು ಸಾಧ್ಯತೆ ಇದೆಯೋ ಅದನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.ಅವರು ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಜನಸ್ಪಂದನ ಸಭೆಯಲ್ಲಿ ಮಾತನಾಡಿ, ಜನರ ನೂರಾರು ಸಮಸ್ಯೆಗಳು ಇರುತ್ತವೆ. ಅದರಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಸರಿ ಮಾಡುವ ಕೆಲಸ ಆಗಬೇಕು. ಅತಿ ಹೆಚ್ಚು ದುರಸ್ತಿ ಕಾರ್ಯ ಮತ್ತು ತಾತ್ಕಾಲಿಕ ಪೋಡಿ ಕಾರ್ಯವು ಹೆಚ್ಚಾಗಿ ಕಂಡುಬಂದಿದೆ. ಕಳೆದ ಐದು ವರ್ಷಗಳ ಹಿಂದೆ ಸುಮಾರು ೩೦೦ರಷ್ಟು ಮಾತ್ರ ಅರ್ಜಿ ದುರಸ್ತಿ ಕಾರ್ಯಗಳು ನಡೆದಿದ್ದವು, ಆದರೆ ಇಂದು ಸುಮಾರು ೨೦,೦೦೦ ಅರ್ಜಿ ದುರಸ್ತಿ ಕಾರ್ಯಗಳು ಈಗಾಗಲೇ ನಡೆದಿದೆ. ಇನ್ನೂ ಸುಮಾರು ೨೫ ಸಾವಿರಕ್ಕೂ ಅಧಿಕ ದುರಸ್ತಿ ಕಾರ್ಯಗಳು ನಡೆಯಬೇಕಾಗಿದೆ. ಸದ್ಯದಲ್ಲೇ ಈ ದುರಸ್ತಿ ಕಾರ್ಯಗಳನ್ನು ನೆರವೇರಿಸಲಾಗುವುದು. ಅದರಲ್ಲೂ ಅತಿ ಹೆಚ್ಚು ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಅರ್ಜಿಗಳು ಬಂದಿದ್ದು, ಇವುಗಳನ್ನು ಸದ್ಯದಲ್ಲೇ ಕಾರ್ಯರೂಪಕ್ಕೆ ತರಲು ತೊಡಗಲಾಗುವುದು. ಕಂದಾಯ ಇಲಾಖೆಗೆ ಸಂಬಂಧಪಟ್ಟ ಎಲ್ಲ ದಾಖಲಾತಿಗಳು ಇದ್ದಲ್ಲಿ ಅಂತಹವರ ಅರ್ಜಿಯನ್ನು ಸ್ಥಳದಲ್ಲೇ ಪರಿಹರಿಸಲಾಗುವುದು. ಇನ್ನು ಕೆಲವು ಅರ್ಜಿಗಳನ್ನು ವಜಾಗೊಳಿಸಲಾಗುವುದು. ಸಾರ್ವಜನಿಕರಿಂದ ಪಡೆದ ಎಲ್ಲಾ ಅರ್ಜಿಗಳನ್ನು ಕೂಡ ಪರಿಹಾರ ಕಂಡುಕೊಳ್ಳುವುದು ಎಂದರೆ ಅದು ತಪ್ಪು ಕಲ್ಪನೆ. ಏಕೆಂದರೆ ಕೆಲವು ಕಾನೂನುಬಾಹಿರವಾಗಿ ಅರ್ಜಿಗಳು ಕೂಡ ಬಂದಿವೆ. ಅವುಗಳಿಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸಲು ಮುಂದಾಗುತ್ತೇವೆ ಎಂದರು.
ದೆಹಲಿ ಬಾಂಬ್ ಸ್ಫೋಟ ಪ್ರಕರಣ ದುರದೃಷ್ಟಕರ ಘಟನೆಯಲ್ಲಿ ಮಡಿದವರಿಗೆ ಸಂತಾಪ ವ್ಯಕ್ತಪಡಿಸುವೆ. ತನಿಖೆಯಿಂದ ಕಾರಣ ಏನು ಎಂಬುದು ಗೊತ್ತಾಗಬೇಕು, ನ್ಯಾಯ ಸಮ್ಮತ ಪರಿಹಾರ ಆಗಬೇಕು, ಈ ದಿಕ್ಕಿನಲ್ಲಿ ತನಿಖೆ ನಡೆಯುತ್ತಿದ್ದು, ಆದಷ್ಟು ಬೇಗ ಸತ್ಯ ಹೊರಬರಲಿ. ಹೆಚ್ಚು ವಿಚಾರಗಳು ನನಗೆ ತಿಳಿದಿಲ್ಲ. ನಾನು ನಿನ್ನೆಯಿಂದ ಟ್ರಾವಲ್ ಮಾಡ್ತಾ ಇದ್ದೀನಿ. ನಾನು ನ್ಯೂಸ್ ಪೇಪರ್, ಟಿವಿ ನೋಡೇ ಇಲ್ಲ. ಇಂತಹ ಪ್ರಕರಣ ಆಗಬಾರದಿತ್ತು, ಕೇಂದ್ರ ಸರ್ಕಾರ ಆದಷ್ಟು ಬೇಗ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಅಗತ್ಯ ಕಾನೂನು ಕ್ರಮಕೈಗೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ ಎಂದರು.ಸುಮಾರು ೧೧೦೦ಕ್ಕೂ ಹೆಚ್ಚು ಜನ ಅರ್ಜಿ ಸಲ್ಲಿಸಿದ್ದು, ಬಹುಶಃ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಸಾವಿರಕ್ಕೂ ಹೆಚ್ಚು ಅರ್ಜಿ ಬಂದಿರುವುದು ಗಂಭೀರ ವಿಚಾರವಾಗಿದೆ. ತಾಲೂಕು ಕಚೇರಿಗಳಲ್ಲಿ ಜನರ ಸಮಸ್ಯೆಗಳು ಬಗೆಹರಿಸುವುದರಲ್ಲಿ ವೈಫಲ್ಯವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್, ಶಾಸಕ ಸಿ.ಎನ್.ಬಾಲಕೃಷ್ಣ, ಕವಿಕಾ ನಿಗಮದ ಅಧ್ಯಕ್ಷ ಲಲಿತ್ ರಾಘವ್, ಜಿಲ್ಲಾಧಿಕಾರಿ ಕೆ. ಎಸ್. ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಜಿಲ್ಲಾ ಪಂಚಾಯಿತಿ ಸಿಇಒ ಬಿ. ಆರ್. ಪೂರ್ಣಿಮ, ಉಪವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್, ಡಿಎಫ್‌ಒ ಸೌರಭ್‌ಕುಮಾರ್ ಮತ್ತಿತರರು ಇದ್ದರು.;Resize=(128,128))
;Resize=(128,128))
;Resize=(128,128))