ಜನತಾ ಶಿಕ್ಷಣ ಸಂಘದ ವಿರುದ್ಧದ ಆರೋಪ ನಿರಾಧಾರ: ಬಿ.ಎಸ್. ಅಕ್ಕಿವಳ್ಳಿ

| Published : Aug 15 2025, 01:00 AM IST

ಜನತಾ ಶಿಕ್ಷಣ ಸಂಘದ ವಿರುದ್ಧದ ಆರೋಪ ನಿರಾಧಾರ: ಬಿ.ಎಸ್. ಅಕ್ಕಿವಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಆಡಳಿತ ಮಂಡಳಿಯ ಅಧ್ಯಕ್ಷರ ನೆಂಟಸ್ಥರು ಹಾನಗಲ್ಲ ತಾಲೂಕು ಹೊರತುಪಡಿಸಿ ಬೇರೆ ಊರುಗಳಲ್ಲಿ ಯಾರಿದ್ದಾರೆ ಎಂದು ಮಾಹಿತಿಯನ್ನು ಮಂಜುನಾಥ ಅವರೇ ಸಂಘಕ್ಕೆ ತಿಳಿಸಬೇಕು. ನಾವು ಕ್ರಮ ಜರುಗಿಸಲು ಸಿದ್ಧ ಎಂದು ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ ತಿಳಿಸಿದರು.

ಹಾನಗಲ್ಲ: ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ವಿರುದ್ಧ ಮಾಡಿದ ಆರೋಪಗಳು ಸಂಪೂರ್ಣ ನಿರಾಧಾರವಾಗಿದ್ದು, ಖೊಟ್ಟಿ ಸಹಿ ಮಾಡಿ ಸದಸ್ಯತ್ವಕ್ಕೆ ಬೇಡಿಕೆ ಸಲ್ಲಿಸಿರುವುದು ಕೂಡ ಅವರ ಮಾನಸಿಕ ಸ್ಥಿತಿಯ ಅಭಿವ್ಯಕ್ತಿ. ಹೀಗೇ ಸಂಘದ ಹಿತಾಸಕ್ತಿಗೆ ವಿರೋಧವಾಗಿ ನಡೆದುಕೊಂಡರೆ ಕಾನೂನು ಕ್ರಮ ಅನಿವಾರ್ಯ ಎಂದು ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ ಎಚ್ಚರಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಸಂಸ್ಥೆಯ ನಿವೃತ್ತ ಪ್ರಾಚಾರ್ಯ ಸಂಸ್ಥೆಯ ಆಡಳಿತದ ಬಗ್ಗೆ ಆರೋಪ ಮಾಡಿ, ಸದಸ್ಯತ್ವ ನಿರಾಕರಿಸುತ್ತಿದ್ದಾರೆ ಎಂದು ಹೇಳಿರುವುದು ನಿರಾಧಾರವಾದುದು. ಅವರು ಸದಸ್ಯತವ್ವನ್ನೆ ಈ ವರೆಗೆ ಕೇಳಿರಲಿಲ್ಲ. ಈಗ ಏಕಾಏಕಿ 950ರಷ್ಟು ಜನರ ಸಹಿ ಮಾಡಿದ ಪತ್ರ ನೀಡಿ ಸದಸ್ಯತ್ವಕ್ಕೆ ಮನವಿ ಸಲ್ಲಿಸಿದ್ದಾರೆ. ಅದರಲ್ಲಿ ಬಹುತೇಕರದು ಖೊಟ್ಟಿ ಸಹಿಯಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.

