ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಶಕ್ತಿನಗರದ ಶಕ್ತಿ ಸ್ಕೂಲ್ ಬಳಿಯ 3.42 ಎಕರೆ ಭೂಮಿಯನ್ನು ಟಿಡಿಆರ್ ಮೂಲಕ ಪಾಲಿಕೆಗೆ ಸ್ವಾಧೀನಪಡಿಸಲು ವಿಪಕ್ಷ ಸದಸ್ಯರ ತೀವ್ರ ಆಕ್ಷೇಪ- ಕೋಲಾಹಲದ ನಡುವೆ ಮೇಯರ್ ಅಂಗೀಕಾರ ನೀಡಿದ್ದಾರೆ. ಸದಸ್ಯರಿಗೆ ಮಾಹಿತಿ ನೀಡದೆ ದೊಡ್ಡ ಮೊತ್ತದ ಟಿಡಿಆರ್‌ಗಳಿಗೆ ಒಪ್ಪಿಗೆ ನೀಡಲಾಗುತ್ತಿದ್ದು, ಪಾಲಿಕೆಯಲ್ಲಿ ಟಿಡಿಆರ್ ದಂಧೆ ನಡೆಯುತ್ತಿದೆ ಎಂದು ವಿಪಕ್ಷ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ.ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಗುರುವಾರ ನಡೆದಿದ್ದು, ಆರಂಭದಲ್ಲೇ ಮೇಯರ್ ಅವರು ಶಕ್ತಿನಗರದ ಮೂರುವರೆ ಎಕರೆ ಜಾಗವನ್ನು ಟಿಡಿಆರ್ ಮೂಲಕ ಸ್ವಾಧೀನಪಡಿಸಲು ಮಂಜೂರಾತಿ ನೀಡುವುದಾಗಿ ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಅಬ್ದುಲ್ ರವೂಫ್ ಮತ್ತು ಎ.ಸಿ. ವಿನಯರಾಜ್, ಸದಸ್ಯರ ಗಮನಕ್ಕೆ ತಾರದೆ ಈ ಹಿಂದೆಯೇ ಪೂರ್ವಭಾವಿ ಮಂಜೂರಾತಿ ನೀಡಲಾಗಿದೆ. ಇದೀಗ ಕೌನ್ಸಿಲ್‌ನ ಅಜೆಂಡಾದಲ್ಲಿ ನಮೂದಿಸದೆ ಹಿಂಬಾಗಿಲ ಮೂಲಕ ಅನುಮೋದನೆ ನೀಡುವ ಹಿಂದೆ ಯಾವ ಉದ್ದೇಶ ಇದೆ ಎಂದು ಪ್ರಶ್ನಿಸಿದರು.ಮನೆ ಕಟ್ಟಲು ಅಡ್ಡಿ ಆರೋಪ: ಮೇಯರ್ ಮನೋಜ್ ಕುಮಾರ್ ಮಾತನಾಡಿ, ಈ ಮೂರುವರೆ ಎಕರೆ ಜಾಗದಲ್ಲಿ ಬಡ ಪೌರ ಕಾರ್ಮಿಕರಿಗೆ ಮನೆ ಕಟ್ಟಿಕೊಡುವ ಯೋಜನೆ ಇದೆ, 10 ಸಾವಿರ ಅರ್ಜಿ ಇವೆ ಎಂದರು. ಪೌರ ಕಾರ್ಮಿಕರ ಮನೆ ನಿರ್ಮಾಣಕ್ಕೆ ವಿಪಕ್ಷದವರು ಅಡ್ಡಿ ಪಡಿಸುತ್ತಿದ್ದಾರೆ ಎಂದು ಮಾಜಿ ಮೇಯರ್ ಸುಧೀರ್ ಶೆಟ್ಟಿ ಆರೋಪಿಸಿದರು.
