ಪಡಿತರ ವಿತರಣೆ ತೂಕದಲ್ಲಿ ಮೋಸ: ಗ್ರಾಮಸ್ಥರ ಆಕ್ರೋಶ

| Published : Nov 28 2023, 12:30 AM IST

ಪಡಿತರ ವಿತರಣೆ ತೂಕದಲ್ಲಿ ಮೋಸ: ಗ್ರಾಮಸ್ಥರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಪಡಿತರವನ್ನು ತೂಗುವಾಗ ಡಬ್ಬಿಯಲ್ಲಿ ಪಡಿತರವನ್ನು ತುಂಬಿ ತೂಕಕ್ಕೆ ಹಾಕಿ ಕೊಡುತ್ತಾರೆ. ತೂಗುವ ಡಬ್ಬಿಯೇ ೮೦೦- ೯೦೦ ಗ್ರಾಂ ತೂಗುತ್ತದೆ. ಇದರಿಂದ ಸಾರ್ವಜನಿಕರಿಗೆ ಮೋಸ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು. ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಸೋಮವಾರ ಆಹಾರ ನೀರಿಕ್ಷಕರಾದ ಪ್ರದೀಪ್ ಅವರು ಸ್ಥಳಕ್ಕೆ ತೆರಳಿ ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡರಲ್ಲದೆ, ಅಲ್ಲಿಯ ಪರಿಸ್ಥಿತಿಯನ್ನು ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಸಂಡೂರು

ತಾಲೂಕಿನ ಡಿ. ಅಂತಾಪುರ ಗ್ರಾಮದಲ್ಲಿ ಪಡಿತರ ವಿತರಣೆಯ ತೂಕದಲ್ಲಿ ಮೋಸ ಮಾಡಲಾಗುತ್ತಿದೆ. ೧೫- ೨೦ ಕೆಜಿ ಪಡಿತರದಲ್ಲಿ ಒಂದು ಕೆಜಿ ಪಡಿತರವನ್ನು ಕಡಿಮೆ ಕೊಡಲಾಗುತ್ತಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ಭಾನುವಾರ ಹಾಗೂ ಸೋಮವಾರ ಪಡಿತರ ವಿತರಿಸುವ ಸೊಸೈಟಿಯ ಮುಂದೆ ಆಕ್ರೋಶ ವ್ಯಕ್ತಪಡಿಸಿ, ಪಡಿತರ ವಿತರಣಾ ಕೇಂದ್ರವನ್ನು ಮುಚ್ಚಿಸಿದ್ದರು.

ಪಡಿತರವನ್ನು ತೂಗುವಾಗ ಡಬ್ಬಿಯಲ್ಲಿ ಪಡಿತರವನ್ನು ತುಂಬಿ ತೂಕಕ್ಕೆ ಹಾಕಿ ಕೊಡುತ್ತಾರೆ. ತೂಗುವ ಡಬ್ಬಿಯೇ ೮೦೦- ೯೦೦ ಗ್ರಾಂ ತೂಗುತ್ತದೆ. ಇದರಿಂದ ಸಾರ್ವಜನಿಕರಿಗೆ ಮೋಸ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು.

ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಸೋಮವಾರ ಆಹಾರ ನೀರಿಕ್ಷಕರಾದ ಪ್ರದೀಪ್ ಅವರು ಸ್ಥಳಕ್ಕೆ ತೆರಳಿ ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡರಲ್ಲದೆ, ಅಲ್ಲಿಯ ಪರಿಸ್ಥಿತಿಯನ್ನು ಪರಿಶೀಲಿಸಿದರು.

ಈ ಕುರಿತು ಕನ್ನಡಪ್ರಭದೊಂದಿಗೆ ಪ್ರತಿಕ್ರಿಯಿಸಿದ ಆಹಾರ ನಿರೀಕ್ಷಕ ಪ್ರದೀಪ್ ಅವರು, ತೂಕದಲ್ಲಿ ಮೋಸ ಮಾಡಲಾಗುತ್ತದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಸೊಸೈಟಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಪಡಿತರ ವಿತರಿಸುವ ವ್ಯಕ್ತಿ ಸ್ಥಳದಲ್ಲಿ ಇರಲಿಲ್ಲ. ಆಸ್ಪತ್ರೆಗೆ ತೆರಳಿದ್ದನೆಂದು ತಿಳಿದುಬಂದಿದೆ. ವರದಿಯನ್ನು ಮುಂದಿನ ಕ್ರಮಕ್ಕಾಗಿ ನಮ್ಮ ಮೇಲಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.