ಹಿಂದೆ ಇದ್ದ ಆಡಳಿತ ಮಂಡಳಿ ಕಾನೂನು ವ್ಯಾಪ್ತಿಯಲ್ಲಿಯೇ ಸದಸ್ಯತ್ವ ರದ್ದು ಮಾಡಿದ್ದಾರೆ. ಆಗ ಸುಮ್ಮನಿದ್ದು ಈಗ ಪ್ರಶ್ನಿಸುತ್ತಿರುವುದು ಸಮಂಜಸವಲ್ಲ. ನಮ್ಮ ಸಂಸ್ಥೆಯ 10 ಎಕರೆ ಜಾಗೆ ಖರೀದಿ ಆಸ್ತಿಯಾಗಿದೆ. ಅದು ದಾನವಲ್ಲ. ನಾವು ಯಾವುದೇ ಆಸ್ತಿಯನ್ನು ಮಾರುವ ಮೂಲಕ ಭ್ರಷ್ಟತೆಗೆ ಕಾರಣವಾಗಿಲ್ಲ. ಸಂಸ್ಥೆಯ ಹಿತಕ್ಕಾಗಿ, ಇಲಾಖೆಯೊಂದಿಗೆ ಚರ್ಚಿಸಿ, ಪರವಾನಗಿ ಪಡೆದು ಮಾರಿ, ಅದರ ಹಣವನ್ನು ಸಂಸ್ಥೆಯ ಕಟ್ಟಡ ಹಾಗೂ ಇತರ ಕೆಲಸಗಳಿಗೆ ಬಳಸಲಾಗಿದೆ. ಈಗ ನಮ್ಮ ಸಂಸ್ಥೆಯಲ್ಲಿ 242 ಸದಸ್ಯರಿದ್ದಾರೆ. ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಸದಸ್ಯತ್ವ ನೀಡಿಲ್ಲ. ಸೆ. 21ರಂದು ನಡೆಯುವ ಸರ್ವ ಸಾಧಾರಣ ಸಭೆಯಲ್ಲಿ ಸದಸ್ಯತ್ವದ ಬಗ್ಗೆ ನಿರ್ಣಯಿಸಿ, ಸಭೆಯ ನಿರ್ಣಯದಂತೆ ಕ್ರಮ ಜರುಗಿಸಲಾಗುವುದು ಎಂದರು.ವಯೋಮಾನದ ಆಧಾರದಲ್ಲಿ ಕಾರ್ಯದರ್ಶಿಯನ್ನು ನಿವೃತ್ತಗೊಳಿಸುವ ಅಗತ್ಯವಿಲ್ಲ. ಸೇವಾ ನಿವೃತ್ತಿ ಅನ್ವಯಿಸುವುದಿಲ್ಲ. ಕಾನೂನುಬಾಹಿರವಾಗಿ ಯಾವುದೇ ನೌಕರರನ್ನು ನೇಮಕ ಮಾಡಿಕೊಂಡಿಲ್ಲ. ಆಡಳಿತ ಮಂಡಳಿಯಲ್ಲಿ ನಿಯಮದಂತೆ ಇಬ್ಬರು ಮಹಿಳಾ ನಿರ್ದೇಶಕರಿದ್ದಾರೆ. ಆಡಳಿತ ಮಂಡಳಿಯ ಅಧ್ಯಕ್ಷರ ನೆಂಟಸ್ಥರು ಹಾನಗಲ್ಲ ತಾಲೂಕು ಹೊರತುಪಡಿಸಿ ಬೇರೆ ಊರುಗಳಲ್ಲಿ ಯಾರಿದ್ದಾರೆ ಎಂದು ಮಾಹಿತಿಯನ್ನು ಮಂಜುನಾಥ ಅವರೇ ಸಂಘಕ್ಕೆ ತಿಳಿಸಬೇಕು. ನಾವು ಕ್ರಮ ಜರುಗಿಸಲು ಸಿದ್ಧ ಎಂದರು.

ಸಂಸ್ಥೆಯ ಉಪಾಧ್ಯಕ್ಷ ಸುರೇಶ ರಾಯ್ಕರ, ನಿರ್ದೇಶಕರಾದ ದುಷ್ಯಂತ ನಾಗರವಳ್ಳಿ, ರವಿ ಪುರೋಹಿತ, ಹನುಮಂತಪ್ಪ ಮಲಗುಂದ ಸುದ್ದಿಗೋಷ್ಠಿಯಲ್ಲಿದ್ದರು.