ಬಹುನಿರೀಕ್ಷಿತ ‘ಕಾಂತಾರ ಅಧ್ಯಾಯ-1’ ಚಿತ್ರ ಮುಹೂರ್ತ

| Published : Nov 28 2023, 12:30 AM IST

ಬಹುನಿರೀಕ್ಷಿತ ‘ಕಾಂತಾರ ಅಧ್ಯಾಯ-1’ ಚಿತ್ರ ಮುಹೂರ್ತ
Share this Article
  • FB
  • TW
  • Linkdin
  • Email

ಸಾರಾಂಶ

. ಹೊಂಬಾಳೆ ಫಿಲಂಸ್

ಕನ್ನಡಪ್ರಭ ವಾರ್ತೆ ಕುಂದಾಪುರಬಹುನಿರೀಕ್ಷಿತ ಸಿನಿಮಾ ‘ಕಾಂತಾರ ಅಧ್ಯಾಯ-1’ ಮುಹೂರ್ತವು ಕುಂದಾಪುರದ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಸೋಮವಾರ ನಡೆಯಿತು. ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಫಸ್ಟ್ ಲುಕ್ ಬಿಡುಗಡೆಗೊಳಿಸಲಾಯಿತು.

ನಟ ರಿಷಬ್ ಶೆಟ್ಟಿ, ಪತ್ನಿ ಪ್ರಗತಿ ರಿಷಬ್, ಮಕ್ಕಳಾದ ರನ್ವಿತ್ ಶೆಟ್ಟಿ, ರಾಧ್ಯ ಶೆಟ್ಟಿ ಮಹೂರ್ತ ಸಂದರ್ಭದಲ್ಲಿ ಹಾಜರಿದ್ದರು. ಹೊಂಬಾಳೆ ಫಿಲಂಸ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು ನಿರ್ಮಾಪಕ ವಿಜಯ್ ಕಿರಗಂದೂರು, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಡಿಒಪಿ ಅರವಿಂದ ಕಶ್ಯಪ್ ಕ್ಯಾಮೆರಾ ಆನ್ ಮಾಡಿ ಶ್ರೀ ವಿನಾಯಕ ದೇವರ ದೃಶ್ಯ ಸೆರೆಹಿಡಿದರು. ವಿಜಯ್ ಕಿರಗಂದೂರ್ ಹಿರಿಯ ಸಹೋದರ ಮಂಜುನಾಥ್ ಕಿರಗಂದೂರು ಕ್ಲ್ಯಾಪ್ ಮಾಡಿದರು.ಮುಹೂರ್ತ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ರಿಷಬ್ ಶೆಟ್ಟಿ, ಸದ್ಯ ಸಿನಿಮಾದ ಬಗ್ಗೆ ಏನೂ ಹೇಳುವುದಿಲ್ಲ. ಸದ್ಯಕ್ಕೆ ಫಸ್ಟ್‌ ಲುಕ್‌ ಬಿಡುಗಡೆಗೊಳಿಸಿದ್ದೇವೆ. ಕಾಂತಾರ ಸಿನಿಮಾವನ್ನು ಕನ್ನಡದ ಜನ ದೊಡ್ಡಮಟ್ಟಿಗೆ ಕೊಂಡೊಯ್ದಿದ್ದರು. ಹಾಗಾಗಿ, ಕಾಂತಾರ ಅಧ್ಯಾಯ-1ರಲ್ಲೂ ಕೂಡ ಕನ್ನಡದ ಕಲಾವಿದರಿಗೆ ಮೊದಲ ಆದ್ಯತೆ ನೀಡಲಿದ್ದೇವೆ. ಕರಾವಳಿ ಭಾಗದಲ್ಲೇ ಹೆಚ್ಚಿನ ಶೂಟಿಂಗ್ ನಡೆಯಲಿದೆ. ಕಾಂತಾರದ ಚಿತ್ರ ತಂಡವೇ ಹೆಚ್ಚು ಅಧ್ಯಾಯ-1ರಲ್ಲೂ ಇರಲಿದೆ. ಕೆಲವೊಂದು ಬದಲಾವಣೆಗಳ ಸಹಿತ ಹೊಸಬರು ಕೂಡ ಸೇರಲಿದ್ದು, ಸಿನೆಮಾ ತಂಡ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಿದೆ ಎಂದರು.ಸಿನೆಮಾ ಕುರಿತು ಈಗಲೇ ಏನು ಹೇಳೋದಿಲ್ಲ. ಈಗಾಗಲೇ ಬಿಟ್ಟಿರುವ ಪೋಸ್ಟರ್‌ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡುತ್ತದೆ. ಹೋಗುತ್ತಾ, ಹೋಗುತ್ತಾ ಸಿನೀಮಾವೇ ಮಾತನಾಡಿದರೇ ಚಂದ ಎಂದ ಅವರು ಡಿಸೆಂಬರಿನಲ್ಲಿ ಚಿತ್ರೀಕರಣ ಆರಂಭ ಮಾಡಲಿಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು. ಕರಾವಳಿಯ ಈ ಭಾಗಕ್ಕೆ ಸಂಬಂಧಿಸಿದ ಕಥೆಯಾಗಿರುವುದರಿಂದ ಬಹುತೇಕ ಈ ಭಾಗದಲ್ಲಿ ಚಿತ್ರೀಕರಣ ಆಗುವ ಸಾಧ್ಯತೆಗಳಿವೆ. ಚಿತ್ರದ ಕಲಾವಿದರ ಆಯ್ಕೆ ನಡೆಯುತ್ತಿದೆ. ಕನ್ನಡಿಗರೇ ಕಾಂತಾರವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದರಿಂದಾಗಿ, ಕನ್ನಡದ ಕಲಾವಿದರಿಗೆ ಪ್ರಥಮ ಆದ್ಯತೆ. ಹಿಂದಿನಂತೆ ಸ್ಥಳೀಯರ ಜೊತೆ, ನಾಡಿನ ಇತರ ಭಾಗದ ಹೊಸ ಪ್ರತಿಭೆಗಳನ್ನು ಪರಿಗಣಿಸುವ ಯೋಚನೆ ಇದೆ. ಹೊಂಬಾಳೆ ಸಂಸ್ಥೆ ಹಾಗೂ ವಿಜಯ್ ಕಿರಗಂದೂರು ಅವರ ಕಾರಣದಿಂದಲೇ ಕಾಂತಾರ ಸಿನೆಮಾ ಇಷ್ಟೊಂದು ದೊಡ್ಡ ಮಟ್ಟಕ್ಕೆ ಹೋಗಿದೆ. ಬಹುತೇಕ ಕಾಂತಾರ ಚಿತ್ರದ ತಾಂತ್ರಿಕ ತಂಡವೇ ಮುಂದುವರೆಯಲಿದೆ ಎಂದು ರಿಷಬ್ ಸ್ಪಷ್ಟಪಡಿಸಿದರು.