5 ವರ್ಷದಲ್ಲಿ ಒಂದೂ ಮನೆ ಕಟ್ಟಿಲ್ಲ: ಬಡವರಿಗೆ ಮನೆ ಕಟ್ಟಲು ಯಾವ ವಿರೋಧವೂ ಇಲ್ಲ. ಆದರೆ ಶಕ್ತಿನಗರದಲ್ಲಿ ಈ ಹಿಂದೆಯೇ 10 ಎಕರೆ ಜಾಗ, ಬೋಂದೆಲ್‌ನಲ್ಲಿ 10 ಎಕರೆ ಜಾಗವನ್ನು ಮನೆ ಕಟ್ಟಿಕೊಡಲು ಗುರುತಿಸಿಡಲಾಗಿತ್ತು. ಈಗ ತರಾತುರಿಯಲ್ಲಿ ಬೇರೆ ಕಡೆ ಮೂರುವರೆ ಎಕರೆಗೆ ಟಿಡಿಆರ್ ಅನುಮೋದನೆ ನೀಡುವ ಹಿಂದೆ ಯಾವ ಲಾಭ ಇದೆ? 5 ವರ್ಷಗಳಲ್ಲಿ ನೆನಪಾಗದ ಪೌರ ಕಾರ್ಮಿಕರು ಈಗ ನೆನಪಾದದ್ದು ಹೇಗೆ ಎಂದು ವಿಪಕ್ಷ ನಾಯಕ ಅನಿಲ್ ಕುಮಾರ್, ಸದಸ್ಯರಾದ ಎ.ಸಿ. ವಿನಯರಾಜ್, ಪ್ರವೀಣ್‌ಚಂದ್ರ ಆಳ್ವ, ಶಶಿಧರ ಹೆಗ್ಡೆ, ನವೀನ್ ಡಿಸೋಜ ಪ್ರಶ್ನಿಸಿದರು.10 ಸಾವಿರ ಅರ್ಜಿಗಳು ಇದ್ದರೂ ಮನೆ ಕಟ್ಟಿ ಕೊಟ್ಟಿಲ್ಲ ಎಂಬ ವಿಚಾರ ಬೇರೆ ಮಗ್ಗುಲಿಗೆ ಹೊರಳಿ ಪರಸ್ಪರ ರಾಜಕೀಯ ಆರೋಪ- ಪ್ರತ್ಯಾರೋಪಗಳಲ್ಲಿ ಸದನ ಗೊಂದಲದ ಗೂಡಾಯಿತು. ಯಾವುದೇ ಕಾರಣಕ್ಕೂ ಈ ಟಿಡಿಆರ್ ಅನುಮೋದನೆ ಮಾಡಬಾರದು ಎಂದು ವಿಪಕ್ಷ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿ ಪಟ್ಟು ಹಿಡಿದರು.
ಮೂರುವರೆ ಎಕರೆ ಜಾಗದಲ್ಲಿ ಮನೆ ನಿರ್ಮಾಣ ಮಾಡಬಹುದು ಎನ್ನುವ ಸಂಬಂಧಿಸಿದ ವಿಭಾಗದ ಕಾರ್ಯ ಸಾಧ್ಯತೆಯ ಲಿಖಿತ ವರದಿ ಇದ್ದರೆ ಅದರ ಕಡತ ತರಿಸಿ ಎಂದು ಶಶಿಧರ ಹೆಗ್ಡೆ ಒತ್ತಾಯಿಸಿದರು. ಕೊನೆಗೆ ಅನುಮೋದನೆ ಹಿಂಪಡೆಯಲು ಒಪ್ಪದ ಮೇಯರ್, ವಿಪಕ್ಷ ಸದಸ್ಯರಿಗೆ ಆಕ್ಷೇಪ ದಾಖಲಿಸಲು ತಿಳಿಸಿ ಟಿಡಿಆರ್ ಪೂರ್ವಭಾವಿ ಮಂಜೂರಾತಿಯನ್ನು ಸ್ಥಿರೀಕರಿಸುವುದಾಗಿ ತಿಳಿಸಿದರು.ಉಪ ಮೇಯರ್ ಭಾನುಮತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವೀಣಾ ಮಂಗಳ, ಕದ್ರಿ ಮನೋಹರ ಶೆಟ್ಟಿ, ಸುಮಿತ್ರ, ಸರಿತಾ ಶ್ರೀಧರ್, ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಇದ್ದರು.ಒಳಚರಂಡಿ ತ್ಯಾಜ್ಯ ವೆಟ್‌ವೆಲ್ಲಿಂದಲೇ ಹೊರಕ್ಕೆ!
