ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಓಲಾ ಕಂಪನಿಯ ದ್ವಿಚಕ್ರ ವಾಹನಗಳಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಸೋಮವಾರ ಹೊಸೂರು ಬಸ್ ನಿಲ್ದಾಣದ ಎದುರಿಗೆ ಇರುವ ಓಲಾ ಕಂಪನಿಯ ಶೋರೂಂಗೆ ಗ್ರಾಹಕರು ಬಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.ಕಳೆದ 6 ತಿಂಗಳ ಹಿಂದೆ ಓಲಾ ಕಂಪನಿಯ ದ್ವಿಚಕ್ರ ವಾಗನ ಖರೀದಿಸಿದ್ದು, 20ಕ್ಕೂ ಅಧಿಕ ಬಾರಿ ದೋಷ ಕಂಡುಬಂದಿದೆ. ರಸ್ತೆಯಲ್ಲಿ ಹೋಗುತ್ತಿರುವ ವೇಳೆ ದಿಢೀರ್ ಬಂದಾಗುತ್ತಿದೆ. ಒಂದು ತಿಂಗಳ ಹಿಂದೆ ನನ್ನ ಸಹೋದರ ವಾಹನ ತೆಗೆದುಕೊಂಡು ಹೋಗುತ್ತಿದ್ದ ವೇಳೆ ದಿಢೀರನೇ ಬಂದಾಗಿ ಕೂದಲೆಳೆಯ ಅಂತರದಲ್ಲಿ ದೊಡ್ಡ ಅಪಘಾತ ತಪ್ಪಿದೆ. ಈ ಕುರಿತು ಇಲ್ಲಿನ ಸರ್ವೀಸ್ ಸೆಂಟರ್‌ಗೆ ಬಂದು ತೋರಿಸಿದರೆ ಇಲ್ಲಿನ ಸಿಬ್ಬಂದಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ರವಿಕಾಂತ ಎಂಬುವವರು ಆಕ್ರೋಶ ವ್ಯಕ್ತಪಡಿಸಿದರು.
ಈಚೆಗೆ ದೀಪಾವಳಿಯ ಹಬ್ಬದಂದು ಓಲಾ ಕಂಪನಿಯ ದ್ವಿಚಕ್ರ ವಾಹನ ತೆಗೆದುಕೊಂಡಿದ್ದೇನೆ. ಶೋರೂಂನಿಂದ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾಗಲೇ ಬಂದಾಗಿತ್ತು. ಈ ಕುರಿತು ಇಲ್ಲಿನ ಸರ್ವೀಸ್ ಸೆಂಟರ್‌ನ ಸಿಬ್ಬಂದಿಗೆ ತಿಳಿಸಿದರೆ ಈ ಕುರಿತು ಮೇಲಿನ ಅಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದ್ದಾರೆ. ಆದರೆ, ಈ ವರೆಗೂ ಯಾವುದೇ ಪ್ರಯೋಜನವಾಗಿಲ್ಲ. ನಿತ್ಯವೂ ಶೋರೂಂ ಸೆಂಟರ್‌ಗೆ ಅಲೆದಾಡುತ್ತಿದ್ದೇನೆ. ಆದರೆ, ಸಮಸ್ಯೆ ಮಾತ್ರ ಈ ವರೆಗೂ ಪರಿಹಾರವಾಗಿಲ್ಲ ಎಂದು ರಮೇಶ ತಿಳಿಸುತ್ತಾರೆ.ಓಲಾದ ದ್ವಿಚಕ್ರ ವಾಹನಗಳಲ್ಲಿ ಇದೇ ರೀತಿ ಹತ್ತಾರು ಸಮಸ್ಯೆಗಳಿವೆ. ಸಮಸ್ಯೆ ಪರಿಹರಿಸುವಂತೆ ಇಲ್ಲಿನ ಸಿಬ್ಬಂದಿ ಕೇಳಿದರೆ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಲಕ್ಷಾಂತರ ರುಪಾಯಿ ನೀಡಿ ವಾಹನ ಖರೀದಿಸಿದ ಒಂದು ತಿಂಗಳೊಳಗೆ ಸಮಸ್ಯೆ ಕಂಡುಬಂದರೆ ನಾವು ಯಾರ ಬಳಿ ಹೋಗಬೇಕು. ಸಮಸ್ಯೆ ಹರಿಹರಿಸುವ ವರೆಗೂ ನಾವು ಶೋರೂಂ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದರು.
