ವೈದ್ಯರ ನಿರ್ಲಕ್ಷ್ಯದಿಂದ ಮಗುವಿನ ಸಾವು ಆರೋಪ

| Published : Aug 30 2024, 01:08 AM IST

ವೈದ್ಯರ ನಿರ್ಲಕ್ಷ್ಯದಿಂದ ಮಗುವಿನ ಸಾವು ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಖಾಸಗಿ ಮಕ್ಕಳ ಆಸ್ಪತ್ರೆಯಲ್ಲಿನ ವೈದ್ಯರ ನಿರ್ಲಕ್ಷ್ಯವು ಮಗುವಿನ ಸಾವಿಗೆ ಕಾರಣವಾಗಿದೆ ಎಂದು ಮೃತ ಮಗುವಿನ ಪೋಷಕರು ಆರೋಪಿಸಿರುವ ಘಟನೆ ಪಟ್ಟಣದ ನೆಹರೂ ಬಡಾವಣೆಯಲ್ಲಿ ಬುಧವಾರ ಮಧ್ಯರಾತ್ರಿ ನಡೆದಿದೆ.

ಮಾಲೂರು: ಇಲ್ಲಿನ ಖಾಸಗಿ ಮಕ್ಕಳ ಆಸ್ಪತ್ರೆಯಲ್ಲಿನ ವೈದ್ಯರ ನಿರ್ಲಕ್ಷ್ಯವು ಮಗುವಿನ ಸಾವಿಗೆ ಕಾರಣವಾಗಿದೆ ಎಂದು ಮೃತ ಮಗುವಿನ ಪೋಷಕರು ಆರೋಪಿಸಿರುವ ಘಟನೆ ಪಟ್ಟಣದ ನೆಹರೂ ಬಡಾವಣೆಯಲ್ಲಿ ಬುಧವಾರ ಮಧ್ಯರಾತ್ರಿ ನಡೆದಿದೆ.

ಪಟ್ಟಣದ ರಾಜೀವನಗರದ ಅನಂ ಬಾನು(೮) ಮೃತ ಬಾಲಕಿಯಾಗಿದ್ದು, ಪೋಷಕರು ಹಾಗೂ ಸಂಬಂಧಿಗಳು ನ್ಯಾಯಕ್ಕಾಗಿ ಆಗ್ರಹಿಸಿ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು.

ಘಟನೆ ವಿವರ:ರಾಜೀವನಗರದ ಶಕೀಬ್‌ ತನ್ನ ಮಗಳು ಅನಂಗೆ ಜ್ವರ ಬಂದಿದ್ದರಿಂದ ಡಾ.ರಮೇಶ್‌ ಮಕ್ಕಳ ಆಸ್ಪತ್ರೆಗೆ ಕರೆ ತಂದಿದ್ದಾರೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಗ್ಲೂಕೋಸ್‌ ನೀಡಿದ ಸ್ವಲ್ಪ ಹೊತ್ತಿಗೆ ಪಿಡ್ಸ್‌ ಕಾಣಿಸಿಕೊಂಡಿದೆ. ಈ ವೇಳೆ ಮಗುವಿನ ಬಳಿ ಇದ್ದ ಪೋಷಕರು ಎಷ್ಟೇ ಮನವಿ ಮಾಡಿದರೂ ಚಿಕಿತ್ಸೆ ನೀಡಲು ವೈದ್ಯರು ಬರಲಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ವೈದ್ಯರ ಬದಲು ನರ್ಸ್ ಗಳಿಂದ ಚಿಕಿತ್ಸೆ ಕೊಡಿಸಿದ ಡಾ.ರಮೇಶ್‌ ಅವರು, ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಬೇರೆಡೆಗೆ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ತಕ್ಷಣ ಪೋಷಕರು ಆ್ಯಂಬುಲೆನ್ಸ್ ನಲ್ಲಿ ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮಗು ಸತ್ತಿದೆ. ಅದಲ್ಲದೇ ಡಾ. ರಮೇಶ್ ಆಸ್ಪತ್ರೆಯಲ್ಲಿ ಹೆಚ್ಚಿನ ಡೋಸೆಜ್‌ ನೀಡಿ, ನಿರ್ಲಕ್ಷ್ಯ ವಹಿಸಿದ್ದರಿಂದ ಮಗುವಿಗೆ ತೊಂದರೆಯಾಗಿದೆ ಎಂದು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಅಲ್ಲಿಂದ ನೇರವಾಗಿ ಮೃತ ಮಗಳ ಶವದೊಂದಿಗೆ ಡಾ. ರಮೇಶ್ ಆಸ್ಪತ್ರೆಗೆ ಕರೆತಂದ ಮೃತ ಮಗುವಿನ ಪೋಷಕರು ಹಾಗೂ ಸಂಬಂಧಿಕರು, ನ್ಯಾಯ ನೀಡುವಂತೆ ವೈದ್ಯರನ್ನು ಅಗ್ರಹಿಸಿದ್ದಾರೆ. ವಿಷಯ ತಿಳಿದ ಸ್ಥಳೀಯ ಠಾಣೆಯ ಇನ್ಸ್‌ಪೆಕ್ಟರ್‌ ವಸಂತ್‌ ಕುಮಾರ್‌ ಸ್ಥಳಕ್ಕೆ ಭೇಟಿ ನೀಡಿ, ಮೃತ ಮಗುವಿನ ಕುಟುಂಬದ ದೂರು ಆಲಿಸಿದ್ದಾರೆ.

ಈ ವೇಳೆ ನಮ್ಮದೇನೂ ತಪ್ಪಿಲ್ಲ, ಮಗು ನಮ್ಮ ಆಸ್ಪತ್ರೆಯಲ್ಲಿ ಸತ್ತಿಲ್ಲ ಎಂದ ಆಸ್ಪತ್ರೆ ಮುಖ್ಯವೈದ್ಯ ಡಾ.ರಮೇಶ್‌, ನನ್ನ ವಿರುದ್ಧ ಆರೋಪಕ್ಕೆ ದಾಖಲೆ ಇದ್ದರೆ ಕೊಡಿ ಎಂದು ಉಡಾಫೆಯಾಗಿ ಮಾತನಾಡಿದ್ದಾರೆ. ಇದರಿಂದ ಪ್ರಕರಣ ಗಂಭೀರವಾಗುತ್ತಿರುವುದನ್ನು ಮನಗಂಡ ಸಿಪಿಐ ವಸಂತ್‌ ಅವರು, ಮೃತ ಮಗುವಿನ ಕುಟುಂಬದವರನ್ನು ಈ ಸಂಬಂಧ ದೂರು ನೀಡುವಂತೆ ಮನವೊಲಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.ಈಗಾಗಲೇ ವೈದ್ಯರ ನಿರ್ಲಕ್ಷ್ಯದಿಂದ ಹಲವು ಮಕ್ಕಳು ಸಾವನ್ನಪ್ಪಿರುವ ಪ್ರಕರಣಗಳು ಈ ಆಸ್ಪತ್ರೆ ಮೇಲಿವೆ ಎಂದು ಮೃತಳ ಕುಟುಂಬದವರು ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ, ಬುಧವಾರ ತಡರಾತ್ರಿ ಈ ಪ್ರಕರಣ ನಡೆದಿದ್ದರೂ ಇದುವರೆಗೂ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಾಗಿಲ್ಲ.