ರಿಷಬ್‌ ಶೆಟ್ಟಿ ಅವರ ಪತ್ನಿ ಪ್ರಗತಿ ಅವರು ಮಾತನಾಡಿ, ರಿಷಬ್ ಶೆಟ್ಟಿ ನನ್ನನ್ನು ಮೊದಲು ನೋಡಿದ್ದು ಇಲ್ಲೇ. ಕಾಂತಾರ ಮೊದಲ ಭಾಗ ಕೂಡ ಇಲ್ಲೇ ಪೂಜೆ ಆಗಿತ್ತು. ಈ ಚಿತ್ರದಲ್ಲಿ ನಾನು ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡುತ್ತೇನೆ. ನನಗೆ ಯಾವ ರೋಲ್ ಎಂಬ ಬಗ್ಗೆ ಗೊತ್ತಿಲ್ಲ, ರಿಷಬ್ ಅವರು ಹೇಳಿದರ್ರೆ ನಾನು ನಟಿಸುತ್ತೇನೆ ಎಂದು ತಿಳಿಸಿದರು.ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು, ಚಲುವೇ ಗೌಡ, ಸಹ ಲೇಖಕರಾದ ಅನಿರುದ್ಧ್ ಮಹೇಶ್, ಶನಿಲ್ ಗುರು, ಛಾಯಾಗ್ರಹಣ ನಿರ್ದೇಶಕ ಅರವಿಂದ್ ಎಸ್. ಕಶ್ಯಪ್, ಸಂಗೀತ ಹಾಗೂ ಹಿನ್ನೆಲೆ ಸಂಗೀತ ನಿರ್ದೇಶಕರಾದ ಬಿ.ಅಜನೀಶ್ ಲೋಕನಾಥ್ ಹಾಗೂ ಬೊಬಿ, ಪೋಸ್ಟರ್ ಡಿಸೈನರ್ ಬೆಂಗಳೂರಿನ ಕಾಣಿ ಸ್ಟುಡಿಯೋದ ಸಂತೋಷ್ ಬಳ್ಕೂರ್, ಪ್ರೋಡಕ್ಷನ್ ಡಿಸೈನರ್ ಬಾಂಗ್ಲಾನ್, ಕಾಸ್ಟೂಮ್ ಡಿಸೈನರ್ ಪ್ರಗತಿ ಶೆಟ್ಟಿ, ನಟರಾದ ವಿನಯ್ ಬಿದ್ದಪ್ಪ, ಶೈನ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಪ್ರದೀಪ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಪ್ರಸನ್ನಕುಮಾರ ಶೆಟ್ಟಿ ಕೆರಾಡಿ, ದಿವ್ಯಾಧರ ಶೆಟ್ಟಿ ಮೂಡಗಲ್ಲು, ಪ್ರೊಡಕ್ಷನ್ ವ್ಯವಸ್ಥಾಪಕ ಗಗನಮೂರ್ತಿ, ಸುಹಾಸ್ ಶೆಟ್ಟಿ, ಉದ್ಯಮಿಗಳಾದ ಬೈಲೂರು ಉದಯ್‍ಕುಮಾರ ಶೆಟ್ಟಿ, ವಿನಯ್‍ಕುಮಾರ ಶೆಟ್ಟಿ, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಕೆ.ಶ್ರೀರಮಣ ಉಪಾಧ್ಯಾಯ, ಮಾಜಿ ಹಿರಿಯ ಮೊಕ್ತೇಸರ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಪರ್ಯಾಯ ಅರ್ಚಕ ಶ್ರೀಶ ಉಪಾಧ್ಯಾಯ ಇದ್ದರು.

ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ವತಿಯಿಂದ ನಟ ರಿಷಬ್ ಶೆಟ್ಟಿ ಹಾಗೂ ನಿರ್ಮಾಪಕರಾದ ಹೊಂಬಾಳೆ ಫಿಲಂ ವಿಜಯ್ ಕಿರಗಂದೂರು ಅವರನ್ನು ಗೌರವಿಸಲಾಯಿತು.

ಆನೆಗುಡ್ಡೆಯಲ್ಲಿ ಜನಸಾಗರ

ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಚಿತ್ರ ಮುಹೂರ್ತದ ಮಾಹಿತಿ ಮುಂಚಿತವಾಗಿ ನೀಡಿದ್ದು, ದೇವಸ್ಥಾನವನ್ನು ವಿಶೇಷ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಯಾವುದೇ ಅದ್ದೂರಿ ಇಲ್ಲದೆ, ಸರಳವಾಗಿ ಮುಹೂರ್ತ ಮಾಡಿ ಚಿತ್ರೀಕರಣದ ಕುರಿತು ಚಿಂತನೆ ಮಾಡಲಾಗಿತ್ತು. ರಿಷಬ್ ಅವರ ಹುಟ್ಟೂರಾಗಿದ್ದರೂ, ಚಿತ್ರ ತಂಡದ ಪ್ರಮುಖರಲ್ಲದೆ, ಸೀಮಿತ ಆಮಂತ್ರಿತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಆದರೆ ಕೋಟೇಶ್ವರದ ಕೊಡಿ ಹಬ್ಬದ ಹಿನ್ನೆಲೆ ಹಬ್ಬಕ್ಕೆ ಬಂದ ಸಾರ್ವಜನಿಕರು ನೆಚ್ಚಿನ ನಟರನ್ನು ನೋಡಲು ಆನೆಗುಡ್ಡೆ ದೇವಸ್ಥಾನದ ಸುತ್ತ- ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಜನರ ನೂಕು ನುಗ್ಗಲು ನಿಯಂತ್ರಿಸಲು ದೇವಸ್ಥಾನದ ಭದ್ರತಾ ಸಿಬ್ಬಂದಿ ಹರಸಾಹಸ ಮಾಡಬೇಕಾಯಿತು.

