ಅರೆಭಾಷೆ ಗೌಡರ ವಿರುದ್ಧ ಇಲ್ಲಸಲ್ಲದ ಆರೋಪ ಸರಿಯಲ್ಲ: ಸೂರ್ತಲೆ ಸೋಮಣ್ಣ

| Published : Feb 12 2025, 12:31 AM IST

ಅರೆಭಾಷೆ ಗೌಡರ ವಿರುದ್ಧ ಇಲ್ಲಸಲ್ಲದ ಆರೋಪ ಸರಿಯಲ್ಲ: ಸೂರ್ತಲೆ ಸೋಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಫೆ.7ರಂದು ಮಡಿಕೇರಿಯಲ್ಲಿ ಬೃಹತ್ ಜಾಥಾವನ್ನು ಶಾಂತಿಯುತವಾಗಿ ನಡೆಸಿರುವುದಕ್ಕೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಆದರೆ ಜಾಥಾ ನಡೆದ ನಂತರ ಜಿಲ್ಲಾಡಳಿತಕ್ಕೆ ನೀಡಿದ ಮನವಿ ಪತ್ರದಲ್ಲಿ ಉಲ್ಲೇಖಿಸಿರುವ 9 ಅಂಶಗಳನ್ನು ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ಒಕ್ಕೂಟ ಅಧ್ಯಕ್ಷ ಸೂರ್ತಲೆ ಸೋಮಣ್ಣ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಫೆ.7ರಂದು ಮಡಿಕೇರಿಯಲ್ಲಿ ಬೃಹತ್ ಜಾಥಾವನ್ನು ಶಾಂತಿಯುತವಾಗಿ ನಡೆಸಿರುವುದಕ್ಕೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಆದರೆ ಜಾಥಾ ನಡೆದ ನಂತರ ಜಿಲ್ಲಾಡಳಿತಕ್ಕೆ ನೀಡಿದ ಮನವಿ ಪತ್ರದಲ್ಲಿ ಉಲ್ಲೇಖಿಸಿರುವ 9 ಅಂಶಗಳನ್ನು ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ಒಕ್ಕೂಟ ಅಧ್ಯಕ್ಷ ಸೂರ್ತಲೆ ಸೋಮಣ್ಣ ತಿಳಿಸಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.20ರಂದು ಅರೆಭಾಷೆ ಗೌಡ ಸಮುದಾಯದವರು ಶಾಂತಿಯುತ ಜಾಥಾ ನಡೆಸಿ, ಸಾಮಾಜಿಕ ಜಾಲತಾಣಗಳಲ್ಲಿ ಜಾತಿ ನಿಂದನೆ ಮಾಡಿರುವ ಸಿಎನ್‌ಸಿ ಅಧ್ಯಕ್ಷರು ಹಾಗೂ ಕೆಲವು ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಆ ಸಂದರ್ಭ ನಾವು ನೀಡಿದ ಮನವಿ ಪತ್ರದಲ್ಲಿದ್ದ ವಿಚಾರಗಳು ಎಲ್ಲೆ ಮೀರಿರಲಿಲ್ಲ. ಆದರೆ ಅಖಿಲ ಕೊಡವ ಸಮಾಜ ನೀಡಿದ ಮನವಿಯಲ್ಲಿ ನೇರವಾಗಿ ಅರೆಭಾಷೆ ಗೌಡರನ್ನು ಉಲ್ಲೇಖಿಸಲಾಗಿದೆ ಮತ್ತು ಇಲ್ಲಸಲ್ಲದ ಆರೋಪ ಮಾಡಲಾಗಿದೆ. ಕೊಡವರ ಸಂಸ್ಕೃತಿ, ಆಚಾರ ವಿಚಾರದ ಉಳಿವಿಗಾಗಿ ಪ್ರಸ್ತಾಪಿಸುವ ಬೇಡಿಕೆಗಳಿಗೆ ನಮ್ಮ ಆಕ್ಷೇಪವಿಲ್ಲ. ಆದರೆ ಅರೆಭಾಷೆ ಗೌಡರನ್ನು ಗುರಿ ಮಾಡಿರುವುದು ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.