2ನೇ ಬಾರಿ ಶೋರೂಂ ಬಂದ್:ಕಳೆದ ಕೆಲವು ದಿನಗಳ ಹಿಂದೆ ಓಲಾದ ದ್ವಿಚಕ್ರ ವಾಹನಗಳಲ್ಲಿ ಇದೇ ರೀತಿಯ ಹಲವು ವಾಹನಗಳು ಸಮಸ್ಯೆ ಅನುಭವಿಸಿದ್ದವು. ಆಗಲೂ ಗ್ರಾಹಕರು ಒಂದು ದಿನ ಶೋರೂಂ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಆಗ ಶೋರೂಂನ ಸಿಬ್ಬಂದಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಕೈಬಿಡಲಾಗಿತ್ತು. ಈ ವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಸೋಮವಾರ ಹಲವು ಗ್ರಾಹಕರೂ ಶೋರೂಂಗೆ ಆಗಮಿಸಿ ಪ್ರತಿಭಟಿಸಿದರು.
ಸುಮಾರು 2 ಗಂಟೆಗೂ ಹೆಚ್ಚುಕಾಲ 30ಕ್ಕೂ ಅಧಿಕ ಗ್ರಾಹಕರು ಓಲಾ ಶೋರೂಂ ಎದುರು ಕಾಯುತ್ತಾ ಕುಳಿತರೂ ಸಮಸ್ಯೆ ಪರಿಹಾರವಾಗದಿರುವ ಹಿನ್ನೆಲೆಯಲ್ಲಿ ಸರ್ವಿಸ್ ಸೆಂಟರ್‌ನಲ್ಲಿದ್ದ ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡ ಘಟನೆ ನಡೆಯಿತು. ಈ ವೇಳೆ ಓಲಾದ ಸರ್ವಿಸ್ ಸೆಂಟರ್‌ನ ಇಬ್ಬರು ಸಿಬ್ಬಂದಿಯನ್ನು ಗ್ರಾಹಕರು ಇಲ್ಲಿನ ವಿದ್ಯಾನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದ ಘಟನೆ ನಡೆಯಿತು.ಈ ವೇಳೆ ಸರ್ವೀಸ್ ಸೆಂಟರ್‌ನ ಸಿಬ್ಬಂದಿ ಕಂಪನಿಯ ವ್ಯವಸ್ಥಾಪಕರಿಗೆ ಕರೆ ಮಾಡಿ ಮಂಗಳವಾರ ಖುದ್ದು ಹುಬ್ಬಳ್ಳಿಗೆ ಆಗಮಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಬಳಿಕ ಗ್ರಾಹಕರು ಮಂಗಳವಾರ ಕಂಪನಿಯ ಪ್ರಮುಖರು ಆಗಮಿಸಿ ಸಮಸ್ಯೆ ಪರಿಹರಿಸದಿದ್ದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಎಚ್ಚರಿಕೆ ನೀಡಿದರು.
ಇತ್ತೀಚಿಗೆ ಬಿಡುಗಡೆಯಾಗಿರುವ ಓಲಾದ ದ್ವಿಚಕ್ರ ವಾಹನಗಳಲ್ಲಿ ಕೆಲ ದೋಷಗಳು ಕಂಡುಬಂದಿರುವುದು ನಿಜ. ಈ ಕುರಿತು ಈಗಾಗಲೇ ಕಂಪನಿಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಸಮಸ್ಯೆ ಪರಿಹರಿಸುವುದಾಗಿ ಹೇಳಿದ್ದಾರೆ. ಆದಷ್ಟು ಬೇಗನೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಓಲಾದ ಶೋರೂಂನ ಸಿಬ್ಬಂದಿ ವೆಂಕಟೇಶ ಜೋಶಿ ತಿಳಿಸಿದ್ದಾರೆ.