ರಸ್ತೆ ಅಭಿವೃದ್ದಿಗೆ ಅರಣ್ಯ ಇಲಾಖೆ ಅಡ್ಡಗಾಲು ಆರೋಪ: ಚುನಾವಣೆ ಬಹಿಷ್ಕಾರ ನಿರ್ಧಾರ

| Published : Apr 13 2024, 01:07 AM IST

ರಸ್ತೆ ಅಭಿವೃದ್ದಿಗೆ ಅರಣ್ಯ ಇಲಾಖೆ ಅಡ್ಡಗಾಲು ಆರೋಪ: ಚುನಾವಣೆ ಬಹಿಷ್ಕಾರ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಶನಿವಾರಸಂತೆಯಿಂದ ದುಂಡಳ್ಳಿ-ಬಿಳಹ ಮಾರ್ಗವಾಗಿ ಯಸಳೂರುಗೆ ಸಂಪರ್ಕ ಕಲ್ಪಿಸುವ ಲೋಕಪಯೋಗಿ ಇಲಾಖೆಗೆ ಸೇರಿದ ರಸ್ತೆ ಅಗಲೀಕರಣ ಅಭಿವೃದ್ದಿ ಕಾಮಗಾರಿಗೆ ಅರಣ್ಯ ಇಲಾಖೆ ಅಡ್ಡಗಾಲು ಹಾಕುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಶನಿವಾರಸಂತೆಯಿಂದ ದುಂಡಳ್ಳಿ-ಬಿಳಹ ಮಾರ್ಗವಾಗಿ ಯಸಳೂರುಗೆ ಸಂಪರ್ಕ ಕಲ್ಪಿಸುವ ಲೋಕಪಯೋಗಿ ಇಲಾಖೆಗೆ ಸೇರಿದ ರಸ್ತೆ ಅಗಲೀಕರಣ ಅಭಿವೃದ್ದಿ ಕಾಮಗಾರಿಗೆ ಅರಣ್ಯ ಇಲಾಖೆ ಅಡ್ಡಗಾಲು ಹಾಕುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.ಲೋಕಪಯೋಗಿ ಇಲಾಖೆ ರಸ್ತೆ ಅಭಿವೃದ್ದಿ ಕಾಮಗಾರಿ ಸಂದರ್ಭ ಗ್ರಾಮಸ್ಥರ ತೋಟದ ಬೇಲಿಯಲ್ಲಿರುವ ಮರಗಳ ತೆರವುಗೊಳಿಸುವ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ಮತ್ತು ಮನವಿ ನೀಡಿತ್ತು. ಆದರೆ ಈ ಸಂದರ್ಭದಲ್ಲಿ ಪರಿಸರ ಪ್ರೇಮಿಗಳು ಮರಗಳನ್ನು ತೆರವುಗೊಳಿಸದಂತೆ ಅರಣ್ಯ ಇಲಾಖೆಗೆ ಮೂಗರ್ಜಿ ಸಲ್ಲಿಸಿತ್ತು. ಇದರ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ತೋಟದ ಬೇಲಿಯಲ್ಲಿರುವ ಕಾಡು ಜಾತಿಯ ಮರಗಳನ್ನು ತೆರವುಗೊಳಿಸಲು ಹಿಂದೇಟು ಹಾಕಿತ್ತು.

ಈ ಸಂಬಂದ ಶನಿವಾರಸಂತೆ ಅರಣ್ಯ ಇಲಾಖೆ ಕಚೇರಿಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಮತ್ತು ಪ್ರಮುಖರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ರಸ್ತೆ ಅಭಿವೃದ್ದಿ ಆಗುವ ಅಗತ್ಯ ಇದೆ ಎಂದು ಅಭಿಪ್ರಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಒಂದು ವಾರದಲ್ಲಿ ಬೇಲಿಯಲ್ಲಿರುವ ಮರಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಇಷ್ಟು ದಿನ ಕಳೆದರೂ ಅರಣ್ಯ ಇಲಾಖೆಯವರು ಮರಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಸೋಮವಾರ ಕೆಲವು ಗ್ರಾಮಸ್ಥರು ಶನಿವಾರಸಂತೆ ಅರಣ್ಯ ಇಲಾಖೆ ಕಚೇರಿ ಮುಂದೆ ಪ್ರತಿಭಟಿಸಿದರು.

ಮರಗಳನ್ನು ತೆರವುಗೊಳಿಸುವಂತೆ ಮತ್ತು ಈ ಸಂಬಂಧ ಇಲಾಖೆ ಕ್ರಮಕೈಗೊಳ್ಳದಿದ್ದರೆ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಆರ್‌ಎಫ್‌ಒ ಗಾನಶ್ರೀ ಅವರಿಗೆ ಎಚ್ಚರಿಕೆ ನೀಡಿದರು.

ಈ ಕುರಿತು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಇಮೇಲ್ ಮೂಲಕ ದೂರು ನೀಡಿದ್ದರು. ಈ ಸಂಬಂಧ ಅಂದು ಸಂಜೆ ಸೋಮವಾರಪೇಟೆ ತಹಸೀಲ್ದಾರ್‌ ನವೀನ್ ಕುಮಾರ್ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರೊಂದಿಗೆ ಚರ್ಚಿಸಿ ವಾರದೊಳಗೆ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.

ಬಳಿಕ ಗ್ರಾಮಸ್ಥರು ತಾತ್ಕಾಲಿಕವಾಗಿ ಚುನಾವಣಾ ಬಹಿಷ್ಕಾರ ಹಿಂಪಡೆಯುತ್ತೇವೆ. ಆದರೆ ಅರಣ್ಯ ಇಲಾಖೆ ವಾರದೊಳಗೆ ಮರ ತೆರವುಗೊಳಿಸಲು ಕ್ರಮಕೈಗೊಳ್ಳದಿದ್ದಲ್ಲಿ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ವಿವಿಧ ಗ್ರಾಮದ ಪ್ರಮುಖರಾದ ಗಂಗನಳ್ಳಿ ಸುರೇಶ್, ದುಂಡಳ್ಳಿ ಶಂಭು, ಬಿಳಹ ನಾಗಣ್ಣ, ದುಂಡಳ್ಳಿ ಮೋಹನ್, ಶನಿವಾರಸಂತೆಯ ಎಸ್.ಎನ್.ರಘು ದುಂಡಳ್ಳಿ, ಬಿಳಹ, ತೋಯಳ್ಳಿ, ಶಿರಹ ಗ್ರಾಮಸ್ಥರು ಪಾಲ್ಗೊಂಡಿದ್ದರು.