ಎಸ್‌ಟಿಪಿ (ಸೀವೇಜ್ ಟ್ರೀಟ್‌ಮೆಂಟ್ ಪ್ಲ್ಯಾಂಟ್)ಗಳ ನಿರ್ವಹಣೆ ಬಗ್ಗೆ ಈ ಸಾಮಾನ್ಯ ಸಭೆಯಲ್ಲೂ ತೀವ್ರ ಚರ್ಚೆ ನಡೆಯಿತು. ಮೇಯರ್ ಇತ್ತೀಚೆಗೆ ಬಜಾಲ್ ಎಸ್‌ಟಿಪಿಗೆ ಭೇಟಿ ನೀಡಿ ಸಮರ್ಪಕವಾಗಿ ಕಾರ್ಯಾಚರಿಸುತ್ತಿದೆ ಎಂಬ ಹೇಳಿಕೆ ನೀಡಿದ್ದಾರೆ. ಎಸ್‌ಟಿಪಿ ಸರಿಯಾಗಿದ್ದರೆ ಜಪ್ಪಿನಮೊಗರು ರಾಜಕಾಲುವೆಯಿಂದ ನೇತ್ರಾವತಿ ನದಿಗೆ ಕೊಳಚೆ ನೀರು ಹರಿಯುವುದು ಹೇಗೆ? ವೆಟ್‌ವೆಲ್‌ಗಳು ಸರಿ ಇಲ್ಲದೆ, ಎಸ್‌ಟಿಪಿಗಳು ಮಾತ್ರ ಸರಿ ಇದ್ದರೆ ಏನುಪಯೋಗ? ವೆಟ್‌ವೆಲ್‌ಗಳಿಂದ ನೇರವಾಗಿ ರಾಜಕಾಲುವೆಗಳಿಗೆ ತ್ಯಾಜ್ಯ ಹರಿಯುತ್ತಿದೆ ಎಂದು ಸದಸ್ಯ ಪ್ರವೀಣ್ ಚಂದ್ರ ಆಳ್ವ ದೂರಿದರು.ನೀರಿನ ಬಿಲ್‌ನಲ್ಲಿ ಯುಜಿಡಿ (ಒಳಚರಂಡಿ ಸಂಪರ್ಕ) ಇಲ್ಲದ ಮನೆಗಳಿಗೂ ಯುಜಿಡಿ ಶುಲ್ಕ ವಿಧಿಸಲಾಗುತ್ತಿದೆ. ಪ್ರೇಮಾನಂದ ಶೆಟ್ಟಿಯವರು ಮೇಯರ್ ಆಗಿದ್ದ ವೇಳೆ ಯುಜಿಡಿ ಸಂಪರ್ಕ ಹೊಂದಿರದ ಮನೆಗಳ ಶುಲ್ಕವನ್ನು ತೆರವುಗೊಳಿಸಿದ್ದು, ಮತ್ತೆ ಯಾಕೆ ಆರಂಭಿಸಲಾಗಿದೆ ಎಂದು ಸದಸ್ಯ ವಿನಯರಾಜ್ ಪ್ರಶ್ನಿಸಿದರು. ಇದನ್ನು ಸರಿಪಡಿಸುವುದಾಗಿ ಅಧಿಕಾರಿಗಳು ತಿಳಿಸಿದರು.
ಸರ್ಕಲ್ ಅಭಿವೃದ್ಧಿಗೆ ಬ್ಯಾನರ್ ಹಿಡಿದು ಪ್ರತಿಭಟನೆಹ್ಯಾಮಿಲ್ಟನ್ ವೃತ್ತ ತೆರವುಗೊಳಿಸಿ ಏಕಮುಖ ಸಂಚಾರ ಮಾಡಿದ್ದರಿಂದ ಸಾಕಷ್ಟುಸಮಸ್ಯೆಯಾಗಿದೆ ಎಂದು ಆಕ್ಷೇಪಿಸಿ ಸದಸ್ಯ ಅಬ್ದುಲ್ ಲತೀಫ್ ಬ್ಯಾನರ್ ಹಿಡಿದು ಸದನದಲ್ಲೇ ಪ್ರತಿಭಟಿಸಿದರು. ಸೋಮವಾರ ತಜ್ಞರ ಜತೆ ಸ್ಥಳ ಪರಿಶೀಲನೆ ನಡೆಸಲು ಮೇಯರ್ ಮನೋಜ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.