ಅರೆಭಾಷೆ ಗೌಡರನ್ನು ದೂಷಿಸಿರುವ ಮನವಿ ಪತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಅನಾಮಧೇಯ ವ್ಯಕ್ತಿ ಎಂದು ಹೇಳಲಾಗಿದೆ. ಈ ಮನವಿ ಪತ್ರದ ಹಿಂದೆ ಮತ್ತೊಬ್ಬ ವ್ಯಕ್ತಿಯ ಕೈವಾಡವಿರುವ ಶಂಕೆ ಇದೆ. ಅರೆಭಾಷೆ ಗೌಡರನ್ನು ನೇರವಾಗಿ ಉಲ್ಲೇಖಿಸಿರುವ 9 ಅಂಶಗಳನ್ನು ತೀವ್ರವಾಗಿ ಖಂಡಿಸುತ್ತೇವೆ. ಗೌಡರು ನಡೆಸಿದ ಜಾಥಾಕ್ಕೆ ಹೊರ ಜಿಲ್ಲೆಯ ಅರೆಭಾಷಿಕರಲ್ಲದವರನ್ನು ಕರೆ ತರಲಾಗಿದೆ ಎಂದು ಕೆಲವರು ಆರೋಪ ಮಾಡಿದ್ದಾರೆ. ಆದರೆ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ನೆಲೆಸಿರುವ ಶೇ.100 ರಷ್ಟು ಅರೆಭಾಷೆ ಗೌಡರು ಜಾಥಾದಲ್ಲಿ ಪಾಲ್ಗೊಂಡಿರುವುದನ್ನು ಆರೋಪ ಮಾಡುತ್ತಿರುವವರು ಮನಗಾಣಬೇಕು. ಅರೆಭಾಷಿಕರಲ್ಲದವರನ್ನು ಕರೆತಂದು ಜಾಥಾ ಮಾಡುವಷ್ಟು ಕೀಳುಮಟ್ಟಕ್ಕೆ ನಾವು ಇಳಿಯುವುದಿಲ್ಲವೆಂದು ಸೂರ್ತಲೆ ಸೋಮಣ್ಣ ಸ್ಪಷ್ಟಪಡಿಸಿದರು.

ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದ ವಿಚಾರ ಆ ಊರಿಗೆ ಸಂಬಂಧಿಸಿದ್ದಾಗಿದೆ. ಇದರಲ್ಲಿ ಗೌಡ ಸಮಾಜಗಳ ಒಕ್ಕೂಟ ಯಾವುದೇ ಪಾತ್ರವನ್ನು ವಹಿಸುವುದಿಲ್ಲ. ಆದರೆ ಗೌಡ ಸಮುದಾಯಕ್ಕೆ ನೋವಾದರೆ ಅವರ ಬೆಂಬಲಕ್ಕೆ ಒಕ್ಕೂಟ ನಿಲ್ಲಲಿದೆ. ನಾವು ಶಾಂತಿಯನ್ನು ಬಯಸುವವರು, ಶಾಂತಿಸಭೆ ನಡೆಯಬೇಕು ಎನ್ನುವ ಅಪೇಕ್ಷೆ ನಮ್ಮದಾಗಿತ್ತು. ಆದರೆ ಶಾಂತಿಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಕೊಡವ ಸಮಾಜದವರು ಹೇಳಿರುವುದರಿಂದ ನಾವು ಕೂಡ ಪಾಲ್ಗೊಳ್ಳುವುದಿಲ್ಲ ಎಂದರು.ಒಕ್ಕೂಟದ ಖಜಾಂಚಿ ಆನಂದ ಕರಂದ್ಲಾಜೆ ಮಾತನಾಡಿ, ಕೊಡಗಿನ ಅರೆಭಾಷಿಕ ಒಕ್ಕಲಿಗ ಗೌಡರ ನಿಲುವುಗಳು ಮತ್ತು ಸ್ಪಷ್ಟನೆಗಳು ಎಂದು ವಿವಿಧ ವಿಚಾರಗಳನ್ನು ಮಂಡಿಸಿದರು.ಕೊಡಗಿನ ಅರೆಭಾಷೆ ಒಕ್ಕಲಿಗರಿಗೆ ಅನಾದಿಕಾಲದಿಂದಲೂ ತನ್ನದೇ ಆದ ಆಚಾರ ವಿಚಾರ, ಸಂಸ್ಕೃತಿ ಮತ್ತು ಉಡುಗೆ ತೊಡುಗೆಗಳಿವೆ. ಅದನ್ನು ಆಚರಿಸಲು, ತೊಡಲು ಯಾರ ಅಪ್ಪಣೆಯ ಅಥವಾ ಅನುಮತಿಯ ಅವಶ್ಯಕತೆ ಇರುವುದಿಲ್ಲ. ಇದೇ ತಿಂಗಳ 7ನೇ ತಾರೀಕು ಮಡಿಕೇರಿಯಲ್ಲಿ ನಡೆದ ಕೊಡವ ಜನಾಂಗದ ಸಭೆಯ ಮನವಿ ಪತ್ರದಲ್ಲಿ ನಮ್ಮ ಮೇಲೆ ಮಾಡಿದ ಕ್ಷುಲ್ಲಕ ಆರೋಪಗಳು ಆಧಾರರಹಿತವಾಗಿದ್ದು, ಇದನ್ನು ನಾವು ಖಂಡಿಸುತ್ತೇವೆ ಎಂದರು.

