ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ಪ್ರಸಕ್ತ ಸಾಲಿನಲ್ಲಿ ₹720 ಕೋಟಿ ಬೆಳೆ ಸಾಲ ಹಾಗೂ ₹48 ಕೋಟಿ ಮಾಧ್ಯಮಿಕ ಕೃಷಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ (ಕೆಸಿಸಿ) ಬ್ಯಾಂಕ್ ನೂತನ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಹೇಳಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2022-23ನೇ ಸಾಲಿನಲ್ಲಿ 103651 ರೈತ ಸದಸ್ಯರಿಗೆ ₹657.30 ಕೋಟಿ ಬೆಳೆಸಾಲ ಮತ್ತು ಶೇ. 3ರ ಬಡ್ಡಿದರದಲ್ಲಿ 1011 ಸದಸ್ಯರಿಗೆ ₹52.16 ಕೋಟಿ ಮಾಧ್ಯಮಿಕ ಕೃಷಿ ಸಾಲ ವಿತರಸಲಾಗಿದೆ. ಪ್ರಸಕ್ತ ಸಾಲಿನ ಗುರಿಗೆ ಅನುಸಾರವಾಗಿ ಈಗಾಗಲೇ 47844 ಸದಸ್ಯರಿಗೆ ₹368 ಕೋಟಿ ಬೆಳೆಸಾಲ ಹಾಗೂ 501 ಸದಸ್ಯರಿಗೆ ₹26.57 ಕೋಟಿ ಮಾಧ್ಯಮ ಕೃಷಿ ಸಾಲ ವಿತರಿಸಲಾಗಿದೆ ಎಂದರು.
ಈಗಾಗಲೇ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡು ಬ್ಯಾಂಕಿಂಗ್ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿರುವ ಬ್ಯಾಂಕಿನ ನೂತನ ಆಡಳಿತ ಮಂಡಳಿಯು ಪಾರದರ್ಶಕ ಹಾಗೂ ಕ್ರಿಯಾಶೀಲ ಕಾರ್ಯಗಳಿಂದ ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಹೊಸ ಕ್ರಾಂತಿ ಹುಟ್ಟುಹಾಕಲಿದೆ. ಯುವಕರಿಗೆ ಉದ್ಯೋಗ, ಕೃಷಿ ಹಾಗೂ ಕೃಷಿ ಸಂಬಂಧಿಕ ಕಾರ್ಯಚಟುವಟಿಕೆಗಳಿಗೆ ಸಾಲ ಸಿಗುವಂತೆ ಹೊಸ ಯೋಜನೆ ಹಾಕಿಕೊಳ್ಳಲಾಗುವುದು ಎಂದರು.ರೈತರ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ನೆರವು ಕಲ್ಪಿಸುವುದರ ಜೊತೆಗೆ ಕೃಷಿಯೇತರ ಸಾಲ ಯೋಜನೆಯಡಿ ಹೆಚ್ಚಿನ ಆದಾಯ ತರುವ ವೇತನ ಆಧಾರಿತ, ಬಂಗಾರ ಆಭರಣಗಳ ಮೇಲಿನ ಸಾಲ, ವಾಹನ ಖರೀದಿ ಹಾಗೂ ವಿವಿಧ ಸಹಾಯಕರ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ನಗದು ಪತ್ತಿನ ಸಾಲಗಳನ್ನು ಬ್ಯಾಂಕ್ ನೀಡುತ್ತಿದೆ. 2022-23ನೇ ಸಾಲಿನಲ್ಲಿ ₹504 ಕೋಟಿ ಕೃಷಿಯೇತರ ಸಾಲ ವಿತರಿಸಿದ್ದು ಪ್ರಸ್ತುತ ವರ್ಷ ₹241 ಕೋಟಿ ಕೃಷಿಯೇತರ ಸಾಲ ವಿತರಿಸಿದ್ದು, ₹500 ಕೋಟಿ ಗುರಿ ಹೊಂದಲಾಗಿದೆ. ಜೊತೆಗೆ 2022-23ನೇ ಸಾಲಿನಲ್ಲಿ ರು. 963.66 ಕೋಟಿ ಠೇವಣಿ ಸಂಗ್ರಹಿಸಲಾಗಿದ್ದು, ಪ್ರಸಕ್ತ ಇಲ್ಲಿಯ ವರೆಗೆ ₹920 ಕೋಟಿ ಸಂಗ್ರಹವಾಗಿದೆ. 2023-24ನೇ ಸಾಲಿಗೆ ಇದನ್ನು ₹1160 ಕೋಟಿ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
