ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಶಾಲಾ ಮಕ್ಕಳ ಮಧ್ಯಾಹ್ನ ಬಿಸಿಯೂಟ ಅನ್ನಭಾಗ್ಯ ಯೋಜನೆಯಲ್ಲಿ ಮಕ್ಕಳ ಹಾಜರಾತಿಯನ್ನು ಹೆಚ್ಚಿಗೆ ತೋರಿಸಿ ಲಕ್ಷಾಂತರ ಹಣ ದುರ್ಬಳಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಖಿಳೇಗಾವಿ ಬಸವೇಶ್ವರ ಶಿಕ್ಷಣ ಸಂಸ್ಥೆಗೆ ತಾಲೂಕು ಬಿಸಿಊಟ ಅನ್ನ ಭಾಗ್ಯ ಯೋಜನೆಯ ತಾಲೂಕು ನಿರ್ದೇಶಕ ಎಂ.ವಿ.ನಾಮದಾರ ಹಾಗೂ ಬಿಇಒ ಎಂ.ಬಿ.ಮೋರಟಗಿ ಶುಕ್ರವಾರ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.ಪ್ರೌಢಶಾಲೆ ಮುಖ್ಯೋಪಾಧ್ಯಾಯ ಬಸವರಾಜ ಎಂಬತನಾಳ ಎಂಬುವವರ ವಿರುದ್ಧವೇ ಈಗ ಈ ಆರೋಪ ಕೇಳಿಬಂದಿದೆ. ಇವರು ವಿದ್ಯಾರ್ಥಿಗಳಿಗೆ ನೀಡಲಾಗುವ ಬಿಸಿ ಊಟ ಯೋಜನೆಯಲ್ಲಿ ಬೋಗಸ್ ಹಾಜರಾತಿಗಳನ್ನು ತೋರಿಸಿ ಲಕ್ಷಾಂತರ ರು. ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಆಡಳಿತ ಮಂಡಳಿಯವರ ಗಮನಕ್ಕೂ ತಂದಿಲ್ಲ ಎಂಬ ಆರೋಪ ಕೇಳಿಬಂದಿದೆ.
ಈ ಆರೋಪದ ಹಿನ್ನೆಲೆಯಲ್ಲಿ ಬಸವೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಕೆಲ ಸದಸ್ಯರು ನೀಡಿರುವ ದೂರಿನ ಆಧಾರದ ಮೇಲೆ ಶಾಲೆಗೆ ಬಿಇಒ ಸೇರಿದಂತೆ ಇತರೆ ಅಧಿಕಾರಿಗಳು ಆಗಮಿಸಿ ತನಿಖೆ ನಡೆಸಿದರು.ಮೇಲ್ನೋಟಕ್ಕೆ ಬಿಸಿಯೂಟ ಯೋಜನೆಯಲ್ಲಿ ಅವ್ಯವಹಾರ ಕಂಡುಬಂದಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು. ನಮ್ಮ ತನಿಖಾ ತಂಡ ಬಂದಾಗ ಸೂಕ್ತ ದಾಖಲೆಗಳನ್ನು ಒದಗಿಸಿ ಸಹಕರಿಸಬೇಕು. ಆಡಳಿತ ಮಂಡಳಿಯ ಆರೋಪ ಮತ್ತು ಮುಖ್ಯೋಪಾಧ್ಯಾಯನ ಪ್ರತ್ಯಾರೋಪ ಆಲಿಸಿದ ಅಧಿಕಾರಿಗಳು ಒಂದು ವಾರದ ಒಳಗಾಗಿ ಸೂಕ್ತ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿದರು.
------------ಖಿಳೇಗಾವಿ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಬಿಸಿಊಟ ಯೋಜನೆಯ ಅವ್ಯವಹಾರ ನಡೆದಿರುವುದು ಸತ್ಯ. ಶಾಲೆಯ ಮುಖ್ಯ ಶಿಕ್ಷಕ ಹಾಗೂ ಆಡಳಿತ ಮಂಡಳಿಯ ಆರೋಪ ಪ್ರತ್ಯಾರೋಪ ಆಲಿಸಿದ್ದೇವೆ. ತನಿಖೆಗಾಗಿ ತಂಡ ರಚನೆ ಮಾಡಿದ್ದು, ಸಮಗ್ರ ತನಿಖೆಯಾದ ನಂತರ ಶಿಕ್ಷಣ ಇಲಾಖೆಯ ನಿಯಮದಂತೆ ಶಿಸ್ತು ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ಮಾಹಿತಿ ರವಾನಿಸುತ್ತೇವೆ.
-ಎಂ ಬಿ. ಮೊರಟಗಿ, ಬಿಇಒ, ಅಥಣಿ.----
ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ಎಂಬತನಾಳ ಬಿಸಿಯೂಟ ಯೋಜನೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಗೆ ತೋರಿಸಿ ಯೋಜನೆ ದುರ್ಬಳಕೆ ಮಾಡಿಕೊಂಡಿದ್ದಾನೆ. ಈ ರೀತಿ ಮಾಡುವಂತೆ ನಾವು ಯಾವುದೇ ಮೌಖಿಕ ಆದೇಶ ನೀಡಿಲ್ಲ. ಈಗ ಸುಳ್ಳು ಆರೋಪ ಮಾಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ. ಆದ್ದರಿಂದ ಮುಖ್ಯೋಪಾಧ್ಯಾಯ ಸ್ಥಾನದಿಂದ ಈತನನ್ನ ತೆಗೆಯಲು ಆಡಳಿತ ಮಂಡಳಿ ನಿರ್ಧರಿಸಿದೆ.-ಶ್ರೀಶೈಲ ಶಿವಾಗೋಳ, ಶಿಕ್ಷಣ ಸಂಸ್ಥೆಯ ಅಧ್ಯಕ್ಷರು.