ಉದ್ದೇಶಿತ ಕಸ್ತೂರಿರಂಗನ್ ವರದಿಯನ್ನು ಮುಂದಿಟ್ಟುಕೊಂಡು ಕೊಡಗಿನ ಜನರನ್ನು ಭಯಪಡಿಸಿ ಜಾಗ ಮಾರಾಟ ಮಾಡಲು ಕೆಲವು ಬ್ರೋಕರ್ ಗಳು ಪ್ರಚೋದನೆ ನೀಡುತ್ತಿದ್ದು, ಇಂತಹ ಸುಳ್ಳಿಗೆ ಯಾರು ಬಲಿಯಾಗಿ ಜಾಗ ಮಾರಾಟ ಮಾಡಲು ಮುಂದಾಗಬಾರದು ಎಂದು ಭಾರತೀಯ ಪರಿಸರ ಮತ್ತು ಆರೋಗ್ಯ ಸಂಸ್ಥೆಯ ಸ್ಥಾಪಕರು ಹಾಗೂ ಸಂಸ್ಥೆಯ ಕಾರ್ಯದರ್ಶಿ ನಿವೃತ್ತ ಕರ್ನಲ್, ಚೆಪ್ಪುಡಿರ ಪಿ. ಮುತ್ತಣ್ಣ ಎಚ್ಚರಿಸಿದ್ದಾರೆ.
ಪೊನ್ನಂಪೇಟೆ : ಉದ್ದೇಶಿತ ಕಸ್ತೂರಿರಂಗನ್ ವರದಿಯನ್ನು ಮುಂದಿಟ್ಟುಕೊಂಡು ಕೊಡಗಿನ ಜನರನ್ನು ಭಯಪಡಿಸಿ ಜಾಗ ಮಾರಾಟ ಮಾಡಲು ಕೆಲವು ಬ್ರೋಕರ್ ಗಳು ಪ್ರಚೋದನೆ ನೀಡುತ್ತಿದ್ದು, ಇಂತಹ ಸುಳ್ಳಿಗೆ ಯಾರು ಬಲಿಯಾಗಿ ಜಾಗ ಮಾರಾಟ ಮಾಡಲು ಮುಂದಾಗಬಾರದು ಎಂದು ಭಾರತೀಯ ಪರಿಸರ ಮತ್ತು ಆರೋಗ್ಯ ಸಂಸ್ಥೆಯ ಸ್ಥಾಪಕರು ಹಾಗೂ ಸಂಸ್ಥೆಯ ಕಾರ್ಯದರ್ಶಿ ನಿವೃತ್ತ ಕರ್ನಲ್, ಚೆಪ್ಪುಡಿರ ಪಿ. ಮುತ್ತಣ್ಣ ಎಚ್ಚರಿಸಿದ್ದಾರೆ.ಪೊನ್ನಂಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಸ್ತೂರಿ ರಂಗನ್ ವರದಿ ಬಗ್ಗೆ ಕಳೆದ ಒಂದು ತಿಂಗಳಿನಿಂದ ತುಂಬಾ ಚರ್ಚೆಯಾಗುತ್ತಿದೆ. ಜನರ ಮನಸ್ಸಿನಲ್ಲಿಯೂ ಗೊಂದಲ ಏರ್ಪಟ್ಟಿದೆ. ಈ ಗೊಂದಲದ ನಡುವೆ ಕೆಲವು ಜಾಗದ ಬ್ರೋಕರ್‘ಗಳು ‘ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೆ ಬರುವ ಗ್ರಾಮಗಳ ಜಾಗಗಳನ್ನು ಅರಣ್ಯಕ್ಕೆ ಸೇರಿಸಲಾಗುತ್ತಿದೆ’ ಎಂದು ಅಪಪ್ರಚಾರ ಮಾಡಿ ಜಾಗವನ್ನು ಮಾರಾಟ ಮಾಡಿಸಲು ಪ್ರಚೋದಿಸುತ್ತಿದ್ದು ಈ ಜಾಗವನ್ನು ಹೊರಗಿನವರಿಗೆ ಖರೀದಿಸುವಂತೆ ಬ್ರೋಕರ್ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಕಸ್ತೂರಿರಂಗನ್ ವರದಿ ಪ್ರಕಾರ ಜಿಲ್ಲೆಯ 53 ಗ್ರಾಮಗಳು ಇದರ ವ್ಯಾಪ್ತಿಗೆ ಬರುತ್ತದೆ. ಬ್ರೋಕರ್ ಗಳು ಈ ಗ್ರಾಮಗಳಿಗೆ ಹೋಗಿ ಈ ಗ್ರಾಮಸ್ಥರನ್ನು ಹೆದರಿಸುತ್ತಿದ್ದು, 53 ಗ್ರಾಮಗಳು ಅರಣ್ಯಕ್ಕೆ ಸೇರ್ಪಡೆಗೊಳ್ಳಲಿದೆ ಅದಕ್ಕಾಗಿ ಈಗಲೇ ಜಾಗವನ್ನು ಮಾರಾಟ ಮಾಡಿದರೆ ಒಳ್ಳೆಯದು ಎಂದು ಜಾಗವನ್ನು ಮಾರಾಟ ಮಾಡಲು ಪ್ರಚೋದಿಸುತ್ತಿದ್ದಾರೆ ಎಂದರು.