17 ಹೊಸ ಶಾಖೆ:ಪ್ರಸ್ತುತ ಬ್ಯಾಂಕ್ ಧಾರವಾಡ, ಗದಗ, ಹಾವೇರಿ ಜಿಲ್ಲೆಗಳ ಕಾರ್ಯವ್ಯಾಪ್ತಿ 48 ಶಾಖೆಗಳನ್ನು ಹೊಂದಿದ್ದು, ಹೊಸದಾಗಿ 17 ಶಾಖೆಗಳನ್ನು ಆರಂಭಿಸಲಾಗುತ್ತಿದೆ. ಎಲ್ಲ ಶಾಖೆಗಳಿಗೂ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಡಿ ಗಣಕೀಕರಣಗೊಳಿಸಿದ್ದು, ಇದರಿಂದ ಪಾರದರ್ಶಕ ವ್ಯವಹಾರ ಮಾಡಲು ಅನುಕೂಲವಾಗಲಿದೆ. ರೂಪೆ, ಎಟಿಎಂ ಕಾರ್ಡ್ ಹೊಂದಿದ್ದು ಐಎಫ್‌ಎಸ್‌ಸಿ ಕೋಡ್ ಹೊಂದಿದ್ದು ಕೆಲವೇ ದಿನಗಳಲ್ಲಿ ಫೋನ್ ಪೇ, ಗೂಗಲ್ ಪೇ ಸೌಲಭ್ಯ ಸಹ ಬ್ಯಾಂಕ್ ಗ್ರಾಹಕರಿಗೆ ದೊರೆಯಲಿದೆ. ಬೆಳೆವಿಮೆ ಸೌಲಭ್ಯ, ಯಶಸ್ವಿನಿ, ಆರೋಗ್ಯ ವಿಮೆ, ಸುರಕ್ಷಾ ವಿಮೆ, ಪಿಎಂ ಜೀವನ ಜ್ಯೋತಿ ವಿಮೆ, ಅಟಲ್ ಪಿಂಚಣೆ ಸೌಲಭ್ಯಗಳೂ ಬ್ಯಾಂಕ್‌ನಲ್ಲಿವೆ ಎಂದರು.
ಬ್ಯಾಂಕಿನ ಕಾರ್ಯವ್ಯಾಪ್ತಿ 550 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಆರ್ಥಿಕವಾಗಿ ಸಬಲತೆ ಸಾಧಿಸುವ ನಿಟ್ಟಿನಲ್ಲಿ ಹೊಸ ಆಡಳಿತ ಮಂಡಳಿ ಕಾರ್ಯ ಮಾಡಲಿದೆ ಎಂದ ಶಿವಕುಮಾರಗೌಡ ಪಾಟೀಲ, ಸರ್ಕಾರದ ಹಣಕಾಸು ವ್ಯವಹಾರ ಬ್ಯಾಂಕ್ ಮೂಲಕ ನಡೆಯಬೇಕೆಂದು ಇತ್ತೀಚೆಗೆ ನಡೆದ ಸಹಕಾರ ಸಪ್ತಾಹದ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಇದರಿಂದ ಬ್ಯಾಂಕ್ ಮತ್ತಷ್ಟು ಆರ್ಥಿಕವಾಗಿ ಸಲಬತೆ ಸಾಧಿಸಲಿದೆ ಎಂದರು. ಸಾಲ ಮನ್ನಾ ಸಮಯದಲ್ಲಿ ರಾಜ್ಯ ಸರ್ಕಾರ ಬ್ಯಾಂಕ್‌ಗೆ ₹430 ಕೋಟಿ ಬಾಕಿ ಉಳಿಸಿಕೊಂಡಿದ್ದು ಶೀಘ್ರ ನೀಡುವ ವಿಶ್ವಾಸವಿದೆ ಎಂದು ಉತ್ತರಿಸಿದರು.ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ನಿಂಗನಗೌಡ ಮರಿಗೌಡ್ರ, ನಿರ್ದೇಶಕರಾದ ಜಿ.ಪಿ. ಪಾಟೀಲ, ಮಲ್ಲಿಕಾರ್ಜುನ ಹೊರಕೇರಿ, ಉಮೇಶ ಹೆಬಸೂರ, ಮಂಜುನಾಥ ಮುರಳ್ಳಿ, ಸಂಗಮೇಶ ಕಂಬಾಳಿಮಠ, ಸಿದ್ದಪ್ಪ ಸಪೂರಿ, ಕಾರ್ಯನಿರ್ವಾಹಕ ಅಧಿಕಾರಿ ಕೆ. ಮುನಿಯಪ್ಪ, ಪ್ರಧಾನ ವ್ಯವಸ್ಥಾಪಕ ಎಸ್.ವಿ. ಹೂಗಾರ ಇದ್ದರು.
ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುವುದರ ಜೊತೆಗೆ ಬಾಕಿ ಸಾಲವನ್ನು ಹೊಸ ಸಾಲವನ್ನಾಗಿ ಪರಿವರ್ತಿಸಿ ಅವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಐದು ವರ್ಷಗಳ ತಮ್ಮ ಆಡಳಿತಾವಧಿಯಲ್ಲಿ ಬ್ಯಾಂಕ್ ವ್ಯವಹಾರ ದ್ವಿಗುಣಗೊಳಿಸಲಾಗುವುದು ಎಂದು ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ತಿಳಿಸಿದ್ದಾರೆ.