ಮತಾಂತರ ಆರೋಪ: ಶಾಂತಿ ಸಭೆ ವೇಳೆ ಭಾರೀ ಗದ್ದಲ

| Published : Jan 13 2024, 01:30 AM IST

ಸಾರಾಂಶ

ಬ.ಬಾಗೇವಾಡಿ ತಾಲೂಕಿನ ಉಪ್ಪಲದಿನ್ನಿ ಎಲ್‌.ಟಿ1 ಗ್ರಾಮದಲ್ಲಿ ತಹಸೀಲ್ದಾರ್‌, ಸಿಪಿಐ ನಡೆಸಿದ ಶಾಂತಿ ಸಭೆಯಲ್ಲಿ ವಾಗ್ವಾದ ನಡೆಯಿತು.

ಕನ್ನಡಪ್ರಭ ವಾರ್ತೆ ಬ.ಬಾಗೇವಾಡಿ

ಆಶಾ ಕಾರ್ಯಕರ್ತೆಯೊಬ್ಬರು ನಾಲ್ಕು ಕುಟುಂಬಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ತಹಸೀಲ್ದಾರ ನಡೆಸಿದ ಸಭೆಯಲ್ಲಿ ಗ್ರಾಮಸ್ಥರು ಹಾಗೂ ಕಾರ್ಯಕರ್ತೆಯ ನಡುವೆ ತೀವ್ರ ವಾಗ್ವಾದ, ಮಾತಿನ ಚಕಮಕಿ ನಡೆದ ಘಟನೆ ವಿಜಯಪುರ ಜಿಲ್ಲೆಯ ಬ.ಬಾಗೇವಾಡಿ ತಾಲೂಕಿನ ಉಪ್ಪಲದಿನ್ನಿ ಎಲ್‌.ಟಿ1ರಲ್ಲಿ ನಡೆದಿದೆ.

ಬಸವನಬಾಗೇವಾಡಿ ತಾಲೂಕಿನ ಉಪ್ಪಲದಿನ್ನಿ ಎಲ್.ಟಿ1 ರಲ್ಲಿ ಆಶಾ ಕಾರ್ಯಕರ್ತೆ ವಿಜಯಲಕ್ಷ್ಮಿ ಅಶೋಕಕುಮಾರ ಲಮಾಣಿ ಎನ್ನುವವರು ಗ್ರಾಮದಲ್ಲಿ ಜನರನ್ನು ಮತಾಂತರ ಮಾಡುತ್ತಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಇತ್ತೀಚೆಗೆ ತಹಶೀಲ್ದಾರಗೆ ಮನವಿ ಸಲ್ಲಿಸಿದ್ದರು. ಅಲ್ಲದೇ ಗ್ರಾಮಸ್ಥರು ಹಾಗೂ ಆಶಾ ಕಾರ್ಯಕರ್ತೆ ಬ.ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು, ಪ್ರತಿದೂರು ಸಲ್ಲಿಸಿದ್ದಾರೆ. ಆದರೆ, ಈ ಸಂಬಂಧ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಈ ನಡುವೆ ತಹಶಿಲ್ದಾರ ಯಮನಪ್ಪ ಸೋಮನಕಟ್ಟಿ ಹಾಗೂ ಸಿಪಿಐ ಶರಣಗೌಡ ನ್ಯಾಮಗೌಡರ ಅವರ ಸಮ್ಮುಖದಲ್ಲಿ ಉಪ್ಪಲದಿನ್ನಿ ಎಲ್‌.ಟಿ1ರಲ್ಲಿ ಶಾಂತಿ ಸಭೆ ಕರೆಯಲಾಗಿತ್ತು. ಈ ವೇಳೆ ಮತಾಂತರ ವಿಚಾರವಾಗಿ ಗ್ರಾಮಸ್ಥರು ಹಾಗೂ ಆಶಾ ಕಾರ್ಯಕರ್ತೆ ನಡುವೆ ವಾಗ್ವಾದ, ಗದ್ದಲ ಉಂಟಾಗಿದೆ.

ಸಭೆಯಲ್ಲಿ‌ ಆಶಾ ಕಾರ್ಯಕರ್ತೆ ತಾಂಡಾದ ನಾಲ್ಕು ಕುಟುಂಬಗಳನ್ನು ಮತಾಂತರ ಮಾಡಿದ್ದಾರೆ ಎಂದು ಗ್ರಾಮಸ್ಥರು ಮತ್ತೆ ಆರೋಪ ಮಾಡಿದರು. ಈ ವೇಳೆ ಆಕ್ರೋಶಗೊಂಡ ಆಶಾ ಕಾರ್ಯಕರ್ತೆ ವಿಜಯಲಕ್ಷ್ಮೀ ಮತಾಂತರ ನನ್ನ ಇಷ್ಟ ಎಂದು ಮುಖಂಡರ ಜೊತೆಗೆ ವಾಗ್ವಾದ ನಡೆಸಿದ್ದಾಳೆ ಎನ್ನಲಾಗಿದೆ. ಅಲ್ಲದೆ, ಅಧಿಕಾರಿಗಳ ಮುಂದೆಯೇ ಈ ರೀತಿ ಹೇಳಿದ್ದಾಳೆ ಎಂದು ತಿಳಿದುಬಂದಿದೆ. ಲಂಬಾಣಿ ಸಮುದಾಯದ ಮೀಸಲಾತಿ ಬಳಸಿಕೊಂಡು ಮತಾಂತರ ಕಾರ್ಯ ಮಾಡುವುದು ಸರಿಯಲ್ಲ. ಮತಾಂತರ ಕಾರ್ಯ ನಿಲ್ಲಿಸಿ ಎಂದು ತಾಂಡಾದ ಜನರು ಮನವಿ‌ ಮಾಡಿಕೊಂಡಿದ್ದಾರೆ. ಸಭೆಯಲ್ಲಿ ಇಡೀ ತಾಂಡಾದ ಜನ ಒಂದೆಡೆಯಾದರೆ ಆಶಾ ಕಾರ್ಯಕರ್ತೆ ಒಂದೆಡೆಯಾಗಿ ವಾಗ್ವಾದ ಸೃಷ್ಟಿಯಾಯಿತು.

ಸದ್ಯ ಉಪ್ಪಲದಿನ್ನಿ ತಾಂಡಾದಲ್ಲಿ ಶಾಂತಿ‌ ಕದಡದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬೀಡು ಬಿಟ್ಟಿದ್ದಾರೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.