ಆನೆಗುಡ್ಡೆ ಅದೃಷ್ಟದ ಬಾಗಿಲು!ಇದು ಮುಂದುವರೆದ ಪಯಣ, ಕಾಂತಾರದ ಮುನ್ನುಡಿಯನ್ನು ಹೇಳಲಿಕ್ಕೆ ಹೊರಟಿದ್ದೇನೆ. ಅದ್ಭುತವಾದ ಸಿನಿಮಾ ನೀಡಲು ಇಡೀ ಚಿತ್ರ ತಂಡ ಕೆಲಸ ಮಾಡಲಿದೆ. ಹೊಂಬಾಳೆ ಫಿಲಂ ಸಂಸ್ಥೆಯವರು ನಂಬಿದಂತಹ ಕ್ಷೇತ್ರ ಆನೆಗುಡ್ಡೆ, ನನಗಂತೂ ಆನೆಗುಡ್ಡೆ ಅದೃಷ್ಟದ ಬಾಗಿಲು. ಕಳೆದ ಬಾರಿ ಕಾಂತಾರಕ್ಕೂ ಇಲ್ಲಿಯೇ ಮುಹೂರ್ತ ಮಾಡಿದ್ದೇವೆ, ಅದೇ ರೀತಿ ಈ ಬಾರಿಯೂ ಆನೆಗುಡ್ಡೆಯ ಗಣಪತಿ ಆಶೀರ್ವಾದದೊಂದಿಗೆ ಪ್ರಾರಂಭ ಮಾಡಿದ್ದೇವೆ ಎಂದು ನಟ ರಿಷಬ್ ಶೆಟ್ಟಿ ಹೇಳಿದರು.ಇದು ಬರೀ ಬೆಳಕಲ್ಲ, ಸತ್ಯದ ದರ್ಶನ!ಹೊಂಬಾಳೆ ಫಿಲಂಸ್ ಲಾಂಛನದಡಿಯಲ್ಲಿ ಮೂಡಿ ಬಂದಿರುವ ಚಿತ್ರದ ಫಸ್ಟ್ ಲುಕ್‍ನಲ್ಲಿ ಇದು ಬರೀ ಬೆಳಕಲ್ಲ, ಸತ್ಯದ ದರ್ಶನ ಎಂಬ ಟ್ಯಾಗ್‍ಲೈನ್ ಬರೆಯಲಾಗಿದೆ. ಅಘೋರಿ ಅವತಾರದಲ್ಲಿ ರಿಷಬ್ ಅಚ್ಚರಿ ಮೂಡಿಸಿದ್ದು, ಒಂದು ಕೈಯ್ಯಲ್ಲಿ ತ್ರಿಶೂಲ ಮತ್ತೊಂದು ಕೈಯ್ಯಲ್ಲಿ ಜಮದಗ್ನಿ ಕೊಡಲಿಯನ್ನು ಹಿಡಿದುಕೊಂಡಿರುವ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಏಳು ಭಾಷೆಗಳಲ್ಲಿ ಪೋಸ್ಟರ್ ಬಿಡುಗಡೆಯಾಗಿದ್ದು ರಿಷಬ್ ಶೆಟ್ಟಿ ಅವರು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಶ್ರೀವಿನಾಯಕ ದೇಗುಲಕ್ಕೆ ಹರಕೆ ಹೊತ್ತು ಬಂದವರಿಗೆ ಮನಸ್ಸಿನ ಇಷ್ಟಾರ್ಥ ಸಿದ್ಧಿಸುವ ಕ್ಷೇತ್ರ. ರಿಷಬ್ ಮತ್ತು ವಿಜಯ್ ಕಿರಗಂದೂರು ನಿರಂತರವಾಗಿ ಕ್ಷೇತ್ರಕ್ಕೆ ಬಂದು ದೇವರ ಸೇವೆಯಲ್ಲಿ ಭಾಗಿಯಾಗುತ್ತಿದ್ದಾರೆ.

-ರವಿರಾಜ್ ಉಪಾಧ್ಯಾಯ ಅರ್ಚಕರು.