ಬಿಜೆಪಿಯ ಹಾಲಿ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು ಕೊಡಗಿನ ಎಲ್ಲಾ ಜನಾಂಗದವರಿಂದ ಆಯ್ಕೆಯಾಗಿದ್ದು, ಕೇವಲ ಒಂದು ಜನಾಂಗದ ಪರವಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಅಲ್ಲದೆ ಮಡಿಕೇರಿಯ ಸಭೆಯಲ್ಲಿ ಭಾಗವಹಿಸಿ ಮತ್ತೊಂದು ಜನಾಂಗದ ವಿರುದ್ಧದ ಮನವಿ ಪತ್ರಕ್ಕೆ ಸಾಕ್ಷಿಯಾಗಿರುವುದು ಖಂಡನೀಯ.ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ ಮತ್ತು ಕೊಡಗಿನಲ್ಲಿ ಅರೆಭಾಷೆ ಒಕ್ಕಲಿಗ ಜನಾಂಗಕ್ಕೆ ಸೇರಿದ ಸುಮಾರು ಐದು ಲಕ್ಷ ಜನರಿದ್ದಾರೆ. ಶಾಲಾ ಕಾಲೇಜುಗಳಿಂದ ಮಕ್ಕಳನ್ನು ಕರೆತರದೆ ಮಡಿಕೇರಿಯಲ್ಲಿ ಎರಡು ಲಕ್ಷ ಅರೆಭಾಷೆ ಮಾತನಾಡುವ ಒಕ್ಕಲಿಗರನ್ನು ಸೇರಿಸುವುದು ನಮಗೆ ದೊಡ್ಡ ಸಂಗತಿಯಲ್ಲ. ಆದರೆ ನಾವು ದೇಶದ ಮತ್ತು ರಾಜ್ಯದ ಕಾನೂನು ಸುವ್ಯವಸ್ಥೆಗೆ ತಲೆಬಾಗುವವರು. ನಮ್ಮ ಜನಾಂಗವು ಪ್ರತ್ಯೇಕತೆಯನ್ನು ಪ್ರತಿಪಾದಿಸಿಲ್ಲ. ನಮ್ಮ ಜನಾಂಗವನ್ನು ನಿಂದನೆ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಜಿಲ್ಲಾಡಳಿತ ಮತ್ತು ಸರ್ಕಾರದ ಜವಾಬ್ದಾರಿಯಾಗಿದೆ.ಈ ಹಿಂದಿನ ನಮ್ಮ ದೂರುಗಳಿಗೆ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಂದಿಸಿ, ಸಿಎನ್‌ಸಿ ಮತ್ತು ಇತರ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೆ ಇಷ್ಟರಲ್ಲೇ ಕೊಡಗಿನಲ್ಲಿ ಶಾಂತಿ ನೆಲೆಸಿರುತ್ತಿತ್ತು. ದೂರು ದಾಖಲು ಮಾಡದ ನಡೆಯ ಹಿಂದೆ ಕಾಣದ ಕೈಗಳ ಒತ್ತಡಕ್ಕೆ ಒಳಗಾದಂತೆ ಕಂಡುಬರುತ್ತಿದೆ ಎಂದು ಆನಂದ ಕರಂದ್ಲಾಜೆ ಆರೋಪಿಸಿದರು.ಸಾಮಾಜಿಕ ಜಾಲತಾಣಗಳಲ್ಲಿ ಇನ್ನೊಂದು ಜನಾಂಗವನ್ನು ನಿಂದಿಸುವ ವ್ಯಕ್ತಿಗಳು, ಯಾವುದೇ ಜನಾಂಗದಲ್ಲಿದ್ದರೂ ಅವರ ಮೇಲೆ ಜಿಲ್ಲಾಡಳಿತ ಮತ್ತು ಪೊಲೀಸ್ ವರಿಷ್ಠಧಿಕಾರಿಗಳು ತಾರತಮ್ಯ ಮಾಡದೆ ಮತ್ತು ಒತ್ತಡಕ್ಕೆ ಮಣಿಯದೆ ಕಠಿಣ ಕ್ರಮ ಜರುಗಿಸಬೇಕು. ಕೊಡಗಿನಲ್ಲಿ ಎಲ್ಲಾ ಜನಾಂಗದವರು ಶಾಂತಿ ಮತ್ತು ಸಹಬಾಳ್ವೆಯಿಂದ ಬಾಳುವ ವಾತಾವರಣ ಸೃಷ್ಟಿ ಮಾಡಬೇಕೆಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಕಾರ್ಯದರ್ಶಿ ಪೇರಿಯನ ಕೆ.ಉದಯಕುಮಾರ್, ನಿರ್ದೇಶಕರಾದ ಚಿಲ್ಲನ ಗಣಿ ಪ್ರಸಾದ್, ತಳೂರು ದಿನೇಶ್ ಕರುಂಬಯ್ಯ ಹಾಗೂ ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಉಪಸ್ಥಿತರಿದ್ದರು.