ಇಂತಹ ಹುನ್ನಾರಗಳಿಗೆ ಜನರು ಬಲಿಯಾಗಬೇಡಿ. ನಿಮ್ಮ -ನಮ್ಮೆಲ್ಲರ ಕೊಡಗಿನ ಜಾಗ ತುಂಬಾ ಒಳ್ಳೆಯ ಜಾಗವಾಗಿದ್ದು ಇಂತಹ ಉತ್ತಮ ಜಾಗವನ್ನು ಎಂದಿಗೂ ಯಾರಿಗೂ ಮಾರಾಟ ಮಾಡದೆ ನಮ್ಮಲ್ಲಿಯೇ ಕಾಪಾಡಿಕೊಳ್ಳುವಂತೆ ಅವರು ಕಿವಿಮಾತು ಹೇಳಿದರು.ದೊಡ್ಡ ಸಂಖ್ಯೆಯಲ್ಲಿ ಕೇರಳಂ, ಆಂಧ್ರ, ತೆಲಂಗಾಣ, ಹರಿಯಾಣ ಮತ್ತು ಪಂಜಾಬ್ ನಿಂದ ಬಂಡವಾಳ ಶಾಹಿಗಳು ಜಾಗ ಖರೀದಿಗೆ ಮುಂದಾಗುತ್ತಿದ್ದಾರೆ. ಅವರಿಗೆ ಕೊಡಗಿನ ಜಾಗ ಅತ್ಯುತ್ತಮವಾಗಿದೆ ಎಂದು ಗೊತ್ತಿದ್ದು ಅವರು ಜಾಗ ಖರೀದಿಗೆ ಮುಗಿ ಬೀಳುತ್ತಿದ್ದು, ಕಸ್ತೂರಿ ರಂಗನ್ ವರದಿ ಮುಂದಿಟ್ಟುಕೊಂಡು ಬ್ರೋಕರ್ ಗಳು ಜಾಗ ಮಾರಾಟ ಮಾಡಿಸಲು ಹವಣಿಸುತ್ತಿದ್ದಾರೆ. ಆದ್ದರಿಂದ ಇಂತಹ ಉತ್ತಮ ಜಾಗ ಕಳೆದುಕೊಂಡು ಭವಿಷ್ಯ ಹಾಳು ಮಾಡಿಕೊಳ್ಳದಂತೆ ಅವರು ಮನವಿ ಮಾಡಿದರು.
ಕಸ್ತೂರಿ ರಂಗನ್ ವರದಿ ಬಗ್ಗೆ ಜಿಲ್ಲೆಯ ಶಾಸಕರಾದ ಎ. ಎಸ್.ಪೊನ್ನಣ್ಣ ಡಾ.ಮಂತರ್ ಗೌಡ ಹಾಗೂ ಸಂಸದ ಯದುವೀರ್ ಇವರೊಂದಿಗೆ ಮತ್ತು ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸುತ್ತೇವೆ. ಎಲ್ಲರಿಗೂ ಒಳ್ಳೆಯದು ಆಗಬೇಕೆಂಬ ನಿಲುವು ನಮ್ಮದಾಗಿದೆ. ಯಾವುದೇ ರಾಜಕೀಯ ಪಕ್ಷದ ಪರ- ವಿರೋಧ ನಿಲುವು ನಾವು ಹೊಂದಿಲ್ಲ ಹಾಗೂ ತೆರೆಯ ಮರೆಯಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಲುವು ಹೊಂದಿಲ್ಲ ಎಂದು ಅವರು ಹೇಳಿದರು. ಸಂಸ್ಥೆಯ ನಿರ್ದೇಶಕರಾದ ಮಲಚಿರ ಶಾನ್ ಬೋಪಯ್ಯ, ಚಿಮ್ಮಣಮಾಡ ತ್ರಿಶೂಲ್ ತಿಮ್ಮಯ್ಯ ಹಾಜರಿದ್ದರು.